ಗುಂಡಣ್ಣ ಎಂಬ ರಂಗ ಶಕ್ತಿ

Update: 2022-08-07 06:37 GMT

ಇಂದು ಬೆಂಗಳೂರಿನ ಕೆಂಗೇರಿ ಉಪನಗರದ ಸಿವಗಂಗ ರಂಗಮಂದಿರದಲ್ಲಿ ‘ಸಮಾಜ ಸಮುದಾಯ ಹಾಗೂ ಗುಂಡಣ್ಣ ’ ( ಸಿ.ಕೆ.ಗುಂಡಣ್ಣ 70ರ ಸಂಭ್ರಮ) ವಿಚಾರ ಸಂಕಿರಣ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡ ರಂಗಭೂಮಿ ಹಲವಾರು ನಾಟಕಕಾರರನ್ನು, ನಿರ್ದೇಶಕರನ್ನು, ಕಲಾವಿದರನ್ನು, ತಂತ್ರಜ್ಞರನ್ನು ರೂಪಿಸಿ ಪೋಷಿಸಿದೆ. ಹಾಗೆಯೇ ನೂರಾರು ರಂಗಕರ್ಮಿಗಳು ಕನ್ನಡ ರಂಗಭೂಮಿಯನ್ನು ಪೋಷಿಸಿದ್ದಾರೆ. ಇಂತಹ ರಂಗಕರ್ಮಿಗಳಲ್ಲಿ ನೇಪಥ್ಯ ಕಲಾವಿದರು ಎಲೆಮರೆಯ ಕಾಯಿಯಂತೆ ತೆರೆಮರೆಯಲ್ಲಿ ತಮ್ಮ ರಂಗಬದುಕಿನ ಸುದೀರ್ಘ ಅವಧಿಯನ್ನು ಕಳೆದಿರುತ್ತಾರೆ. ಇವರು ಬೆಳಕಿಗೆ ಬರುವುದು ಅಪರೂಪಕ್ಕೊಮ್ಮೆ.

ಬದಲೀ ನಟರಾಗಿಯೋ, ತಂತ್ರಜ್ಞರಾಗಿಯೋ, ಒಮ್ಮಮ್ಮೆ ನಿರ್ದೇಶಕರಾಗಿಯೂ ಇವರು ತಮ್ಮ ಪಾತ್ರನಿರ್ವಹಿಸುತ್ತಾರೆ. ರಂಗಸಂಘಟನೆ ಸಹಜವಾಗಿಯೇ ಇವರ ಪಾಲಿನ ಕರ್ತವ್ಯವಾಗಿರುತ್ತದೆ, ಅದು ಅಫೋಷಿತವಾಗಿ. ಒಂದು ರೀತಿಯಲ್ಲಿ ಅವಜ್ಞೆಗೆ ಒಳಗಾದ ರಂಗಕರ್ಮಿಗಳೆಂದರೆ ಈ ನೇಪಥ್ಯ ಕಲಾವಿದರು. ಇಂತಹ ನೂರಾರು ಕಲಾವಿದರ ಹೆಸರಿನ ನಡುವೆ ಬಹುಮುಖ್ಯವಾದ ಹೆಸರು ಸಿ.ಕೆ.ಗುಂಡಣ್ಣ-ಸಮುದಾಯ ಗುಂಡಣ್ಣ.

