ಸ್ವಾತಂತ್ರ್ಯದ ‘ಅಮೃತ ಮಹೋತ್ಸವ': ಬೆಂಗಳೂರಿನಲ್ಲಿ 10 ಲಕ್ಷ ತಿರಂಗ ಹಾರಾಟ

Update: 2022-07-27 14:40 GMT
ಫೈಲ್ ಚಿತ್ರ

ಬೆಂಗಳೂರು, ಜು.27: ಸ್ವಾತಂತ್ರ್ಯೋತ್ಸವ ‘ಅಮೃತ ಮಹೋತ್ಸವ' ಅಂಗವಾಗಿ ಸರಕಾರ ಘೋಷಿಸಿರುವ ‘ಹರ್ ಘರ್ ತಿರಂಗಾ' ಅಭಿಯಾನ ಹಿನ್ನೆಲೆ ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಅಧಿಕ ರಾಷ್ಟ್ರ ಧ್ವಜ ಹಾರಾಟ ಮಾಡಲಾಗುತ್ತಿದೆ.

ಬುಧವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಪೊಲೀಸ್ ಇಲಾಖೆಯೊಂದಿಗೆ ನಡೆದ ಸಭೆಯಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಕುರಿತು ಚರ್ಚಿಸಲಾಯಿತು.

ಬಳಿಕ ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ 10 ಲಕ್ಷ ಧ್ವಜಾರೋಹಣ ಮಾಡುವ ಗುರಿ ಹೊಂದಿದ್ದು, ಈಗಾಗಲೇ ಎರಡು ಲಕ್ಷ ತಿರಂಗ ಬಂದು ತಲುಪಿದೆ. ಹರ್ ಘರ್ ತಿರಂಗ್ ಹೇಗೆ ಮಾಡಬೇಕು. ಮನೆಗಳಲ್ಲಿ ಯಾವ ರೀತಿ ಹಂಚಿಕೆ ಮಾಡಬೇಕು ಎನ್ನುವ ಕುರಿತು ಮಾಹಿತಿ ಪಡೆಯಲಾಗಿದೆ ಎಂದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ್ಯ ದಿನದ ಸಿದ್ಧತೆಯ ಬಗ್ಗೆ ಸಭೆ ನಡೆದಿದ್ದು, ಈ ಬಾರಿ ಎಂಟು ಸಾವಿರ ಮಂದಿ ಇಲ್ಲಿನ ಮಣಿಕ್ ಶಾ ಮೈದಾನದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದರು.

ಧ್ವಜಕ್ಕೆ ದರ ನಿಗದಿ

ಬಿಬಿಎಂಪಿ ವತಿಯಿಂದ ರಾಷ್ಟ್ರ ಧ್ವಜವನ್ನು ಉಚಿತವಾಗಿ ನೀಡುವುದಿಲ್ಲ. ಬದಲಾಗಿ, ಹಣ ಕೊಟ್ಟು ಖರೀದಿ ಮಾಡಬೇಕು. ಏಕೆಂದರೆ, ಖರೀದಿ ಮಾಡಿದರೆ ಅದರ ಮೇಲಿನ ಪ್ರೀತಿ, ಭಾವನೆ, ಕಾಳಜಿ ಹೆಚ್ಚಿರುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಎಲ್ಲೆಡೆಯೂ ರಾಷ್ಟ್ರ ಧ್ವಜ ಹಾರಾಟ

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದವೂ ಆ.15 ರೊಳಗೆ ಇತ್ಯರ್ಥವಾಗುವ ವಿಶ್ವಾಸ ಇದ್ದು, ಈ ಬಾರಿ ಎಲ್ಲೆಡೆಯೂ ರಾಷ್ಟ್ರ ಧ್ವಜ ಹಾರಿಸಲಾಗುವುದು. ಇದಕ್ಕೆ ಯಾರು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ಈ ಸಂಬಂಧ ಸರಕಾರದ ಆದೇಶವಿದೆ.

-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News