ಅಮೆರಿಕದವರು ಪ್ರಚೋದಕರು ನಾವು ಬಲಿಪಶುಗಳು : ಚೀನಾ

Update: 2022-08-03 15:58 GMT

ಬೀಜಿಂಗ್, ಆ.3: ಅಮೆರಿಕ ಸಂಸತ್‌ನ ಸ್ಪೀಕರ್ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ತೈವಾನ್ ಜಲಸಂಧಿಯ ಬಳಿ ತಾನು ನಡೆಸಿರುವ ಸೇನಾ ಕಾರ್ಯಾಚರಣೆ ಅತ್ಯಗತ್ಯ ಮತ್ತು ಸರಿಯಾದ ಕ್ರಮವಾಗಿದೆ ಎಂದು ಚೀನಾ ಬುಧವಾರ ಸಮರ್ಥಿಸಿಕೊಂಡಿದೆ. 

ಚೀನಾದ ತೈವಾನ್ ಬಳಿಯ ಸಮುದ್ರ ಪ್ರದೇಶದಲ್ಲಿ ನಮ್ಮ ಸೇನೆ ನಡೆಸಿದ ಸೇನಾ ಕವಾಯತು ರಾಷ್ಟ್ರೀಯ ಸಾರ್ವಭೌಮತ್ವವನ್ನು ದೃಢವಾಗಿ ರಕ್ಷಿಸಲು ಅಗತ್ಯ ಮತ್ತು ನ್ಯಾಯಯುತವಾದ ಕ್ರಮವಾಗಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನ್‌ಯಿಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಪೆಲೋಸಿಯ ತೈವಾನ್ ಭೇಟಿಗೆ ಸಂಬಂಧಿಸಿದ ಬಿಕ್ಕಟ್ಟಿನಲ್ಲಿ ಅಮೆರಿಕದವರು ಪ್ರಚೋದಕರಾಗಿದ್ದರೆ ಚೀನಾ ಬಲಿಪಶುವಾಗಿದೆ. 

ಅಮೆರಿಕ ಮತ್ತು ತೈವಾನ್‌ನ ಜಂಟಿ ಪ್ರಚೋದನೆ ಮೊದಲು ಬಂದಿದ್ದು ಚೀನಾದ ರಕ್ಷಣಾ ಕ್ರಮ ಆ ಬಳಿಕ ನಡೆದಿದೆ ಎಂದವರು ಪ್ರತಿಪಾದಿಸಿದರು. ಪೆಲೋಸಿಯ ತೈವಾನ್ ಭೇಟಿ ಬಗ್ಗೆ ಚೀನಾದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ತೈವಾನ್ ಜಲಸಂಧಿಯಲ್ಲಿನ ಯಥಾಸ್ಥಿತಿಗೆ ಒಡ್ಡಿರುವ ಬೆದರಿಕೆಯಾಗಿದೆ ಎಂದಿದ್ದಾರೆ. 

ಈ ಮಧ್ಯೆ, ತೈವಾನ್ ಸುತ್ತಮುತ್ತ ಸರಣಿ ರಕ್ಷಣಾ ಕವಾಯತುಗಳನ್ನು ಹಮ್ಮಿಕೊಂಡಿದೆ. ತೈವಾನ್ ದ್ವೀಪದ ಉತ್ತರ, ನೈಋತ್ಯ ಮತ್ತು ಆಗ್ನೇಯ ಸಮುದ್ರ ಮತ್ತು ವಾಯುಪ್ರದೇಶಗಳಲ್ಲಿ ಜಂಟಿ ನೌಕಾ ಮತ್ತು ವಾಯು ಕವಾಯತನ್ನು ನಡೆಸಲಾಗುವುದು ಎಂದು ಚೀನಾದ ಪೂರ್ವ ಥಿಯೇಟರ್ ಕಮಾಂಡ್( ಸೇನೆಯ ಮೂರೂ ವಿಭಾಗಗಳನ್ನು ಒಳಗೊಂಡ ತುಕಡಿ) ಹೇಳಿಕೆ ನೀಡಿದೆ. 

ಗುರುವಾರ ತೈವಾನ್ ಕಡಲ ತೀರಕ್ಕಿಂತ ಕೇವಲ 20 ಕಿ.ಮೀ ದೂರದ ವಲಯದಲ್ಲಿ ಇನ್ನಷ್ಟು ಮಿಲಿಟರಿ ತರಬೇತಿ ಕವಾಯತು ನಡೆಸಲಾಗುವುದು. ಈ ಕವಾಯತಿನಲ್ಲಿ ತೈವಾನ್ ಜಲಸಂಧಿಯಲ್ಲಿ ನಡೆಯುವ ದೀರ್ಘ ಶ್ರೇಣಿಯ ಗುಂಡು ಹಾರಾಟ ತರಬೇತಿಯೂ ಸೇರಿದೆ ಎಂದು ಹೇಳಿಕೆ ತಿಳಿಸಿದೆ. ಚೀನಾದ ಸೇನಾ ಕವಾಯತು ತನ್ನ ಪ್ರಮುಖ ಬಂದರು ಹಾಗೂ ಗ್ರಾಮೀಣ ಪ್ರದೇಶಕ್ಕೆ ಒಡ್ಡಿರುವ ಬೆದರಿಕೆಯಾಗಿದೆ ಎಂದು ತೈವಾನ್ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News