ವಾಮಂಜೂರು ಕೊಲೆ ಪ್ರಕರಣ; ಪ್ರವೀಣ್ ಕುಮಾರ್‌ನ ಕುಟುಂಬಸ್ಥರ ಹೇಳಿಕೆ ಪಡೆದ ಪೊಲೀಸರು

Update: 2022-08-08 15:37 GMT
ಪ್ರವೀಣ್ ಕುಮಾರ್‌

ಮಂಗಳೂರು, ಆ.8: ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿರುವ ವಾಮಂಜೂರು ಕೊಲೆ ಪ್ರಕರಣ ಅಪರಾಧಿ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಪ್ರವೀಣ್ ಕುಮಾರ್‌ನನ್ನು ಯಾವ ಕಾರಣಕ್ಕೂ ಬಿಡುಗಡೆ ಮಾಡುವುದು ಬೇಡ. ಆತ ಊರಿಗೆ ಬಾರದೆ ಜೈಲಿನಲ್ಲೇ ಇರಲಿ ಎಂದು ಪ್ರವೀಣ್‌ನ ಪತ್ನಿ, ಸಹೋದರ ಮತ್ತು ಕೊಲೆಯಾದ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

1994ರ ಫೆ.23ರ ಮಧ್ಯರಾತ್ರಿ ವಾಮಂಜೂರಿನಲ್ಲಿದ್ದ ತನ್ನ ಸೋದರತ್ತೆ ಅಪ್ಪಿ ಶೇರಿಗಾರ್ತಿ, ಅವರ ಪುತ್ರ ಗೋವಿಂದ ಮತ್ತು ಸೋದರತ್ತೆಯ ಪುತ್ರಿ ಶಕುಂತಳಾ ಹಾಗೂ ಶಕುಂತಾಳರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ ಆರೋಪವು ಸಾಬೀತಾಗಿತ್ತು.

ನ್ಯಾಯಾಲಯವು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ ಪ್ರವೀಣ್ ಕುಮಾರ್ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ಗಲ್ಲು ಶಿಕ್ಷೆಯು ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಂಡಿತ್ತು. ಸದ್ಯ ಬೆಳಗಾವಿಯ ಜೈಲಿನಲ್ಲಿ ಪ್ರವೀಣ್ ಕುಮಾರ್ ಇದ್ದಾನೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಸನ್ನಡತೆಯ ಆಧಾರದಲ್ಲಿ ಈತನನ್ನು ಜೈಲಿನಿಂದ ಬಿಡುಗಡೆಗೆ ಸರಕಾರ ಮುಂದಾಗಿತ್ತು. ಅಲ್ಲದೆ ಸಂತ್ರಸ್ತರ ಹಾಗೂ ಪ್ರವೀಣ್‌ನ ಮನೆಯವರ ಹೇಳಿಕೆ ದಾಖಲಿಸುವಂತೆ ಸರಕಾರ ಪೊಲೀಸ್ ಇಲಾಖೆಗೆ ಸೂಚಿಸಿತ್ತು.

ಈ ಹಿನ್ನಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರವೀಣ್ ಕುಮಾರ್‌ನ ಸಂಬಂಧಿ ಹಾಗೂ ಅಪ್ಪಿ ಶೇರಿಗಾರ್ತಿಯ ಪುತ್ರ ಸೀತಾರಾಮ್, ಪ್ರವೀಣ್‌ನ ಪತ್ನಿ ಅನಸೂಯಮ ಪ್ರವೀಣ್ ಸಹೋದರ ಪ್ರದೀಪ್‌ರ ಹೇಳಿಕೆ ಪಡೆದಿದ್ದಾರೆ.

‘ಕುಟುಂಬದ ನಾಲ್ಕು ಮಂದಿಯನ್ನು ಕೊಲೆಗೈದ ಪ್ರವೀಣ್‌ನನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಒಂದು ವೇಳೆ ಆತನನ್ನು ಜೈಲಿನಿಂದ ಬಿಡುಗಡೆ ಮಾಡಿದರೆ ಕುಟುಂಬದ ನೆಮ್ಮದಿ ಹಾಳಾಗಬಹುದು. ಅಲ್ಲದೆ ಈ ಪ್ರಕರಣದಲ್ಲಿ ಸಾಕ್ಷಿ ಹೇಳಿದವರಿಗೆ ತೊಂದರೆಯಾದೀತು. ಹಾಗಾಗಿ ಸನ್ನಡತೆಯ ನೆಪದಲ್ಲಿ ಪ್ರವೀಣ್‌ನನ್ನು ಬಿಡುಗಡೆ ಮಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು ಹಿರಿಯ ಅಧಿಕಾರಿಗಳಿಗೆ ನೀಡಲಿದ್ದು, ಬಳಿಕ ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News