"ಚೆಸ್ ಒಲಿಂಪಿಯಾಡ್ ಬ್ಯಾನರ್, ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿ ಭಾವಚಿತ್ರಗಳನ್ನೂ ಹಾಕಿ"

Update: 2022-07-29 08:59 GMT
Photo: Twitter/Amar Reddy

ಚೆನ್ನೈ: ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ನಡೆಯುವ 44ನೇ ಚೆಸ್ ಒಲಿಂಪಿಯಾಡ್ ಪ್ರಚಾರಾರ್ಥ ಅಳವಡಿಸಲಾದ ಭಿತ್ತಿಪತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಅಂಟಿಸಿದ ಬೆಳವಣಿಗೆಯ ಮರುದಿನವೇ ಗುರುವಾರ ಆದೇಶವೊಂದನ್ನು ಹೊರಡಿಸಿದ ಮದ್ರಾಸ್ ಹೈಕೋರ್ಟ್, ಚೆಸ್ ಒಲಿಂಪಿಯಾಡ್ ಪ್ರಚಾರ ವಸ್ತುಗಳು ಹಾಗೂ ಜಾಹೀರಾತುಗಳಲ್ಲಿ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭಾವಚಿತ್ರಗಳೂ ಇರಬೇಕು ಎಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.

ಚೆಸ್ ಒಲಿಂಪಿಯಾಡ್ ಪ್ರಚಾರ ಬ್ಯಾನರ್‍ಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಚಿತ್ರವಿದೆ. ಬ್ಯಾನರ್‍ಗಳನ್ನು ಸಿದ್ಧಪಡಿಸುವ ವೇಳೆ ನೂತನ ರಾಷ್ಟ್ರಪತಿಗಳ ಆಯ್ಕೆ ನಡೆದಿಲ್ಲದೇ ಇರುವುದರಿಂದ ಆವರ ಚಿತ್ರ ಹಾಕಿಲ್ಲ ಹಾಗೂ ಬ್ಯಾನರ್‍ಗಳಲ್ಲಿ ಪ್ರಧಾನಿ ಭಾವಚಿತ್ರ ಅಳವಡಿಕೆಗೆ ಅವರ ಕಚೇರಿಯಿಂದ ಅನುಮತಿ ವಿಳಂಬವಾಗಿ ದೊರಕಿತ್ತು ಎಂದು ತಮಿಳುನಾಡು ಸರಕಾರ ಹೇಳಿಕೊಂಡಿತ್ತು. ಆದರೆ ಈ ವಾದವನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಮುನೀಶ್ವರ ನಾಥ್ ಭಂಡಾರಿ ಮತ್ತು ಜಸ್ಟಿಸ್ ಎಸ್ ಅನಂತಿ ಅವರ ಪೀಠ, ದೇಶದ ಹಿತಾಸಕ್ತಿ ಪ್ರತಿಯೊಬ್ಬ ನಾಗರಿಕನ ಮನಸ್ಸಿನಲ್ಲಿ ಅತ್ಯಂತ ಹೆಚ್ಚು ಮಹತ್ವ ಪಡೆಯಬೇಕು ಎಂದು ಹೇಳಿದೆ.

ಚೆಸ್ ಒಲಿಂಪಿಯಾಡ್ ಪ್ರಚಾರ ವಸ್ತುಗಳಲ್ಲಿ ಮುಖ್ಯಮಂತ್ರಿಯ ಭಾವಚಿತ್ರ ಮಾತ್ರ ಬಳಸುವುದು  ಸುಪ್ರೀಂ ಕೋರ್ಟ್ ಈ ಹಿಂದೆ  ಬೇರೆ ಪ್ರಕರಣಗಳಲ್ಲಿ ನೀಡಿದ ತೀರ್ಪಿನ ಅನುಸಾರ ಉಲ್ಲಂಘನೆಯಾಗಿದೆ ಹಾಗೂ ಸುಪ್ರೀಂ ಕೋರ್ಟ್ ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭಾವಚಿತ್ರಗಳನ್ನೂ ಪ್ರಕಟಿಸುವಂತೆ ಆ ತೀರ್ಪುಗಳಲ್ಲಿ ಸೂಚಿಸಿತ್ತು ಎಂದು ಶಿವಗಂಗಾ ಜಿಲ್ಲೆಯ ಆರ್ ರಾಜೇಶ್ ಕುಮಾರ್ ಎಂಬವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News