‘ಆಝಾದಿ ಕಿ ರೈಲುಗಾಡಿ’ ಹೋರಾಟದ ನೆನಪುಗಳು

Update: 2022-08-08 08:43 GMT

ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ನಮ್ಮ ಪ್ರಧಾನಿಯವರು ‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದ ಮೂಲಕ ‘‘ಸಮೀಪವಿರುವ ಐತಿಹಾಸಿಕ ರೈಲು ನಿಲ್ದಾಣಗಳಿಗೆ ಭೇಟಿ ನೀಡಲು’’ ಜನತೆಯೊಂದಿಗೆ ಕೇಳಿಕೊಂಡಿದ್ದಾರೆ.

ಭಾರತೀಯ ರೈಲ್ವೆ ಇಲಾಖೆ ಜುಲೈ 18 ರಿಂದ 23 ವರೆಗೆ ಸ್ವಾತಂತ್ರ ಹೋರಾಟದ ನಂಟಿರುವ 24 ರಾಜ್ಯದ 27 ರೈಲುಗಾಡಿಗಳನ್ನು ಹಾಗೂ 75 ರೈಲು ನಿಲ್ದಾಣ ಗಳನ್ನು ಆಯ್ದು ‘ಆಝಾದಿ ಕಿ ರೈಲುಗಾಡಿ’ ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಭಾರತದ ರೈಲುಗಾಡಿಯ ಇತಿಹಾಸವನ್ನು ಹುಡುಕುತ್ತಾ ಹೋದರೆ ಮೊದಲ ರೈಲು ಎಪ್ರಿಲ್ 16, 1853 ರಂದು ಬಾಂಬೆ ಪ್ರಾಂತದ ಬೋರಿಬಂದರ್ ನಿಂದ ಥಾಣೆಗೆ ಹೊರಟಿತ್ತು. 1,600 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪಿತವಾದ ಬಳಿಕ ಭಾರತದಾದ್ಯಂತ ಒಂದೇ ಸಮಯದಲ್ಲಿ ಸಂಚರಿಸಲು, ಸರಕು ಸಾಗಾಣಿಕೆ ಮಾಡಲು ರೈಲು ಗಾಡಿಗಳ ಅಗತ್ಯವಿತ್ತು. ಇದಕ್ಕಾಗಿ 1853 ರಲ್ಲಿ ರೈಲ್ವೇ ಸ್ಥಾಪನೆಗೊಂಡಿತ್ತು. ಬಳಿಕ ಈ ರೈಲುಗಳು ಭಾರತದ ಸ್ವಾತಂತ್ರ ಹೋರಾಟಕ್ಕೂ ಬಳಕೆಯಾಯಿತು.

