ಕೋಮುಹತ್ಯೆ: ಪರಿಹಾರ ಘೋಷಣೆಯಲ್ಲಿನ ತಾರತಮ್ಯ ಧೋರಣೆಗೆ ಶಾಫಿ ಸಅದಿ ಆಕ್ಷೇಪ

Update: 2022-08-01 15:09 GMT

ಬೆಂಗಳೂರು, ಆ. 1: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಮೂವರು ನಾಗರಿಕರ ಹತ್ಯೆ ನಡೆದಿರುವುದು ಆಘಾತಕಾರಿ. ಸಮಾಜಘಾತುಕ ಶಕ್ತಿಗಳ ರಕ್ತದಾಹದಿಂದಾಗಿ ಸಮಾಜವು ಭೀತಿಯಿಂದ ಬದುಕುವಂತಾಗಿದ್ದು, ಇಂತಹ ಘಟನೆಗಳ ಲಾಭ ಪಡೆಯಲು ಯಾವುದೇ ಶಕ್ತಿಗಳಿಗೆ ಅವಕಾಶ ಆಗದಂತೆ ಸರಕಾರ ಅಗತ್ಯ ಕ್ರಮ ವಹಿಸಬೇಕು' ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಆಗ್ರಹಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೊಲೆ ನಡೆದ ಸಂದರ್ಭ ಸಿಎಂ ಜಿಲ್ಲೆಗೆ ಭೇಟಿ ಕೊಟ್ಟು ಒಂದೇ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ, ಪರಿಹಾರ ಘೋಷಿಸಿ, ಉಳಿದ ಇಬ್ಬರು ಮೃತರ ಮನೆಯವರನ್ನು ನಿರ್ಲಕ್ಷಿಸಿ ಪಕ್ಷಪಾತ ಧೋರಣೆ ಅನುಸರಿಸಿರುವುದರಿಂದ ಶಾಂತಿ ಸಹಬಾಳ್ವೆ ಬಯಸುವ ನಾಗರಿಕ ಸಮಾಜವು ಅಸಮಾಧಾನಗೊಂಡಿದೆ' ಎಂದು ಆಕ್ಷೇಪಿಸಿದ್ದಾರೆ.

ಮತ್ತೊಂದು ಸಮುದಾಯದ ಕುಟುಂಬದ ಮನೆಗಳಿಗೆ ಮುಖತಃ ಭೇಟಿ ಕೊಡಲು ಅಡಚಣೆಗಳೇನಾದರೂ ಇದ್ದಿದರೆ ಮಾಧ್ಯಮಗಳ ಮೂಲಕವಾದರೂ ಸಾಂತ್ವನ ಹೇಳುವಿರೆಂದು ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆವು. ಆದರೆ, ನಮ್ಮ ನಿರೀಕ್ಷೆಗಳು ಹುಸಿಯಾಗಿದೆ. ಪರಿಹಾರ ನೀಡುವ ಸಂದರ್ಭದಲ್ಲಿಯೂ ಏಕಪಕ್ಷೀಯವಾಗದೇ ಸಂವಿಧಾನದ ಆಶಯದಂತೆ ಹಾಗೂ ತಮ್ಮದೇ ಪಕ್ಷದ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಘೋಷಣೆಯಂತೆ ಎಲ್ಲ್ಲ ಅರ್ಹರಿಗೂ ಸಿಗುವಂತಾಗಬೇಕು' ಎಂದು ಅವರು ಆಗ್ರಹಿಸಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯ ಕೊಲೆಗಳಿಗೆ ಸಂಬಂಧಿಸಿ ತಾವು ಸಾಂತ್ವನ ಹಾಗೂ ಪರಿಹಾರ ಘೋಷಿಸುವಾಗ ತಾರತಮ್ಯ ನೀತಿ ಅನುಸರಿಸಿದ್ದು ಸ್ಪಷ್ಟ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೃಪ್ತಿಕರ ಸ್ಪಷ್ಟೀಕರಣವನ್ನು ನೀಡುವ ಮೂಲಕ ನಾಡಿನ ನಾಗರಿಕರ ಅಸಮಾಧಾನವನ್ನು ಶಮನಗೊಳಿಸಬೇಕು' ಎಂದು ಎನ್.ಕೆ.ಎಂ. ಶಾಫಿ ಸಅದಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News