ಇಸ್ರೇಲ್ ಮೂಲದ ಕಂಪೆನಿಯಿಂದ 10,500 ಕೋ.ರೂ. ಸಾಲ ಪಡೆಯಲು ಕೆಪಿಸಿಎಲ್ ಸಿದ್ಧತೆ

Update: 2022-08-08 03:35 GMT

ಬೆಂಗಳೂರು: ವಿದ್ಯುತ್  ವಲಯದ  ಹಲವು ಯೋಜನೆಗಳಿಗೆ  ವಿದೇಶಿ ಸೇರಿದಂತೆ ಹಣಕಾಸು ಸಂಸ್ಥೆಗಳಿಂದ ಅಪಾರ ಪ್ರಮಾಣದಲ್ಲಿ ಈಗಾಗಲೇ ಸಾಲ ಎತ್ತಿರುವ ಕರ್ನಾಟಕ ವಿದ್ಯುತ್ ನಿಗಮವು ಇಂಧನ ಯೋಜನೆಗಳಲ್ಲಿ ಕಾರ್ಯನಿರ್ವಹಿಸದ ಇಸ್ರೇಲ್ ಮೂಲದ ವಿದೇಶಿ ಕಂಪೆನಿಯಿಂದ 10,500 ಕೋಟಿ ರೂ. ಸಾಲ ಮತ್ತು ತಾಂತ್ರಿಕ ಪರಿಹಾರ ಪಡೆಯುವ ಪ್ರಸ್ತಾವನೆಯನ್ನು ಸರಕಾರದ ಮುಂದಿರಿಸಿದೆ. ಒಂದೊಮ್ಮೆ ಈ ಪ್ರಸ್ತಾವನೆಯನ್ನು ಒಪ್ಪಿದ್ದೇ ಆದಲ್ಲಿ ಸರಕಾರದ ಮೇಲೆ ಸಾಲದ ಹೊಣೆಗಾರಿಕೆ ಹೆಚ್ಚಲಿದೆ.

ವೇಸ್ಟ್ ಟು ಎನರ್ಜಿ(ಬಿಡದಿ) ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (ಯೋಜನಾ ವರದಿ ಮುಕ್ತಾಯಗೊಂಡಿದೆ) ಮತ್ತು ವಾರಾಹಿ, ನೇತ್ರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಒದಗಿಸಲು ಮುಂದಾಗಿರುವ ಇಸ್ರೇಲ್‌ನ ಸಿಂಬಾ ಮಝ್ ಲಿಮಿಟೆಡ್ (SYMBA-MAZ Ltd)  ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಸಾಲ ಒದಗಿಸುವ ಭರವಸೆ ನೀಡಿದೆ. ಆದರೆ ಈ ಕಂಪೆನಿಯು ಪಂಪ್ಡ್ ಹೈಡ್ರೋ ಸ್ಟೋರೇಜ್ ಪ್ಲಾಂಟ್ ಅಥವಾ ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿಲ್ಲ.  ಆದರೂ ಇದೇ ಕಂಪೆನಿಯಿಂದ ಸಾಲ ಪಡೆಯಲು ಪ್ರಸ್ತಾವನೆ ಸಲ್ಲಿಸಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

ಅದೇ ರೀತಿ ಸಾಲ ನೀಡುವ ಯಾವುದೇ ಒಂದು ವಿದೇಶಿ ಸಂಸ್ಥೆಯು ಮೊದಲು ಭಾರತ ಸರಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚೆ ನಡೆಸಬೇಕು. ಸಂಸ್ಥೆಯ ವಿವರಣೆ, ಉದ್ದೇಶ, ಸಾಲ ನೀಡಿಕೆಯ ವಿವರಣೆಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಬೇಕು. ನಂತರ ಸಾಲ ಪಡೆಯಲು ಉತ್ಸುಕವಾಗಿರುವ ಇಲಾಖೆಯೊಂದಿಗೆ ಚರ್ಚಿಸಿ ಜಾರಿಯಲ್ಲಿರುವ ಮಾರ್ಗಸೂಚಿಗಳ ಅನುಸಾರ ಕ್ರಮ ಕೈಗೊಳ್ಳಬೇಕು. ಆದರೆ ನಿಗಮಕ್ಕೆ ಸಾಲ ನೀಡಲು ಮುಂದಾಗಿರುವ ಇಸ್ರೇಲ್‌ನ ಕಂಪೆನಿಯು ಈ ಪ್ರಕ್ರಿಯೆಗಳನ್ನು ನಡೆಸಿಲ್ಲ. ಆದರೂ ನಿಗಮವು ಈ ಕಂಪೆನಿಯ ಪ್ರಸ್ತಾವನೆಯನ್ನು ಸರಕಾರದ ಮುಂದಿರಿಸಿ ಅನುಮೋದನೆ ಕೋರಿದೆ.

ಇಸ್ರೇಲ್ ಮೂಲದ ವಿದೇಶಿ ಕಂಪೆನಿಯಿಂದ ಸಾಲ ಪಡೆದರೆ ನಿಗಮವು ಹೇಗೆ ಮತ್ತು ಯಾವ ವಿಧಾನದಲ್ಲಿ ಸಾಲವನ್ನು ಹಿಂದಿರುಗಿಸಲಿದೆ ಎಂಬ ಮಾಹಿತಿಯನ್ನು ಸರಕಾರಕ್ಕೆ ಇಂಧನ ಇಲಾಖೆಯು ಒದಗಿಸಿದೆ.

