ಕೆಎಸ್ಸಾರ್ಟಿಸಿ ಆಸ್ಪತ್ರೆ ಖಾಸಗೀಕರಣ ವಿಚಾರ: ತೇಜಸ್ವಿ ಸೂರ್ಯ ವಿರುದ್ಧ ಆಪ್ ಆಕ್ರೋಶ

Update: 2022-07-25 12:46 GMT

ಬೆಂಗಳೂರು, ಜು.25: ಜಯನಗರದಲ್ಲಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಸಂಸದ ತೇಜಸ್ವಿ ಸೂರ್ಯ ಅವರ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದೆ.

ಸೋಮವಾರ ಸುದ್ದಿಗಾರರೊಂದಿಗೆ ಎಎಪಿಯ ಮುಖಂಡ ಮೋಹನ್ ದಾಸರಿ ಮಾತನಾಡಿ, ಹಲವು ವರ್ಷಗಳಿಂದ ಕೆಎಸ್‍ಆರ್‍ಟಿಸಿ ಆಸ್ಪತ್ರೆಯಲ್ಲಿ ಕೆಎಸ್ಸಾರ್ಟಿಸಿ ನೌಕರರು ಅಗತ್ಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರಿಗೆ ಇರುವ ಏಕೈಕ ಆಸ್ಪತ್ರೆ ಇದಾಗಿದ್ದು, ಇನ್ನೂ ಒಂದು ಆಸ್ಪತ್ರೆ ತೆರೆದು ಹೆಚ್ಚಿನ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು. ಆದರೆ ಸಂಸದ ತೇಜಸ್ವಿ ಸೂರ್ಯ ಈಗಿರುವ ಆಸ್ಪತ್ರೆಯನ್ನೂ ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಲು ಹೊರಟಿರುವುದು ಖಂಡನೀಯ ಎಂದರು.

ಕಮಿಷನ್ ಆಸೆಗಾಗಿ ತೇಜಸ್ವಿ ಸೂರ್ಯ ಈ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿರುವ ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ. ಸಾರಿಗೆ ನೌಕರರು ಸಣ್ಣಪುಟ್ಟ ಚಿಕಿತ್ಸೆಗೂ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಸರಕಾರವು ಹಲವು ವರ್ಷಗಳಿಂದ ಕಾಪಾಡಿಕೊಂಡ ಸಂಸ್ಥೆಗಳನ್ನು ಭ್ರಷ್ಟ ಬಿಜೆಪಿಯು ಒಂದೊಂದಾಗಿಯೇ ಮಾರಾಟ ಮಾಡುತ್ತಿದೆ ಎಂದು ಅವರು ಕಳವಳವ್ಯಕ್ತಪಡಿಸಿದರು.

ಕೆಎಸ್ಸಾರ್ಟಿಸಿ ನೌಕರರು ಏಳನೇ ವೇತನ ಶ್ರೇಣಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರಿಯಾದ ಪಿಂಚಣಿ, ವಿಮಾ ಸೌಲಭ್ಯ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ತುಟಿ ಬಿಚ್ಚದ ಸಂಸದ ತೇಜಸ್ವಿ ಸೂರ್ಯ ಕೆಎಸ್‍ಆರ್‍ಟಿಸಿ ಆಸ್ಪತ್ರೆಯನ್ನು ಮಾರಾಟ ಮಾಡಲು ನಿರ್ಧರಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಈ ನಿರ್ಧಾರದಿಂದ ಶೀಘ್ರವೇ ಹಿಂದೆ ಸರಿಯಬೇಕು” ಎಂದು ಅವರು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News