ಐಎಎಸ್ ಅಧಿಕಾರಿ ಅನಿಲ್ ಕುಮಾರ್ ವಿರುದ್ಧ ಕ್ರಮಕ್ಕೆ ಆಪ್ ಆಗ್ರಹ

Update: 2022-07-28 12:03 GMT

ಬೆಂಗಳೂರು, ಜು.28: ಐಎಎಸ್ ಅಧಿಕಾರಿಯಾಗಿದ್ದರೂ ರಾಜಕೀಯದಲ್ಲಿ ತೊಡಗಿಕೊಂಡಿರುವ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಗುರುವಾರ ನಗರದ ಶೇಷಾದ್ರಿಪುರ ಬಳಿಯಿರುವ ಎಎಪಿಯ ನೂತನ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ಜುಲೈ 31ರಂದು ನಿವೃತ್ತರಾಗಲಿರುವ ಅನಿಲ್ ಕುಮಾರ್ ನಿವೃತ್ತಿಗೂ ಮುನ್ನವೇ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಳ್ಳುವ ಮೂಲಕ ಐಎಎಸ್ ಹುದ್ದೆಗೆ ಅಗೌರವ ತರುತ್ತಿದ್ದಾರೆ ಎಂದು ದೂರಿದರು.

2023ರ ವಿಧಾನಸಭಾ ಚುನಾವಣೆಗೆ ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೆಂದು ಘೋಷಿಸಿಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಅಖಿಲ ಭಾರತ ಸೇವೆಗಳ ನಿಯಮ 1968ರ ನಿಯಮ 3 ಹಾಗೂ 5ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಜಗದೀಶ್ ವಿ ಸದಂ ಹೇಳಿದರು.

ಅನಿಲ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಹಾಗೂ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾರವರಿಗೆ ದೂರು ನೀಡಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಜನರ ಮೇಲೆ ಪ್ರಭಾವ ಬೀರುತ್ತಿರುವ ಅವರು ಚುನಾವಣೆಗೆ ಸ್ಪರ್ಧಿಸಿದರೆ ಆಮ್ ಆದ್ಮಿ ಪಾರ್ಟಿಯು ಪ್ರತಿಭಟನೆ ಮಾಡಲಿದೆ ಎಂದು ಅವರು ತಿಳಿಸಿದರು.

ಅನಿಲ್ ಕುಮಾರ್‍ರವರ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ಗುತ್ತಿಗೆ ಕಾಮಗಾರಿಗಳಲ್ಲಿ ಮಾಡಿರುವ ಅಕ್ರಮಗಳ ಕುರಿತು ಸರಕಾರವು ಸಮಗ್ರ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಜಗದೀಶ್ ವಿ ಸದಂ ಆಗ್ರಹಿಸಿದರು.

ಪಕ್ಷದ ತುಮಕೂರು ಜಿಲ್ಲಾ ಉಸ್ತುವಾರಿ ಡಾ.ವಿಶ್ವನಾಥ್ ಮಾತನಾಡಿ, ಅನಿಲ್ ಕುಮಾರ್‍ರವರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೊರಟಗೆರೆ ಕ್ಷೇತ್ರದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಲೋಕೋಪಯೋಗಿ ಇಲಾಖೆಯ ಹಲವು ತುಂಡುಗುತ್ತಿಗೆಗಳನ್ನು ನೀಡಿದ್ದಾರೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಮೊತ್ತದ ಕಳಪೆ ಕಾಮಗಾರಿಗಳಿಗೆ ಕಾರಣರಾಗಿದ್ದಾರೆ ಎಂದರು ದೂರಿದರು.

ಜನರ ತೆರಿಗೆ ಹಣವು ಬಿಜೆಪಿ ಕಾರ್ಯಕರ್ತರ ಜೇಬು ಸೇರುವಂತೆ ಮಾಡಿದ್ದಾರೆ. ಅವರು ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗವು ನಿರ್ಬಂಧ ಹೇರಬೇಕು. ಅವರು ಸಲ್ಲಿಸಲಿರುವ ಚುನಾವಣಾ ಉಮೇದುವಾರಿಕೆಯನ್ನು ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News