ರಾಜಕೀಯ ದಾಳಕ್ಕೆ ಬಲಿಪಶುಗಳಾಗುವವರು...

Update: 2022-07-29 05:43 GMT

ಕಲ್ಲಚ್ಚು ಮಹೇಶ ಆರ್. ನಾಯಕ್ ಜಾಗತಿಕವಾಗಿ ಇತಿಹಾಸದಿಂದ ನೋಡಿದರೂ ಪಕ್ಷ ರಾಜಕೀಯ ಎಂಬುದು ಅಲ್ಲಲ್ಲಿನ ಸಂವಿಧಾನ ಮತ್ತು ಸತ್ಸಂಬದ್ಧವಾದ ಆಡಳಿತ ವ್ಯವಸ್ಥೆಯ ಮೂಲಕ ನಡೆಯುವ ಒಂದು ಪ್ರಕ್ರಿಯೆ ಎಂದಿದ್ದರೂ, ಜೊತೆಗೆ ಕೊಲೆಗಳೆಂಬ ಭಯಾನಕ ಸತ್ಯವೂ ದುರದೃಷ್ಟವಶಾತ್ ಇದೇ ರಾಜಕೀಯ ಪಕ್ಷಗಳ ಒಂದು ಬಂಡವಾಳವೂ ಹೌದು. ಭಾರತದ ಸ್ವಾತಂತ್ರ್ಯದ ಕಾಲಘಟ್ಟದಿಂದಲೂ ಇಂತಹ ಸನ್ನಿವೇಶಗಳು ಅನೇಕ ಸಂದರ್ಭಗಳಲ್ಲಿ ನಾವು ಕಂಡುಕೊಂಡಿರುವ ಒಂದು ಘೋರ ಸತ್ಯ. ರಾಜಕೀಯ ಕೊಲೆಗಳು ಸಾಮಾನ್ಯವಾಗಿ ಸಿದ್ಧಾಂತದ ನೆಲೆಯಿಂದ ಆರಂಭಗೊಂಡು ದ್ವೇಷಕ್ಕೆ ತಿರುಗಿ ಧರ್ಮದ ಮುಖವಾಡದೊಂದಿಗೆ ಮತ್ತಷ್ಟು ಆಯಾ ರಾಜಕೀಯ ಪಕ್ಷಗಳನ್ನು ಗಟ್ಟಿ ಮಾಡಿ ಕೊನೆಯಾಗುವುದು ಬಡವನ ಇತಿಶ್ರಿಯೊಂದಿಗೆಯೇ. ಬಹುಶಃ ಇದಕ್ಕೆ ಅತೀ ಸೂಕ್ತ ಉದಾಹರಣೆ ಕರ್ನಾಟಕ ಮತ್ತು ಕರ್ನಾಟಕದ ರಾಜಕೀಯ ಪ್ರಯೋಗ ಶಾಲೆ ಎಂದು ಕುಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ.

ಕರ್ನಾಟಕ ಹೆಚ್ಚು ಕಡಿಮೆ ರಾಷ್ಟ್ರೀಯ ರಾಜಕೀಯ ಪಕ್ಷಗಳ ಆಡಳಿತದಲ್ಲಿ ಇದ್ದದ್ದೇ ಹೆಚ್ಚು. ಎಲ್ಲ ದ್ರಾವಿಡ ರಾಜ್ಯಗಳು ತಮ್ಮ ತಮ್ಮ ಅಸ್ಮಿತೆಯ ಸ್ಥಳೀಯ ರಾಜಕೀಯ ವ್ಯವಸ್ಥೆಯೊಂದಿಗೆ ಗಟ್ಟಿಗೊಂಡರೂ, ಕನ್ನಡಿಗರು ಈ ನೆಲೆಯಲ್ಲಿ ಬಹುತೇಕ ಶೂನ್ಯ (ಜೆಡಿಎಸ್ ಸಹ ಸಂಪೂರ್ಣ ಪ್ರಾದೇಶಿಕ ನೆಲೆಯದೇ ಎನ್ನಬಹುದಾದ ರಾಜಕೀಯ ಪಕ್ಷವೇನಲ್ಲ). ಕಾಂಗ್ರೆಸ್-ಬಿಜೆಪಿಯ ಜುಗಲ್ ಬಂದಿಯಲ್ಲೇ ನಾವು ಉಳಿದವರು. ಹಾಗಾಗಿ ರಾಷ್ಟ್ರೀಯ ಪಕ್ಷಗಳ ಈ ಕೊಲೆಗಳೆಂಬ ದಾಳ ಮತ್ತು ಅದು ಉರುಳಿ ತಮಗೆ ಸಿಗಬಹುದಾದ ಲಾಭದ ಸ್ಪಷ್ಟ ಕಲ್ಪನೆ ಅವರಿಗಿದೆ. ಈಗಂತೂ ಮತೀಯ ಧ್ರುವೀಕರಣದ ಹಿನ್ನೆಲೆಯಲ್ಲಿ ಈ ಕೊಲೆಗಳೆಂಬುದು ಅವರಿಗೆ ಅತೀ ಸುಲಭವಾಗಿ ತಮ್ಮ ತಪ್ಪುಗಳನ್ನು ಮತ್ತು ಅಸಾಮರ್ಥವನ್ನು ಮುಚ್ಚಿಡುವ ಒಂದು ಸಾಧನ.

