ತೈವಾನ್-ಚೀನಾ ಸಂಘರ್ಷ ಶುರುವಾಗಿದೆ ಯುದ್ಧ ಭೀತಿ ಭಾರತದ ಮೇಲೆ ಪರಿಣಾಮವೇನು?

Update: 2022-08-10 05:41 GMT

ತೈವಾನ್ ಮೇಲೆ ಯುದ್ಧ ಹೂಡುವ ಬೆದರಿಕೆಯನ್ನು ಸತತವಾಗಿ ಚೀನಾ ಒಡ್ಡುತ್ತಿರುವಾಗಲೇ ಅತ್ತ ಕಡೆಯಿಂದ ಅಮೆರಿಕವೂ ರಂಗಪ್ರವೇಶ ಮಾಡಿದೆ. ಇದರಿಂದ ಚೀನಾ ಇನ್ನಷ್ಟು ಸೆಟೆದುಕೊಂಡಿದೆ. ಈಗಾಗಲೇ ತೈವಾನ್ ಜೊತೆಗಿನ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿರುವ ಚೀನಾ, ಯುದ್ಧ ವಿಮಾನಗಳನ್ನೂ ತೈವಾನ್ ವಾಯು ರಕ್ಷಣಾ ವಲಯದೊಳಕ್ಕೆ ಕಳಿಸಿದೆ. ಮುಂದೇನಾದೀತು ಎಂಬುದು ಒಂದು ಪ್ರಶ್ನೆಯಾದರೆ, ಚೀನಾದೊಂದಿಗೆ ಗಡಿ ಬಿಕ್ಕಟ್ಟು ಮತ್ತು ಅಮೆರಿಕದೊಡನೆ ಒಳ್ಳೆಯ ಬಾಂಧವ್ಯ ಹೊಂದಿರುವ ಭಾರತದ ಮೇಲೆ ಚೀನಾ-ತೈವಾನ್ ನಡುವೆ ಕವಿದಿರುವ ಯುದ್ಧದ ಕಾರ್ಮೋಡ ಎಂತಹ ಪರಿಣಾಮ ಬೀರಬಹುದು ಎಂಬುದು ಮತ್ತೊಂದು ಪ್ರಮುಖ ಪ್ರಶ್ನೆ.

