"ಸುಪ್ರೀಂಕೋರ್ಟ್‌ನಲ್ಲಿ ಭರವಸೆ ಉಳಿದಿಲ್ಲ, ಸೂಕ್ಷ್ಮ ಪ್ರಕರಣಗಳನ್ನು ನಿರ್ದಿಷ್ಟ ನ್ಯಾಯಾಧೀಶರಿಗೆ ವಹಿಸಲಾಗುತ್ತಿದೆ"

Update: 2022-08-08 15:52 GMT

ಹೊಸದಿಲ್ಲಿ,ಆ.8: ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಕೆಲವು ತೀರ್ಪುಗಳ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಮಾಜಿ ಕಾನೂನು ಸಚಿವ,ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ನ್ಯಾಯವಾದಿ ಕಪಿಲ ಸಿಬಲ್ ಅವರು,ಈ ಸಾಂವಿಧಾನಿಕ ಸಂಸ್ಥೆಯಲ್ಲಿ ತನಗೆ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಮಹತ್ವದ ತೀರ್ಪುಗಳು ಸಹ ತಳಮಟ್ಟದ ವಾಸ್ತವತೆಯನ್ನು ಹೆಚ್ಚೇನೂ ಬದಲಿಸುವುದಿಲ್ಲ ಎಂದೂ ಅವರು ಬೆಟ್ಟು ಮಾಡಿದ್ದಾರೆ.

ಶನಿವಾರ ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಿಲಿಟಿ, ಪಿಯುಸಿಎಲ್ ಮತ್ತು ನ್ಯಾಷನಲ್ ಅಲೈಯನ್ಸ್ ಫಾರ್ ಪೀಪಲ್ಸ್ ಮೂವ್ಮೆಂಟ್ಸ್ ಇಲ್ಲಿ ಆಯೋಜಿಸಿದ್ದ ಪೀಪಲ್ಸ್ ಟ್ರಿಬ್ಯೂನಲ್ನಲ್ಲಿ ‘ನ್ಯಾಯಾಂಗದಿಂದ ನಾಗರಿಕ ಸ್ವಾತಂತ್ರಗಳ ಹಿಂದೆಗೆತ ’ಕುರಿತು ಮಾತನಾಡುತ್ತಿದ್ದ ಸಿಬಲ್,‘ಸರ್ವೋಚ್ಚ ನ್ಯಾಯಾಲಯದಿಂದ ಪರಿಹಾರವನ್ನು ಪಡೆಯಬಹುದು ಎಂದು ನೀವು ಭಾವಿಸಿದ್ದರೆ ನೀವು ತುಂಬ ತಪ್ಪು ತಿಳಿದುಕೊಂಡಿದ್ದೀರಿ ಮತ್ತು ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಐವತ್ತು ವರ್ಷಗಳ ವಕೀಲಿ ವೃತ್ತಿ ಪೂರೈಸಿದ ಬಳಿಕ ಈ ಮಾತನ್ನು ಹೇಳುತ್ತಿದ್ದೇನೆ,ಐವತ್ತು ವರ್ಷಗಳ ಬಳಿಕ ಈ ಸಾಂವಿಧಾನಿಕ ಸಂಸ್ಥೆಯಲ್ಲಿ ನನಗೆ ಯಾವುದೇ ಭರವಸೆ ಉಳಿದಿಲ್ಲ’ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯವು ನೀಡಿರುವ ಪ್ರಗತಿಪರ ತೀರ್ಪುಗಳ ಬಗ್ಗೆ ನೀವು ಮಾತನಾಡುತ್ತೀರಿ,ಆದರೆ ಈ ತೀರ್ಪುಗಳಿಗೂ ತಳಮಟ್ಟದಲ್ಲಿ ಏನು ಸಂಭವಿಸುತ್ತಿದೆ ೦ಎನ್ನುವುದಕ್ಕೂ ಭಾರೀ ವ್ಯತ್ಯಾಸಗಳಿವೆ. ಸರ್ವೋಚ್ಚ ನ್ಯಾಯಾಲಯವು ಖಾಸಗಿತನದ ಬಗ್ಗೆ ತೀರ್ಪು ನೀಡಿತ್ತು,ಆದರೆ ಜಾರಿ ನಿರ್ದೇಶನಾಲಯ (ಈ.ಡಿ)ದ ಅಧಿಕಾರಿಗಳು ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಖಾಸಗಿತನ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.

