×
Ad

ಆ.5ರೊಳಗೆ ದ.ಕ.ಜಿಲ್ಲೆಯ 3 ಹತ್ಯೆ ಪ್ರಕರಣದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ಧರಣಿ ಸತ್ಯಾಗ್ರಹ: ಕುಮಾರಸ್ವಾಮಿ

Update: 2022-08-01 19:03 IST

ಮಂಗಳೂರು, ಆ.1; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆ ನಡೆದ ಮಸೂದ್, ಪ್ರವೀಣ್, ಫಾಝಿಲ್  ಸೇರಿದಂತೆ ಮೂರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಕೇಳಿದ್ದೇನೆ. ಮೂರು ಹತ್ಯೆ ಪ್ರಕರಣದ ಆರೋಪಿ ಗಳನ್ನು ಆಗಸ್ಟ್  5ರೊಳಗೆ ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧ್ಯವಾಗದೆ ಹೋದರೆ ಮಂಗಳೂರಿನಲ್ಲಿ ಆ.6ರಂದು ಧರಣಿ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ರೀತಿಯ ಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದ ಮುಖಂಡರು, ಅವರ ಮಕ್ಕಳು ಬಲಿಯಾಗುತ್ತಿಲ್ಲ. ಬದಲಾಗಿ ಕಾರ್ಮಿಕರು, ಜನ ಸಾಮಾನ್ಯರ ಮಕ್ಕಳು ಬಲಿಯಾಗುತ್ತಿದ್ದಾರೆ. ಹಿಂದೆ ನಡೆದ ಹತ್ಯೆಗಳಲ್ಲಿ ಶಿಕ್ಷೆ ಆಗಿರುವ ಪ್ರಮಾಣ ಕನಿಷ್ಟ. ಈ ಬಗ್ಗೆ ಸಂತೃಸ್ತರಿಗೆ ಇಲ್ಲಿನ ಎರಡೂ ಪ್ರಬಲ ರಾಷ್ಟ್ರೀಯ ಪಕ್ಷಗಳ ಬಗ್ಗೆ ಅಸಮಾಧಾನವಿದೆ. ಅದಕ್ಕಾಗಿ ನೈಜ ಆರೋಪಿ ಗಳನ್ನು ಬಂಧಿಸಲು ಅವರು ಆಗ್ರಹಿಸುತ್ತಿದ್ದಾರೆ. ನಾನು ಕಾಟಾಚಾರಕ್ಕೆ ಯಾರನ್ನೋ ಬಂಧಿಸಿ ಎನ್ನುವುದಿಲ್ಲ. ನೈಜ ಆರೋಪಿಗಳನ್ನು ಬಂಧಿಸಲು ಆಗ್ರಹಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸಿ.ಎಂ ಭೇಟಿ ನಿರೀಕ್ಷೆ ಹುಸಿಯಾಗಿದೆ

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದ.ಕ ಜಿಲ್ಲೆಗೆ ಬಂದು ಹತ್ಯೆಗೀಡಾದ ಎರಡೂ ಸಮುದಾಯದ ಮನೆಗಳಿಗೆ ತೆರಳಿ ಜಿಲ್ಲೆಯಲ್ಲಿ ಸೌಹಾರ್ದತೆಯ, ವಿಶ್ವಾಸ ಮೂಡಿಸುವ  ಸಂದೇಶ ಸಾರಬಹುದು ಎಂಬ ನನ್ನ ನಿರೀಕ್ಷೆ ಹುಸಿಯಾಗಿದೆ. ನೀವು ಯಾರನ್ನು ಮೆಚ್ಚಿಸಲು ಸಿ.ಎಂ. ಆಗಿದ್ದೀರಿ. ಇಲ್ಲಿನ ಓರ್ವ ಶಾಸಕ, ಪ್ರಕಣಕ್ಕೆ ಸಂಬಂಧಿಸಿದಂತೆ ನಮ್ಮ ಕಾರ್ಯ ಕರ್ತರನ್ನು ಬಂಧಿಸಿದರೆ ಧರಣಿ ನಡೆಸುತ್ತೇವೆ ಎಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

*ಡಿಜಿಪಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡದೆ ಇಲ್ಲಿಗೆ ಬಂದು ಅಧಿಕಾರಿಗಳ ಬಗ್ಗೆ ಮಾತನಾಡಿ ಹಾಗೆ ಹೋಗಿದ್ದಾರೆ. ಘಟನೆ ನಡೆದ ಬಳಿಕ ಜಿಲ್ಲೆಗೆ ಬರಬೇಕಾಗಿದ್ದ ಡಿಜಿಪಿ ಬೆಂಗಳೂರಿನಲ್ಲೇ ಇದ್ದರು. ಇಂದು ಜಿಲ್ಲೆಗೆ ಭೇಟಿ ನೀಡಿ ತರಾತುರಿಯಲ್ಲಿ ಹೋಗುವ ಕೆಲಸ ಏನಿತ್ತು ಎಂದು ಕುಮಾರಸ್ವಾಮಿ ಡಿಜಿಪಿ ಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಮಂಗಳೂರು ನಗರ ದ.ಕ ಜಿಲ್ಲೆಯಲ್ಲಿ ಮತ್ತೆ ಸೌಹಾರ್ದ ವಾತಾವರಣ ಮೂಡಿಸಲು ಎಲ್ಲರ ಸಹಕಾರ ಅಗತ್ಯ. ಬಿಜೆಪಿ ಬೆಂಬಲದಿಂದ ಕೆಲವು ಸಂಘಟನೆಗಳು ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತವೆ. ಮಸೂದ್ ಹತ್ಯೆ ಹೆಚ್ಚು ಪ್ರಚಾರ ಆಗಲೇ ಇಲ್ಲ. ಸಿ.ಎಂ ಅಲ್ಲಿ ಭೇಟಿ ನೀಡದೆ, ಪರಿಹಾರವನ್ನು ನೀಡದೆ ಯಾವ ಸಂದೇಶ ನೀಡುತ್ತಿದ್ದಾರೆ. ಸಿ.ಎಂ ಜಿಲ್ಲೆಯಲ್ಲಿ ಇದ್ದಾಗಲೇ ಸುರತ್ಕಲ್ ಕೊಲೆಯಾಗಿದೆ .ಜಿಲ್ಲೆ ಯಲ್ಲಿ ಅಮಾಯಕ ಯುವಕರನ್ನು ಬಲಿ ಪಶುಗಳನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ನಮಗೆ ಚುನಾವಣೆಗೆ ಅಭ್ಯರ್ಥಿಗಳು ಸಿಗುತ್ತಿಲ್ಲ ಆದರೆ ಎರಡು ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್, ಬಿಜೆಪಿಗೆ ಇಲ್ಲಿನ ಜನರು ಬೆಂಬಲ ನೀಡುತ್ತಾ ಬಂದಿದ್ದಾರೆ ಅವರಿಗೆ ಏನು ಕೊಡುಗೆ ನೀಡಿದ್ದೀರಿ ಎಂದು ತಿಳಿಸಬೇಕಾಗಿದೆ. ಜಿಲ್ಲೆಯ ಉದ್ಯಮಿ ಗಳು ಹೊರ ದೇಶಗಳಲ್ಲಿ ಇದ್ದರೂ ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಈ ಪರಿಸ್ಥಿತಿ ಬದಲಾಗಿ ಜಿಲ್ಲೆಯಲ್ಲಿ ಉದ್ಯೋಗ ಅವಕಾಶ, ಸೌಹಾರ್ದತೆ ಯ ವಾತಾವರಣ ನಮ್ಮ ಪಕ್ಷದ ಆಶಯವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಎನ್ ಐಎ ತನಿಖೆ ಏಕೆ?

ರಾಜ್ಯದ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಆರೋಪಿಗಳನ್ನು ಬಂಧಿಸುತ್ತಾರೆ.ಎನ್ಐಎ  ಬೇಕಾಗಿಲ್ಲ. ಈ ಹಿಂದೆ ಭಟ್ಕಳದ ಶಾಸಕರಾಗಿದ್ದ ಚಿತ್ತರಂಜನ್ ಕೊಲೆ ಪ್ರಕರಣವನ್ನು ಎನ್ಐಎ ಗೆ ವಹಿಸಿದ್ದರು. ಆದರೆ ಅದರಲ್ಲಿ ಯಶಸ್ಸು ದೊರೆತ್ತಿಲ್ಲ ಈ ಮೂರು ಪ್ರಕರಣದ ಆರೋಪಿಗಳನ್ನು ಬಂಧಿಸಲು ರಾಜ್ಯದ ಪೊಲೀಸರು ಸಮರ್ಥರು. ಈ ಪ್ರಕರಣದ ಆರೋಪಿಗಳನ್ನು ಬಂಧಿಸದೆ ಇದ್ದರೆ ಆಗಸ್ಟ್ 5 ಬಳಿಕ ದ.ಕ ಜಿಲ್ಲಾ ಧಿಕಾರಿ ಕಚೇರಿ ಎದುರು ಜೆಡಿಎಸ್ ಧರಣಿ ಸತ್ಯಾಗ್ರಹ  ನಡೆಸಲಿದೆ ಎಂದು
 ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಭೋಜೆಗೌಡ,  ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಅಧ್ಯಕ್ಷ ಜಾ.ಕೆ.ಮಾಧವ ಗೌಡ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ, ಎಂ.ಬಿ.ಸದಾಶಿವ, ಮುಹಮ್ಮದ್ ಕುಂಞ, ಸುಶೀಲ್ ನರೊನ್ನಾ, ರಮೀಝಾ ನಝೀರ್, ವಸಂತ ಪೂಜಾರಿ, ನಝೀರ್ ಉಳ್ಳಾಲ, ಅಕ್ಷಿತ್ ಸುವರ್ಣ  ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News