ಕಮ್ಯುನಿಸ್ಟ್ ಚೀನಾ ತನ್ನ ಪೂರ್ವ ಕರಾವಳಿಯ ಪುಟ್ಟ ಪ್ರಜಾಪ್ರಭುತ್ವ ದ್ವೀಪ ತೈವಾನನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆ ಹಾಕುತ್ತಿದೆ. ಇವೆರಡರ ನಡುವಿನ ಸಂಬಂಧ ಆಗಾಗ ಪ್ರತಿಕೂಲ ಸ್ವರೂಪ ಪಡೆಯುತ್ತಲೇ ಇರುತ್ತದೆ. ಇದು ಅಮೆರಿಕ, ಭಾರತ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಒಟ್ಟಾರೆ ಶಾಂತಿ ಮತ್ತು ಭದ್ರತೆಯನ್ನೂ ಕದಡುವಂಥದ್ದಾಗಿದೆ. ಸದ್ಯ ತೈವಾನ್ ಸುತ್ತ ವಾಯುನೆಲೆ ಮತ್ತು ಸಮುದ್ರ ನೆಲೆಗಳಲ್ಲಿ ಚೀನಾ ಖಂಡಾಂತರ ಕ್ಷಿಪಣಿಗಳೂ ಸೇರಿದಂತೆ ತನ್ನ ಸೇನಾ ಬಲವನ್ನು ಬಹು ದೊಡ್ಡ ಪ್ರಮಾಣದಲ್ಲೇ ಪ್ರದರ್ಶಿಸತೊಡಗಿದೆ. ಈ ಹಿನ್ನೆಲೆಯಲ್ಲಿಯೇ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದೂ ಆಗಿದೆ. ತೈವಾನ್ ಮತ್ತೆ ತನ್ನ ನಿಯಂತ್ರಣಕ್ಕೆ ಒಳಪಡಬೇಕೆಂಬುದು ಚೀನಾ ಹವಣಿಕೆಯಾದರೆ, ತಾನು ಪ್ರಜಾಪ್ರಭುತ್ವ ಆಡಳಿತವುಳ್ಳ, ತನ್ನದೇ ಸಂವಿಧಾನ ಇರುವ ಸ್ವತಂತ್ರ ರಾಷ್ಟ್ರವೆಂಬುದು ತೈವಾನ್ ನಿಲುವು. ಆದರೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಾತ್ರ ಪುನರೇಕೀಕರಣದ ಮಾತನ್ನು ಖಡಾಖಂಡಿತವಾಗಿ ಆಡತೊಡಗಿದ್ದಾರೆ. ಅದು ಆಗಲೇಬೇಕು ಎನ್ನುತ್ತಿರುವ ಅವರು, ಅದನ್ನು ಸಾಧಿಸಲು ಅಗತ್ಯ ಬಿದ್ದರೆ ಸೇನಾ ಬಲವನ್ನು ಬಳಸಲೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ಕೊಟ್ಟಿರುವುದು ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ಮೇಲೆ ವ್ಯಾಪಾರ ನಿರ್ಬಂಧ ಹೇರಿದ್ದ ಚೀನಾ, ತನ್ನ ಸಾರ್ವಭೌಮತ್ವವನ್ನು ಧಿಕ್ಕರಿಸಿದ ನಡೆ ಎಂದು ಪೆಲೋಸಿ ಭೇಟಿಯನ್ನು ವ್ಯಾಖ್ಯಾನಿಸಿ ಅಮೆರಿಕ ವಿರುದ್ಧ ಕೆಂಡ ಕಾರಿದೆ. ಇತ್ತೀಚಿನ ಬೆಳವಣಿಗೆ ಏನೆಂದರೆ, ಅಮೆರಿಕ ಜೊತೆಗಿನ ಹಲವು ಒಪ್ಪಂದಗಳನ್ನು ಮುರಿದುಕೊಳ್ಳುವುದಾಗಿ ಘೋಷಿಸಿರುವ ಚೀನಾ, ಅಮೆರಿಕದೊಂದಿಗಿನ ರಕ್ಷಣಾ ಕ್ಷೇತ್ರದಲ್ಲಿನ ಸಹಕಾರವನ್ನೂ ಕೊನೆಗಾಣಿಸಿದೆ. ಇದೇ ವೇಳೆ, ಈಗಾಗಲೇ ತೈವಾನ್ ಸುತ್ತ ತಾನು ನಡೆಸುತ್ತಿರುವ ಸೇನಾ ತಾಲೀಮನ್ನು ಚೀನಾ ತೀವ್ರಗೊಳಿಸಿದ್ದು, ಇನ್ನಷ್ಟು ಸೇನಾ ಬಲ ನಿಯೋಜಿಸುವ ಮಾತನ್ನಾಡಿದೆ. ಚೀನಾದ ಈ ನಡೆಗೆ ಪ್ರತಿ ಕ್ರಮಗಳು ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳಿಂದ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಿಕ್ಕಾಗದು. ಈಗಿನ ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತೈವಾನ್ ಕುರಿತು ಕೆಲವು ಪ್ರಾಥಮಿಕ ವಿಚಾರಗಳನ್ನು ಗಮನಿಸಬೇಕಾಗಿದೆ. ತೈವಾನ್ ದ್ವೀಪವಿರುವುದು ಆಗ್ನೇಯ ಚೀನಾ ಕರಾವಳಿಯಿಂದ ಸುಮಾರು 100 ಮೈಲಿಗಳಷ್ಟು ದೂರದಲ್ಲಿ. ಫಿಲಿಪ್ಪೀನ್ಸ್, ದಕ್ಷಿಣ ಕೊರಿಯಾ, ಜಪಾನ್‌ಗಳಿರುವ ಫಸ್ಟ್ ಐಲ್ಯಾಂಡ್ ಚೈನ್‌ನಲ್ಲಿಯೇ ತೈವಾನ್ ಕೂಡ ಬರುತ್ತದೆ. ಅಮೆರಿಕದ ವಿದೇಶಾಂಗ ನೀತಿಯ ವಿಚಾರದಲ್ಲಿ ಅತ್ಯಂತ ನಿರ್ಣಾಯಕವಾದ, ಅಮೆರಿಕ ಸ್ನೇಹಿ ಭೂಪ್ರದೇಶಗಳನ್ನು ಒಳಗೊಂಡಿರುವಂಥದ್ದೇ ಈ ಫಸ್ಟ್ ಐಲ್ಯಾಂಡ್ ಚೈನ್. ತೈವಾನ್‌ಅನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಂಡರೆ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ತನ್ನ ಕಾರ್ಯಯೋಜನೆ ಜಾರಿಗೊಳಿಸಲು ಅದು ಮುಕ್ತವಾಗಲಿದೆ ಮತ್ತು ಅಮೆರಿಕ ಸೇನಾ ನೆಲೆಗೂ ಹೊಡೆತವಾಗುವ ಸಾಧ್ಯತೆಯಿದೆ ಎಂಬುದು ಪರಿಣತರ ಅಭಿಮತ. ಫಾರ್ಮೋಸಾ ಎಂದು ಮೊದಲು ಕರೆಯಲ್ಪಡುತ್ತಿದ್ದ ತೈವಾನ್ ದ್ವೀಪವು ಪೂರ್ವ ಚೀನಾ ಸಮುದ್ರದಲ್ಲಿದೆ, ಹಾಂಕಾಂಗ್‌ನ ಈಶಾನ್ಯಕ್ಕೆ, ಫಿಲಿಪ್ಪೀನ್ಸ್‌ನ ಉತ್ತರಕ್ಕೆ, ದಕ್ಷಿಣ ಕೊರಿಯಾದ ದಕ್ಷಿಣಕ್ಕೆ ಮತ್ತು ಜಪಾನ್‌ನ ನೈಋತ್ಯದಲ್ಲಿದೆ. ತೈವಾನ್ ಮತ್ತು ಸುತ್ತಮುತ್ತ ನಡೆಯುವ ಯಾವುದೇ ನಕಾರಾತ್ಮಕ ಬೆಳವಣಿಗೆಗಳು ಪೂರ್ವ ಏಶ್ಯದಾದ್ಯಂತ ಆಳವಾದ ಕಳವಳಕ್ಕೆ ಕಾರಣವಾಗುತ್ತವೆ. ಚೀನಾದಿಂದ ತೈವಾನ್ ಯಾವಾಗಲೂ ಪ್ರತ್ಯೇಕವಾಗಿತ್ತೇ ಎಂಬುದನ್ನು ನೋಡುವುದಾದರೆ, ಹಾಗಿಲ್ಲ ಎನ್ನುತ್ತದೆ ಇತಿಹಾಸ. 17ನೇ ಶತಮಾನದಲ್ಲಿ ಕ್ವಿಂಗ್ ರಾಜವಂಶಸ್ಥರ ಆಳ್ವಿಕೆ ಚೀನಾದಲ್ಲಿದ್ದ ಕಾಲದಲ್ಲಿ ತೈವಾನ್ ಸಂಪೂರ್ಣವಾಗಿ ಚೀನಾ ನಿಯಂತ್ರಣಕ್ಕೆ ಒಳಪಟ್ಟಿತ್ತು. ಮೊದಲ ಚೀನಾ-ಜಪಾನ್ ಯುದ್ಧದಲ್ಲಿನ ಸೋಲಿನ ಬಳಿಕ 1895ರಲ್ಲಿ ಚೀನಾವು ತೈವಾನ್ ಅನ್ನು ಜಪಾನ್‌ಗೆ ಬಿಟ್ಟುಕೊಟ್ಟಿತು. 2ನೇ ಜಾಗತಿಕ ಯುದ್ಧದಲ್ಲಿ ಜಪಾನ್ ಸೋತಾಗ 1945ರಲ್ಲಿ ತೈವಾನ್‌ಅನ್ನು ಚೀನಾ ಪುನಃ ತನ್ನ ವಶಕ್ಕೆ ತೆಗೆದುಕೊಂಡಿತು. ಚೀನಾದಲ್ಲಿ ಕ್ಯುಮಿಂಟಾಂಗ್ ಎಂದು ಗುರುತಿಸಲಾಗುವ ಚಿಯಾಂಗ್ ಕೈ ಶೆಕ್ ನೇತೃತ್ವದ ರಾಷ್ಟ್ರೀಯವಾದಿ ಪಕ್ಷ ಮತ್ತು ಮಾವೋ ಝೆಡಾಂಗ್‌ನ ಕಮ್ಯುನಿಸ್ಟ್ ಪಕ್ಷದ ಮಧ್ಯೆ ಸ್ಫೋಟಗೊಂಡ ಅಂತಃಕಲಹದಲ್ಲಿ 1949ರಲ್ಲಿ ಕಮ್ಯುನಿಸ್ಟರು ಬೀಜಿಂಗ್ ಅನ್ನು ಗೆದ್ದುಕೊಂಡ ಬಳಿಕ ತೈವಾನ್‌ನಲ್ಲಿ ನೆಲೆ ಕಂಡುಕೊಂಡ ಕ್ಯುಮಿಂಟಾಂಗ್ ಪಕ್ಷ ಮುಂದಿನ ಹಲವು ದಶಕಗಳವರೆಗೆ ತೈವಾನ್‌ಅನ್ನು ಆಳಿತು. ತೈವಾನ್‌ನ ಒಂದು ಮಹತ್ವದ ಐತಿಹಾಸಿಕ ಭಾಗವಾಗಿ ನೆಲೆಯೂರಿರುವ ಕ್ಯುಮಿಂಟಾಂಗ್ ತೈವಾನ್‌ನ ಅತಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. ತೈವಾನ್ ತನ್ನದೆಂದು ಈಗ ಚೀನಾ ವಾದಿಸುತ್ತಿರುವುದು ಇದೇ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ. ತೈವಾನ್ ಕೂಡ ಇದೇ ಅಂಶವನ್ನು ಆಧರಿಸಿಯೇ ತಾನು ಎಂದೂ 1911ರಲ್ಲಿ ಕ್ವಿಂಗ್ ರಾಜವಂಶದ ಪದಚ್ಯುತಿಗೆ ಕಾರಣವಾದ ಕ್ರಾಂತಿಯ ಬಳಿಕ ರಚನೆಯಾದ ಆಧುನಿಕ ಚೀನಾದ ಭಾಗವಾಗಲಿ, ಅಥವಾ 1949ರಲ್ಲಿ ಮಾವೋನಿಂದ ಸ್ಥಾಪನೆಯಾದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಲಿ ಆಗಿರಲೇ ಇಲ್ಲ ಎಂದು ವಾದಿಸುತ್ತದೆ. ಪ್ರಪಂಚದಾದ್ಯಂತ ಕೇವಲ 15 ದೇಶಗಳು ತೈವಾನ್ ಅನ್ನು ಸಾರ್ವಭೌಮ ರಾಷ್ಟ್ರವೆಂದು ಗುರುತಿಸುತ್ತವೆ. ಅವುಗಳಲ್ಲಿ ಹೆಚ್ಚಿನವು ಬಹಳ ಚಿಕ್ಕವು ಮತ್ತು ಹಲವು ದೂರದ ದ್ವೀಪರಾಷ್ಟ್ರಗಳಾಗಿವೆ.

