ಬಾಬ್ರಿ ಮಸೀದಿ ಮಾದರಿಯಲ್ಲಿ ಚಾಮರಾಜಪೇಟೆ ಈದ್ಗಾ ಗೋಡೆ ಕೆಡಹುವ ಹೇಳಿಕೆ: ಸನಾತನ ಪರಿಷತ್ತು ಅಧ್ಯಕ್ಷನ ವಿರುದ್ಧ FIR

Update: 2022-08-09 16:47 GMT
(ಎಸ್.ಭಾಸ್ಕರನ್ - ಸನಾತನ ಪರಿಷತ್ತು ಅಧ್ಯಕ್ಷ)

ಬೆಂಗಳೂರು, ಆ.9: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸಂಬಂಧ ಈದ್ಗಾ ಗೋಡೆಯನ್ನು ಬಾಬ್ರಿ ಮಸೀದಿಯಂತೆ ಕೆಡಹುವೆವು ಎಂದು ವಿವಾದಿತ ಮಾತುಗಳನ್ನಾಡಿದ್ದ ವಿಶ್ವ ಸನಾತನ ಪರಿಷತ್ತು ಅಧ್ಯಕ್ಷನ ವಿರುದ್ಧ ಚಾಮರಾಜಪೇಟೆ ಠಾಣಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿದ್ದು, ಇದರ ಅನ್ವಯ ಐಪಿಸಿ ಸೆಕ್ಷನ್ 153ಎ ಹಾಗೂ 295 ಎ ಅಡಿ ಮೊಕದ್ದಮೆ ಹೂಡಲಾಗಿದೆ.

ಎಫ್‍ಐಆರ್ ನಲ್ಲಿ ಏನಿದೆ?:  ಇತ್ತೀಚಿಗೆ ಚಾಮರಾಜಪೇಟೆ ಈದ್ಗಾ ಮೈದಾನ ಸಂಬಂಧ ಬಿಬಿಎಂಪಿಯೂ ಮೈದಾನವು ಕಂದಾಯ ಇಲಾಖೆಗೆ ಸೇರಿದ ಸ್ವತ್ತು ಎಂದು ಆದೇಶ ಹೊರಡಿಸಿತ್ತು. ಈ ವಿಚಾರದ ಕುರಿತು ಪ್ರತಿಕ್ರಿಯಿಸಿದ್ದ ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್, ಈದ್ಗಾ ಗೋಡೆಯನ್ನು ವಕ್ಫ್ ಬೋರ್ಡ್ ಎತ್ತಂಗಡಿ ಮಾಡಬೇಕು.ಇಲ್ಲದಿದ್ದರೆ, ಸರಕಾರವೇ ಅದನ್ನು ನೆಲಸಮ ಮಾಡಬೇಕು ಎಂದಿದ್ದ.

ಅಷ್ಟೇ ಅಲ್ಲದೆ, ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಕೆಡವಿದ ದಿನವಾಗಿದ್ದು, ಇದು ಮುಸ್ಲಿಮರಿಗೆ ಕರಾಳ ದಿನವೆಂದು ಗೊತ್ತಿದೆ. ಆದರೆ, ನಮಗೆ ಕೇಸರಿ ದಿನವಾಗಿದೆ. ಹೀಗಾಗಿ, ನಾವು ಅಂದು ಈದ್ಗಾ ಗೋಡೆಯನ್ನು ನೆಲಸಮ ಮಾಡುತ್ತೇವೆ.ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯದ ಹಿಂದೂಸಂಘಟನೆಗಳ ಜತೆ ನಾವು ನಂಟು ಹೊಂದಿದ್ದು, ಎಲ್ಲರೂ ಒಗ್ಗೂಡಿ ಇಲ್ಲಿ ಗೋಡೆಯನ್ನು ಕೆಡವವು ಎಂದು ವಿವಾದಿತ ಹೇಳಿಕೆ ನೀಡಿದ್ದ.  

ಹೀಗಾಗಿ, ಮತೀಯ ಭಾವನೆಗಳಿಗೆ, ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಎಸ್.ಭಾಸ್ಕರನ್ ಮಾತುಗಳನ್ನಾಡಿದ್ದ. ಈತನ ಮಾತುಗಳಿಂದ ಶಾಂತಿಗೆ ಧಕ್ಕೆ, ಸಾರ್ವಜನಿಕರ ಆಸ್ತಿ ಪಾಸ್ತಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಚಾಮರಾಜಪೇಟೆಯ ಪಿಎಸ್ಸೈ ನಾಗೇಂದ್ರ ನೀಡಿರುವ ದೂರಿನ್ವಯ ಎಫ್‍ಐಆರ್ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News