ಬೆಂಗಳೂರು : ಆಮ್‌ ಆದ್ಮಿ ಪಾರ್ಟಿಯ ʻತ್ರಿವರ್ಣ ಸಂಭ್ರಮʼ ಬೈಕ್‌ ರ‍್ಯಾಲಿ ಆರಂಭ

Update: 2022-08-10 07:20 GMT

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ʼಭ್ರಷ್ಟಾಚಾರ ರಹಿತ ಬೆಂಗಳೂರುʼ ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯು “ತ್ರಿವರ್ಣ ಸಂಭ್ರಮ” ಬೈಕ್‌ ರ‍್ಯಾಲಿಗೆ ಬುಧವಾರ ಚಾಲನೆ ನೀಡಿತು.

ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ತ್ರಿವರ್ಣ ಧ್ವಜ ಹೊಂದಿದ ನೂರಾರು ಬೈಕ್‌ಗಳಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, “ಅವ್ಯಾಹತವಾಗಿ ನಡೆಯುತ್ತಿರುವ ಬಿಜೆಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ. ಸರ್ಕಾರದ ಬೊಕ್ಕಸದಿಂದ ಸಾವಿರಾರು ಕೋಟಿ ರೂಪಾಯಿ ಬಿಡುಗಡೆಯಾದರೂ ಜನರ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ. ಜನರ ತೆರಿಗೆ ಹಣವು ಜನಪ್ರತಿನಿಧಿಗಳ ಜೇಬು ಸೇರಿ ಅವರು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದಾರೆ. ಬೆಂಗಳೂರಿನ ಜನತೆಯು ಈ ಭ್ರಷ್ಟ ವ್ಯವಸ್ಥೆಗೆ ಬದಲಾವಣೆ ತರುವ ಸಂಕಲ್ಪ ಮಾಡುವ ಸಮಯ ಬಂದಿದೆ” ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಮಾತನಾಡಿ, “ಇಂದು ಆರಂಭವಾದ ಬೈಕ್‌ ರ‍್ಯಾಲಿಯು ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಲುಪಲಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನದ ತನಕ ರ‍್ಯಾಲಿ ಮುಂದುವರಿಯಲಿದೆ. ಅಂದು ಬನಪ್ಪ ಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಸಿ ರ‍್ಯಾಲಿಯನ್ನು ಅಂತ್ಯಗೊಳಿಸಲಾಗುತ್ತದೆ. ರಾಜಧಾನಿ ಬೆಂಗಳೂರಿನಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ವಿರುದ್ಧ ಈ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ಸರ್ಕಾರಿ ಕಚೇರಿಗಳಲ್ಲಿ ಸಣ್ಣ ಸೇವೆ ಪಡೆಯಲು ಕೂಡ ಲಂಚ ನೀಡಬೇಕಾದಂತಹ ವಾತಾವರಣವನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ನಿರ್ಮಿಸಿವೆ. ರಸ್ತೆಗಳಲ್ಲಿ ಗುಂಡಿಗಳು, ಅಸಮರ್ಪಕ ಪಾದಚಾರಿ ಮಾರ್ಗಗಳು, ಅವ್ಯವಸ್ಥಿತ ಕಸ ವಿಲೇವಾರಿ, ಮೂಲ ಸೌಕರ್ಯಗಳಿಲ್ಲದ ಆರೋಗ್ಯ ಕೇಂದ್ರಗಳು, ನಿರ್ಲಕ್ಷ್ಯಕೊಳಗಾದ ಸರ್ಕಾರಿ ಶಾಲೆಗಳು, ರಾಜಕಾಲುವೆ ಒತ್ತುವರಿ ಮುಂತಾದ ಅನೇಕ ಸಮಸ್ಯೆಗಳು ಬೆಂಗಳೂರನ್ನು ಕಾಡುತ್ತಿದ್ದರೂ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಜನತೆಗೆ ಸೂಕ್ತ ಮೂಲಸೌಕರ್ಯಗಳು ದೊರೆಯದಿರುವುದು ದುರಂತ” ಎಂದು ಹೇಳಿದರು.

ಪಕ್ಷದ ಹಲವು ನಾಯಕರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News