ಬೆಂಗಳೂರು: ಪುಷ್ಪ ಪ್ರದರ್ಶನ ನೋಡಲು ಜನ ಸಾಗರ

Update: 2022-08-07 14:06 GMT

ಬೆಂಗಳೂರು, ಆ.7:ರಾಜಧಾನಿ ಬೆಂಗಳೂರಿನಲ್ಲಿ ಲಾಲ್‍ಬಾಗ್‍ನಲ್ಲಿ ಸ್ವಾತಂತ್ರ್ಯೋತ್ಸದ (Independence Day) ಪ್ರಯುಕ್ತ ವರನಟ ಡಾ.ರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ನಡೆಯುತ್ತಿರುವ 212ನೆ ಪುಷ್ಪ ಪ್ರದರ್ಶನ (Flower Show) ವೀಕ್ಷಣೆಗೆ ರವಿವಾರ ಜನಸಾಗರವೇ ಹರಿದುಬಂದಿತ್ತು.

ಮಳೆಯ ವಾತಾವರಣವಿದ್ದರೂ ಶಾಲೆ–ಕಾಲೇಜು, ಕಚೇರಿಗಳಿಗೆ ರಜೆ ಇದ್ದಿದ್ದರಿಂದಬೆಳಗ್ಗೆ 9ರಿಂದಲೇ ಸಾರ್ವಜನಿಕರು ಬಂದರು. ಸಂಜೆ ವೇಳೆಗೆ ಎತ್ತನೋಡಿದರೂ ಜನವೋ ಜನ. ಬಂಡೆ, ಕೆರೆ ಏರಿ, ಬೋನ್ಸಾಯ್, ತರಕಾರಿ ಉದ್ಯಾನ, ಮಾರಾಟ ಮಳಿಗೆಗಳ ಬಳಿ ಕಿಕ್ಕಿರಿದ ಜನಸಂದಣಿ ಇತ್ತು. ಗಾಜಿನ ಮನೆಯಲ್ಲಿ ಜನದಟ್ಟಣೆ ಉಂಟಾಗಿ, ಸಾಲುಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಟಿಕೆಟ್ ಪಡೆಯಲು ಸಹ ಜನತೆ ಸಾಲಿನಲ್ಲಿ ಕೆಲಹೊತ್ತು ನಿಲ್ಲಬೇಕಾಯಿತು. ಇದರಿಂದ ಮಕ್ಕಳು, ವೃದ್ಧರು ಸಮಸ್ಯೆ ಎದುರಿಸಿದರು. ಸಸ್ಯಕಾಶಿಯ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಜಾತ್ರೆಯ ವಾತಾವರಣ ಎದ್ದು ಕಂಡಿತು. ಸಹಸ್ರಾರು ಸಂಖ್ಯೆಯಲ್ಲಿ ಜನ ಬಂದಿದ್ದರಿಂದ ಲಾಲ್‍ಬಾಗ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ಸೆಲ್ಫಿ ಸಂಭ್ರಮ: ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಪುಷ್ಪಗಳಿಂದ ಮಾಡಲಾಗಿರುವ ಡಾ.ರಾಜ್, ಪುನೀತ್‍ರಾಜ್ ಕುಮಾರ್ ಬಿಂಬಗಳು. ಅವರು ನಟಿಸಿದ ಪಾತ್ರಗಳ ಪ್ರತಿಮೆಗಳು, ಜೀವನದ ಸಂದೇಶಗಳು. ಗಾಜನೂರು ಮನೆಯ ಹಿಂಭಾಗದಲ್ಲಿ ಡಾ.ರಾಜ್ ಆಲದ ಮರದ ಕೆಳಗೆ ಕುಳಿತು ಧ್ಯಾನ ಮಾಡುವಂತಿರುವ ಪ್ರತಿಮೆ. ಅದರ ಎಡಭಾಗದಲ್ಲಿ ರಾಜ್ ಅವರ ಆರಾಧ್ಯ ದೈವ ರಾಘವೇಂದ್ರಸ್ವಾಮಿ ಪಾತ್ರದ ಪ್ರತಿಕೃತಿ. ರಾಜ ಗಾಂಭೀರ್ಯದಲ್ಲಿ ಸಿಂಹಾಸನಾರೂಢ ರಣಧೀರ ಕಂಠೀರವ ಪ್ರತಿಮೆಯ ಮುಂದೆ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಸಿದರು. 

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ಸ್ವಾತಂತ್ರ್ಯೋತ್ಸದ ಪ್ರಯುಕ್ತ ಹಮ್ಮಿಕೊಂಡಿರುವ 212ನೆ ಪುಷ್ಪ ಪ್ರದರ್ಶನ ಆ.15ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6.30ರವರೆಗೆ ಪ್ರದರ್ಶನ ಇರಲಿದೆ. ಇನ್ನೂ, ಸಾವಿರಾರು ಜನ ಭೇಟಿ ನೀಡಿದ್ದು, ಒಂದೇ ದಿನ ಇಷ್ಟೊಂದು ಮಂದಿ ಭೇಟಿ ನೀಡಿದ್ದು ದಾಖಲೆಯಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ನಿಯಂತ್ರಿಸುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿತು. 

ಇದನ್ನೂ ಓದಿ: ರಾಜ್ಯದ ನ್ಯಾಯಾಲಯಗಳಲ್ಲಿ ಆ.13ರಿಂದ-15ರವರೆಗೆ ರಾಷ್ಟ್ರಧ್ವಜ ಹಾರಿಸಲು ಹೈಕೋರ್ಟ್ ಸುತ್ತೋಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News