ಕೊಲೆಗಾರರಿಗೆಲ್ಲಿದೆ ಧರ್ಮ?

Update: 2022-07-28 03:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪುತ್ತೂರಿನ ಬೆಳ್ಳಾರೆಯ ಸಮೀಪ ಅಮಾಯಕ ಯುವಕನೊಬ್ಬನ ಬರ್ಬರ ಹತ್ಯೆಯಾಗಿದೆ. ಹತ್ಯೆಯಾದವನ ಹೆಸರು ಮತ್ತು ಆತನ ಹಿನ್ನೆಲೆ ಘೋಷಣೆಯಾದ ಬೆನ್ನಿಗೇ ಹತ್ಯೆಗೈದವರು ಯಾರು ಎನ್ನುವುದನ್ನು ತೀರ್ಮಾನಿಸಿಯೂ ಆಗಿದೆ. ರಾಜಕೀಯ ಹಸ್ತಕ್ಷೇಪದಿಂದಾಗಿ ಈ ಕೊಲೆ ಕರಾವಳಿಯಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿದೆ. ಸ್ಥಳಕ್ಕೆ ಜನಪ್ರತಿನಿಧಿಗಳು ಧಾವಿಸಿದ್ದಾರೆ. ಪ್ರಕರಣವನ್ನು ಒಂದು ಧರ್ಮದ ಮೇಲೆ ಇನ್ನೊಂದು ಧರ್ಮೀಯರು ನಡೆಸಿದ ದಾಳಿ ಎನ್ನುವ ರೀತಿಯಲ್ಲಿ ಬಿಂಬಿಸುವುದಕ್ಕೆ ಕೆಲವರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಕರಾವಳಿಗೆ ಕೊಲೆ, ಹಲ್ಲೆ ಇತ್ಯಾದಿಗಳು ಇದೇ ಮೊದಲೇನೂ ಅಲ್ಲ. ಆದರೆ, ಇಲ್ಲಿ ಯಾವುದೇ ಅಮಾಯಕನ ಹತ್ಯೆ ಮಹತ್ವ ಪಡೆಯುವುದು ಕೊಲೆಯಾದವನು ಮತ್ತು ಕೊಲೆಗೈದವನ ಧರ್ಮದ ಹಿನ್ನೆಲೆಯಲ್ಲಿ.

ಇತ್ತೀಚೆಗೆ ಕೊಡಗಿನಲ್ಲಿ ಕಾವೇರಿಯನ್ನು, ಕೊಡಗನ್ನು ನಿಂದಿಸಿದ ಹೇಳಿಕೆಯೊಂದು 'ಮುಸ್ಲಿಮ್ ಹುಡುಗನೊಬ್ಬನ' ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತು. ತಕ್ಷಣ ಎಲ್ಲರ ಎದೆಯೊಳಗೆ ಕಾವೇರಿ ತಾಯಿ 'ಝಳ ಝಳ' ಹರಿಯತೊಡಗಿದಳು. ಒಂದು ನಿರ್ದಿಷ್ಟ ಸಂಘಟನೆಯ ಜನರು ಬೀದಿಗಿಳಿದರು. ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸತೊಡಗಿದರು. ಆದರೆ ಪೊಲೀಸರು ತನಿಖೆ ನಡೆಸಿದಾಗ, ಸಂಘಪರಿವಾರದ ಹಿನ್ನೆಲೆಯಿರುವ ಹುಡುಗನೊಬ್ಬ ಮುಸ್ಲಿಮ್ ಹುಡುಗನ ಹೆಸರಿನಲ್ಲಿ ಹರಿ ಬಿಟ್ಟ ನಕಲಿ ಸ್ಟೇಟಸ್ ಎನ್ನುವುದು ಬಹಿರಂಗವಾಯಿತು. ಸಂಘಪರಿವಾರದ ಪ್ರತಿಭಟನೆ ಅಲ್ಲಿಗೇ ಮುಗಿದು ಹೋಯಿತು. ಒಂದು ವೇಳೆ, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವುದಕ್ಕೆ ವಿಫಲವಾಗಿದ್ದರೆ ಕೊಡಗಿನ ಸ್ಥಿತಿಯೇನಾಗುತ್ತಿತ್ತು ಎನ್ನುವುದನ್ನು ನಾವು ಒಮ್ಮೆ ಊಹಿಸೋಣ. ಕರಾವಳಿಯಲ್ಲಿ ಗಾಂಜಾ ಮಾರಾಟ, ಗಾಂಜಾ ಸೇವನೆ ಇತ್ಯಾದಿಗಳು ಎಲ್ಲ ಜಾತಿ ಧರ್ಮಗಳ ಗಡಿಗಳನ್ನು ಮೀರಿ ನಡೆಯುತ್ತವೆ. ಹಾಗೆಯೇ ಈ ಗಾಂಜಾದಂತಹ ಅಮಲು ಪದಾರ್ಥಗಳನ್ನು ಸೇವಿಸಿ ಪರಸ್ಪರ ಹಲ್ಲೆಗಳು, ಕೊಲೆಗಳು ನಡೆಯುವುದೂ ಇವೆ.

ಮುಸ್ಲಿಮನೊಬ್ಬ ಮುಸ್ಲಿಮನ ಕೈಯಲ್ಲಿ ಅಥವಾ ಹಿಂದೂ ಧರ್ಮೀಯನೊಬ್ಬ ಹಿಂದೂ ಧರ್ಮೀಯನ ಕೈಯಲ್ಲಿ ಹತ್ಯೆಯಾದಾಗ ಯಾರಿಗೂ ಅದು ಮುಖ್ಯ ಅನ್ನಿಸುವುದಿಲ್ಲ. ಸಂತ್ರಸ್ತರ ಕುಟುಂಬದ ಬಗ್ಗೆಯೂ ಯಾರೂ ಕಣ್ಣೀರು ಸುರಿಸುವುದಿಲ್ಲ. ರಾಜಕೀಯ ವ್ಯಕ್ತಿಗಳಂತೂ ಅತ್ತ ಮುಖ ಮಾಡಿಯೂ ನೋಡುವುದಿಲ್ಲ. ಸಮಾಜಕ್ಕೆ ಕೇಡು ಬಗೆಯುವ, ಯುವಕರನ್ನು ಧರ್ಮ ಭ್ರಷ್ಟಗೊಳಿಸುವ ಈ ಗಾಂಜಾದಂತಹ ಪಿಡುಗಿನ ವಿರುದ್ಧ ಹೋರಾಡಬೇಕು ಎಂದು ಯಾವ ಧರ್ಮೀಯನಿಗೂ ಅನ್ನಿಸುವುದಿಲ್ಲ. ಹಿಂದೂ, ಮುಸ್ಲಿಮರ ಸ್ವಯಂಘೋಷಿತ ರಕ್ಷಕರೆಂದು ಕರೆಸಿಕೊಳ್ಳುವ ಸಂಘಟನೆಗಳೂ ಈ ಬಗ್ಗೆ ತೆಪ್ಪಗೆ ಕೂತಿರುತ್ತವೆ. ಆದರೆ ಹತ್ಯೆಯಾದವನು ಒಂದು ಧರ್ಮೀಯನಾಗಿದ್ದು, ಹತ್ಯೆಗೈದವನು ಇನ್ನೊಂದು ಧರ್ಮೀಯನೆನ್ನುವುದು ಗೊತ್ತಾದಾಕ್ಷಣ ಕೆಲವರ ಒಳಗೆ ಧರ್ಮ ಒಮ್ಮೆಲೆ ಜಾಗೃತಿಯಾಗಿ ಬಿಡುತ್ತದೆ. ತಕ್ಷಣ ಬೀದಿಗಿಳಿದು ಪ್ರತಿಭಟನೆ ನಡೆಸುವುದಕ್ಕೆ ಮುಂದಾಗುತ್ತಾರೆ. ಅವರಿಗೆ ಇಲ್ಲಿ ಸಂತ್ರಸ್ತ ತಮ್ಮ ಧರ್ಮೀಯನೆನ್ನುವುದಕ್ಕಿಂತ, ಆ ಸಂತ್ರಸ್ತನ ಹೆಸರಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸುವುದಷ್ಟೇ ಮುಖ್ಯವಾಗಿರುತ್ತದೆ.