ಚೀನಾ ಮತ್ತು ತೈವಾನ್ ನಡುವಿನ ಈಗಿನ ಉದ್ವಿಗ್ನತೆ ಶುರುವಾದದ್ದು ಕಳೆದ ವರ್ಷ ಅಕ್ಟೋಬರ್ 1ರಂದು. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (PRC) ಉದಯವನ್ನು ಗುರುತಿಸಲು ಚೀನಾ ಅಕ್ಟೋಬರ್ 1ರಂದು ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ. 72ನೇ ವಾರ್ಷಿಕೋತ್ಸವದ ಆಚರಣೆ ವೇಳೆ ಚೀನಾ 100 ಫೈಟರ್ ಜೆಟ್‌ಗಳನ್ನು ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯಕ್ಕೆ ಹಾರಿಸಿತು. ಈ ಮೂಲಕ ದ್ವೀಪವನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸುವ ಎಚ್ಚರಿಕೆಯನ್ನು ಕೊಟ್ಟಿತು. ಫೆಬ್ರವರಿಯಲ್ಲಿ ಉಕ್ರೇನ್ ಮೇಲಿನ ಆಕ್ರಮಣಕ್ಕಾಗಿ ಟೀಕೆಗೊಳಗಾಗಿದ್ದ ವೇಳೆ ರಶ್ಯಕ್ಕೆ ಬೀಜಿಂಗ್ ದೃಢವಾದ ಬೆಂಬಲವನ್ನು ಸೂಚಿಸಿದ ಬಳಿಕವಂತೂ ತೈವಾನ್ ಸಂಬಂಧದ ಚೀನಾ ನಿಲುವು ಆತಂಕಕ್ಕೆ ಎಡೆಮಾಡಿದೆ. ಉಕ್ರೇನ್ ಅನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ರಶ್ಯ ಹವಣಿಸುತ್ತಿರುವ ಮಾದರಿಯಲ್ಲೇ ತೈವಾನ್ ಅನ್ನು ವಶಮಾಡಿಕೊಳ್ಳಲು ಚೀನಾ ಯೋಚಿಸುತ್ತಿದೆಯೆಂಬುದು ಇಂಥ ದಿಗಿಲಿಗೆ ಕಾರಣ.