ಸಾಮಾನ್ಯವಾಗಿ ಎಲ್ಲರೂ ರಂಗಭೂಮಿಗೆ ಬರುವುದು ನಟರಾಗಲೆಂದೇ. ಆದರೆ ನೇಪಥ್ಯಕರ್ಮವೇ ನನ್ನ ಆದ್ಯತೆ ಎಂದು ರಂಗಭೂಮಿಗೆ ಪ್ರವೇಶ ಮಾಡಿದವರು ಗುಂಡಣ್ಣ. ಸಮುದಾಯ ಸಂಘಟನೆಯ ಹಲವಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಗುಂಡಣ್ಣ ಏಕಕಾಲಕ್ಕೆ ನೇಪಥ್ಯ ಕಲಾವಿದರಾಗಿ, ರಂಗಸಂಘಟಕರಾಗಿ, ಹಾಗೂ ಸಮುದಾಯದಂತಹ ಬೃಹತ್ ಸಾಂಸ್ಕೃತಿಕ ಸಂಘಟನೆಯ ಬೆಳವಣಿಗೆಯಲ್ಲಿ ಹಲವಾರು ಜವಾಬ್ದಾರಿ ನಿರ್ವಹಿಸಿದ ಆಡಳಿತಗಾರರಾಗಿ ಕನ್ನಡ ರಂಗಭೂಮಿಯಲ್ಲಿ ಸಮುದಾಯದ ಗುಂಡಣ್ಣ ಎಂದೇ ಖ್ಯಾತರಾಗಿದ್ದಾರೆ. ಚಿಕ್ಕಮಗಳೂರಿನ ಸಿ.ಎನ್.ಕೃಷ್ಣಸ್ವಾಮಿ, ಸಿ.ಕೆ.ಶಾರದಮ್ಮನವರ ಪುತ್ರರಾದ ಸಿ.ಕೆ. ಗುಂಡಣ್ಣ, ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪೂರೈಸಿದರು. ದೂರಸಂಪಕರ್ ಇಲಾಖೆ ಬಿಎಸ್ಸೆನ್ನೆಲ್‌ನ ಮಹಾಪ್ರಬಂಧಕರ ಕಚೇರಿಯಲ್ಲಿ ಸೀನಿಯರ್ ಸೂಪರ್‌ವೈಸರ್ ಆಗಿ ನಿವೃತ್ತರಾಗಿರುವ ಗುಂಡಣ್ಣ ಬಿಎಸ್ಸೆನ್ನೆಲ್ ಎಂಪ್ಲಾಯಿಸ್ ಯೂನಿಯನ್‌ನ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ನಂತರವೂ ಬಿಎಸ್ಸೆನ್ನೆಲ್ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

ನೌಕರರ ಸಂಘಟನೆಯಲ್ಲಿ ತಮ್ಮ ವೃತ್ತಿ ಜೀವನದುದ್ದಕ್ಕೂ ಹಲವಾರು ಸ್ಥಾನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ನೌಕರರ ಹಿತರಕ್ಷಣೆಗಾಗಿ ಅವಿರತವಾಗಿ ದುಡಿದಿದ್ದಾರೆ. ನಿವೃತ್ತಿಯ ನಂತರವೂ ನೌಕರರ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಷ್ಟ್ರಮಟ್ಟದ ಕಾರ್ಮಿಕನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಕ್ರಿಯಾಶೀಲತೆ, ಬದ್ಧತೆ ಹಾಗೂ ಕಾರ್ಯ ಗೌರವಗಳ ಶ್ರೇಷ್ಠತೆಗೆ ರಂಗಭೂಮಿಯ ಅನುಭವವೂ ಪೂರಕವಾಗಿದೆ ಎಂದರೆ ತಪ್ಪಾಗಲಾರದು.

ತಮ್ಮ ವೃತ್ತಿ ಜೀವನದ ಜೊತೆಗೆ ಸಾಂಸ್ಕೃತಿಕ ಬದ್ಧತೆಯನ್ನು, ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡು ಬೆಳೆದ ಗುಂಡಣ್ಣ ಜನಪರ, ಪ್ರಗತಿಪರ ಹೋರಾಟಗಳ ಭಾಗವಾಗಿಯೂ ಗುರುತಿಸಿಕೊಂಡರು. ‘ಕಲೆಗಾಗಿ ಕಲೆಯಲ್ಲ- ಬದುಕಿಗಾಗಿ ಕಲೆ’ ಎಂಬ ಘೋಷವಾಕ್ಯವನ್ನು ಮುಂಚೂಣಿಗೆ ತಂದು, ಜನ ಸಮುದಾಯದಲ್ಲಿ ಸಾಂಸ್ಕೃತಿಕ ಸಂಚಲನೆಯನ್ನು ಉಂಟು ಮಾಡಿದರು. ಸಮುದಾಯ ಸಂಘಟನೆಗೆ ಗುಂಡಣ್ಣ ಪ್ರವೇಶಿಸಿದ ಕಾಲಮಾನ ಒಂದು ವಿಶೇಷವಾದದ್ದು, 1975ರಲ್ಲಿ ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿಯ ವಿಷಮ ಕಾಲಘಟ್ಟದಲ್ಲಿ ಅಸ್ತಿತ್ವಕ್ಕೆ ಬಂದ ಸಮುದಾಯ ಸಂಘಟನೆಯಲ್ಲಿ ತೊಡಗಿಕೊಂಡ ಗುಂಡಣ್ಣ ಪ್ರಸನ್ನ, ಸಿಜಿಕೆ ಅವರಂತಹ ಸಾಂಸ್ಕೃತಿಕ ನೇತಾರರ ಹೆಗಲಿಗೆ ಹೆಗಲು ಕೊಟ್ಟು ದುಡಿದರು.

