ವೀರಶೈವ ಲಿಂಗಾಯತ ಜನಾಂಗಕ್ಕೆ ಓಬಿಸಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಧರಣಿ
ಬೆಂಗಳೂರು, ಆ.1: ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಓಬಿಸಿ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸೋಮವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಕೇಂದ್ರ ಸರಕಾರ ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂಬ ಬೇಡಿಕೆ ಬಹು ದಿನಗಳಿಂದಲೂ ಇತ್ತು. ಇಂದು ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಈ ಒಂದು ಶಿಫಾರಸ್ಸು ಹೋಗಬೇಕು ಎಂದರು.
ಪ್ರಸ್ತುತ ರಾಜ್ಯದಲ್ಲಿ ಲಿಂಗಾಯತ ವೀರಶೈವರಿಗೆ ಕ್ಯಾಟಗರಿ 3ಬಿನಲ್ಲಿ ಶೇ. ಐದರಷ್ಟು ಮೀಸಲಾತಿ ಇದೆ. ರಾಜ್ಯದಲ್ಲಿ ಇರುವ ಮೀಸಲಾತಿ ಪಟ್ಟಿ ಕೇಂದ್ರದಲ್ಲಿ ಇಲ್ಲ. ವೀರಶೈವ ಲಿಂಗಾಯತ ಸಮುದಾಯದ ಒಂದೆರಡು ಪಂಗಡಗಳಿಗೆ ಮಾತ್ರ ಮೀಸಲಾತಿಯ ಅನುಕೂಲ ಸಿಗುತ್ತಿದೆ. ಉಳಿದಂತೆ ಶೇಕಡ 80 ರಷ್ಟು ಒಳಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಿಂದ ಇಂದು ವಂಚಿತವಾಗಿವೆ ಎಂದು ದೂರಿದರು.
ಭೂತಿಪುರ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ನಡೆಸುತ್ತಿರುವ ಹೋರಾಟವನ್ನೇ ಮೀಸಲಾತಿಗಾಗಿ 1946ರಲ್ಲಿ ನಡೆಸಿದರೆ ವೀರಶೈವ ಲಿಂಗಾಯತ ಸಮುದಾಯದ ಎಲ್ಲ್ಲ ಉಪ ಪಂಗಡಗಳು ಸೇರ್ಪಡೆ ಆಗಿಬಿಟ್ಟಿರುತ್ತಿದ್ದವು ಎಂದರು.
ಚಿನ್ನಪ್ಪ ರೆಡ್ಡಿ ಆಯೋಗದ ಪ್ರಕಾರ ಮೀಸಲಾತಿ ಪಟ್ಟಿಗೆ ಸೇರಿಸುವಾಗ ಒಂದಿಷ್ಟು ಮಾನದಂಡವನ್ನು ಸೂಚಿಸಿದ್ದಾರೆ. ಶೇಕಡ 11.6ರಷ್ಟು ಮಂದಿ ಸಮುದಾಯದ ನಾಯಕರು ನಿವೇಶನ, ಜಮೀನು ರಹಿತರಾಗಿದ್ದಾರೆ. ಒಟ್ಟಾರೆ ವಿವಿಧ ಸಮುದಾಯಗಳ ಜೊತೆ ನಮಗೂ ಈ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗುವ ಅರ್ಹತೆ ಇದೆ ಎಂದು ಹೇಳಿದರು.