ಎಲ್ಲವನ್ನೂ ಶಾಂತಿಯುತವಾಗಿಯೇ ನಿಭಾಯಿಸುತ್ತೇನೆ ಎನ್ನುತ್ತಿರುವ ಚೀನಾ, ಆರ್ಥಿಕ ಸಂಬಂಧಗಳನ್ನು ಬಲಪಡಿಸುವಂತಹ ಮಿಲಿಟರಿಯೇತರ ವಿಧಾನಗಳಿಂದಲೇ ಪುನರೇಕೀಕರಣಕ್ಕೆ ಪ್ರಯತ್ನಿಸಲೂಬಹುದು. ಒಂದು ವೇಳೆ ಅದು ಮಿಲಿಟರಿ ಮುಖಾಮುಖಿಗೆ ಮುಂದಾದರೆ ಅದರೆದುರು ತೈವಾನ್ ಸಶಸ್ತ್ರ ಪಡೆ ಏನೇನೂ ಅಲ್ಲವೆಂಬುದಂತೂ ನಿಜ. ಚೀನಾವು ಅಮೆರಿಕವನ್ನು ಹೊರತುಪಡಿಸಿದರೆ ಯಾವುದೇ ದೇಶಕ್ಕಿಂತ ಹೆಚ್ಚು ಹಣವನ್ನು ರಕ್ಷಣೆಗಾಗಿ ಖರ್ಚು ಮಾಡುತ್ತದೆ ಮತ್ತು ನೌಕಾ ಶಕ್ತಿಯಿಂದ ಕ್ಷಿಪಣಿ ತಂತ್ರಜ್ಞಾನ, ವಿಮಾನ ಮತ್ತು ಸೈಬರ್ ದಾಳಿಗಳವರೆಗೆ ಬೃಹತ್ ಶ್ರೇಣಿಯ ಸಾಮರ್ಥ್ಯಗಳುಳ್ಳದ್ದಾಗಿದೆ. ಇವೆರಡರ ಸೇನಾ ಬಲಾಬಲವನ್ನು ಗಮನಿಸುವುದಾದರೆ, ಚೀನಾದ ಭೂಸೇನಾ ಬಲ 9 ಲಕ್ಷ 65 ಸಾವಿರ, ತೈವಾನ್‌ನದ್ದು ಬರೀ 94 ಸಾವಿರ. ಚೀನಾ ನೌಕಾದಳ 2 ಲಕ್ಷ 60 ಸಾವಿರ, ತೈವಾನ್‌ನದ್ದು 40 ಸಾವಿರ. ಚೀನಾ ವಾಯುಪಡೆ ಬಲ 3 ಲಕ್ಷ 95 ಸಾವಿರ, ತೈವಾನ್‌ನದ್ದು 35 ಸಾವಿರ. ಚೀನಾ ಯುದ್ಧ ಟ್ಯಾಂಕರ್‌ಗಳು 5,400, ತೈವಾನ್‌ನದ್ದು 650. ಚೀನಾ ಯುದ್ಧನೌಕೆಗಳು 3,227, ತೈವಾನ್‌ನದ್ದು 504. ಚೀನಾ ಸಬ್ ಮರೈನ್‌ಗಳು 59, ತೈವಾನ್‌ನದ್ದು 4. ಚೀನಾದ ಯುದ್ಧ ಹಡಗುಗಳ ಸಂಖ್ಯೆ ಜಲಾಂತರ್ಗಾಮಿಗಳನ್ನು ಹೊರತುಪಡಿಸಿಯೇ 86. ತೈವಾನ್‌ನದ್ದು 26. ಚೀನಾದ ಫಿರಂಗಿಗಳು 9,834ಕ್ಕೂ ಹೆಚ್ಚು. ತೈವಾನ್‌ನದ್ದು 2,093 ಮಾತ್ರ. ಆದರೆ ಯುದ್ಧವೇ ಶುರುವಾದರೆ, ಚೀನಾ ಅಂದುಕೊಂಡಷ್ಟು ಸುಲಭವೇನೂ ಇಲ್ಲ. ಚೀನಾ ದಾಳಿ ನಡೆಸಬಹುದು, ಹಾನಿಗೆ ಕಾರಣವಾಗಬಹುದು. ಆದರೆ ತೈವಾನ್ ಸುಲಭವಾಗಿ ಸೋತುಹೋಗುತ್ತದೆ ಎಂಬುದು ನಿಜವಲ್ಲ ಎನ್ನುತ್ತಾರೆ ಪರಿಣತರು. ಚೀನಾ ತನ್ನ ಅಗಾಧ ಬಲವನ್ನು ಪ್ರದರ್ಶಿಸ ಹೊರಟರೆ, ತೈವಾನ್ ಏನನ್ನೂ ತೋರಿಸಿಕೊಳ್ಳದೆಯೂ ಸಣ್ಣ ಸಣ್ಣ ಅಡಗಿಸಿಡಬಲ್ಲ ಶಸ್ತ್ರಾಸ್ತ್ರಗಳ ಮೂಲಕವೇ ಚೀನಾವನ್ನು ಎದುರಿಸಬಲ್ಲದು ಮತ್ತು ಅದರ ದಾಳಿಯನ್ನು ನಿಧಾನಗೊಳಿಸಬಲ್ಲದು, ಮಾತ್ರವಲ್ಲ ಗೆರಿಲ್ಲಾ ಯುದ್ಧತಂತ್ರ ಕೂಡ ತೈವಾನ್‌ನ ಕೈಹಿಡಿಯಲಿದೆ ಎಂಬ ಅಭಿಪ್ರಾಯ ತಜ್ಞರದು. ಇದೆಲ್ಲದರ ಜೊತೆಗೇ ಸಂಭವನೀಯ ಚೀನಿ ಆಕ್ರಮಣದ ವಿರುದ್ಧ ರಕ್ಷಣೆಗಾಗಿ ತೈವಾನ್‌ಗೆ ಅಮೆರಿಕದ ಬೆಂಬಲವೂ ಸಿಗಲಿದೆ. ಹಾಗಾಗಿ, ಚೀನಾ ಮತ್ತು ತೈವಾನ್ ನಡುವಿನ ಮಿಲಿಟರಿ ಉದ್ವಿಗ್ನತೆ ವಾಶಿಂಗ್ಟನ್ ಮತ್ತು ಬೀಜಿಂಗ್ ನಡುವಿನ ಈಗಾಗಲೇ ಹದಗೆಟ್ಟ ಸಂಬಂಧ ಇನ್ನೂ ಹಗೆಯ ಸ್ವರೂಪ ಪಡೆಯುವುದಕ್ಕೇ ಕಾರಣವಾಗುವ ಸಾಧ್ಯತೆಯೂ ಹೆಚ್ಚು. ವಾಶಿಂಗ್ಟನ್‌ನ ಅಸ್ಪಷ್ಟ ಕಾರ್ಯತಂತ್ರ ನೀತಿಯು ದಾಳಿಯ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕದ ಬೆಂಬಲ ದೊರೆಯಲಿದೆಯೇ ಎಂಬುದನ್ನು ಗೊಂದಲದಲ್ಲಿಯೇ ಉಳಿಸುತ್ತದೆ. ತೈಪೆಯೊಂದಿಗೆ ಸಂಬಂಧವನ್ನು ಹೊಂದಿದ್ದು, ಶಸ್ತ್ರಾಸ್ತ್ರಗಳನ್ನು ಪೂರೈಸಿದರೂ, ರಾಜತಾಂತ್ರಿಕವಾಗಿ ಅಮೆರಿಕ ಪ್ರಸ್ತುತ ಏಕ ಚೀನಾ ನೀತಿಗೆ ಅಂಟಿಕೊಂಡಿದೆ, ಅದು ತೈವಾನ್‌ಗಿಂತ ಚೀನಾದೊಂದಿಗೆ ಔಪಚಾರಿಕ ಸಂಬಂಧವನ್ನು ಹೊಂದಿದೆ. ಟೋಕಿಯೊದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ತೈವಾನ್ ಮೇಲೆ ಆಕ್ರಮಣ ಮಾಡುವ ಚೀನಾದ ಯಾವುದೇ ಪ್ರಯತ್ನವು ಅಮೆರಿಕದ ಮಿಲಿಟರಿ ಹಸ್ತಕ್ಷೇಪಕ್ಕೆ ಎಡೆಮಾಡಿಕೊಡಲಿದೆ ಎಂದು ಹೇಳಿದ್ದರ ಬಳಿಕವೂ ಅಮೆರಿಕದ ದ್ವಂದ್ವಮುಖ ಗೊಂದಲವನ್ನೇ ಉಳಿಸಿತ್ತು. ಆದರೆ ಮೊನ್ನೆ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿ, ಅಮೆರಿಕ ಒಂದು ಸ್ಪಷ್ಟ ನಿಲುವಿಗೆ ಬಂದಂತಿರುವುದರ ಸೂಚನೆಯಾಗಿದೆ. ಜಾಗತಿಕ ಒಗ್ಗಟ್ಟು ಮತ್ತು ಪ್ರಜಾಪ್ರಭುತ್ವದ ರಕ್ಷಣೆಯನ್ನು ಪ್ರತಿಪಾದಿಸಿರುವ ಪೆಲೋಸಿ, ತೈವಾನ್ ಏಕಾಂಗಿಯಲ್ಲ ಎಂದು ನಿಖರ ಶಬ್ದಗಳಲ್ಲಿ ಹೇಳಿದ್ದಾರೆ. ಇಷ್ಟಾಗಿಯೂ ಚೀನಾ ಜೊತೆಗಿನ ಬಾಂಧವ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲೂ ಶ್ವೇತಭವನದ ಕಸರತ್ತು ನಡೆಯುತ್ತಲೇ ಇರುವುದರಿಂದ ಅದು ಯಾವ ಘಳಿಗೆಯಲ್ಲಿ ತೈವಾನ್‌ನ ಕೈಬಿಡುತ್ತದೆಂಬುದನ್ನು ಹೇಳಲಾಗದು ಎಂಬ ಅಭಿಪ್ರಾಯಗಳೂ ಇವೆ. ತೈವಾನ್ ಜೊತೆಗಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳ ಜೊತೆಗೇ ಶಸ್ತ್ರಾಸ್ತ್ರ ಒದಗಿಸುವ ನಿಟ್ಟಿನಲ್ಲೂ ತೈವಾನ್ ಜೊತೆಗೆ ಅಮೆರಿಕ ಕಾಣಿಸಿಕೊಳ್ಳುತ್ತಿದೆಯಾದರೂ, ಚೀನಾದಂತೆಯೇ ಅಮೆರಿಕ ಕೂಡ ಯಾವುದೇ ಹಂತದಲ್ಲೂ ಕುಹಕ ಬುದ್ಧಿ ತೋರಿಸಿದರೆ ಅಚ್ಚರಿಯಿಲ್ಲ. ಹಾಗಾಗಿ ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯು ಯುದ್ಧದ ಹಂತ ಮುಟ್ಟುವ ಮೊದಲೇ ರಾಜತಾಂತ್ರಿಕ ನೆಲೆಯಲ್ಲಿ ಚೀನಾವನ್ನು ಕೊಂಚ ಭಯದಲ್ಲಿಡುವುದರ ಭಾಗವಾಗಿದ್ದರೂ ಇದ್ದಿರಬಹುದು. ಯಾಕೆಂದರೆ ತೈವಾನ್‌ನೊಂದಿಗೂ ಅದರ ಗಮನೀಯ ಆರ್ಥಿಕತೆಯ ಕಾರಣದಿಂದಾಗಿ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ಅಮೆರಿಕಕ್ಕೆ ಬೇಕಿದೆ.