ವಾಗನ್ ಟ್ರಾಜೆಡಿ

ಬ್ರಿಟಿಷರು ಭಾರತದಲ್ಲಿ ತೋರಿದ ಕ್ರೌರ್ಯಗಳಿಗೆ ಲೆಕ್ಕವಿಲ್ಲ. ಇದರಲ್ಲಿ ಪ್ರಮುಖವಾದದು ‘ವಾಗನ್ ಟ್ರಾಜೆಡಿ’. ಮಲಬಾರಿನಲ್ಲಿ ಸ್ವಾತಂತ್ರ ಹೋರಾಟ ತೀವ್ರವಾಗುತ್ತಿದ್ದಂತೆ, ಮಲಬಾರಿಗಳ ಮೇಲೆ ಬ್ರಿಟಿಷರ ದಾಳಿ ದೌರ್ಜನ್ಯಗಳು ಹೆಚ್ಚಿದವು. ಈ ಪ್ರದೇಶಗಳಲ್ಲಿ ಹಲವರನ್ನು ಬಂಧಿಸಿ ಜೈಲುಗಳಿಗೆ ಕಳುಹಿಸುತ್ತಿದ್ದರು. ಅಂತೆಯೇ, MSMLV- 117 ನೇ ನಂಬರ್ ಬೋಗಿಯಲ್ಲಿ ತಿರೂರಿನಿಂದ ಕರ್ನಾಟಕದ ಬಳ್ಳಾರಿ ಜೈಲಿಗೆ ನೂರು ಕೈದಿಗಳನ್ನೂ ಸಾಗಿಸಲಾಗುತ್ತಿತ್ತು. ಬೆಳಕು, ಗಾಳಿ ಒಳ ಪ್ರವೇಶಿಸಲು ಒಂದು ಸಣ್ಣ ದ್ವಾರವೂ ಇಲ್ಲದ ಮುಚ್ಚಿದ ಡಬ್ಬದೊಳಗೆ ನೂರು ಜನರನ್ನು ತುಂಬಿಸಲಾಗಿತ್ತು. ಹಸಿವು ಮತ್ತು ದಾಹದಿಂದ ದಣಿದು ಉಸಿರಾಡಲು, ಸಾಧ್ಯವಾಗದ ಸ್ಥಿತಿ ಅವರದು. ಉಸಿರಾಡಲು ಮಲ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗದೆ ಕೊನೆಯುಸಿರೆಳೆದ ದೇಹಗಳು ಕೊಯಂಬತ್ತೂರಿನ ಪೋತ್ತನೂರ್ ತಲುಪಿದಾಗ, ಈ ಮೃತದೇಹಗಳನ್ನು ಸ್ವೀಕರಿಸಲು ಸ್ಟೇಷನ್ ಮಾಸ್ಟರ್ ನಿರಾಕರಿಸಿದರು. ಜೀವಂತವಾಗಿರುವವರನ್ನು ಆಸ್ಪತ್ರೆಗೆ ತಲುಪಿಸಿದ ಸ್ಟೇಷನ್ ಮಾಸ್ಟರ್, ಮೃತದೇಹಗಳನ್ನು ತಿರೂರಿಗೆ ಮರಳಿ ಕಳುಹಿಸಿದರು. ಬೋಗಿಯಲ್ಲಿ ತುಂಬಿದ್ದ ನೂರು ಮಂದಿಯಲ್ಲಿ ಎಪ್ಪತ್ತು ಜನರ ಉಸಿರು ನಿಂತಿತ್ತು.

ವಾಗನ್ ಟ್ರಾಜೆಡಿಯಲ್ಲಿ ಮರಣ ಹೊಂದದೆ ಬಾಕಿಯಾದ ಅಹ್ಮದ್ ಹಾಜಿಯವರ ಮಾತುಗಳಿಂದ ಬೋಗಿಯೊಳಗೆ ಸಂಭವಿಸಿದ ದುರಂತ ಬಯಲಿಗೆ ಬಂದವು. ‘‘ಬೋಗಿಯೊಳಗೆ ತುಂಬಿದ ಜನರಿಗೆ ನೆಲದ ಮೇಲೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ದಾಹ ಸಹಿಸಲಾರದೆ ಕಿರುಚಲು ತೊಡಗಿದ್ದರು. ಕೆಲವರು ಮಲ ಮೂತ್ರ ವಿಸರ್ಜನೆ ಮಾಡಿದ್ದರು. ಜನರು ಪರಸ್ಪರ ಪರಚಿ ರಕ್ತ ಸುರಿಯುತ್ತಿತ್ತು. ರೈಲು ಪೊತ್ತನೂರಿಗೆ ತಲುಪಿದಾಗ 64 ಮಂದಿ ಮರಣಹೊಂದಿದ್ದರು. ಬಳಿಕ ಅಸ್ಪತ್ರೆಗೆ ಸೇರಿಸಲ್ಪಟ್ಟ 6 ಮಂದಿ ಮೃತ್ಯುಗೀಡಾದರು’’.

