ಕ್ಯೂಬಾ: ಸಿಡಿಲು ಬಡಿದು ಹೊತ್ತಿ ಉರಿದ ತೈಲ ಡಿಪೊ; ಒಬ್ಬ ಮೃತ್ಯು, 121 ಮಂದಿಗೆ ಗಾಯ

Update: 2022-08-07 18:31 GMT

ಹವಾನಾ, ಆ.7: ಪಶ್ಚಿಮ ಕ್ಯೂಬಾದ ಮಟಂಝಾಸ್ ಪ್ರಾಂತದಲ್ಲಿ ತೈಲ ಡಿಪೊಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದ್ದು ಒಬ್ಬ ಮೃತಪಟ್ಟಿದ್ದಾನೆ. ಕನಿಷ್ಟ 121 ಮಂದಿ ಗಾಯಗೊಂಡಿದ್ದು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ 17 ಅಗ್ನಿಶಾಮಕ ಸಿಬಂದಿ ನಾಪತ್ತೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ತಡರಾತ್ರಿ ತೈಲ ಡಿಪೋಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ಬಳಿಕ ಅಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸುತ್ತಮುತ್ತಲಿನ ಪ್ರದೇಶದ ಸುಮಾರು 1,900 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಗಾಯಗೊಂಡವರಲ್ಲಿ 5 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ರಾತ್ರಿ ಡಿಪೋಗೆ ಸಿಡಿಲು ಬಡಿದು ಅಲ್ಲಿದ್ದ ಒಂದು ತೈಲ ಟ್ಯಾಂಕ್ಗೆ ಬೆಂಕಿ ಹತ್ತಿಕೊಂಡಿದೆ. ಇದರಲ್ಲಿ ಅರ್ಧಾಂಶದಷ್ಟು ಅಂದರೆ 26,000 ಕ್ಯೂಬಿಕ್ ಮೀಟರ್ನಷ್ಟು ಕಚ್ಛಾತೈಲವಿತ್ತು. ಕೆಲ ಕ್ಷಣಗಳಲ್ಲಿ ಈ ಟ್ಯಾಂಕ್ನಲ್ಲಿ ಸ್ಫೋಟ ಸಂಭವಿಸಿ ಪಕ್ಕದಲ್ಲಿದ್ದ ಮತ್ತೊಂದು ಟ್ಯಾಂಕ್ಗೆ ಬೆಂಕಿ ಹಬ್ಬಿದೆ. ಆ ಟ್ಯಾಂಕ್ನಲ್ಲಿ 52,000 ಕ್ಯೂಮಿಕ್ ಮೀಟರ್ನಷ್ಟು ತೈಲ ಸಂಗ್ರಹವಿತ್ತು. ಆ ಬಳಿಕ ಸರಣಿ ಸ್ಫೋಟ ಸಂಭವಿಸಿದೆ ಎಂದು ಪ್ರಾಂತೀಯ ಅರೋಗ್ಯ ಅಧಿಕಾರಿ ಲೂಯಿಸ್ ಆರ್ಮಂಡೋ ವೋಂಗ್ ಶನಿವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಗಾಯಗೊಂಡವರಲ್ಲಿ ಇಂಧನ ಸಚಿವ ಲಿವಾನ್ ಆರೋಂಟೆ ಕೂಡಾ ಸೇರಿದ್ದಾರೆ. 5 ಮಂದಿ ಗಂಭೀರ ಗಾಯಗೊಂಡಿದ್ದರೆ, ಇತರ 3 ಮಂದಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೈಲ ಘಟಕದಲ್ಲಿ ಬೆಂಕಿ ನಿಯಂತ್ರಿಸುವ ಅನುಭವಿಗಳಿದ್ದರೆ ತಕ್ಷಣ ಕಳುಹಿಸಿಕೊಡುವಂತೆ ಮಿತ್ರದೇಶಗಳಿಗೆ ವಿನಂತಿಸಲಾಗಿದೆ ಎಂದು ಕ್ಯೂಬಾ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿದೆ. ತಕ್ಷಣ ನೆರವು ರವಾನಿಸಿರುವ ಮೆಕ್ಸಿಕೊ, ವೆನೆಝುವೆಲಾ, ರಶ್ಯಾ, ನಿಕರಾಗುವ, ಅರ್ಜೆಂಟೀನಾ ಮತ್ತು ಚಿಲಿ ದೇಶಗಳಿಗೆ , ತಾಂತ್ರಿಕ ಸಲಹೆ ನೀಡಿದ ಅಮೆರಿಕಕ್ಕೆ ಧನ್ಯವಾದ ಅರ್ಪಿಸುವುದಾಗಿ ಅಧ್ಯಕ್ಷ ಮಿಗುವೆಲ್ ಡಯಾರ್ ಹೇಳಿದ್ದಾರೆ. ಕಳೆದ 6 ದಶಕಗಳಿಂದ ಒಂದೇ ಪಕ್ಷದ ಆಡಳಿತವಿರುವ ಕ್ಯೂಬಾದ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಆದರೆ ಕ್ಯೂಬಾದಲ್ಲಿ ವಿಪತ್ತು ಪರಿಹಾರ ಮತ್ತು ಪ್ರತಿಕ್ರಿಯೆಯನ್ನು ಒದಗಿಸಲು ಅಮೆರಿಕದ ಘಟಕ ಹಾಗೂ ಸಂಸ್ಥೆಗಳಿಗೆ ಅಮೆರಿಕದ ಕಾನೂನು ಅವಕಾಶ ಮಾಡಿಕೊಟ್ಟಿದೆ ಎಂದು ಕ್ಯೂಬಾದಲ್ಲಿನ ಅಮೆರಿಕದ ದೂತಾವಾಸ ಹೇಳಿಕೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News