 ‘50 ವರ್ಷಗಳ ಕಾಲ ನಾನು ವಕೀಲಿ ವೃತ್ತಿ ನಡೆಸಿರುವ ನ್ಯಾಯಾಲಯದ ಬಗ್ಗೆ ಹೀಗೆ ಮಾತನಾಡಲು ನಾನು ಬಯಸುವುದಿಲ್ಲ,ಆದರೆ ಹಾಗೆ ಮಾತನಾಡುವ ಸಮಯವೀಗ ಬಂದಿದೆ. ನಾವು ಮಾತನಾಡದಿದ್ದರೆ ಇನ್ಯಾರು ಮಾತನಾಡಬೇಕು? ವಾಸ್ತವ ಏನೆಂದರೆ ಸಮಸ್ಯಾತ್ಮಕ ಎಂದು ನಮಗೆ ತಿಳಿದಿರುವ ಯಾವುದೇ ಸೂಕ್ಷ್ಮ ವಿಷಯವನ್ನು ನಿರ್ದಿಷ್ಟ ನ್ಯಾಯಾಧೀಶರ ಮುಂದೆ ಇರಿಸಲಾಗುತ್ತದೆ ಮತ್ತು ಫಲಿತಾಂಶವೇನು ಎನ್ನುವುದು ನಮಗೆ ಗೊತ್ತಿರುತ್ತದೆ ’ಎಂದು ಸಿಬಲ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವರಿಗೆ ನೀಡಲಾಗಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ

ಗುಜರಾತ್ ದಂಗೆಗಳ ಸಂದರ್ಭದಲ್ಲಿ ಹತ್ಯೆಯಾಗಿದ್ದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಕ್ಕಾಗಿ, ಈ.ಡಿ.ಗೆ ವ್ಯಾಪಕ ಅಧಿಕಾರವನ್ನು ನೀಡಿರುವ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ನಿಬಂಧನೆಗಳನ್ನು ಎತ್ತಿಹಿಡಿದಿದ್ದಕ್ಕಾಗಿ ಮತ್ತು ಛತ್ತೀಸ್ಗಡದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಸಂದರ್ಭ ಭದ್ರತಾ ಪಡೆಗಳಿಂದ 17 ಆದಿವಾಸಿಗಳ ನ್ಯಾಯಾಂಗೇತರ ಹತ್ಯೆಗಳ ಆರೋಪಿತ ಘಟನೆಗಳ ಕುರಿತು ಸ್ವತಂತ್ರ ತನಿಖೆಯನ್ನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದಕ್ಕಾಗಿ ಸಿಬಲ್ ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿದರು. ಈ ಎಲ್ಲ ತೀರ್ಪುಗಳನ್ನು ಈಗ ನಿವೃತ್ತರಾಗಿರುವ ನ್ಯಾಯಾಧೀಶ ಎ.ಎಂ.ಖನ್ವಿಲ್ಕರ್ ನೇತೃತ್ವದ ಪೀಠವು ನೀಡಿತ್ತು. ಝಕಿಯಾ ಜಾಫ್ರಿ ಮತ್ತು ಪಿಎಂಎಲ್ಎ ನಿಬಂಧನೆಗಳನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರವಾಗಿ ಸಿಬಲ್ ನ್ಯಾಯಾಲಯದಲ್ಲಿ ವಾದಿಸಿದ್ದರು.

