ಲಾಲ್‍ಬಾಗ್‍ನಲ್ಲಿ ಡಾ.ರಾಜ್‍ಕುಮಾರ್, ಪುನೀತ್ ನೆನಪು ಅನಾವರಣ

Update: 2022-08-05 18:00 GMT

ಬೆಂಗಳೂರು, ಆ.5: ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ವರನಟ ಡಾ.ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ನೆನಪು ಅನಾವರಣಗೊಂಡಿದ್ದು, ಅವರ ನೂರಾರು ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದೆ.

ಇಲ್ಲಿ ಉದ್ಯಾನದಾದ್ಯಂತ ಅಲ್ಲಲ್ಲಿ ರಾಜ್-ಪುನೀತ್ ನಟನೆಯ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅದರಲ್ಲೂ ಪುನೀತ್ ನಟನೆಯ `ರಾಜಕುಮಾರ' ಚಿತ್ರದ `ಗೊಂಬೆ ಹೇಳತೈತೆ' ಗೀತೆ ಉದ್ಯಾನದಲ್ಲಿ ಕೇಳಿ ಬರುತ್ತಿದ್ದರೆ, ಪ್ರದರ್ಶನ ವೀಕ್ಷಣೆಗೆ ಬಂದವರ ಕಣ್ಣ ಮುಂದೆ ಪುನೀತ್ ಹಾದು ಹೋದಂತಾಗಿ, ಹಾಗೆಯೇ ಕಣ್ಣಲ್ಲಿ ನೀರು ಹರಿಸುತ್ತಿದ್ದರು. 

ಮತ್ತೊಂದೆಡೆ ರಣಧೀರ ಕಂಠೀರವ, ಮಯೂರ, ಬಹದ್ದೂರ್ ಗಂಡು, ರಾಜ್ ಅವರ ಆರಾಧ್ಯ ದೈವ ರಾಘವೇಂದ್ರ ಸ್ವಾಮಿ ಪಾತ್ರದ 4 ಅಡಿ ಎತ್ತರದ ಪ್ರತಿಮೆಗಳಿವೆ. ಯೋಗಾಸನ ಭಂಗಿ, ಬೇಡರಕಣ್ಣಪ್ಪನಂತಹ ರಾಜ್‍ರ ಚಿತ್ರಗಳು ಗಾಜಿನಮನೆಯಲ್ಲಿ ಪ್ರದರ್ಶಿತಗೊಂಡಿದ್ದು,ರಾಜ್‍ರ ನಟನೆಯ ನಾನಾ ರೂಪಗಳನ್ನು ತೋರುತ್ತಿವೆ. 

ಅದೇ ರೀತಿ, ಬೆಟ್ಟದ ಹೂವಿನ ಬಾಲಕ ಪುನೀತ್ ರಾಜ್‍ಕುಮಾರ್, ರಾಜಕುಮಾರ ಪಾತ್ರಧಾರಿ ಸೇರಿದಂತೆ ಹತ್ತಾರು ಪುನೀತ್‍ರ ಪಿಒಪಿ ಪ್ರತಿಮೆಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರಗು ನೀಡಿವೆ. ಈ ಪ್ರತಿಮೆಗಳನ್ನು ಶಿಲ್ಪಿ ಬಿ.ಸಿ.ಶಿವಕುಮಾರ್ ಅವರು ನಿರ್ಮಿಸಿದ್ದಾರೆ. 

ಮೂವರ ಪುತ್ಥಳಿ:ಪಾರ್ವತಮ್ಮ, ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಪಿಓಪಿ ಪ್ರತಿಮೆಗಳ ಫ್ರೇಂ ಆಕರ್ಷಣೀಯವಾಗಿದ್ದು, ಮೂರೂ ಪ್ರತಿಮೆಗಳು ಗಾಜಿನ ಮನೆಯ ಮುಂಭಾಗದಲ್ಲಿದ್ದು, ಜೀವಕಳೆ ಬಂದಿದೆ. `ಬೇಡರಕಣ್ಣಪ್ಪ' ಚಿತ್ರದ ವಿಶೇಷ ಪ್ರತಿಮೆಯು ನೇತ್ರದಾನದ ಬಗ್ಗೆ ಅರಿವು ಮೂಡಿಸುತ್ತಿದೆ. 
ಗಾಜಿನ ಮನೆಯಲ್ಲಿ ಮೈಸೂರಿನ `ಶಕ್ತಿಧಾಮ'ದ ಪುಷ್ಪ ಮಾದರಿ ಜತೆಗೆ ಗಾಜನೂರಿನ ಮನೆಯ ಪುಷ್ಪ ಮಾದರಿ ಪ್ರಮುಖ ಆಕರ್ಷಣೆಯಾಗಿದ್ದು, ನೋಡುಗರನ್ನು ಬೆರಗುಗೊಳಿಸಿವೆ. ಗಾಜಿನ ಮನೆಯ ಒಳಗೂ, ಹೊರಗೂ ಪಾಟ್‍ಗಳಲ್ಲಿ ಕಟ್ ಫ್ಲವರ್‍ಗಳ ಅಂದ ಕಣ್ಮನ ಸೆಳೆಯುತ್ತಿದೆ. 

ಸ್ವದೇಶಿ ಹಾಗೂ ವಿದೇಶಿ ಹೂವುಗಳು ಪ್ರದರ್ಶನದ ಅಂದವನ್ನು ಇಮ್ಮಡಿಗೊಳಿಸಿವೆ. 12.52 ಲಕ್ಷ ಹೂ ಕುಂಡಗಳನ್ನು ಬಳಸಲಾಗಿದೆ. 15 ಸಾವಿರ ಅಲಂಕಾರಿಕ ಹೂವುಗಳನ್ನು ಪ್ರದರ್ಶನಕ್ಕೆ ಬಳಸಲಾಗಿದೆ.

ಆಗಸ್ಟ್ 15 ರವರೆಗೆ ಪ್ರದರ್ಶನ: ಫ್ಲವರ್ ಶೋಗೆ 1 ರಿಂದ 10ನೆ ತರಗತಿ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಶಾಲಾ ಸಮವಸ್ತ್ರ ಅಥವಾ ಗುರುತಿನ ಚೀಟಿ ತರದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಉಳಿದಂತೆ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 70 ರೂ. ರಜೆ ಮತ್ತು ವಾರಾಂತ್ಯದಲ್ಲಿ 75 ರೂ. ದರ ನಿಗದಿಸಲಾಗಿದೆ. ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 7ರವರೆಗೆ ಪ್ರದರ್ಶನ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News