1975ರಲ್ಲಿ ಪ್ರಸನ್ನ ಅವರು ಸಮುದಾಯಕ್ಕೆ ನಿರ್ದೇಶಿಸಿದ ‘ತಾಯಿ’ ನಾಟಕದಲ್ಲಿ ಗುಂಪು ಕಲಾವಿದರಾಗಿ ಪ್ರವೇಶ ಪಡೆದು, ನಂತರ ಸಮುದಾಯದ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

ರಂಗನೇಪಥ್ಯದ ಕಾರ್ಯಗಳ ಜೊತೆ ಜೊತೆಗೆ ರಾಜ್ಯದಾದ್ಯಂತ ಸಮುದಾಯದ ಚಟುವಟಿಕೆಗಳನ್ನು ಹರಡುವಂತೆ ಮಾಡುವಲ್ಲಿ ಗುಂಡಣ್ಣ ಅವರ ಶ್ರಮವು ಗಮನಾರ್ಹ.

 ರಾಜ್ಯದ ವಿವಿಧೆಡೆ ಸಮುದಾಯದ ಘಟಕಗಳು ಪ್ರಾರಂಭವಾದಾಗ, ರಾಜ್ಯಮಟ್ಟದ ಸಮುದಾಯ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬರಲು ಸಾಧ್ಯವಾಯಿತು. 1977ರಲ್ಲಿ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಾಗ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ ಗುಂಡಣ್ಣ ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮುದಾಯದ ಘಟಕಗಳ ಸ್ಥಾಪನೆಗೆ ಕಾರಣರಾದರು. ಬೆಂಗಳೂರು ಸಮುದಾಯದ ಪ್ರಥಮ ಕಾರ್ಯದರ್ಶಿಯಾಗಿ, ಹಿರಿಯ ಕಲಾವಿದರಾದ ಸಿ.ಎಚ್.ಕೆ.ಲೋಕನಾಥ, ಪ್ರೊ. ಜಿ.ಕೆ.ಗೋವಿಂದರಾವ್ ಮುಂತಾದವರ ಅಧ್ಯಕ್ಷತೆಯಲ್ಲಿ ಬೆಂಗಳೂರು ಸಮುದಾಯವನ್ನು ಮುನ್ನಡೆಸಿದರು. ಸಮುದಾಯ ವಾರ್ತಾಪತ್ರದ ಪ್ರಸರಣಾಧಿಕಾರಿಯಾಗಿ ಹಾಗೆಯೇ ಸಮುದಾಯ ಪ್ರಕಾಶನದ ನಿರ್ವಹಣಾಧಿಕಾರಿಯಾಗಿಯೂ ಕೆಲಸ ನಿರ್ವಹಿಸಿದರು.

ಸಮುದಾಯ ಆಯಾ ಕಾಲದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಸನ್ನಿವೇಶಗಳಿಗೆ ಪ್ರತಿಕ್ರಿಯೆಯಾಗಿ ನಡೆಸಿದ ಸಮುದಾಯ ಸಾಂಸ್ಕೃತಿಕ ಜಾಥಾಗಳ ಯಶಸ್ಸಿಗೆ ಗುಂಡಣ್ಣ ಅವರ ಕಾಣ್ಕೆಯೂ ಅಪಾರ. ಸಾಂಸ್ಕೃತಿಕ ಜಾಥಾಗಳನ್ನು ರಾಜ್ಯದಾದ್ಯಂತ ಸಂಘಟಿಸುವುದರ ಜೊತೆಗೆ ಸಮುದಾಯದ ಜೀವಸೆಲೆಯಾದ ಬೀದಿ ನಾಟಕಗಳಲ್ಲಿ ಕಲಾವಿದರಾಗಿಯೂ ನೂರಾರು ಸ್ಥಳಗಳಲ್ಲಿ ಸಾವಿರಾರು ಪ್ರದರ್ಶನಗಳಲ್ಲಿ ಪಾಲ್ಗೊಂಡರು.

 ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ರೈತನತ್ತ ಸಮುದಾಯ ಜಾಥಾ, ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಪ್ರತಿಭಟಸಿ ಬೀದಿನಾಟಕ ಪ್ರದರ್ಶನ, ‘ಸಮುದಾಯದ ನೂರು ಅಡಿಗಳ ಬಣ್ಣದ ನಡೆ ಅಣುಸಮರಕ್ಕೆ ತಡೆ’, ಭೀಕರ ಬರದೆದುರು ಸಮುದಾಯದ ಜಾಥಾ, ಕೋಮು ಸೌಹಾರ್ದಕ್ಕಾಗಿ, ನಾಳಿನ ನೆಮ್ಮದಿಗಾಗಿ ಸಮುದಾಯದ ಜಾಥಾ.... ಹೀಗೆ ಹತ್ತಾರು ಪ್ರಗತಿಪರ ರಂಗ ಚಳವಳಿಯ ಭಾಗವಾಗಿ ಸಿ.ಕೆ.ಗುಂಡಣ್ಣ ತಮ್ಮ ರಂಗಬದುಕಿನ ಮಹತ್ವದ ಹಾದಿಯನ್ನು ಕ್ರಮಿಸಿದ್ದಾರೆ.

ಇವೆಲ್ಲಾ ಜನಸಮುದಾಯದ ನಡುವೆ, ರಾಜ್ಯದ ಬೀದಿಬೀದಿಗಳಲ್ಲಿ ಗುಂಡಣ್ಣ ನಡೆಸಿದ ಚಟುವಟಿಕೆಯಾದರೆ, ರವೀಂದ್ರ ಕಲಾಕ್ಷೇತ್ರ ಸೇರಿದಂತೆ ರಾಷ್ಟ್ರದ ಪ್ರತಿಷ್ಠಿತ ರಂಗವೇದಿಕೆಗಳಲ್ಲಿ ನಟರಾಗಿ, ತಂತ್ರಜ್ಞರಾಗಿ, ನೇಪಥ್ಯ ಕಲಾವಿದರಾಗಿ, ರಂಗ ಸಂಘಟಕರಾಗಿ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ರಾಷ್ಟ್ರದ ಪ್ರತಿಷ್ಠಿತ ನಿರ್ದೇಶಕರಾದ ಬಿ.ವಿ.ಕಾರಂತ, ಎಂ.ಎಸ್.ಸತ್ಯು, ಪ್ರಸನ್ನ, ಸಿಜಿಕೆ, ಬಿ.ಜಯಶ್ರೀ, ಆರ್.ನಾಗೇಶ್, ಮಾಲತಿ, ರಘುನಂದನ, ದೇವೇಂದ್ರ ರಾಜ ಅಂಕುರ್, ಸಿ.ಬಸವಲಿಂಗಯ್ಯ, ಟಿ.ಎನ್. ನರಸಿಂಹನ್, ಸುರೇಶ್ ಆನಗಳ್ಳಿ, ಪ್ರಕಾಶ್ ಬೆಳವಾಡಿ, ಪ್ರಮೋದ್ ಶಿಗ್ಗಾಂವ್, ಎಚ್.ಜಿ. ವೆಂಕಟಸುಬ್ಬಯ್ಯ, ಗಂಗಾಧರಸ್ವಾಮಿ, ಎನ್.ಎ. ಸೂರಿ., ಎನ್. ಮಂಗಳಾ, ಕೃಷ್ಣ ಕುಮಾರ್ ಯಾದವ್ ಮುಂತಾದವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಯವದನ, ಸತ್ತವರ ನೆರಳು, ಸಮಗ್ರಮಂಥನ, ಅಚಲಾಯತನ, ಹುತ್ತವ ಬಡಿದರೆ, ತಾಯಿ, ಗೆಲಿಲಿಯೋ, ದಂಗೆಯ ಮುಂಚಿನ ದಿನಗಳು, ಕತ್ತಲೆ ದಾರಿ ದೂರ, ಕುರಿ, ಕಲ್ಕಿ, ಚೋರ ಚರಣದಾಸ, ಮರಳುಗಾಡಿನಲ್ಲಿ ಓಟ, ಕೊಂದು ಕೂಗಿತ್ತು ನೋಡಾ, ಮಾದಾರಿ ಮಾದಯ್ಯ, ಈ ಕೆಳಗಿನವರು, ಮದುರೆಕಾಂಡ, ನೀರು, ತಸ್ಕರ, ದಿಲ್ಲಿ ಚಲೋ, ಶೋಕಚಕ್ರ, ಅರಹಂತ, ಸುತ್ತಿಕೊಂಡರೆ ಸರ್ವ, ರಾಬರ್ಟ್ ಕ್ಲೈವ್, ಪಂಪಭಾರತ, ತುಫಲಕ್, ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಬೆಲ್ಚಿ, ಚಸನಾಲ, ಯಂತ್ರಗಳು, ಹೋರಾಟ, ಪಂಚತಾರ, ಪತ್ರೇ ಸಂಗಪ್ಪನ ಕೊಲೆ, ನಾವು ಮನುಜರು, ಕೇಸರಿ ಬಿಳಿ ಹಸಿರು, ಮುಂತಾದ ಬೀದಿ ನಾಟಕಗಳಲ್ಲಿ ಪಾಲ್ಗೊಂಡಿದ್ದಾರೆ.