  ಇತ್ತೀಚೆಗೆ ಕರಾವಳಿಯಲ್ಲಿ ಒಬ್ಬ ಯುವಕನ ಹತ್ಯೆಯಾಯಿತು. ಹುಡುಗ ಅಮಾಯಕ, ಕೂಲಿ ಕಾರ್ಮಿಕ. ಯಾವುದೇ ಸಣ್ಣ ವೈಯಕ್ತಿಕ ಮಾತಿನ ಚಕಮಕಿ ಕೊಲೆಯಲ್ಲಿ ಅವಸಾನವಾಯಿತು. ಆತನ ಹತ್ಯೆಗೂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ. ಆದರೆ ಹತ್ಯೆಗೈದವರು ಬೇರೆ ಧರ್ಮಕ್ಕೆ ಸೇರಿದವರಾಗಿರುವುದರಿಂದ, ತಕ್ಷಣ ಕೊಲೆಯಾದ ಯುವಕ ಒಂದು ನಿರ್ದಿಷ್ಟ ಧರ್ಮದ ಪ್ರತಿನಿಧಿಯಾದ. ಆತನ ಪರವಾಗಿ ಕೆಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಆರೋಪಿಗಳನ್ನು ಅದಾಗಲೇ ಪೊಲೀಸರು ಬಂಧಿಸಿದ್ದರಾದರೂ, ಆ ಕೊಲೆಯನ್ನು ಎರಡು ಧರ್ಮಗಳ ನಡುವಿನ ಸಂಘರ್ಷವಾಗಿಸಲು ಗರಿಷ್ಠ ಪ್ರಯತ್ನ ನಡೆಯಿತು. ಇದೀಗ ಮಂಗಳವಾರ ಪುತ್ತೂರಿನ ಬೆಳ್ಳಾರೆಯ ಸಮೀಪ ಒಬ್ಬ ಯುವಕನ ಕೊಲೆಯಾಗಿದೆ. ಕೊಂದವರು ಯಾರು ಎನ್ನುವುದು ಇನ್ನಷ್ಟೇ ತನಿಖೆ ನಡೆಯಬೇಕಾಗಿದೆ. ಸಾಕ್ಷಾಧಾರಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧಿಸಬೇಕಾಗಿದೆ.

