‘ರೈತ ವಿದ್ಯಾನಿಧಿ' ನೇಕಾರರು, ಟ್ಯಾಕ್ಸಿ ಚಾಲಕರು, ಮೀನುಗಾರರ ಮಕ್ಕಳಿಗೂ ವಿಸ್ತರಣೆ: ಸಿಎಂ ಬೊಮ್ಮಾಯಿ ಘೋಷಣೆ

Update: 2022-07-28 12:52 GMT

ಬೆಂಗಳೂರು, ಜು. 28: ‘ರಾಜ್ಯದಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ‘ರೈತ ವಿದ್ಯಾನಿಧಿ' ಯೋಜನೆಯನ್ನು ನೇಕಾರರು, ಟ್ಯಾಕ್ಸಿ ಚಾಲಕರು ಹಾಗೂ ಮೀನುಗಾರರ ಮಕ್ಕಳಿಗೂ ವಿಸ್ತರಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಗುರುವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ನೇತೃತ್ವದ ಸರಕಾರ 1 ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಇಂದು ಏರ್ಪಡಿಸಿದ್ದ ಒಂದು ವರ್ಷದ ಸಾಧನೆಯ ಮಾಹಿತಿ ನೀಡುವ ಸಮಾರಂಭವನ್ನು ರದ್ದುಪಡಿಸಲಾಗಿದೆ' ಎಂದು ತಿಳಿಸಿದರು.

ವಿದ್ಯಾನಿಧಿ: ‘ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 10ರಿಂದ 12 ಸಾವಿರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಅದೇ ರೀತಿ ‘ಟ್ಯಾಕ್ಸಿ ಚಾಲಕರ' ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದ್ದು, 50ಸಾವಿರ ಮಂದಿ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಲಾಗಿದ್ದು, ಈ ಎಲ್ಲ ಕಾರ್ಯಕ್ರಮ ಸರಕಾರದ ಆದೇಶಗಳನ್ನು ಹೊರಡಿಸಲಾಗಿದ್ದು, ಅನುದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

‘ಎಸ್ಸಿ-ಎಸ್ಟಿ, ಒಬಿಸಿ, ಮಹಿಳೆಯರು ಹಾಗೂ ಯುವಕರ ಸಬಲೀಕರಣ, ಶಿಕ್ಷಣ, ಆರೋಗ್ಯ ವಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ' ಎಂದ ಅವರು, ‘ರಾಜ್ಯದಲ್ಲಿನ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಸ್ಸಿ-ಎಸ್ಟಿ ಬಡ ಕುಟುಂಬಗಳಿಗೆ ಉಚಿತವಾಗಿ 75 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆಯಡಿ ಡಿಬಿಟಿ ವರ್ಗಾವಣೆ ಇಂದಿನಿಂದ ಪ್ರಾರಂಭವಾಗಲಿದೆ' ಎಂದರು.

‘25 ಲಕ್ಷ ಮಂದಿ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದ್ದು, ಇದಕ್ಕಾಗಿ 900 ಕೋಟಿ ರೂ. ಒದಗಿಸಲಾಗಿದೆ. 75 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಫಲಾನುಭವಿಗಳು ಜಾತಿ ಪ್ರಮಾಣ ಪತ್ರ, ಆಧಾರ್ ಜೋಡಣೆಯ ಬ್ಯಾಂಕ್ ಖಾತೆ ನೀಡಿದರೆ ಅವರಿಗೆ ನೇರ ಹಣ ವರ್ಗಾವಣೆಯಾಗಲಿದೆ. ಇನ್ನೂ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ' ಎಂದು ತಿಳಿಸಿದರು.

ಸ್ವಯಂ ಉದ್ಯೋಗ ಯೋಜನೆ: ‘ಬಾಬು ಜಗಜೀವನ್ ರಾಂ ಹೆಸರಿನಲ್ಲಿ ಸ್ವಯಂ ಉದ್ಯೋಗ ಯೋಜನೆ ಜಾರಿಗೊಳಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ 100 ಮಂದಿ ಎಸ್ಸಿ-ಎಸ್ಟಿ ಯುವಕರಿಗೆ ಸ್ವಯಂ ಉದ್ಯೋಗ ಯೋಜನೆಗೆ ಚಾಲನೆ ನೀಡಲಾಗಿದೆ. ಶಿಕ್ಷಣ ಹಾಗೂ ಅದರ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ‘ವಿವೇಕ’ ಯೋಜನೆಯಡಿ ಮೊದಲ ಬಾರಿಗೆ 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ' ಎಂದು ಅವರು ಮಾಹಿತಿ ನೀಡಿದರು.

‘ರಾಜ್ಯದ 100 ಪ್ರಾಥಮಿಕ ಆರೋಗ್ಯ ಕೇಂದ್ರ(ಪಿಎಚ್‍ಸಿ)ಗಳನ್ನು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‍ಸಿ)ಗಳಾಗಿ ಉನ್ನತೀಕರಣಗೊಳಿಸಲಾಗುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿ 71 ಪಿಎಚ್‍ಸಿಗಳನ್ನು ರಾಜ್ಯದ ಸರಾಸರಿಗಿಂತ ಕಡಿಮೆ ಸೂಚ್ಯಂಕ ಇರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಸ್ತ್ರೀ ಸಾಮಥ್ರ್ಯ’ ಯೋಜನೆ: ‘ಸ್ತ್ರೀಶಕ್ತಿ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡುವ ನಿಟ್ಟಿನಲ್ಲಿ 1.50 ಲಕ್ಷ ರೂ.ನೀಡುವ ಜೊತೆಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ‘ಆಂಕರ್ ಬ್ಯಾಂಕ್' ಜೋಡಣೆ, ತರಬೇತಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ‘ಸ್ತ್ರೀ ಸಾಮಥ್ರ್ಯ ಯೋಜನೆ’ಗೆ ಚಾಲನೆ ನೀಡಲಾಗಿದೆ. 5 ಲಕ್ಷ ಮಹಿಳೆಯರ ಸ್ವಾವಲಂಬನೆಗೆ ಎಂಡ್ ಟು ಎಂಡ್ ನೆರವು ನೀಡಲಾಗುತ್ತಿದೆ' ಎಂದು ಹೇಳಿದರು.