ನೇಪಥ್ಯ ಕಾರ್ಯದೊಟ್ಟಿಗೇ ನಟನೆಯನ್ನು ಮೈಗೂಡಿಸಿಕೊಂಡ ಗುಂಡಣ್ಣ, ಕಿರುತೆರೆಯಲ್ಲೂ ತಮ್ಮ ಪ್ರತಿಭೆಯನ್ನು ತೋರಿದ್ದಾರೆ.

ಮಾಸ್ತಿ ಕಥೆಗಳು- ಎಂ.ಎಸ್.ಸತ್ಯು, ಬೀಚಿ ಕಥೆಗಳು- ಬಾಬು ಹಿರಿಣ್ಯಯ್ಯ, ಸರೋಜಿನಿ- ಕೇಸರಿ ಹರಿವು, ಮಂಥನ- ಎನ್.ಎಸ್.ಸೇತುರಾಮ್, ಮಹಾಪರ್ವ, ಮಗಳು ಜಾನಕಿ- ಟಿ.ಎನ್. ಸೀತಾರಾಮ್ ಮುಂತಾದ ಕಿರುತೆರೆ ಧಾರಾವಾಹಿಗಳ ಜೊತೆಗೆ ಹಲವಾರು ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ರಂಗಭೂಮಿ, ಕಿರುತೆರೆ ಹೊರತಾಗಿಯೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುಂಡಣ್ಣ ಪಾಲ್ಗೊಂಡು ಅವುಗಳ ಯಶಸ್ಸಿಗೆ ಕಾರಣಾರಾಗಿದ್ದಾರೆ, ರಶ್ಯನ್ ಉತ್ಸವ, ಬೀದರ್‌ನಲ್ಲಿ ಬಿ.ಜಯಶ್ರೀ ಅವರ ನಿರ್ದೇಶನದಲ್ಲಿ ನಡೆದ 45 ದಿನಗಳ ರಂಗಕಾರ್ಯಾಗಾರದ ಸಂಚಾಲಕ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಹಸಂಯೋಜಕ, ನಿತ್ಯೋತ್ಸವ ಸುಗಮ ಸಂಗೀತ ಕಾರ್ಯಕ್ರಮ ಸರಣಿಯಲ್ಲಿ ಸಿದ್ಧತಾ ಸಂಚಾಲಕ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಒಂದು ಅವಧಿಗೆ ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವ ಗುಂಡಣ್ಣ ಚಿಕ್ಕಮಗಳೂರು ಅವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ದಣ್ಣ ಪ್ರಶಸ್ತಿ, ಡಾ. ಅಂಬೇಡ್ಕರ್ ಪ್ರಶಸ್ತಿ, ರಂಗಶ್ರೀ ಬೆಳ್ಳಿ ಹಬ್ಬ ಪ್ರಶಸ್ತಿ, ಸಿಜಿಕೆ ರಂಗಪ್ರಶಸ್ತಿ, ದುಬೈಯ ಧ್ವನಿ ಪ್ರತಿಷ್ಠಾನದ ಶ್ರೀರಂಗ ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ.

ನಿರಂತರ ಕ್ರಿಯಾಶೀಲತೆ, ಜನಪದ ಚಿಂತನೆಯ ಸಿ.ಕೆ. ಗುಂಡಣ್ಣ ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಶಕ್ತಿ ಎಂದರೆ ತಪ್ಪಾಗಲಾರದು.

Writer - ಶಶಿಧರ ಭಾರಿಘಾಟ್

contributor

Editor - ಶಶಿಧರ ಭಾರಿಘಾಟ್

contributor

Similar News