ವಿವರಣೆಯಲ್ಲೇನಿದೆ?

ಪಂಪ್ಡ್ ಸ್ಟೋರೇಜ್ ವಿದ್ಯುತ್ ಘಟಕ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಂದಾಜು 15,000 ಕೋಟಿ ರೂ. ವೆಚ್ಚವಾಗಲಿದೆ. ಸಾಲದ ಅನುಪಾತ 70:30ರಂತೆ 10,500 ಕೋಟಿ ರೂ. ಅಂದಾಜಿಸಿದೆ. ವಿದೇಶಿ ಕಂಪೆನಿಯಿಂದ ಪಡೆಯುವ ಈ ಸಾಲವನ್ನು ಮುಂದಿನ 20 ರಿಂದ 25 ವರ್ಷಗಳ ಅವಧಿಯೊಳಗೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಹಿಂದಿರುಗಿಸಬಹುದು ಎಂದು ಇಂಧನ ಇಲಾಖೆಯು ಸರಕಾರಕ್ಕೆ 2022ರ ಮೇ 21ರಂದು ವಿವರಣಾತ್ಮಕ ಮಾಹಿತಿಯನ್ನು ಒದಗಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಸಿಂಬಾ ಮಝ್ ಲಿಮಿಟೆಡ್ ಮೂಲತಃ ಇಸ್ರೇಲ್‌ನ ವ್ಯಾಪಾರ ಒಕ್ಕೂಟವಾಗಿದೆ. 2 ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಈ ಕಂಪೆನಿಯ ಪ್ರಧಾನ ಕಚೇರಿ ನ್ಯೂಯಾರ್ಕ್ ನಗರದಲ್ಲಿದೆ. ಯುರೋಪ್, ರಶ್ಯ ಮತ್ತು ಸಿಇಎಸ್, ಆಫ್ರಿಕಾ, ಏಶ್ಯ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಪ್ರಾದೇಶಿಕ ಮತ್ತು ಸ್ಥಳೀಯ ಕಚೇರಿಗಳನ್ನು ಹೊಂದಿದೆ ಎಂದು ನಿಗಮವು ಟಿಪ್ಪಣಿಯಲ್ಲಿ ವಿವರಿಸಿದೆ.

ಕೆಪಿಸಿಎಲ್ ಈಗಾಗಲೇ ವೇಸ್ಟ್ ಟು ಎನರ್ಜಿ (ಬಿಡದಿ) ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ (ಯೋಜನಾ ವರದಿ ಮುಕ್ತಾಯಗೊಂಡಿದೆ) ಮತ್ತು ವಾರಾಹಿ, ನೇತ್ರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಅಲ್ಲದೆ, ರಾಜ್ಯದಲ್ಲಿ ಹೊಸ ನವೀಕರಿಸಬಹುದಾದ ವಿದ್ಯುತ್ ಯೋಜನೆಗಳ ಬಿಡ್‌ನಲ್ಲಿ ಇಸ್ರೇಲ್ ಮೂಲದ ಕಂಪೆನಿಯು ಭಾಗವಹಿಸಲು ಪ್ರಸ್ತಾಪಿಸಿದೆ.

ಕರ್ನಾಟಕ ವಿದ್ಯುತ್ ನಿಗಮವು (ಕೆಪಿಸಿಎಲ್) 5,000 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ 1,000 ಮೆಗಾ ವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಘಟಕ ನಿರ್ಮಾಣವು ಎಸ್ಕಾಂಗಳ ನಷ್ಟಕ್ಕೆ ದಾರಿಮಾಡಿಕೊಡಲಿದೆ ಎಂದು ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯವನ್ನು ಸ್ಮರಿಸಬಹುದು.

ಕೆಪಿಸಿಎಲ್ ಈಗಾಗಲೇ ವಿವಿಧ ಹಣಕಾಸು ಸಂಸ್ಥೆಗಳಿಂದ ಮತ್ತು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆದಿದೆ. ಹೀಗಾಗಿ ಮುಂಬರುವ ಯೋಜನೆಗಳಿಗೆ ಮತ್ತಷ್ಟು ಸಾಲಗಳನ್ನು ಪಡೆಯಲು ನಿಗಮಕ್ಕೆ ಕಷ್ಟವಾಗುತ್ತಿದೆ. ಅಲ್ಲದೆ ಇತ್ತೀಚೆಗಷ್ಟೇ ಕೆಪಿಸಿಎಲ್‌ಗೆ 2,500 ಕೋಟಿ ರೂ.ಗೆ ಸರಕಾರದ ಖಾತರಿ ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ನಿಗಮವು ಇಸ್ರೇಲ್‌ನ ಸಿಂಬಾ ಮಝ್ ವ್ಯಾಪಾರ ಒಕ್ಕೂಟದಿಂದ 10,500 ಕೋಟಿ ರೂ. ಸಾಲ ಪಡೆಯಲು ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ. ಈ ಸಂಬಂಧ ಕೆಲ ಟಿಪ್ಪಣಿ ಹಾಳೆಗಳು ‘the-file.in’ಗೆ ಲಭ್ಯವಾಗಿವೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News