ಬೆಂಗಳೂರು | ಸರ್ವೀಸ್ ರಸ್ತೆಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಅಳವಡಿಸಿ: ತುಷಾರ್ ಗಿರಿನಾಥ್ ಸೂಚನೆ

Update: 2022-08-08 16:32 GMT

ಬೆಂಗಳೂರು, ಆ.8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆಯು ಸೋಮವಾರ ನಡೆಯಿತು.

ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರದ ಹೊರ ವರ್ತುಲ ರಸ್ತೆಗಳ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿರುತ್ತಾರೆ. ಇದರಿಂದ ಸರ್ವೀಸ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಹಾಗಾಗಿ ಹೊರವರ್ತುಲ ರಸ್ತೆಗಳ ಸರ್ವೀಸ್ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು. ಸಂಚಾರ ಪೊಲೀಸ್ ವಿಭಾಗವು, ಬಿಬಿಎಂಪಿ ಸಹಯೋಗದಲ್ಲಿ ನೋ ಪಾರ್ಕಿಂಗ್ ನಾಮಫಲಕಗಳನ್ನು ಅಳವಡಿಸಬೇಕು ಸೂಚಿಸಿದರು.

ನಗರದಲ್ಲಿ ಪ್ರತಿನಿತ್ಯ ಮಳೆ ಸುರಿಯುತ್ತಿರುವ ಕಾರಣ ಹಾಟ್ ಮಿಕ್ಸ್ ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಈ ಪೈಕಿ ಕೋಲ್ಡ್ ಮಿಕ್ಸ್ ಬಳಸಿ ರೆಸ್ತೆ ಗುಂಡಿಗಳನ್ನು ಮುಚ್ಚಲು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಿಗೆ ಅವರು ಸೂಚನೆ ನೀಡಿದರು.

ಹೊರವರ್ತುಲ ರಸ್ತೆ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಕೆಪಿಟಿಸಿಎಲ್, ಬೆಸ್ಕಾಂ, ಜಲಮಂಡಳಿ ಸೇರಿದಂತೆ ಇನ್ನಿತರೆ ಇಲಾಖೆಗಳು ಕೆಲಸ ಮಾಡುವ ಸಾಮಗ್ರಿಗಳನ್ನು ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲೇ ಬಿಟ್ಟಿದ್ದರೆ ಅವುಗಳನ್ನು ಕೂಡಲೆ ತೆರವುಗೊಳಿಸಿ ಹತ್ತಿರದಲ್ಲಿರುವ ಖಾಲಿ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಹಾಕಿರುವಂತಹ ಸಾಮಗ್ರಿಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಮ್ಯಾನ್ ಹೋಲ್‍ಗಳು ರಸ್ತೆ ಮಟ್ಟಕ್ಕಿಂತ ಎತ್ತರವಾಗಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಆಗಲಿದೆ. ಆದುದರಿಂದ ಮ್ಯಾನ್ ಹೋಲ್‍ಗಳು ಎಲ್ಲೆಲ್ಲಿ ರಸ್ತೆ ಮಟ್ಟಕ್ಕಿಂತ ಎತ್ತರವಾಗಿವೆ ಎಂಬುದನ್ನು ಜಲಮಂಡಳಿಯಿಂದ ಗುರುತಿಸಿ ಅವುಗಳನ್ನು ದುರಸ್ತಿ ಪಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ನಮ್ಮ ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಜಲಮಂಡಳಿ ಅಧ್ಯಕ್ಷ ಜಯರಾಮ್, ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಎಂಟಿಸಿ ನಿರ್ದೇಶಕ ಸೂರ್ಯಸೇನ್, ಪಾಲಿಕೆ ವಿಶೇಷ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಕೆಎಸ್‍ಆರ್‍ಟಿಸಿ, ಬಿಡಿಎ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.


ನಗರದಲ್ಲಿ ಸಂಚಾರ ದಟ್ಟಣೆಯಾಗುವ ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಜಂಕ್ಷನ್, ಟಿನ್ ಫ್ಯಾಕ್ಟರಿ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಕಾಡುಬಿಸಲಹಳ್ಳಿ ಜಂಕ್ಷನ್, ಸಾರಕ್ಕಿ ಜಂಕ್ಷನ್, ಆರ್‍ಆರ್‍ಎಂಆರ್ ಜಂಕ್ಷನ್, ಇಬ್ಬಲೂರು ಜಂಕ್ಷನ್, ಜಯದೇವ ಜಂಕ್ಷನ್‍ಗಳಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವಾಹನಗಳ ಸುಲಲಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.

-ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News