ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರ ಪಾತ್ರ ಅವಿಸ್ಮರಣೀಯವಾದದ್ದು: ನಸೀರ್ ಅಹ್ಮದ್

Update: 2022-08-09 04:44 GMT

ಬೆಂಗಳೂರು, ಆ.8: ಭಾರತವು ಸ್ವಾತಂತ್ರ್ಯ ಪಡೆದ 75ನೆ ವರ್ಷಾಚರಣೆ ಅಂಗವಾಗಿ ಆಚರಿಸಲಾಗುತ್ತಿರುವ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಪ್ರತಿಯೊಬ್ಬ ದೇಶವಾಸಿಯೂ ಅದ್ಧೂರಿಯಾಗಿ ಆಚರಣೆ ಮಾಡಬೇಕಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಮರು ನಿರ್ವಹಿಸಿದ ಪಾತ್ರ ಅವಿಸ್ಮರಣೀಯವಾದದ್ದು ಎಂದು ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಹೇಳಿದರು.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಂದಿ ಉಲಮಾಗಳು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಲಕ್ಷಾಂತರ ಜನ ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ನಡೆಸಿದ ರೇಷ್ಮಿ ರುಮಾಲ್, ಮಾಪಿಳ್ಳ ಚಳವಳಿ, ಮುಜಾಹಿದ್ ಹಾಗೂ ದಾರೂಲ್ ಹರ್ಬ್ ಚಳವಳಿಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.

1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಮೌಲಾನ ಅಬುಲ್ ಕಲಾಮ್ ಆಝಾದ್ ನೇತೃತ್ವ ವಹಿಸಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ನಸೀರ್ ಅಹ್ಮದ್ ಕರೆ ನೀಡಿದರು.

ಆದರೆ, ಇವತ್ತು ಒಂದು ರಾಜಕೀಯ ಪಕ್ಷದವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಎಂದು ಘೋಷಣೆಗಳನ್ನು ಮಾಡುತ್ತಾ, ತಮ್ಮನ್ನು ಸ್ವಾತಂತ್ರ್ಯ ಹೋರಾಟದ ಭಾಗ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾತ್ರ ನಗಣ್ಯ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದು ನಸೀರ್ ಅಹ್ಮದ್ ಟೀಕಿಸಿದರು.

ಈ ದೇಶಕ್ಕಾಗಿ ನಾವು ಮಾಡಿದಂತಹ ತ್ಯಾಗ, ಬಲಿದಾನಗಳ ಸಂಗತಿಗಳನ್ನು ಮುಚ್ಚಿಡುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಆದುದರಿಂದ, ಈ ಐತಿಹಾಸಿಕ ಅಮೃತ ಮಹೋತ್ಸವದ ಭಾಗವಾಗಿ ನಮ್ಮ ಇತಿಹಾಸವನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಆದುದರಿಂದ, ನಮ್ಮ ಮನೆ, ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಬೇಕು. ಅಲ್ಲದೆ, ಅನ್ಯಧರ್ಮೀಯ ಸಹೋದರರಿಗೂ ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಬೇಕು ಎಂದು ಅವರು ಕರೆ ನೀಡಿದರು.

ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳಬೇಕು: ನಮ್ಮ ದೇಶದ ಸಂವಿಧಾನದ ಬಗ್ಗೆ ಮೂಲಭೂತ ಜ್ಞಾನವನ್ನು ಹೊಂದಿರುವುದು ಅವಶ್ಯಕವಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು, ನಾಗರಿಕ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳಿವೆ. ಸಂವಿಧಾನದಲ್ಲಿ ನೀಡಿರುವ ಹಕ್ಕುಗಳು ಮತ್ತು ವಿಶೇಷ ಸವಲತ್ತುಗಳ ನಿರ್ಲಕ್ಷ್ಯವೇ ನಮ್ಮ ಹಿನ್ನಡೆಗೆ ಕಾರಣ ಎಂದು ಅವರು ಹೇಳಿದರು.

ನಾವು ಸಂವಿಧಾನದ ವೈಶಿಷ್ಟ್ಯಗಳು ಮತ್ತು ಮಾರ್ಗದರ್ಶಿ ತತ್ವಗಳೊಂದಿಗೆ ನಮ್ಮನ್ನು ಪರಿಚಿತಗೊಳಿಸಬೇಕಾಗಿದೆ. ನಮ್ಮ ಸಮಾಜದಲ್ಲಿ ಸಂವಿಧಾನದ ಮೂಲ ತತ್ವಗಳನ್ನು ತಿಳಿಯಲು ನಮ್ಮ ವಿದ್ವಾಂಸರು, ಬುದ್ಧಿಜೀವಿಗಳು ಮತ್ತು ರಾಜಕೀಯ ಪ್ರತಿನಿಧಿಗಳು ಜಂಟಿ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಮ್ಮ ಸಂವಿಧಾನದ ಪೀಠಿಕೆಯು ನಮ್ಮ ಸಂವಿಧಾನದ ಸಾರವನ್ನು ಪ್ರಸ್ತುತಪಡಿಸುತ್ತದೆ, ಕನಿಷ್ಠ ನಾವು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಸೀರ್ ಅಹ್ಮದ್ ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆ: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಆ.4 ರಿಂದ ಅಕ್ಟೋಬರ್ ಅಂತ್ಯದವರೆಗೆ ಪರಿಷ್ಕರಿಸುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಸೇರಿದಂತೆ ಇನ್ನಿತರ ವಿವರಗಳನ್ನು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ವಿಶೇಷ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ನಮ್ಮ ದೊಡ್ಡ ಶಕ್ತಿಯಾಗಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಮತದಾರರ ಪಟ್ಟಿಯಲ್ಲಿ ಶೇ.100ರಷ್ಟು ನೋಂದಣಿ ಮತ್ತು ಶೇ.100ರಷ್ಟು ಮತದಾನವು ಇಂದಿನ ಅವಶ್ಯಕತೆಯಾಗಿದೆ. ಇವತ್ತು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದಲ್ಲಿ ನಮ್ಮ ಒಬ್ಬ ಪ್ರತಿನಿಧಿಯೂ ಇಲ್ಲದಂತಾಗಿದೆ ಎಂದು ನಸೀರ್ ಅಹ್ಮದ್ ಹೇಳಿದರು.

ಹದಿನೇಳು ವರ್ಷಕ್ಕಿಂತ ಮೇಲ್ಪಟ್ಟ ಹೊಸ ಮತದಾರರು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ವಿವರಗಳು ಭಾರತೀಯ ಚುನಾವಣಾ ಆಯೋಗದ ಪತ್ರಿಕಾ ಟಿಪ್ಪಣಿಯಲ್ಲಿವೆ ಮತ್ತು ವೆಬ್‍ಸೈಟ್‍ನಲ್ಲಿಯೂ ಲಭ್ಯವಿದೆ. ಮಸೀದಿಗಳನ್ನು ಕೇಂದ್ರಗಳನ್ನಾಗಿ ಮಾಡಿಕೊಂಡು ಶುಕ್ರವಾರ ಮಧ್ಯಾಹ್ನದ ನಮಾಝ್ ವೇಳೆ ನಡೆಯುವ ಧರ್ಮೋಪದೇಶದ ಸಮಯದಲ್ಲಿ, ಮತದಾನದ ಮಹತ್ವ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು ಎಂದು ಅವರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ಮನ್ಸೂರ್ ಅಲಿ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News