ಸಂರಕ್ಷಿತ ಅರಣ್ಯಗಳಿಗೆ ಜಾರಿಯಾದ ಪ್ರೊ.ಮಾಧವ ಗಾಡ್ಗಿಲ್ ವರದಿ; ಮತ್ತೆ ಜನರಲ್ಲಿ ಆತಂಕ

Update: 2022-08-09 17:22 GMT

ಕುಂದಾಪುರ, ಆ.9: ಸರಕಾರ ಒಂದೆಡೆ ಕಸ್ತೂರಿ ರಂಗನ್ ವರದಿ ಜಾರಿಯಾ ಗಲು ಬಿಡುವುದಿಲ್ಲ. ಅದಕ್ಕಾಗಿ ಮತ್ತೊಂದು ಸಮಿತಿ ರಚಿಸಿ, ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದೆ. ಮತ್ತೊಂದೆಡೆ ಯಾರಿಗೂ ತಿಳಿಯದಂತೆ ಪ್ರೊ. ಮಾಧವ ಗಾಡ್ಗಿಲ್ ಸಮಿತಿಯ ವರದಿಯಲ್ಲಿ ತಿಳಿಸಿದಂತೆ ಸಂರಕ್ಷಿತ ಅರಣ್ಯಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿದೆ ಎಂದು ಭಾರತೀಯ ಕಿಸಾನ್ ಸಂಘದ

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಹೇಳಿದ್ದಾರೆ.

ಭಾರತೀಯ ಕಿಸಾನ್ ಸಂಘದ, ಕುಂದಾಪುರ ತಾಲೂಕು ಸಮಿತಿಯ ಅಧ್ಯಕ್ಷ ಸೀತಾರಾಮ ಗಾಣಿಗರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಸುತಿಯ ಮಾಸಿಕ ಸಭೆಯಲ್ಲಿ ಅವರು ಮಾತನಾಡುತಿದ್ದರು. ಈ ಬಗ್ಗೆ ಈಗಾಗಲೇ ಗಜೆಟ್ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದವರು ತಿಳಿಸಿದರು.

ಸಂರಕ್ಷಿತ ಅರಣ್ಯಗಳು, ವನ್ಯಜೀವಿ ಅಭಯಾರಣ್ಯದೊಂದಿಗೆ ಅವುಗಳಿಗೆ ತಾಗಿಕೊಂಡ ಗ್ರಾಮಗಳ ಸಾವಿರಾರು ಹೆಕ್ಟೇರ್ ಭೂಮಿಯನ್ನು ಕೂಡ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಎರಡು, ಮೂರು ವರ್ಷಗಳೇ ಕಳೆದಿದ್ದರೂ ಜನರಿಗೆ ಮಾತ್ರ ತಿಳಿಸಿಲ್ಲ. ಅಲ್ಲಿಂದ ಹತ್ತು ಕಿಲೋಮೀಟರ್ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಪರಿಗಣಿಸಲಾಗುತ್ತಿದೆ. ಇದರಿಂದ ಕಸ್ತೂರಿ ರಂಗನ್ ವರದಿ ಬರುವ ಮೊದಲೆ ಎಲ್ಲಾ ನಿರ್ಬಂಧಗಳು ಜಾರಿಗೆ ಬಂದಾಗಿವೆ ಎಂದು ಅವರು ವಿವರಿಸಿದರು.

ಹೀಗಿರುವಾಗ ಸರಕಾರ ಮತ್ತು ಜನಪ್ರತಿನಿಧಿಗಳು ಸಮಿತಿ ರಚಿಸಿ, ವರದಿ ತರಿಸಿ ಕ್ರಮ ಕೈಗೊಳ್ಳುತ್ತೇವೆ ಎಂಬ ಮಾತಿಗೆ ಏನು ಬೆಲೆಯಿದೆ ಎಂದು ರೈತರೇ ಸೇರಿದ್ದ ಸಭೆಯಲ್ಲಿ ಅವರು ಪ್ರಶ್ನಿಸಿದರು.

2017ರ ಎಪ್ರಿಲ್ 13ರಂದು ಘೋಷಿಸಲಾದ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶ ಅಲ್ಲದೇ 41 ಗ್ರಾಮಗಳೂ ಒಳಗೊಂಡಿವೆ. ಇದರಲ್ಲಿ ಉಡುಪಿ ಜಿಲ್ಲೆಗೆ ಸೇರಿದ 25 ಗ್ರಾಮಗಳ 12,508 ಹೆಕ್ಟೇರ್ ಭೂಮಿಯನ್ನು ಕೂಡ ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲಾಗಿದೆ.

