ಕೊಲೆ ಬಳಿಕ ಸಿಎಂ ಬೊಮ್ಮಾಯಿ ನಡೆದುಕೊಂಡಿದ್ದು, ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆ: ಬಹುತ್ವ ಕರ್ನಾಟಕ ಆರೋಪ

Update: 2022-08-02 12:41 GMT

ಬೆಂಗಳೂರು, ಆ.2: ರಾಜ್ಯ ನಡೆದಿರುವ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಮಹಮ್ಮದ್ ಫಾಝಿಲ್ ಹತ್ಯೆಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಕಾನೂನು ವ್ಯವಸ್ಥೆಯ ವೈಫಲ್ಯತೆಯನ್ನು ತೋರಿಸುತ್ತದೆ. ಈ ಮೂರು ಕೊಲೆಗಳು ನಡೆದ ಬಳಿಕ ಮುಖ್ಯಮಂತ್ರಿ ಸೇರಿ ಆಡಳಿತ ಪಕ್ಷವು ನಡೆದುಕೊಂಡ ರೀತಿಯು ಸಂವಿಧಾನದ 14 ವಿಧಿಯ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ಬಹುತ್ವ ಕರ್ನಾಟಕ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳವಾರ ಬಹುತ್ವ ಕರ್ನಾಟಕ ಸದಸ್ಯ ಮತ್ತು ಹಿರಿಯ ವಕೀಲ ಬಿ.ಟಿ ವೆಂಕಟೇಶ್ ಮಾತನಾಡಿ, ಕರ್ನಾಟಕ ಇಂದು ಬಿಕ್ಕಟ್ಟಿನಲ್ಲಿದೆ. ಈ ಆಡಳಿತ ಮುಂದುವರೆದರೆ, ರಾಜ್ಯದಲ್ಲಿ ಯುವ ಸಮೂಹವು ಅಪಾಯಕ್ಕೀಡಾಗುತ್ತದೆ. 2021ರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಿಂಸೆಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಹೆಸರಿನಲ್ಲಿ ಸಮರ್ಥಿಸಿದಾಗಲೇ ಹಿಂಸೆಯ ಮಹಾದ್ವಾರಗಳು ತೆರೆದುಕೊಂಡಿದ್ದವು ಎಂದು ಕಿಡಿಕಾರಿದರು.  
 
ಆಡಳಿತ ಎನ್ನುವುದು ಕೇವಲ ಒಂದು ಪಕ್ಷದ ಕಾರ್ಯಕರ್ತರಿಗೆ ಮಾತ್ರವೇ ಎಂಬಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ನಾಡಿನ ಮುಖ್ಯಮಂತ್ರಿ ಕೊಲೆಯಾದ ತನ್ನ ಪಕ್ಷದ ಕಾರ್ಯಕರ್ತನ ಮನೆಗೆ ಮಾತ್ರ ಭೇಟಿ ಕೊಟ್ಟು, ಅನ್ಯಧರ್ಮಿಯರು ಕೊಲೆಯಾದಾಗ ಅವರ ಮನೆಗೆ ಭೇಟಿ ನೀಡದೆ, ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅವರು ಆಪಾದಿಸಿದರು.

ಸಂಘ ಪರವಾರ ಪ್ರೇರಿತ ಸಂಘಟನೆಗಳ ಕಾರ್ಯಕರ್ತರು ನಾಬೀಸಾಬ್ ಎಂಬುವವರ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ದ್ವಂಸಗೊಳಿಸಿದ್ದು, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುವ ಮೂಲಕ ದ್ವೇಷ ಭಾಷಣವನ್ನು ಮಾಡಿದ್ದು, ಬಲವಂತವಾಗಿ ಮಸೀದಿಗಳಿಗೆ ನುಗ್ಗಿ ಪೂಜೆ ನಡೆಸುವಂತೆ ಹೆದರಿಸಿದ್ದು, ಇನ್ನು ಮುಂತಾದ ಸಂವಿಧಾನ ವಿರೋಧಿ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. 2022ರ ಜನವರಿ ತಿಂಗಳಿನಲ್ಲಿ ಬಜರಂಗದಳದ ಸಂಜು ನಲವಾಡೆ ಪೋಲಿಸ್ ಠಾಣೆಯ ಮುಂದೆ ದ್ವೇಷ ಭಾಷಣ ಮಾಡಿದ ಕೆಲವು ಗಂಟೆಗಳ ಬಳಿಕ ಅದೇ ಪಟ್ಟಣದಲ್ಲಿ ಸಮೀರ್ ಶಹಾಪುರನ ಕೊಲೆಯಾಗಿದೆ ಎಂದು ಅವರು ಸರಕಾರಕ್ಕೆ ನೆನಪಿಸಿದರು. 