ತಮಿಳುನಾಡಿನ ಹೃದಯಭಾಗದಲ್ಲಿ ನಡೆದ ಈ ಘಟನೆ ಜಗತ್ತಿನಾದ್ಯಂತ ತಲುಪಿತು. ಲಂಡನ್ ಟೈಮ್ ಪತ್ರಿಕೆಯ ಬಾಂಬೆ ಲೇಖಕ ಈ ಘಟನೆಯನ್ನು ‘‘ಗ್ರೇಟ್ ಬ್ರಿಟನಿನ ಮನುಷ್ಯ ಸಂಸ್ಕೃತಿಯನ್ನು ಕುಗ್ಗಿಸುವಂತಹ ಘಟನೆ ಎಂದು’’ ಬರೆದರು. ಹಾಗು ಬ್ರಿಟಿಷ್ ಸೇನಾಧಿಪತಿ ಹಿಚ್ ಕಾಕ್‌ನನ್ನು ವಿಚಾರಣೆಗೊಳಪಡಿಸ ಬೇಕೆಂದು ತನ್ನ ಬರಹಗಳ ಮೂಲಕ ಒತ್ತಾಯಿಸಿದರು. ಅದರೆ ಮಲಬಾರಿನ ವಾರ್ತಾ ಪತ್ರಿಕೆಗಳು ಸೈನಿಕರು ನೀಡಿದ ಸುಳ್ಳು ವಾರ್ತೆಗಳನ್ನು ಪ್ರಕಟಿಸಿದವು. ಆದರೆ ಈ ಹತ್ಯಾಕಾಂಡದ ನೈಜ ಘಟನೆಗಳು ದಿ ಹಿಂದೂ ಪತ್ರಿಕೆ ವರದಿ ಮಾಡಿತು. ಈ ವಿಷಯ ಬಯಲಾದಾಗ ಅಸೆಂಬ್ಲಿಯಲ್ಲೂ ಮಹಾ ವಾಗ್ವಾದಗಳು ನಡೆದವು. ಈ ವಾಗ್ವಾದಗಳ ಮೇರೆಗೆ ವಾಗನ್ ಟ್ರಾಜೆಡಿಯ ಕುರಿತು ತನಿಖೆ ನಡೆಸುವ ವಿಶೇಷ ಕಮಿಷನರ್ ನಾಪ್ ರವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ವರದಿ

ಬಂಧಿತರನ್ನು ಬೋಗಿಗಳಿಗೆ ತುಂಬಿಸಿದ್ದು ಡಿಚಕಾಕ್‌ನ ನೇತೃತ್ವದಲ್ಲಾಗಿತ್ತು. ಬಂಧಿತರನ್ನು ಬೆಳಕು ಗಾಳಿ ಪ್ರವೇಶಿಸದ ಬೋಗಿಯೊಳಗೆ ತುಂಬಿಸಿ ಮುಚ್ಚಿದ್ದರು. ತೆರೆದ ವಾಹನಗಳಲ್ಲಿ ಕೈದಿಗಳನ್ನು ಸಾಗಿಸಬಾರದು ಎಂಬುದು ಹಿಚಕಾಕ್ ರವರ ತೀರ್ಮಾನವಾಗಿತ್ತು. ಬಂಧಿತರ ಜೊತೆಗಿದ್ದ ಸಾರ್ಜೆಂಟ್ ಗಳು ಹಾಗೂ ಕಾನ್‌ಸ್ಟೇಬಲ್‌ಗಳು ಬೇರೊಂದು ಬೋಗಿ ಯಲ್ಲಿ ಸುಖವಾಗಿ ಯಾತ್ರೆ ನಡೆಸಿದ್ದರು. ರೈಲು ಸ್ವಲ್ಪ ಮುಂದೆ ಸಾಗಿದಾಗ ಕಿರುಚಾಟಗಳು ಕೇಳಿ ಬಂದರೂ ಕೊಯಂಬತ್ತೂರು ತಲುಪುವವರೆಗೂ ಮುಚ್ಚಿದ ಬಾಗಿಲು ಗಳು ತೆರೆಯಲಿಲ್ಲ.

 ಆದರೆ ವಿಚಾರಣೆಯ ಸಂದರ್ಭದಲ್ಲಿ ಹಿಚ್ ಕಾಕ್ ರವರು ನೀಡಿದ ಉತ್ತರ ವಿಚಿತ್ರವಾಗಿತ್ತು. ‘‘ತೆರೆದ ವಾಹನ ಗಳಲ್ಲಿ ಕೈದಿಗಳನ್ನು ಹೋರಾಟ ನಡೆಯುತ್ತಿರುವ ಪ್ರದೇಶಗಳ ಮೂಲಕ ಸಾಗಿಸುವುದು ಕಷ್ಟಕರ ವಿಚಾರ. ಹೋರಾಟಗಾರರು ವಾಹನಗಳನ್ನು ಆಕ್ರಮಿಸಿ ಆರೋಪಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ’’ ಎಂದು ಉತ್ತರ ನೀಡಿದರು.