ವಿವೇಕಾನಂದ ಯುವಶಕ್ತಿ ಯೋಜನೆ: ‘ರಾಜ್ಯದ 28 ಸಾವಿರ ಗ್ರಾಮಗಳಲ್ಲಿ ತಲಾ ಒಂದು ಸ್ವಾಮಿ ವಿವೇಕಾನಂದ ಸ್ವಸಹಾಯ ಸಂಘಗಳನ್ನು ರಚಿಸಿ, ಯುವಕರಿಗೂ ಆರ್ಥಿಕ ನೆರವು, ಬ್ಯಾಂಕ್ ಸಾಲದ ವ್ಯವಸ್ಥೆ ಕಲ್ಪಿಸಿ, ಅವರಿಗೆ ಅಗತ್ಯ ತರಬೇತಿ ನೀಡಿ, ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ 5 ಲಕ್ಷ ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗುವ ಅವಕಾಶ ಕಲ್ಪಿಸಲಾಗುವುದು' ಎಂದು ಅವರು ತಿಳಿಸಿದರು.

‘ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸಲು ಪುಣ್ಯಕೋಟಿ ದತ್ತು ಯೋಜನೆ ಜಾರಿ. ಈ ಯೋಜನೆಗೆ ಸಂಬಂಧಿಸಿದ ವೆಬ್‍ಸೈಟ್‍ನ ಲೋಕಾರ್ಪಣೆ ಮಾಡಿದ್ದು, ಪ್ರತಿಯೊಬ್ಬ ವ್ಯಕ್ತಿಯೂ ವಾರ್ಷಿಕ 11 ಸಾವಿರ ರೂ.ಪಾವತಿಸಿ, ಒಂದು ಗೋವಿನ ವರ್ಷದ ನಿರ್ವಹಣೆ ಮಾಡಬಹುದು. ಅವರೇ ಗೋವುಗಳನ್ನು ದತ್ತು ತೆಗೆದುಕೊಳ್ಳಬಹುದು ಅಥವಾ ಹಣ ಮೊತ್ತ ಪಾವತಿಸಿದ್ದಲ್ಲಿ ಸರಕಾರದ ಗೋ ಶಾಲೆಗಳಲ್ಲಿ ಗೋವುಗಳ ರಕ್ಷಣೆಗೆ ಈ ಮೊತ್ತವನ್ನು ಬಳಸಿಕೊಳ್ಳಲಾಗುವುದು' ಎಂದು ಪ್ರಕಟಿಸಿದರು.


ಆತ್ಮಸಾಕ್ಷಿ ನಿರ್ಣಯ: ‘ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ನಂತರ ಜನ ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿರುವ ಆಕ್ರೋಶದ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯಾಗಿ ನಿರ್ಣಯ ಕೈಗೊಂಡು ಸರಕಾರದ ಸಾಧನೆ ಬಿಂಬಿಸುವ ಕಾರ್ಯಕ್ರಮ ಹಾಗೂ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ‘ಜನೋತ್ಸವ' ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ


 ‘ನಮ್ಮದು ಒಂದು ತಂಡ. ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರರು, ಸೇವಾ ಮನೋಭಾವದವರು, ಯುವಕರಿದ್ದು ಒಟ್ಟಾರೆ ಬದ್ಧತೆ ಇರುವ ಸಂಪುಟ ನಮ್ಮದು. ಇವರೆಲ್ಲರ ಪಾಲು ಒಂದು ವರ್ಷದ ಸಾಧನೆಯಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಳ್ಳಲಾಯಿತು. ಆಡಳಿತ ಯಾರ ಪರವಾಗಿದೆ ಎನ್ನುವುದು ಮುಖ್ಯ. ನಮ್ಮ ನಿರ್ಣಯಗಳ ಮುಖಾಂತರ ಒಟ್ಟಾರೆ ಜನಪರ ಆಡಳಿತ ನೀಡುವುದು, ರಾಜ್ಯದ ಸಮಗ್ರ ಅಭಿವೃದ್ಧಿ ಹೊಂದಿ ಎಲ್ಲರಿಗೂ ಪಾಲುದಾರಿಕೆ-ಪಾಲ್ಗೊಳ್ಳುವಿಕೆ ಖಾತ್ರಿಪಡಿಸುವ ಆಡಳಿತ ನೀಡಿದ್ದೇವೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

-------------------------------------------------

‘ದೇಶದಲ್ಲೇ ಇದೇ ಮೊದಲ ಬಾರಿಗೆ ರೈತ ವಿದ್ಯಾನಿಧಿ ಯೋಜನೆ ರಾಜ್ಯದಲ್ಲಿ ಆರಂಭಿಸಲಾಗಿದ್ದು, ಈ ವರ್ಷ ಸುಮಾರು 10 ಲಕ್ಷ ಮಂದಿಯಷ್ಟು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಪ್ರತಿನಿತ್ಯ 15 ಸಾವಿರದಿಂದ 20 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ಹಣ ಪಾವತಿಸಲಾಗುತ್ತಿದೆ. ಈ ಯೋಜನೆಯಿಂದ ರೈತರ ಮಕ್ಕಳಲ್ಲಿ ಭರವಸೆ ಮೂಡಿಸಿದೆ'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News