ಸಂವಿಧಾನಕ್ಕೆ ಗೌರವ ನೀಡದ ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸಬೇಕಾಗಿದೆ: ಸಿದ್ದರಾಮಯ್ಯ

Update: 2022-08-09 13:43 GMT

ಬೆಂಗಳೂರು, ಆ.9: ಸಂವಿಧಾನಕ್ಕೆ ಗೌರವ ನೀಡದೆ, ಸುಳ್ಳುಗಳನ್ನೆ ಬಿಂಬಿಸುವ ಸಂಘ ಪರಿವಾರ ಹಾಗೂ ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳವಳಿ ದಿನದ ಸ್ಮರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಾವಿಂದು ನಕಲಿ ದೇಶಪ್ರೇಮಿಗಳ ಬಾಯಿ ಮುಚ್ಚಿಸುವ ಕೆಲಸ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಇವರಿಗೆ ಗೌರವ ಇಲ್ಲ. ಇಂಥವರು ದೇಶ ಆಳುತ್ತಿದ್ದಾರೆ. ಹೀಗಾಗಿ ನಾವೆಲ್ಲ ಹೋರಾಟ ಮಾಡಲು ತಯಾರಾಗಬೇಕು ಎಂದು ಕರೆ ನೀಡಿದರು.

ಜನರ ಬಳಿ ಹೋಗಿ ಅವರಿಗೆ ಸತ್ಯ ತಿಳಿಸುವ ಕೆಲಸ ಮಾಡಬೇಕು. ಬಿಜೆಪಿಯವರು ಸುಳ್ಳನ್ನೆ ನೂರು ಸಲ ಹೇಳುತ್ತಾರೆ, ನಾವು ಸತ್ಯವನ್ನು 4 ಬಾರಿ ಹೇಳೋಕಾಗಲ್ವಾ ಎಂದ ಅವರು, ಮಾಜಿ ಪ್ರಧಾನಿ ನೆಹರು ಅವರ ಬಗ್ಗೆ ಬಿಜೆಪಿ ಅವರು ಬಹಳ ಲಘುವಾಗಿ ಮಾತನಾಡುತ್ತಾರೆ. ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ 11 ವರ್ಷ ಜೈಲಿಗೆ ಹೋಗಿದ್ದರು. ಗೋಲ್ವಾಲ್ಕರ್ ಹೋಗಿದ್ದರಾ ಎಂದು ಪ್ರಶ್ನೆ ಮಾಡಿದರು.

ದೇಶಕ್ಕಾಗಿ ಆರೆಸ್ಸೆಸ್‍ನ ಯಾರೂ ಪ್ರಾಣಾರ್ಪಣೆ ಮಾಡಿಲ್ಲ. ಇವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಾರೆ. ದೇಶಭಕ್ತಿಯಿಂದ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರು ಕಾಂಗ್ರೆಸ್‍ನವರು. ಪ್ರಧಾನಿ ನರೇಂದ್ರ ಮೋದಿ ಒಬ್ಬರು ದೊಡ್ಡ ನಾಟಕಕಾರ ಎಂದು ಟೀಕಿಸಿದರು.

ಆರೆಸ್ಸೆಸ್ ಸ್ಥಾಪನೆಯಾದದ್ದು, 1925ರಲ್ಲಿ. 1930ರಲ್ಲಿ ದಂಡಿ ಯಾತ್ರೆ. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಸೆರೆಮನೆ ವಾಸ ಅನುಭವಿಸಿದರು. ಆದರೆ ಈ ಯಾವ ಹೋರಾಟಗಳಲ್ಲೂ ಸಂಘ ಪರಿವಾರ ಭಾಗವಹಿಸಲಿಲ್ಲ. ಜನಸಂಘ ಸ್ಥಾಪನೆಯಾದದ್ದು 1951. ಸ್ವಾತಂತ್ರ್ಯ ಬಂದ ನಂತರ ಸಂಘದ ರಾಜಕೀಯ ಪಕ್ಷ ಸ್ಥಾಪನೆಯಾದದ್ದು ಎಂದರು.

ಈಗ ಬಿಜೆಪಿ ಅವರು ಹರ್ ಘರ್ ತಿರಂಗಾ ಅಭಿಯಾನ ಮಾಡುತ್ತಿದ್ದಾರೆ, ಆದರೆ ಗೋಲ್ವಾಲ್ಕರ್ ಮತ್ತು ಸಾವರ್ಕರ್ ಅವರು ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. 53 ವರ್ಷಗಳ ಕಾಲ ನಾಗ್ಪುರದ ಆರೆಸ್ಸೆಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಇತ್ತೀಚೆಗೆ ಇಬ್ಬರು ಯುವಕರು ಹೋಗಿ ಗಲಾಟೆ ಮಾಡಿದ ಮೇಲೆ ಧ್ವಜ ಹಾರಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ತಿನ ವಿ.ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಕೆ.ಜೆ. ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.

1 ಲಕ್ಷ ಜನರೊಂದಿಗೆ ಪಾದಯಾತ್ರೆ

ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಹಿನ್ನೆಲೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಪಾದಯಾತ್ರೆ ಹಮ್ಮಿಕೊಂಡಿದೆ. ರಾಜ್ಯದಲ್ಲಿಯೂ ಆ.15ರಂದು ಪಾದಯಾತ್ರೆ ಆಯೋಜಿಸಲಾಗಿದೆ. ಇದರಲ್ಲಿ ಕನಿಷ್ಠ 1 ಲಕ್ಷ ಜನ ಭಾಗವಹಿಸಬೇಕು ಎಂದು ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. ರಾಜಧಾನಿ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ನ್ಯಾಷನಲ್ ಕಾಲೇಜು ಮೈದಾನದ ವರೆಗೆ ಪಾದಯಾತ್ರೆ ಮಾಡಲಾಗುತ್ತದೆ. 

-ಸಿದ್ದರಾಮಯ್ಯ, ವಿಪಕ್ಷ ನಾಯಕ, ವಿಧಾನಸಭೆ


ಬಿಜೆಪಿಗರು ದೇಶ ಬಿಟ್ಟು ಹೋಗಲಿ

ನರೇಂದ್ರ ಮೋದಿ ಹಾಗೂ ಅವರ ಭಕ್ತರು 2014ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎನ್ನುತ್ತಾರೆ. ಆದರೆ ಇಂದು ಹರ್ ಘರ್ ತಿರಂಗಾ ಎಂದು ಹೇಳುತ್ತಿದ್ದಾರೆ. ಆದರೆ, ಆರೆಸ್ಸೆಸ್ ನಾಯಕರು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಹೀಗಾಗಿ, ಈ ಬಿಜೆಪಿಯವರು ಈ ದೇಶ ಬಿಟ್ಟು ಹೋಗುವುದು ಉತ್ತಮ.

-ಬಿ.ಕೆ.ಹರಿಪ್ರಸಾದ್, ವಿಪಕ್ಷ ನಾಯಕ, ವಿಧಾನ ಪರಿಷತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News