ನಾಪ್ ರವರ ನೇತೃತ್ವದ ತನಿಖಾ ಸಮಿತಿ ಘಟನೆಯನ್ನು ಪರಿಶೀಲಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ ಹಿಚ್ ಕಾಕ್ ರವರ ಮೇಲೆ ಯಾವುದೇ ಆರೋಪವಿರಲಿಲ್ಲ. ಬದಲಾಗಿ ಈ ವರದಿಯಲ್ಲಿ ಬೋಗಿ ನಿರ್ಮಾಣ ಮಾಡಿದ ಕಂಪೆನಿ, ಟ್ರಾಫಿಕ್ ಇನ್‌ಸ್ಪೆಕ್ಟರ್ ಹಾಗೂ ಸಾರ್ಜೆಂಟ್‌ಗಳ ಮೇಲೆ ದೂರು ದಾಖಲಿಸಲಾಗಿತ್ತು. ಈ ವಿಚಾರಣೆಯ ಸಂದರ್ಭದಲ್ಲಿ ಕೊಯಂಬತ್ತೂರು ಆರೋಗ್ಯಾಧಿಕಾರಿ ನೀಡಿದ ವರದಿ ಕೈದಿಗಳ ಪರವಾಗಿತ್ತು . ಅವರನ್ನು ರವಾನಿಸಿದ್ದ ಬೋಗಿ ಮನುಷ್ಯರನ್ನಲ್ಲ ಯಾವುದೇ ಪ್ರಾಣವಿರುವ ಜೀವಿಯನ್ನು ಸಾಗಿಸಲು ಸಾಧ್ಯವಿಲ್ಲದಂತಾಗಿತ್ತು ಎಂದು ವರದಿ ನೀಡಿದರು. ಆದರೂ ಈ ಎಲ್ಲಾ ಆರೋಪಗಳನ್ನು ಸರಕಾರ ಘಟನಾ ಸ್ಥಳದಲ್ಲಿ ಹಾಜರಿಲ್ಲದ ಸಾರ್ಜೆಂಟ್ ಗಳ ಮೇಲೆ ಹಾಕಿತ್ತು. ಈ ಆರೋಪಗಳಿಂದ ತಪ್ಪಿಸಿಕೊಳ್ಳಲು ಸಾರ್ಜೆಂಟ್‌ಗಳು ನೀಡಿದ ಉತ್ತರಗಳು ಇನ್ನೂ ವಿಚಿತ್ರವಾಗಿತ್ತು. ‘ಶೊರ್ನೂರ್‌ನಲ್ಲಿ ರೈಲು ನಿಲ್ಲಿಸಿದಾಗ ಕೈದಿಗಳು ನೀರಿಗಾಗಿ ಕೋರಿದ್ದರು. ಆದರೆ ನೀರು ನೀಡಿದರೆ ರೈಲು ಹೊರಟು ಹೋಗಬಹುದು ಎಂದು ಅನುಮಾನವಿದ್ದ ಕಾರಣದಿಂದಾಗಿ ನೀರು ನೀಡಲಿಲ್ಲ’ ಎಂದು ಈ ಘಟನೆಯಲ್ಲಿ ಇವರ ಮೇಲೆ ಮದ್ರಾಸ್ ಸರಕಾರ ಪ್ರಕರಣ ದಾಖಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಾಗನ್ ಟ್ರಾಜೆಡಿಯಲ್ಲಿ ಮರಣ ಹೊಂದಿದವರ ಸಂಬಂಧಿಗಳಿಗೆ ಪರಿಹಾರವಾಗಿ ಮುನ್ನೂರು ರೂಪಾಯಿ ನೀಡಲು 1922 ಎಪ್ರಿಲ್ 4 ರಂದು ಮದ್ರಾಸ್ ಸರಕಾರ ಆದೇಶಿಸಿತು. ಭಾರತದ ಸ್ವಾತಂತ್ರ ಹೋರಾಟದ ಸಂದರ್ಭಗಳಲ್ಲಿ ಇಂತಹ ಹಲವು ಕ್ರೂರ ಘಟನೆಗಳು ನಡೆದಿವೆ. ಭಾರತದ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಹುತಾತ್ಮರಾದ ಆ ಹೋರಾಟಗಾರರನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ.

Writer - ಇಮ್ತಿಯಾಝ್ ಕಡಬ

contributor

Editor - ಇಮ್ತಿಯಾಝ್ ಕಡಬ

contributor

Similar News