ಬೆಂಗಳೂರಿನಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ
Update: 2022-08-01 20:55 IST
ಬೆಂಗಳೂರು. ಆ.1: ನಗರದ ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಶಾಂತಿನಗರ, ಕೆಂಗೇರಿ, ಬನಶಂಕರಿ, ಕೆ.ಆರ್.ಪುರಂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗಿದೆ. ನಗರದ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ಸತತ ಮಳೆ ಬೀಳುತ್ತಿದ್ದ ಕಾರಣ ಸಂಚಾರ ಅಸ್ತವ್ಯಸ್ತವಾಗಿದ್ದು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ನಗರದಲ್ಲಿ ಸೋಮವಾರ ಸುರಿದ ಮಳೆಗೆ ಬಹುಪಾಲು ರಸ್ತೆಗಳು ಹಾಗೂ ರಸ್ತೆ ಅಂಡರ್ ಪಾಸ್‍ಗಳು ಜಲಾವೃತಗೊಂಡಿದ್ದವು.
ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ರಾಜಕಾಲುವೆಗಳ ಆಸುಪಾಸಿನ ಮನೆಗಳು ಜಲಾವೃತಗೊಂಡು, ಸಮಸ್ಯೆ ಎದುರಾಗಿತ್ತು. ಸ್ವಲ್ಪ ಮಳೆ ಬಂದರೂ ತುಂಬಿ ಹರಿಯುವ ರಾಜಕಾಲುವೆಯಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಬಿಬಿಎಂಪಿಯ ಅವೈಜ್ಞಾನಿಕ ಚರಂಡಿ ನಿರ್ಮಾಣ, ಅಧಿಕಾರಿಗಳ ನಿರ್ಲಕ್ಷ್ಯಗಳಿಂದ ಜನ ಸಮಸ್ಯೆ ಎದುರಿಸುವಂತಾಗಿದೆ ಎಂದು ನಗರದ ಜನ ದೂರಿದ್ದಾರೆ.