ಆದರೆ ಕೊಲೆಯಾದವನು ಒಂದು ರಾಜಕೀಯ ಪಕ್ಷದ ಕಾರ್ಯಕರ್ತ ಎನ್ನುವುದನ್ನು ಮುಂದಿಟ್ಟುಕೊಂಡು, ಇದನ್ನು ತಮ್ಮ ಧರ್ಮದ ಮೇಲೆ ನಡೆದ ದಾಳಿ ಎಂದು ಬಿಂಬಿಸುವಲ್ಲಿ ಕೆಲವು ಸಂಘಟನೆಗಳು ಯಶಸ್ವಿಯಾಗಿವೆ. ಅಷ್ಟೇ ಅಲ್ಲ, ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ಯುವಕನ ಕೊಲೆಗೆ ಇದು ಪ್ರತೀಕಾರ ಎಂದು ತೀರ್ಮಾನಿಸಿಯೂ ಆಗಿದೆ. ಇಲ್ಲಿ ಪೊಲೀಸರಿಗೆ ಯಾವ ಕೆಲಸವೂ ಇಲ್ಲ. ಈ ಸಂಘಟನೆಗಳಿಗೆ ತೃಪ್ತಿಯಾಗುವಂತೆ ಇನ್ನೊಂದು ಧರ್ಮಕ್ಕೆ ಸೇರಿದ ಒಂದಿಷ್ಟು ಯುವಕರನ್ನು ಬಂಧಿಸಿ, ಪ್ರತಿಭಟನಾಕಾರರನ್ನು ಸಮಾಧಾನಿಸಲೇಬೇಕಾದ ಒತ್ತಡಕ್ಕೆ ಪೊಲೀಸರು ಸಿಲುಕಿಕೊಂಡಿದ್ದಾರೆ. ಇದರ ಲಾಭವನ್ನು ದುಷ್ಕರ್ಮಿಗಳು ತಮ್ಮದಾಗಿಸುವ ಸಾಧ್ಯತೆಗಳಿವೆ. ಅವರು ರಕ್ಷಿಸಲ್ಪಟ್ಟು, ಯಾರೋ ಅಮಾಯಕರು ಮಾಡದ ತಪ್ಪಿಗೆ ಜೈಲು ಸೇರಿದರೂ ಅಚ್ಚರಿಯಿಲ್ಲ.
  
  ಒಬ್ಬ ಅಮಾಯಕ ಹತ್ಯೆ ಸುದ್ದಿಯಾಗಬೇಕಾದರೆ, ಆತನಿಗೆ ನ್ಯಾಯ ಸಿಗಬೇಕಾದರೆ ಕೊಲೆಗೈದವನು ಇನ್ನೊಂದು ಧರ್ಮಕ್ಕೆ ಸೇರಿರಬೇಕಾದುದು ಅನಿವಾರ್ಯವೆ? ಯಾವ ಧರ್ಮಕ್ಕೇ ಸೇರಿರಲಿ, ಯಾರದೋ ರಾಜಕೀಯ ಕಾರಣಕ್ಕಾಗಿ ಅಮಾಯಕರು ಬಲಿಯಾಗುವುದನ್ನು ಸಮಾಜ ಜಾತಿ, ಧರ್ಮ ಭೇದ ಮರೆತು ಖಂಡಿಸಲು ಆರಂಭಿಸಿದ ದಿನ 'ಹೆಣಗಳ ಹೆಸರಿನಲ್ಲಿ ರಾಜಕೀಯ'ಕ್ಕೆ ಪೂರ್ಣ ವಿರಾಮ ಬೀಳಲಿದೆ. ಯಾವ ಕಾರಣಕ್ಕೇ ಇರಲಿ, ಒಬ್ಬ ಯುವಕನ ಕೊಲೆಯನ್ನು ನಾಗರಿಕ ಸಮಾಜ ಸಹಿಸಿಕೊಳ್ಳಲೇ ಬಾರದು. ಅಂತಹ ಹಿಂಸೆಗಳನ್ನು ಸಹಿಸುತ್ತಾ ಹೋದರೆ ನಾವಾಗಿಯೇ ಕೊಲೆಗಾರರನ್ನು, ಕ್ರಿಮಿನಲ್‌ಗಳನ್ನು ಬೆಳೆಸಿದಂತೆಯೇ ಸರಿ. ಆದುದರಿಂದ, ಬೆಳ್ಳಾರೆಯಲ್ಲಿ ಇಬ್ಬರು ಅಮಾಯಕರ ಸಾವಿಗೆ ಕಾರಣರಾದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ವಧರ್ಮೀಯರು ಒಂದಾಗಿ ಶ್ರಮಿಸಬೇಕು. ಹಾಗಾದಾಗ ಮಾತ್ರ ಕರಾವಳಿ ಶಾಂತಿ, ನೆಮ್ಮದಿಯ ಭವಿಷ್ಯವನ್ನು ತನ್ನದಾಗಿಸಿಕೊಂಡೀತು.