ಕರ್ನಾಟಕದ ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಳೆದ ಎರಡು ಮೂರು ದಶಕಗಳ ಕೊಲೆ ರಾಜಕೀಯಕ್ಕೆ, ಕೆಲವು ಬಾರಿ ತೀರಾ ವೈಯಕ್ತಿಕವೆನ್ನುವ ಕಾರಣಗಳು ಇಲ್ಲದಿರಲಿಕ್ಕಿಲ್ಲ. ಆದರೆ ಕೊಲೆಯ ನಂತರದ ಲಾಭ ಎತ್ತುವ ಪರಿಪಾಠದಲ್ಲಿ ಅವುಗಳು ನಗಣ್ಯ ಹೊಂದಿ ಧಾರ್ಮಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಉದ್ದೇಶದಿಂದ ಕೊಲೆಯಾದವನ ಜಾತಿ ಪ್ರಭಾವ ಆಧರಿಸಿ ರಾಜಕೀಕರಣಗೊಂಡದ್ದು ಇದೆ, ಹೊಸ ಹೊಸ ನಾಯಕರ ಉದಯವಾಗಿ ಮತ್ತು ಪ್ರತೀ ಕೊಲೆಯೂ ವೋಟ್ ತರಬಲ್ಲ ಸುಲಭ ಅಸ್ತ್ರವಾಗಿ. ಆದರೆ ಇದೀಗ ಅದೇ ಅಸ್ತ್ರ ಬೂಮ್ಯರಾಂಗ್ ಆಗಿ ವಾಪಸ್ ಬಂದಿದೆ. ಪ್ರಸ್ತುತ ಕರ್ನಾಟಕದ ಆಡಳಿತ ಪಕ್ಷಕ್ಕೆ ಜಾತ್ರೆಯ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಎತ್ತಿ ತೂಗಾಡಿಸಿದಂತೆ ರಾಜಕೀಯ ನಾಯಕರ ಕಾರನ್ನೇ ಅಲ್ಲಾಡಿಸಿ ಹಚ್ಚಲು ಹೊರಟ ಬೆಂಕಿ ತನ್ನೆದುರೇ ಬುಸುಗುಟ್ಟುತ್ತ!

ನಮ್ಮ ನಡುವಿನ ಕೊಲೆ ರಾಜಕೀಯದ ಬಲಿಪಶು ಸಮಾಜದ ಅತಿ ಸಾಮಾನ್ಯ ವ್ಯಕ್ತಿ ಎಂಬುವುದು ಎಲ್ಲ ಧರ್ಮ, ಜಾತಿ ಸ್ವತಃ ಅನುಭವಿಸಿ ಈಗಾಗಲೇ ತಿಳಿದುಕೊಂಡಿರುವ ಇನ್ನೊಂದು ಸತ್ಯ. ಅದೆಷ್ಟು ಪ್ರಯತ್ನ ಪಟ್ಟು ಇದನ್ನು ಮುಚ್ಚಿಟ್ಟರೂ ಇದೀಗ ಜನರ, ಅದರಲ್ಲೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ಕಣ್ಣ ಮುಂದೆ ಮತೀಯವಾದದ ನಡುವೆಯೂ ಅದು ಗೋಚರಿಸಿದೆ. ಮತ್ತದರ ಪ್ರಭಾವವೇ ಕಾರು ಅದುರಿದ್ದು ಮತ್ತು ರಾಜಕೀಯ ಪಕ್ಷದ ಭವಿಷ್ಯವನ್ನು ಅದುರಿಸಲು ಸಿದ್ಧತೆ ಮಾಡಿಕೊಂಡದ್ದು. ಅವ ಕೊಲೆಯಾದಾಗ ಇವ ಅಥವಾ ಇವ ಕೊಲೆಯಾದಾಗ ಅವ ಸಂಭ್ರಮಿಸುವ ಮೊದಲು ಮಾನವತೆಯೊಂದಿಗೆ ನಾವೆಲ್ಲ ಈ ಪಾಠವನ್ನು ಈ ಮೊದಲೇ ಮಾಡಿರುತ್ತಿದ್ದರೆ ಅದೆಷ್ಟೋ ರಾಜಕೀಯ ಪ್ರೇರಿತ ಕೊಲೆಗಳನ್ನು ನಾವೆಲ್ಲ ಸೇರಿ ತಡೆಯಬಹುದಿತ್ತೇನೋ. ಈಗಲಾದರೂ ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಸಾಗಲಿ. ರಾಜಕೀಯ ಪಕ್ಷಗಳ ಸೀಟುಗಳ ಲೆಕ್ಕಾಚಾರಕ್ಕೆ ಯಾರದೋ ಮನೆಯ ಗೋಡೆಯ ಮೊಳೆಯಲ್ಲಿ ತೂಗಾಡುವ ಫೋಟೊಗಳು ಮುಂದೆಂದೂ ದಾರಿ ಮಾಡಿಕೊಡದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News