ನ್ಯಾಯಾಂಗದ ಸ್ವಾತಂತ್ರವನ್ನು ಪ್ರಶ್ನಿಸಿದ ಸಿಬಲ್,ಯಾವ ನ್ಯಾಯಾಲಯದಲ್ಲಿ ರಾಜಿ ಪ್ರಕ್ರಿಯೆಯ ಮೂಲಕ ನ್ಯಾಯಾಧೀಶರನ್ನು ಪೀಠದಲ್ಲಿ ಕೂಡ್ರಿಸಲಾಗುತ್ತದೆಯೋ,ಯಾವ ನ್ಯಾಯಾಲಯದಲ್ಲಿ ಯಾವ ಪ್ರಕರಣವನ್ನು ಯಾವ ಪೀಠವು ನಿರ್ವಹಿಸಬೇಕು ಎನ್ನುವುದನ್ನು ನಿರ್ಧರಿಸುವ ವ್ಯವಸ್ಥೆ ಇಲ್ಲವೋ,ಯಾವ ನ್ಯಾಯಾಲಯದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರೇ ಯಾವ ವಿಷಯವನ್ನು ಯಾವ ಪೀಠ ಮತ್ತು ಯಾವಾಗ ನಿರ್ವಹಿಸಬೇಕು ಎನ್ನುವುದನ್ನು ನಿರ್ಧರಿಸುತ್ತಾರೋ ಅಂತಹ ನ್ಯಾಯಾಲಯವು ಎಂದಿಗೂ ಸ್ವತಂತ್ರವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.

‘ಭಾರತದಲ್ಲಿ ನಾವು ‘ಮಾಯಿ-ಬಾಪ್’ಸಂಸ್ಕೃತಿಯನ್ನು ಹೊಂದಿದ್ದೇವೆ,ಜನರು ಅಧಿಕಾರವುಳ್ಳವರ ಕಾಲುಗಳಿಗೆ ಬೀಳುತ್ತಾರೆ. ಆದರೆ ಈಗ ಜನರು ಹೊರಬಂದು ತಮ್ಮ ಹಕ್ಕುಗಳ ರಕ್ಷಣೆಗಾಗಿ ಒತ್ತಾಯಿಸುವ ಸಮಯವು ಬಂದಿದೆ’ಎಂದ ಸಿಬಲ್, ‘ನಾವು ನಮ್ಮ ಸ್ವಂತ ಹಕ್ಕುಗಳಿಗಾಗಿ ಎದ್ದು ನಿಂತಾಗ ಮತ್ತು ಆ ಸ್ವಾತಂತ್ರಕ್ಕಾಗಿ ಒತ್ತಾಯಿಸಿದಾಗ ಮಾತ್ರ ಸ್ವಾತಂತ್ರವು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಿಬಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಡಾ.ಆದೀಶ್ ಸಿ,ಅಗರವಾಲ್ ಅವರು,ಸಿಬಲ್ ನ್ಯಾಯ ವಿತರಣೆ ವ್ಯವಸ್ಥೆಯ ಅವಿಭಾಜ್ಯ ಭಾಗವಾಗಿದ್ದಾರೆ,ಆದರೆ ಅವರು ನಿಜಕ್ಕೂ ಸಂಸ್ಥೆಯಲ್ಲಿ ಭರವಸೆಯನ್ನು ಕಳೆದುಕೊಂಡಿದ್ದರೆ ಅವರು ನ್ಯಾಯಾಲಯಗಳಲ್ಲಿ ಹಾಜರಾಗದಿರಲು ಮುಕ್ತ ಸ್ವಾತಂತ್ರ ಹೊಂದಿದ್ದಾರೆ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ನಿರ್ವಹಿಸುವ ಕೂಟದ ನಾಯಕರಾಗಿದ್ದಾರೆ ಎಂದು ವ್ಯಾಪಕವಾಗಿ ನಂಬಲಾಗಿರುವ ಸಿಬಲ್ ಯುಪಿಎ ಸರಕಾರದಲ್ಲಿ ಸಚಿವರಾಗಿದ್ದಾಗ ತಾನೇ ಸಹಿ ಹಾಕಿದ್ದ ಪಿಎಂಎಲ್ಎ ಕಾಯ್ದೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ಇತ್ತಿಚಿನ ತೀರ್ಪನ್ನು ಪ್ರಶ್ನಿಸಿದ್ದಾರೆ. ಅವರು ಸಿಜೆಐ ಅಧಿಕಾರಗಳನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಇತರ ನಿರ್ಧಾರಗಳನ್ನೂ ಪ್ರಶ್ನಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ತೆಗೆದುಕೊಳ್ಳುತ್ತದೆಯೇ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News