×
Ad

ಮಳೆ ಹಾನಿ: ದ.ಕ. ಜಿಲ್ಲಾಡಳಿತದಿಂದ ಅಗತ್ಯ ಪರಿಹಾರ ಕ್ರಮ

Update: 2022-08-02 21:27 IST

ಮಂಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾನಿಗೊಳಗಾದ ನಾಗರಿಕರಿಗೆ ಜಿಲ್ಲಾಡಳಿತ ದಿಂದ ಸೂಕ್ತ ಪರಿಹಾರ ಒದಗಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಮಳೆ ಪೀಡಿತ 11 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಮಂಗಳವಾರ ನಡೆಸಿದ ವೀಡಿಯೋ ಸಂವಾದದಲ್ಲಿ ಅವರು ಈ ಮಾಹಿತಿ ನೀಡಿದರು.

ಜಿಲ್ಲೆಯ ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ತೀವ್ರ ಮಳೆಯಿಂದ ೩೦ ಮನೆಗಳಿಗೆ ಹಾನಿಯಾಗಿದೆ. ೫ ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಪರ್ವತಮುಖಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ, ಅವರ ಕುಟುಂಬಕ್ಕೆ ಈಗಾಗಲೇ ಪರಿಹಾರವನ್ನು ಪಾವತಿಸಲಾ ಗಿದೆ ಎಂದರು.

3 ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಇದೆ. ಮಳೆಯಿಂದ ಸಂಕಷ್ಟಕ್ಕೊಳಗಾದ ನಾಗರಿಕರಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ. ಅತಂತ್ರಗೊಂಡವರನ್ನು ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಡಿಸಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಕೆಲವೆಡೆ ವಾಣಿಜ್ಯ ಸಂಕೀರ್ಣಗಳು ಹಾನಿಗೊಳಗಾಗಿವೆ, ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ತುಂಬಿ ಹರಿದಿದ್ದು ಆದಿ ದೇಗುಲದ ಗರ್ಭಗುಡಿಯೊಳಗೂ ನೀರು ಹರಿದಿದೆ. ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡಿರುವ ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು ಹಾಗೂ ಇತರೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎರಡು ತಾಲೂಕುಗಳಲ್ಲಿ ೨೩ ಕಡೆ ಹಾನಿಯಾಗಿದ್ದು ಅದನ್ನು ದುರಸ್ತಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆಯ ಐಎಸ್‌ಎನ್ ಪ್ರಸಾದ್,  ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿ, ಪ್ರಕೃತಿ ವಿಕೋಪ ನಿರ್ವಹಣಾ ಸೆಲ್ ಮುಖ್ಯಸ್ಥ ಮನೋಜ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News