ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಉಪ್ಪಿನಂಗಡಿಯ ಸಿರಾಜುದ್ದೀನ್ ನೇಮಕ

Update: 2022-08-03 16:56 GMT
ಸಿರಾಜುದ್ದೀನ್

ಮಂಗಳೂರು, ಆ.3: ಉಪ್ಪಿನಂಗಡಿ ಸಮೀಪದ ಇಳಂತಿಲದ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವ ಹಿಸುತ್ತಿರುವ ಸಿರಾಜುದ್ದೀನ್ ಎ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ಗಂಗಪ್ಪ ಈರಪ್ಪ ಪಾಟೀಲ್, ಸುಮಂಗಳಾ ಚಕಲಬ್ಬಿ, ಮಧು ಎನ್.ಆರ್., ಆನಂದ, ಸಿರಾಜುದ್ದೀನ್ ಎ, ಸರಿತಾ ಡಿ, ಮಾಯಣ್ಣ  ಬಿ.ಎಲ್. ಅವರು ಜಿಲ್ಲಾ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ಬುಧವಾರ ಹೈಕೋರ್ಟ್ ರಿಜಿಸ್ಟಾರ್ ಪ್ರಕಟನೆ ಹೊರಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನಿವಾಸಿಯಾಗಿರುವ ಸಿರಾಜುದ್ದೀನ್ ಮಂಗಳೂರಿನಲ್ಲಿ ಖ್ಯಾತ ಕ್ರಿಮಿನಲ್ ನ್ಯಾಯವಾದಿ ಅರುಣ್ ಬಂಗೇರ ಅವರ ಜೂನಿಯರ್ ಆಗಿದ್ದರು. ಕಳೆದ 16 ವರ್ಷಗಳಿಂದ ನ್ಯಾಯವಾದಿಯಾಗಿದ್ದ ಸಿರಾಜುದ್ದೀನ್ ನ್ಯಾಯಾಧೀಶರ ಹುದ್ದೆಗಾಗಿ ಪರೀಕ್ಷೆ ಬರೆದಿದ್ದರು.

ಸಾಮಾನ್ಯ ಕೃಷಿ ಕುಟುಂಬದ ಸಿರಾಜುದ್ದೀನ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದ್ದರು. ದ.ಕ. ಜಿಲ್ಲೆಯಿಂದ ಈ ಬಾರಿ ಸಿರಾಜುದ್ದೀನ್ ಮಾತ್ರ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಆಯ್ಕೆ ಪ್ರಕಟನೆ ಮಾತ್ರ ಆಗಿದೆ. ಮುಂದೆ ಯಾವ ಜಿಲ್ಲೆಗೆ ನೇಮಕಾತಿ ಎಂಬುದು ಇನ್ನಷ್ಟೇ ಪ್ರಕಟವಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News