PRC ತೈವಾನ್‌ನ ಇತ್ತೀಚಿನ ರಾಜಕೀಯ ಮತ್ತು ಆರ್ಥಿಕ ಸನ್ನಿವೇಶವನ್ನು ನೋಡಿಕೊಳ್ಳುವುದಾದರೆ, 1975ರಲ್ಲಿ ಚಿಯಾಂಗ್ ಕೈ ಶೆಕ್ ನಿಧನದ ಬಳಿಕ ಸಮರ ಕಾನೂನನ್ನು ತೆಗೆದುಹಾಕಲಾಯಿತು ಮತ್ತು ತೈವಾನ್ ತನ್ನ ಮೊದಲ ಪ್ರಜಾಪ್ರಭುತ್ವ ಸುಧಾರಣೆಗಳನ್ನು ಕಂಡಿತು. 1990ರಿಂದ ಕ್ಷಿಪಣಿ ಬಿಕ್ಕಟ್ಟಿನ ಹೊರತಾಗಿಯೂ, ಅಂದರೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಹಾಗೂ ತೈವಾನ್ ನಡುವಿನ ಸಂಬಂಧಗಳು ಸುಧಾರಿಸಿದವು. ವ್ಯಾಪಾರ ಸಂಬಂಧಗಳು ಶುರುವಾದವು. 1999ರಲ್ಲಿ ಬ್ರಿಟಿಷರು ಹಾಂಕಾಂಗ್‌ನಿಂದ ನಿರ್ಗಮಿಸಲು ತಯಾರಿ ನಡೆಸುತ್ತಿದ್ದಂತೆ, ಒಂದು ಚೀನಾ, ಎರಡು ವ್ಯವಸ್ಥೆಗಳು ಪರಿಹಾರವನ್ನು ತೈವಾನ್‌ಗೆ ನೀಡಲಾಯಿತು, ಆದರೆ ಅದನ್ನು ತೈವಾನ್ ತಿರಸ್ಕರಿಸಿತು.