ಬಹುತ್ವ ಕರ್ನಾಟಕದ ಮುಖ್ಯಸ್ಥೆ ಮೈತ್ರಿಯಿ ಕೃಷ್ಣನ್ ಮಾತನಾಡಿ, ಪೊಲೀಸರ ಸಮ್ಮುಖದಲ್ಲಿ ಸಂಘಪರಿವಾರ ಪ್ರೇರಿತ ಸಂಘಟನೆಗಳ ಕಾರ್ಯಕರ್ತರು ಹಿಂಸೆಯಲ್ಲಿ ತೊಡಗಿರುವುದನ್ನು ನಾವು ನೋಡಿದ್ದೇವೆ. ನೇರವಾಗಿ ಬೀದಿಗಳಲ್ಲಿ ನಿಂತು ಹಿಂದೂ ಕಾರ್ಯಕರ್ತರು ಬೇರೊಂದು ಧರ್ಮವನ್ನು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಕೋಮು ದ್ವೇಷಗಳನ್ನು ಹುಟ್ಟು ಹಾಕಲು ಕಾರಣವಾಗಿದೆ. ಇದಕ್ಕೆ ಸರಕಾರವಷ್ಟೇ ಅಲ್ಲದೆ ಪೊಲೀಸರೂ ಕುಮ್ಮಕ್ಕು ನೀಡುತ್ತಿದ್ದು, ಮಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲಾ ಹಿಂಸಾಚಾರಕ್ಕೆ ಕಾರಣಿಕರ್ತರಾಗಿದ್ದಾರೆ ಎಂದು ದೂರಿದರು.

ಸಂಘಟನೆಯ ಸದಸ್ಯ ಮಹಮ್ಮದ್ ನಝೀರ್ ಮಾತನಾಡಿ, ರಾಜ್ಯದಲ್ಲಿ ಕಾನೂನಿನ ನಿಯಮ ಸಂಪೂರ್ಣವಾಗಿ ಕುಸಿದಿದೆ. ಆಡಳಿತ ಎನ್ನುವುದು ಕೇವಲ ಒಂದು ಪಕ್ಷದ ಕಾರ್ಯಕರ್ತರಿಗೆ ಮಾತದ್ರವೇ ಎಂಬಂತೆ ಉಳಿದಿದೆ. ಮೇಲ್ನೋಟಕ್ಕಾದರೂ ಸಮಾನತೆ ಎಂಬುದು ಕಾಣಿಸುತ್ತಿಲ್ಲ. ಒಬ್ಬ ಮುಖ್ಯಂತ್ರಿ ಹಿಂದುತ್ವದ ಕಾನೂನನ್ನು ಪಾಲಿಸುತ್ತೇನೆ ಎಂದು ಹೇಳುವುದು ರಾಜ್ಯದ ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶರಣ್ಯಾ, ಹಾರತ್ರಿಕಾ, ಮಹಮ್ಮದ್ ನಿಯಾಝ್ ಉಪಸ್ಥಿತರಿದ್ದರು

''ಮುಖ್ಯಮಂತ್ರಿ ರಾಜಿನಾಮೆ ನೀಡಲಿ''

ಕೂಡಲೇ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಯುಪಿ ಮಾಡೆಲ್ ಮಾಡೆಲ್ ಅನ್ನು ತರುತ್ತೇನೆ ಎಂಬ ಹೇಳಿಕೆಯನ್ನು ಯಥಾವತ್ತಾಗಿ ಹಿಂತೆಗೆದುಕೊಳ್ಳಬೇಕು. ಹಿಂಸೆಯನ್ನು ತಡೆಯಲು ಕಾನೂನುಬಾಹಿರ ಕ್ರಮವನ್ನು ಕೈಗೊಳ್ಳುತ್ತೇವೆ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿರುವ ಸಚಿವ ಅಶ್ವಥ್ ನಾರಾಯಣ್ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ದ್ವೇಷ ಮತ್ತು ಗಾಳಿ ಸುದ್ದಿಯನ್ನು ಹರಡುವ ಮಾಧ್ಯಮಗಳು ಸೇರಿ ಪ್ರಮೋದ್ ಮುತಾಲಿಕ್, ಕೋಳಿ ಸ್ವಾಮಿ ಹಾಗೂ ಈಶ್ವರಪ್ಪ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕು. 

-ಮೈತ್ರಿಯಿ ಕೃಷ್ಣನ್, ಬಹುತ್ವ ಕರ್ನಾಟಕದ ಮುಖ್ಯಸ್ಥೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News