ಅಮಾಯಕರ ಹೆಣಗಳು ಬೀದಿಯಲ್ಲಿ ಬೀಳುತ್ತಿವೆ ಎಂದರೆ ಚುನಾವಣೆ ಹತ್ತಿರವಾಗುತ್ತಿದೆ ಎಂದು ಅರ್ಥ. ಆಡಳಿತದಲ್ಲಿ ಸಂಪೂರ್ಣ ವಿಫಲವಾದ , ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸರಕಾರಕ್ಕೆ ಗಲಭೆಗಳಿಲ್ಲದೆ ಇನ್ನೊಂದು ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಆದುದರಿಂದ, ಚುನಾವಣೆ ಹತ್ತಿರಬರುತ್ತಿರುವಂತೆಯೇ ಅದಕ್ಕೆ ಅಮಾಯಕರ ಹೆಣಗಳು ಬೇಕಾಗುತ್ತವೆ. ಇಂತಹ ಸಂದರ್ಭದಲ್ಲಿ ಕಾನೂನು ಇಲಾಖೆಯ ಹೊಣೆಗಾರಿಕೆ ಬಹುದೊಡ್ಡದು. ಜೊತೆಗೆ ರಾಜಕಾರಣಿಗಳ ಮಾತಿನ ಬಲೆಗೆ ಬಿದ್ದು ಹಿಂಸಾಚಾರಕ್ಕೆ ಇಳಿಯದಂತೆ ತಮ್ಮ ತರುಣರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವುದು, ಆಯಾ ಸಮುದಾಯದ ಮುಖಂಡರ ಕರ್ತವ್ಯವೂ ಕೂಡ. ಕೊಲೆಗೀಡಾಗುವವರು ಒಂದು ಬಾರಿ ಸಾಯುತ್ತಾರೆ. ಆದರೆ ಆ ಕೊಲೆಗೀಡಾದ ಸಂತ್ರಸ್ತನ ಕುಟುಂಬ ಜೀವನ ಪರ್ಯಂತ ಆ ನೋವನ್ನು ಎದೆಯೊಳಗಿಟ್ಟು ಜೀವಿಸಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ರಾಜಕಾರಣಿಗಳ ಸಂಚಿಗೆ ಬಲಿಯಾಗಿ ಇನ್ನೊಬ್ಬರನ್ನು ಕೊಲ್ಲಲು ಹೊರಡುವ ಯುವಕರೂ ಜೀವನ ಪರ್ಯಂತ ಆ ಕೊಲೆಯ ರಕ್ತದ ಕಲೆಯನ್ನು ಹೊತ್ತುಕೊಂಡೇ ಬದುಕಬೇಕಾಗುತ್ತದೆ. ಆ ಕೊಲೆಗಾರರಿಗೂ ಒಂದು ಕುಟುಂಬವಿರುತ್ತದೆ. ತಮ್ಮ ಮನೆ ಮಗ ಕೊಲೆಗಾರ ಎನ್ನುವ ಅವಮಾನದ ಜೊತೆಗೆ ಅವರು ಜೀವನಪರ್ಯಂತ ತಲೆತಗ್ಗಿಸಿಕೊಂಡು ಸಮಾಜದಲ್ಲಿ ಜೀವಿಸಬೇಕಾಗುತ್ತದೆ. ರಾಜಕಾರಣಿಗಳ ಮಾತುಗಳಿಗೆ ಬಲಿಯಾಗಿ, ಧರ್ಮದ ಹೆಸರಿನಲ್ಲಿ ಉದ್ವಿಗ್ನಗೊಳ್ಳುವ ಯುವಕರಿಗೆ ಇವೆಲ್ಲವನ್ನು ಮನದಟ್ಟು ಮಾಡಿಕೊಡುವುದು ಸಮುದಾಯದ ಹಿರಿಯರ, ಮುತ್ಸದ್ದಿಗಳ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News