2000ದಲ್ಲಿ, ತೈವಾನ್ ತನ್ನ ಮೊದಲ ಕ್ಯುಮಿಂಟಾಂಗ್ (KMT ) ಯೇತರ ಸರಕಾರವನ್ನು ಪಡೆಯಿತು. ತೈವಾನ್ ರಾಷ್ಟ್ರೀಯತಾವಾದಿ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (DPP) ಅಧ್ಯಕ್ಷ ಸ್ಥಾನವನ್ನು ಗೆದ್ದಿತು. 2004ರಲ್ಲಿ ಚೀನಾ ತೈವಾನ್‌ಅನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕತಾ ವಿರೋಧಿ ಕಾನೂನನ್ನು ರೂಪಿಸಲು ಪ್ರಾರಂಭಿಸಿತಾದರೂ, ವ್ಯಾಪಾರ ಮತ್ತು ಸಂಪರ್ಕವನ್ನು ಸುಧಾರಿಸಲು ಮುಂದಾಯಿತು.

 

ಇಂದು, ತೈವಾನ್‌ನ ರಾಜಕೀಯದಲ್ಲಿ ಕೆಎಮ್‌ಟಿ ಮತ್ತು ಡಿಪಿಪಿ ಎರಡೇ ಬಹುದೊಡ್ಡ ಪಕ್ಷಗಳು. 2000ದಿಂದ 2008ರವರೆಗೆ ಅಲ್ಪಮತದ ಸರಕಾರ ನಡೆಸಿದ ಡಿಪಿಪಿ, 2008ರಿಂದ 2016ರವರೆಗೆ ಮರಳಿ ಅಧಿಕಾರಕ್ಕೆ ಬಂತು. ಅಧ್ಯಕ್ಷೆ ತ್ಸಾಯ್ ಅವರ 2016ರ ಚುನಾವಣೆಯಂತೂ ತೈವಾನ್‌ನಲ್ಲಿ ತೀವ್ರವಾದ ಸ್ವಾತಂತ್ರ್ಯ ಪರ ಹಂತದ ಪ್ರಾರಂಭವೇ ಆಯಿತು. ಮತ್ತೆ ತೈವಾನ್‌ನಲ್ಲಿ ಡಿಪಿಪಿ ಅಧಿಕಾರಕ್ಕೆ ಬಂತು. ಚೀನಾದೊಂದಿಗಿನ ಪ್ರಸ್ತುತ ಉದ್ವಿಗ್ನತೆ 2020ರಲ್ಲಿ ತ್ಸಾಯ್ ಅವರ ಮರು ಆಯ್ಕೆಯಾಗುವುದರೊಂದಿಗೆ ತೀವ್ರಗೊಂಡಿದೆ. ತೈವಾನನ್ನು ಆಕ್ರಮಿಸುವ ಚೀನಾ ಇರಾದೆ ಜಾಗತಿಕ ಮಟ್ಟದಲ್ಲಿ ಕಳವಳಕ್ಕೆಡೆ ಮಾಡಿಕೊಟ್ಟಿರುವುದರ ಮುಖ್ಯ ಕಾರಣವೇ ತೈವಾನ್‌ಗೆ ಇರುವ ತಂತ್ರಜ್ಞಾನಿಕ ಪ್ರಾಮುಖ್ಯತೆ. 5ಜಿ ಸ್ಮಾರ್ಟ್ ಫೋನ್‌ನಿಂದ ಹಿಡಿದು ಲ್ಯಾಪ್‌ಟಾಪ್, ಕಂಪ್ಯೂಟರ್, ಇಲೆಕ್ಟ್ರಿಕ್ ಕಾರುಗಳು, ವೈದ್ಯಕೀಯ ಉಪಕರಣಗಳು, ಗಡಿಯಾರಗಳವರೆಗಿನ ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಕಂಪ್ಯೂಟರ್ ಚಿಪ್ ತಯಾರಾಗುವುದು ತೈವಾನ್‌ನಲ್ಲಿಯೇ. ಸೆಮಿ ಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ತೈವಾನ್‌ನ TSMC ಕಂಪೆನಿಯು ಜಗತ್ತಿನ ಅರ್ಧದಷ್ಟು ಮಾರುಕಟ್ಟೆಯನ್ನು ಹೊಂದಿದೆ. 2021ರ ಅಂಕಿಅಂಶವನ್ನೇ ಗಮನಿಸಿ ಹೇಳುವುದಾದರೆ 100 ಬಿಲಿಯನ್ ಡಾಲರ್ ಮೌಲ್ಯದ ಉದ್ಯಮವಾಗಿದೆ ಸೆಮಿ ಕಂಡಕ್ಟರ್ ಉತ್ಪಾದನೆ. ಹೀಗಾಗಿ, ತೈವಾನ್ ತನ್ನ ವಶವಾದರೆ ಜಗತ್ತಿನ ಅತಿ ಮುಖ್ಯ ಉದ್ಯಮವೊಂದರ ಮೇಲೆ ತನ್ನ ಹಿಡಿತ ಸಾಧಿಸಬಹುದೆಂಬ ಲೆಕ್ಕಾಚಾರವೂ ಚೀನಾದ್ದಾಗಿದೆ. ಅತ್ತ ಅಮೆರಿಕಕ್ಕೆ ಕೂಡ ಇದೇ ವಿಚಾರವಾಗಿ ಇರುವ ಆಸಕ್ತಿಯನ್ನೂ ಮರೆಯಲಿಕ್ಕಾಗದು. ತೈವಾನ್‌ಗೆ ನ್ಯಾನ್ಸಿ ಪೆಲೋಸಿ ಭೇಟಿ ವೇಳೆಯೂTSMC ಕಂಪೆನಿಯ ಚೇರ್ಮನ್ ಜೊತೆಗಿನ ಮಾತುಕತೆಯೇ ಮುಖ್ಯವಾಗಿತ್ತು ಎಂಬುದನ್ನು ಗಮನಿಸಬೇಕು. ಅಂದಹಾಗೆ ಇಲ್ಲಿ ಭಾರತಕ್ಕೆ ಸಂಬಂಧಪಟ್ಟ ವಿಚಾರವೂ ಇದೆ. ಭಾರತದಲ್ಲಿ ಚಿಪ್ ತಯಾರಿಕೆಯನ್ನು ಬೆಂಬಲಿಸುವ ಚಿಪ್ಸ್ ಆ್ಯಂಡ್ ಸೈನ್ಸ್ ಆ್ಯಕ್ಟ್ ಬಗ್ಗೆಯೂ ಪೆಲೋಸಿ ಭೇಟಿಯ ವೇಳೆ ಚರ್ಚೆಯಾಗಿದೆ. ಈಗಾಗಲೇ ಗೊತ್ತಿರುವಂತೆ, ಭಾರತಕ್ಕೆ 7.5 ಬಿಲಿಯನ್ ಡಾಲರ್ ಸೆಮಿಕಂಡಕ್ಟರ್ ಚಿಪ್ ಉತ್ಪಾದನಾ ಘಟಕವನ್ನು ತರಲು ತೈಪೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ. ಕಳೆದ ವರ್ಷದ ಕ್ವಾಡ್ ಶೃಂಗಸಭೆಯ ಹೊತ್ತಲ್ಲೇ ಇಂಥದೊಂದು ಒಪ್ಪಂದವಾಗಿದೆ. ಈಗ ತೈವಾನ್ ಮೇಲೆ ಬಿದ್ದಿರುವ ಯುದ್ಧದ ಕರಿನೆರಳು ಭಾರತದ ಮೇಲೂ ಪರಿಣಾಮ ಬೀರಲಿದೆಯೇ ಎನ್ನುವ ಪ್ರಶ್ನೆಯೂ ಎದ್ದಿದೆ.

