ಬೆಂಗಳೂರು | ಆನ್‍ಲೈನ್ ಮೂಲಕ ಮಾದಕ ವಸ್ತು ಸರಬರಾಜು: ಮೂವರು ಆರೋಪಿಗಳ ಬಂಧನ

Update: 2022-08-02 13:37 GMT

ಬೆಂಗಳೂರು, ಆ.2: ತಂತ್ರಜ್ಞಾನ ಹಾಗೂ ಸಾಫ್ಟ್ ವೇರ್ ಗಳನ್ನು ಬಳಸಿ ಆನ್‍ಲೈನ್ ಮೂಲಕ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ದುಷ್ಕರ್ಮಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಪ್ರಕರಣ ಸಂಬಂಧ ಹೊಸದಿಲ್ಲಿ ಮೂಲದ ವಿಶಾಲ್‍ಕುಮಾರ್, ಭೀಮಾಂಶುಠಾಕೂರ್, ಸಾಗರ್, ಮಹಾಬಲಿಸಿಂಗ್, ಸುಬರ್ಜಿತ್ ಸಿಂಗ್ ಎಂಬುವರನ್ನು ಬಂಧಿಸಲಾಗಿದೆ ಎಂದರು.

ಆರೋಪಿಗಳಿಂದ ಎಂಡಿಎಂಎ ಕ್ರಿಸ್ಟಲ್, ಪಿಲ್ಸ್‍ಗಳು, ಕೋಕೈನ್, ಹ್ಯಾಶಿಸ್ ಆಯಿಲ್, ಚರಸ್ ಗಾಂಜಾವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಜತೆಗೆ, ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡು ಇತರರ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಲೋಕೋಂಟೋ ಮೂಲಕ ನಗರ ಹಾಗೂ ಅಂತರ್ ಜಿಲ್ಲೆ ಯ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಹೆಚ್ಚಿನ ವೇತನದ ಆಸೆ ತೋರಿಸಿ ಕೆಲಸಕ್ಕೆ ತೆಗೆದುಕೊಂಡು ಮಾದಕವಸ್ತು ಸಾಗಾಣೆ ಮಾಡಲು ಬಳಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅವರು ಹೇಳಿದರು.

ಪ್ರಮುಖವಾಗಿ ವಿದೇಶದಿಂದ ಬರುವ ಕೊರಿಯರ್ ಸೇವೆಗಳು ಹಾಗೂ ಡಾರ್ಕ್ ನೆಟ್ ಸೇರಿದಂತೆ ಇನ್ನಿತರೆ ಕಡೆ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಅಲ್ಲಿಂದ ವಿವಿಧ ನಗರಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಮಾರಾಟ ಮಾಡುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News