ಅದೇ ರೀತಿ 2020ರ ಜುಲೈ 2ರಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಲಾಗಿದೆ. ಇದು 108 ಗ್ರಾಮಗಳನ್ನು ಒಳಗೊಂಡಿದ್ದು, ಉಡುಪಿ ಜಿಲ್ಲೆಯ 11 ಗ್ರಾಮಗಳ 6,816 ಹೆಕ್ಟೇರ್ ಭೂಮಿಯನ್ನು ಪರಿಸರ ಸೂಕ್ಷ್ಮವಲಯ ಎಂದು ಪರಿಗಣಿಸಿದೆ. ಹಾಗೆಯೆ 2020ರ ಆಗಸ್ಟ್ 28ರಂದು ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವನ್ನು ಪರಿಸರ ಸೂಕ್ಷ್ಮವಲಯವಾಗಿ ಘೋಷಿಸಲಾಗಿದೆ. ಅದರ ಒಟ್ಟು 30 ಗ್ರಾಮಗಳಲ್ಲಿ 16 ಗ್ರಾಮಗಳು ಉಡುಪಿ ಜಿಲ್ಲೆಗೆ ಸೇರಿದ್ದು, ಒಟ್ಟು 6,995 ಹೇಕ್ಟೇರ್ ಭೂಮಿ ಪರಿಸರ ಸೂಕ್ಷ್ಮವಲಯದಲ್ಲಿ ಬರಲಿದೆ.

ಅಲ್ಲದೆ ಈ ಗಡಿಯಿಂದ 10 ಕಿ.ಮೀ.ವರೆಗೆ ಬಫರ್ ಝೋನ್ ಕೂಡ ಬರುತ್ತದೆ. ಈ ಪರಿಸರ ಸೂಕ್ಷ್ಮವಲಯ ಎಂಬ ಶಬ್ದ ಗಾಡ್ಗಿಲ್ ವರದಿಯಲ್ಲಿ ಬರುತ್ತದೆ. ಇದು ಕಸ್ತೂರಿ ರಂಗನ್ ವರದಿಗಿಂತ ಹೆಚ್ಚು ಕಠಿಣವಾಗಿರುವ ಕಾರಣ ಜನರಿಗೆ ಆತಂಕ ತಂದೊಡ್ಡಲಿದೆ ಎಂದು ಸಭೆ ಅಭಿಪ್ರಾಯಪಟ್ಟಿತು.

928 ರೈತರಿಗೆ ವಂಚನೆ: ಕಳೆದ ಬಾರಿ ರೈತರ ಕೃಷಿಸಾಲ ಮನ್ನಾ ಆದಾಗ ಈ ಜಿಲ್ಲೆಯ 928 ರೈತರಿಗೆ ಈವರೆಗೂ ಸರಕಾರ ಸಾಲಮನ್ನಾದ ಹಣ ಬಿಡುಗಡೆ ಮಾಡದೆ ವಂಚಿಸಿದೆ. ಆ ಬಗ್ಗೆಯೂ ಹೋರಾಟ ಕೈಗೊಂಡು ಎಲ್ಲರಿಗೂ ನ್ಯಾಯ ಒದಗಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.

ಅತೀ ಮಳೆಯಿಂದ ನಾಶವಾದ ಭತ್ತದ ಬೆಳೆಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಕೃಷಿ ಇಲಾಖೆ ಮತ್ತು ತಹಶೀಲ್ದಾರರಿಗೆ ಮನವಿ ನೀಡುವಂತೆ ಹಾಗೂ ಅಡಿಕೆ, ಕಾಳುಮೆಣಸು ಕೊಳೆರೋಗದಿಂದ ನಷ್ಟ ಅನುಭವಿಸಿರುವವರು ತೋಟಗಾರಿಕಾ ಇಲಾಖೆಗೆ ಮನವಿ ನೀಡುವಂತೆ ಜನರಿಗೆ ತಿಳಿಸಲು ನಿರ್ಧರಿಸ ಲಾಯಿತು. ಈ ಬಗ್ಗೆ ಅರ್ಜಿ ನಮೂನೆಗಳು ಭಾರತೀಯ ಕಿಸಾನ್ ಸಂಘದ ತಾಲೂಕು ಕಚೇರಿಯಲ್ಲಿ ಲಭ್ಯವಿದೆ ಎಂದು ರೈತರಿಗೆ ಸಂಘ ತಿಳಿಸಿದೆ.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಭಾಗವಹಿಸಿ ಮಾರ್ಗದರ್ಶನ ನೀಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉಡುಪ ನಿರ್ಣಯ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಸುಧಾಕರ ನಾಯಕ್ ವಂದಿಸಿದರು.

ತಾಲೂಕು ಸಮಿತಿಯ ಪ್ರಮುಖರಾದ ಮಹಾಬಲ ಬಾಯರಿ, ನಾರಾಯಣ ಶೆಟ್ಟಿ, ನಾಗಯ್ಯ ಶೆಟ್ಟಿ, ನಾಗರಾಜ ಉಡುಪ, ಸೂರಪ್ಪ ಭಂಡಾರಿ, ಕಿರಣ್‌ಕುಮಾರ್ ಹೆಗ್ಡೆ, ಚಂದ್ರಶೇಖರ, ತೇಜಪ್ಪ ಶೆಟ್ಟಿ, ಶೇಶು ಆಚಾರ್ಯ ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News