ಭಾರತವು ಚೀನಾದೊಂದಿಗೆ ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿನ ಈ ಉದ್ವಿಗ್ನತೆಗೆ ಭಾರತದ ರಾಜತಾಂತ್ರಿಕ ಪ್ರತಿಕ್ರಿಯೆ ಹೇಗಿರಬೇಕು ಎಂಬುದೂ ಪ್ರಶ್ನೆಯೇ. ಗಡಿಯಲ್ಲಿ ಭಾರತದ ನಿಲುವನ್ನು ಧಿಕ್ಕರಿಸುವ ಬಗೆಯಲ್ಲಿನ 2010ರ ನಂತರದ ಚೀನಾ ನಡೆ ಉಭಯ ದೇಶಗಳ ಸಂಬಂಧ ಹದಗೆಡುವಂತೆ ಮಾಡಿದೆ. ಆ ಬಳಿಕ ತೈವಾನ್ ಜೊತೆಗಿನ ಭಾರತದ ಬಾಂಧವ್ಯ ಚಿಗುರಿಕೊಳ್ಳತೊಡಗಿರುವುದು ನಿಜ. ಭಾರತ ಮತ್ತು ತೈವಾನ್ ಪ್ರಸ್ತುತ ಪರಸ್ಪರರ ರಾಜಧಾನಿಗಳಲ್ಲಿ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯ ಕಚೇರಿಗಳನ್ನು ನಿರ್ವಹಿಸುತ್ತಿವೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದವೂ 2018ರಲ್ಲಿ ದಿಲ್ಲಿ ಮತ್ತು ತೈಪೆ ಮಧ್ಯೆ ಆಗಿದೆ. 2020ರಲ್ಲಿ ಗಲ್ವಾನ್ ಗಡಿಯಲ್ಲಿ ಚೀನಾ ದುರಾಕ್ರಮಣದ ಬಳಿಕವಂತೂ ಭಾರತವು ತೈವಾನ್ ಜೊತೆಗಿನ ತನ್ನ ಬಾಂಧವ್ಯವನ್ನು ವೃದ್ಧಿಸಿಕೊಂಡಿದೆ. ತೈವಾನ್‌ನಿಂದ ಭಾರತ ಆಮದು ಮಾಡಿಕೊಳ್ಳುವ ಪ್ರಮಾಣವೂ 2021-22ರಲ್ಲಿ ಗಣನೀಯವಾಗಿ ಏರಿದೆ. ಇನ್ನೊಂದೆಡೆ ಅಮೆರಿಕದೊಂದಿಗಿನ ಭಾರತದ ಬಾಂಧವ್ಯವೂ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದೆ. ಇಂಥ ಸನ್ನಿವೇಶದಲ್ಲಿನ ತೈವಾನ್ ಮೇಲಿನ ಚೀನಾ ದಾಳಿಯ ವಿಚಾರವು ಮತ್ತೊಂದೆಡೆ ಚೀನಾ-ಅಮೆರಿಕ ನಡುವಿನ ಸಂಘರ್ಷವಾಗಿ ಬೆಳೆಯುವ ಸೂಚನೆಯೂ ಕಾಣಿಸುತ್ತಿರುವಾಗ ಭಾರತದ ನಡೆ ಎಚ್ಚರದ್ದಾಗಿರಬೇಕು ಎಂಬ ಸಲಹೆಯೂ ಪರಿಣತರಿಂದ ವ್ಯಕ್ತವಾಗಿದೆ.

ತೈವಾನನ್ನು ತನ್ನದಾಗಿಸಿಕೊಂಡೇ ಸಿದ್ಧ ಎಂದು ನಿಂತಿರುವ ಚೀನಾದ ನಡೆಯ ಹಿಂದೆ ಸೂಪರ್ ಪವರ್ ಆಗುವ ದುಡುಕು ಇದ್ದಂತಿದೆ. ಅದು ಇದೀಗ ತೈವಾನ್ ಸುತ್ತ ತನ್ನ ಸೇನಾ ಬಲದ ಮೂಲಕ ಅಬ್ಬರಿಸುತ್ತಿರುವ ರೀತಿಯು ನಿಜವಾದ ಯುದ್ಧವನ್ನು ಸಾರುವುದೋ ಅಥವಾ ದ್ವೀಪರಾಷ್ಟ್ರದಲ್ಲಿ ನಡುಕ ಹುಟ್ಟಿಸುವ ಬೆದರಿಕೆ ತಂತ್ರವೊ ಎಂಬ ಅನುಮಾನ ಕೂಡ ಕಾಡದೇ ಇರುವುದಿಲ್ಲ. ಅಮೆರಿಕ ಸೇರಿದಂತೆ ಪ್ರಬಲವೆನ್ನಿಸಿಕೊಂಡ ರಾಷ್ಟ್ರಗಳ ರಾಜನೀತಿಯೊಳಗೆ ನೈತಿಕತೆಯೆಂಬುದು ಇಲ್ಲವಾಗುತ್ತಿರುವ ಕಾಲದಲ್ಲಿ ಚೀನಾದಂಥ ದೇಶದ ಮನಃಸ್ಥಿತಿ ಎಂಥದಿದ್ದೀತು ಎಂಬುದು ಊಹಾತೀತವೇನೂ ಅಲ್ಲ. ಯುದ್ಧೋತ್ಸಾಹವು ಎಲ್ಲವನ್ನೂ ತಿಂದುಹಾಕುತ್ತಿರುವ ಹೊತ್ತಿನಲ್ಲಿ ತೈವಾನ್‌ನಂಥ ಪುಟ್ಟ ರಾಷ್ಟ್ರಗಳು ತೋರುವ ಎದೆಗಾರಿಕೆ ಅಸಾಧಾರಣವಾದುದು. ತೈವಾನ್‌ನಲ್ಲಿನ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲ್ಲಿ ವಿಶ್ವ ಸಮುದಾಯ ಹೇಗೆ ನಿಲ್ಲಲಿದೆ ಎಂಬುದನ್ನು ಮಾತ್ರ ಕಾದುನೋಡಬೇಕಿದೆ. 

Full View

Writer - ಆರ್. ಜೀವಿ

contributor

Editor - ಆರ್. ಜೀವಿ

contributor

Similar News