ಸಮಾಜಘಾತುಕ ಶಕ್ತಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಏಕೆ ತೆಗೆದುಕೊಂಡಿಲ್ಲ?: ಯು.ಟಿ.ಖಾದರ್

Update: 2022-07-26 18:15 GMT

ಮಂಗಳೂರು: ಮಂಗಳೂರಿನ ಹೊಟೇಲ್, ಬಾರ್ ಮೇಲೆ ಕೆಲವು ಸಮಾಜಘಾತುಕ ಶಕ್ತಿಗಳು  ದಾಳಿ ನಡೆಸಿವೆ. ಈ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೆಲವು ದಾರಿ ತಪ್ಪಿದ ಯುವಕರು, ಸಮಾಜ ಘಾತುಕ ಶಕ್ತಿಗಳಿಂದ ಮಂಗಳೂರಿನ ಘನತೆಗೆ ಕಳಂಕ ತರುವ ಕೃತ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಸರಕಾರ ವಿಫಲವಾಗಿದೆ.

ಘಟನೆ ನಡೆದ ಬಳಿಕ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದು ಆಶ್ಚರ್ಯವನ್ನುಂಟು ಮಾಡಿದೆ. ವಿದ್ಯಾರ್ಥಿಗಳ ನಡವಳಿಕೆಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳು ತೀರ್ಮಾನಿಸಬೇಕು. ತಪ್ಪು ನಡೆದಿದ್ದರೆ ಅದನ್ನು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಪೊಲೀಸರಿದ್ದಾರೆ. ಅವರಿಗೆ ದೂರು ನೀಡಬಹುದಿತ್ತು. ಬದಲಾಗಿ ನೇರವಾಗಿ ಹೊಟೇಲ್ ಗೆ ನುಗ್ಗಿ ದಾಂಧಲೆ ನಡೆಸುವ ಉದ್ದೇಶ ಏನು?. ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಹಿಂದೇಟು ಹಾಕಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ಘಟನೆಗೆ ನೇರ ಹೊಣೆಯಾಗಿದೆ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ತತ್ತರಿಸಿ ಹೋಗಿರುವ ಹೊಟೇಲ್ ಉದ್ಯಮ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳು, ಹಫ್ತಾ ವಸೂಲಾತಿ, ಬ್ಲಾಕ್ ಮೇಲ್  ಜೊತೆಗೆ ದಾಂಧಲೆ ನಡೆಸುತ್ತಿರುವ ಸಮಾಜ ಘಾತುಕ ಶಕ್ತಿಗಳನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದೆ. ಕಾನೂನು ಬದ್ದವಾಗಿ ತೆರಿಗೆ ಪಾವತಿಸಿ ಹೊಟೇಲ್ ಉದ್ಯಮ ನಡೆಸುತ್ತಿರುವವರಿಗೆ ರಕ್ಷಣೆ ಇಲ್ಲದಂತಾಗಿದೆ. ಆದರೆ ಇನ್ನೊಂದು ಕಡೆ ಅಕ್ರಮ ಪಾರ್ಲರ್ ಗಳು, ಕೇಂದ್ರಗಳು ಪುನಃ ತಲೆ ಎತ್ತಿವೆ. ಈ ಬಗ್ಗೆ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ ಎಂದು ಯು.ಟಿ.ಖಾದರ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ಶೆಟ್ಟಿ, ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ರೋಶನ್, ಸುಹೈಲ್ ಕಂದಕ್, ರಮೇಶ್ ಶೆಟ್ಟಿ, ಸುನಿಲ್ ಪೂಜಾರಿ, ದೀಪಕ್ ಪೂಜಾರಿ, ಜಬ್ಬಾರ್, ಜಕ್ರಿಯ, ಮುಸ್ತಫಾ, ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News