×
Ad

ಕಾಣೆಯಾಗಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿಯ ಮೃತದೇಹ ಪತ್ತೆ

Update: 2022-07-24 21:33 IST

ಮಂಗಳೂರು : ನಗರ ಹೊರವಲಯದ ಕಣ್ಣೂರು ಬೀಡು ಮನೆಯ ನಿವಾಸಿ, ನಿವೃತ್ತ ಬ್ಯಾಂಕ್ ಉದ್ಯೋಗಿ ವಿಶ್ವನಾಥ್ ಕೆ. (65) ಎಂಬವರ ಮೃತದೇಹ ರವಿವಾರ ಮಧ್ಯಾಹ್ನ ನೇತ್ರಾವತಿ ಸೇತುವೆ ಸಮೀಪದ ಆಡಂಕುದ್ರು ಬಳಿ ಪತ್ತೆಯಾಗಿದೆ.

ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ವಿಶ್ವನಾಥ್ ಶನಿವಾರ ಬೆಳಗ್ಗೆ 9ಕ್ಕೆ ವೈದ್ಯರ ಬಳಿ ಬಿಪಿ ತಪಾಸಣೆ ಮಾಡಿ ಬರುವುದಾಗಿ ಮನೆಯಿಂದ ಹೊರಟು ಹೋಗಿದ್ದು, ಮಧ್ಯಾಹ್ನ ಅವರ ಪತ್ನಿ ಕರೆ ಮಾಡಿದಾಗ ಸಂಬಂಧಿಕರಾದ ಸರೋಜಿನಿ ಎಂಬವರು ಕರೆ ಸ್ವೀಕರಿಸಿ ಮೊಬೈಲ್ ಮತ್ತು ಪರ್ಸನ್ನು ಮನೆಯಲ್ಲೇ ಬಿಟ್ಟು ನದಿ ಕಿನಾರೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ಬಂದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ಬಳಿಕ ನಾಪತ್ತೆಯಾಗಿದ್ದ ವಿಶ್ವನಾಥ್‌ಗಾಗಿ ಹುಡುಕಾಟ ಮಾಡಲಾಗಿತ್ತು. ಆದರೆ ಅವರ ಮೃತದೇಹ ರವಿವಾರ ಆಡಂಕುದ್ರು ಬಳಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ವಿಶ್ವನಾಥ್ ಅವರು ರಕ್ತದೊತ್ತಡ ಕಾಯಿಲೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬೇಕು ಅಥವಾ ಆಕಸ್ಮಿಕವಾಗಿ ನದಿಗೆ ಬಿದ್ದು ಕೊನೆಯುಸಿರೆಳೆದಿರಬೇಕು ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News