ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರಕಾರ ವಿಫಲ: ಜೆ.ಆರ್.ಲೋಬೊ ಆರೋಪ

Update: 2022-07-28 11:05 GMT

ಮಂಗಳೂರು, ಜು.28; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು  ಮಾಜಿ ಶಾಸಕ ಜೆ.ಆರ್.ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದಿರುವ ಪಬ್ ಮೇಲಿನ ದಾಳಿ, ಸುಳ್ಯ ದಲ್ಲಿ ನಡೆದ ಎರಡು ಹತ್ಯೆ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ ಯಾಗಿದೆ. ಯಾರು ಕೊಲೆ ಮಾಡಿದರು ಅದು ಅಕ್ಷಮ್ಯ ಅಪರಾಧ. ಕಾನೂನಿನ ಭಯ ಇಲ್ಲದೆ ಇರುವವರು ಈ ರೀತಿಯ ಕೃತ್ಯ ಗಳಲ್ಲಿ ಭಾಗಿಯಾ ಗುತ್ತಿದ್ದಾರೆ. ಕೊಲೆ ಗಡುಕರು ದೇಶ ದ್ರೋಹಿಗಳು. ಮಾನವೀಯತೆಯನ್ನು ಮರೆತವರು.

ಮಂಗಳೂರಿನಲ್ಲಿ ಪಬ್ ಮೇಲೆ ಹಿಂದೆಯೂ ಒಮ್ಮೆ ದಾಳಿ ನಡೆದಿತ್ತು. ಎರಡನೆ ಬಾರಿ ಈ ರೀತಿ ಕಾನೂನನ್ನು ಕೈ ಗೆತ್ತಿಕೊಂಡು ದಾಂಧಲೆ ನಡೆಸುವವರನ್ನು ನಿಯಂತ್ರಿಸಲು ಸರಕಾರ ವಿಫಲವಾಗಿದೆ. ಇದರಿಂದ ಬ್ರಾಂಡ್ ಮಂಗಳೂರಿನ ಸೌಹಾರ್ದತೆಗೆ ಕೆಟ್ಟ ಹೆಸರು ಬರುವಂತಾಗಿದೆ. ಇಲ್ಲಿನ ಶಾಸಕರು ಈ ಬಗ್ಗೆ ಮೌನವಹಿಸಿದ್ದಾರೆ. ದಾಂಧಲೆ ನಡೆಸಿದವರ ವಿರುದ್ಧ ಯಾವ ಕ್ರಮ ಕೂಡ ನಡೆಯುತ್ತಿಲ್ಲ. ಕೊಲೆ ನಡೆಸಿದವರ ಬಂಧನ ಆಗಿಲ್ಲ, ಈ ರೀತಿಯ ಬೆಳವಣಿಗೆಯಿಂದ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಮಂಗಳೂರಿಗೆ ಹೊಸ ಉದ್ಯಮಗಳು ಬರದಂತೆ ಆಗಿದೆ. ಇಲ್ಲಿ ಕೆಲಸ ನಿರ್ವಹಿಸುವ ಉದ್ಯಮ ಸಂಸ್ಥೆಗಳಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳು ಮಂಗಳೂರು ಅಭಿವೃದ್ಧಿಯ ಬಗ್ಗೆ, ಈ ರೀತಿಯ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಗಮನ ಹರಿಸುತ್ತಿಲ್ಲ ಎಂದು ಜೆ.ಆರ್. ಲೋಬೊ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಹರಿನಾಥ್, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಉಮೇಶ್ ದಂಡಕೇರಿ, ಪದ್ಮನಾಭ ಅಮೀನ್, ದೀಪಕ್ ಪೂಜಾರಿ, ಅಪ್ಪಿ, ಟಿ.ಕೆ.ಸುಧೀರ್, ಉದಯ ಕುಂದರ್, ನಿತ್ಯಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News