ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸಮಾಜದ ಪ್ರಗತಿಯ ಮೂಲ: ಸಚಿವ ಡಾ. ಅಶ್ವತ್ಥ ನಾರಾಯಣ

Update: 2022-08-10 07:38 GMT

ಬೆಂಗಳೂರು:  ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಪೂರೈಸುವ ಸಂಸ್ಥೆಗಳೇ ಸಮಾಜದ ಪ್ರಗತಿಗೆ ಆಧಾರ ಸ್ತಂಭಗಳಾಗಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.

ತಾವು ಪ್ರತಿನಿಧಿಸುವ ಮಲ್ಲೇಶ್ವರಂ ಕ್ಷೇತ್ರದ ಶ್ರೀ ವಿದ್ಯಾಮಂದಿರದ ಸಂಸ್ಥಾಪನ ದಿನಾಚರಣೆಯಲ್ಲಿ ಅವರು ಬುಧವಾರ ಮಾತನಾಡಿದರು.

ಮಲ್ಲೇಶ್ವರಂ ಕ್ಷೇತ್ರದಲ್ಲಿ ಹಲವು ಹೆಸರಾಂತ ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ಶ್ರೀ ವಿದ್ಯಾಮಂದಿರಕ್ಕೆ ಅಗ್ರ ಸ್ಥಾನವಿದೆ. ಇದಕ್ಕೆ ಸಂಸ್ಥೆಯ ಸ್ಥಾಪಕರಾದ ಲೀಲಾವತಿ ಅವರ ಕೊಡುಗೆ ಕಾರಣ ಎಂದು ಅವರು ನುಡಿದರು.

ಇಂದು ಮಲ್ಲೇಶ್ವರಂ ನಲ್ಲಿ ಹೊಸದಾಗಿ ಸಂಸ್ಥೆಗಳನ್ನು ಕಟ್ಟಲು ಜಾಗವೇ ಇಲ್ಲದಂತಾಗಿದೆ‌. ವೈಯಕ್ತಿಕ ಬದುಕಿಗೆ ಬಂಗಲೆಗಳನ್ನು ಬಯಸುವ ನಾವು ಶಿಕ್ಷಣ ಸಂಸ್ಥೆಗಳನ್ನು ಅಂಗೈಯಗಲದ ಜಾಗದಲ್ಲಿ ಕಟ್ಟಲು ಹೊರಟಿರುವುದು ದುರಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮಲ್ಲಿರುವ ಶಿಕ್ಷಣ ಸಂಸ್ಥೆಗಳ ಪೈಕಿ ಶೇಕಡ 20ರಷ್ಟು ಸಂಸ್ಥೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಕೆಲವರಿಗೆ ದೊರೆಯುತ್ತಿದೆ ಉಳಿದ ಶೇಕಡ 80ರಷ್ಟು ಸಂಸ್ಥೆಗಳು ಅದೋಗತಿಯಲ್ಲಿವೆ. ಇದು  ವಾಸ್ತವವಾಗಿದ್ದು, ಗುಣಮಟ್ಟದ ಶಿಕ್ಷಣವು ಗಗನಕುಸುಮವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯಲ್ಲಿ ಪ್ರತಿಭೆಗೆ ಆದ್ಯತೆ ಕೊಡಲಾಗಿದೆ. ಇದರ ಜೊತೆಯಲ್ಲಿ ಸುಸ್ಥಿರತೆ ಮತ್ತು ಸಮಾನತೆಯಿಂದ ಕೂಡಿರುವ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸಿದರು.

ಜಾಗತಿಕ ಮಟ್ಟದ ಸ್ಪರ್ಧೆಯನ್ನು ಎದುರಿಸಲು ಶಿಕ್ಷಣ ಅತ್ಯಗತ್ಯ. ಆದರೆ ಕಳೆದ ನಾಲ್ಕೈದು ದಶಕಗಳಲ್ಲಿ ಇದನ್ನು ಮರೆತಿದ್ದರಿಂದ ಇಂದು ಎಲ್ಲರೂ ಕೆಲಸಕ್ಕೆ ಬಾರದ ಇಂಜಿನಿಯರ್ ಗಳು ಮತ್ತು ಪದವೀಧರರು ಕಾಣುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಒಳ್ಳೆಯ ಶಿಕ್ಷಕರನ್ನು ತಮ್ಮ ಸಂಸ್ಥೆಯ ಆಸ್ತಿಯೆಂದು ಭಾವಿಸಿದ್ದ ಲೀಲಾವತಿ ಅವರಂತಹ ಚೇತನಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕಾಗಿದೆ. ಇಂತಹವರ ಅಗತ್ಯವನ್ನು ಸಮಾಜ ಕೂಡ ಮನಗಾಣಬೇಕು ಎಂದು ಸಚಿವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಚಂದ್ರಿಕಾ ಗೌಡ ಬಾಬು ದೊರೆಸ್ವಾಮಿ ಮತ್ತು ಪರಮೇಶ್ವರ್ ಅಯ್ಯರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News