ರಾಗಿ ಹೊಲದಿಂದ ರಾಜಭವನಕ್ಕೆ ಬಿ. ರಾಚಯ್ಯ

Update: 2022-08-10 10:55 GMT

ದಿ. ಬಿ. ರಾಚಯ್ಯನವರು ಅಕ್ಷರಲೋಕದ ಮೊದಲ ತಲೆಮಾರಿನ ದಲಿತ ಸಾಧಕರು. ಚಾಮರಾಜನಗರದಿಂದ ಆಲೂರಿಗೆ 10 ಕಿ. ಮೀ. ರಸ್ತೆಯ ಮಧ್ಯೆ ದೊಡ್ಡರಾಯಪೇಟೆ ಎಂಬ ಗ್ರಾಮವಿದೆ. ಅದು ನನ್ನ ತಾಯಿಯ ಊರು. ನಾನು ಹೆಚ್ಚು ಬಾಲ್ಯವನ್ನು ಕಳೆದದ್ದು ಅಲ್ಲಿಯೆ. ರಾಚಯ್ಯನವರು ಕೆಂಪು ದೀಪದ ಕಾರಿನಲ್ಲಿ ಊರಿಗೆ ಬರುವಾಗ ರಸ್ತೆಯ ಎರಡೂ ಬದಿಯಲ್ಲಿ ಜನ ನಿಂತು ಕಾಯುತ್ತಿದ್ದುದು, ಅವರಿಗೆ ಹೂಮಾಲೆ ಅರ್ಪಿಸುತ್ತಿದ್ದುದು ಆಗಿನ್ನೂ ಶಾಲಾಮಕ್ಕಳಾಗಿದ್ದ ನಾವು ನೋಡುತ್ತ ನಿಲ್ಲುತ್ತಿದ್ದುದು ಚೆನ್ನಾಗಿ ನೆನಪಿದೆ. ಆಲೂರಿನಂತಹ ಹಳ್ಳಿಯಲ್ಲಿ ಹೊಲಗೇರಿಯಲ್ಲಿ ಹುಟ್ಟಿ ಬೆಳೆದು ಈ ಪಾಟಿ ಮೇರುವ್ಯಕ್ತಿಯಾಗಿ ಬೆಳೆದದ್ದು ಒಂದು ಪವಾಡವೇ ಸರಿ. ಶಾಲೆಗಳು ಅಪರೂಪವಾಗಿದ್ದ ಆ ಕಾಲದಲ್ಲಿ ಮಗನನ್ನು ಓದಿಸಲು ಮನಸ್ಸು ಮಾಡಿದ ಅವರ ತಂದೆ ಬಸವಯ್ಯನವರು ನಿಜಕ್ಕೂ ಸ್ಮರಣೀಯರು. ಒಬ್ಬ ರಾಜಕಾರಿಣಿಯ ಸಾಧನೆಗಳನ್ನು ಪಟ್ಟಿ ಮಾಡುವುದು ಸುಲಭ, ಆದರೆ ಆತ ನಿಲ್ಲುವುದು, ಮುಂದಿನ ಪೀಳಿಗೆಗೆ ಆದರ್ಶವಾಗಿ ಕಾಣುವುದು ತಾನು ರೂಪಿಸಿಕೊಂಡ ಸಾಂಸ್ಕೃತಿಕ ವ್ಯಕ್ತಿತ್ವದ ಮೂಲಕ. ರಾಚಯ್ಯನವರ ಸಾಧನೆಯನ್ನು ನಾನು ಈ ನಿಟ್ಟಿನಲ್ಲಿ ಗಮನಿಸುತ್ತೇನೆ.

ಬಾಲಕ ರಾಚಯ್ಯನನ್ನು ಪ್ರಾಥಮಿಕ ಶಾಲೆ ಕಲಿಕೆ ಮುಗಿದ ನಂತರ ಚಾಮರಾಜನಗರಕ್ಕೆ ಮಾಧ್ಯಮಿಕ ಶಾಲೆಗೆ ಕಳುಹಿಸುತ್ತಾರೆ. ಅಲ್ಲಿಗೆ ಹುಡುಗ ಪ್ರತಿದಿನ ಕಾಲ್ನಡಿಗೆಯಲ್ಲಿ ಹೋಗಿ ಬರುತ್ತಿರುತ್ತಾನೆ. ದುರದೃಷ್ಟವಶಾತ್ ಆ ಶಾಲೆಗೆ ಬೆಂಕಿ ಬಿದ್ದು ನಾಶವಾಗುತ್ತದೆ. ಬೇರೆ ಯಾರೇ ಆಗಿದ್ದರು ಅಲ್ಲಿಗೆ ವಿದ್ಯಾಭ್ಯಾಸ ಮುಗಿಯುತ್ತಿತ್ತು. ಆದರೆ ರಾಚಯ್ಯ ಅಕ್ಷರಶಃ ಛಲವಾದಿ, ಓದಬೇಕೆಂಬ ಹಠ ಹಿಡಿದರು. ಅವರ ತಂದೆ ಕುದೇರು ಗ್ರಾಮಕ್ಕೆ ಕರೆತಂದು ಶಾಲೆಗೆ ಸೇರಿಸಿದರು. ಓದು ಮುಂದುವರಿಯಿತು.

ಕುದೇರು ಶಾಲೆಯಲ್ಲಿ ಕಲಿಕೆ ಅಷ್ಟೇನು ಸುಲಭವಾಗಿರಲಿಲ್ಲ. ಅಲ್ಲಿನ ಮೇಷ್ಟ್ರಿಗೆ ಹುಡುಗ ರಾಚಯ್ಯನಿಗೆ ಬೇಸಾಯದ ಬಗ್ಗೆ ಚೆನ್ನಾಗಿ ತಿಳಿದಿದೆ, ಕೆಲಸಗಾರ ಎಂದು ಗೊತ್ತಾಯಿತು. ಮಳೆಗಾಲ ಪ್ರಾರಂಭವಾಯಿತು. ಸಣ್ಣಯ್ಯ ಮೇಷ್ಟ್ರಿಗೆ ಹೊಲ ಉಳಲು ಊರಿನಲ್ಲಿ ಕೂಲಿ ಆಳುಗಳು ಯಾರೂ ಸಿಗಲಿಲ್ಲ. ಸರಿ, ರಾಚಯ್ಯನಿಗೆ; ‘‘ನೋಡು, ಮಳೆಯಾಯ್ತು ಉಳುಮೆಗೆ ಯಾರೂ ಸಿಕ್ತಾ ಇಲ್ಲ. ಇಂದು ನೀನೇ ಆ ಕೆಲಸ ಮಾಡಿಬಿಡು’’ ಎಂದರು. ಅಲ್ಲಿಂದ ಶುರುವಾಯ್ತು ರಾಚಯ್ಯನ ಜೀತಗಾರಿಕೆ ಮತ್ತು ಓದು. ರಾಚಯ್ಯ ಹೇಗೋ ಪಾಸು ಮಾಡಿಕೊಂಡು ಮೈಸೂರಿಗೆ ಬಂದು ಮಿಷನರಿ ಪ್ರೌಢಶಾಲೆಗೆ ಸೇರುತ್ತಾರೆ. ಹೀಗೆ ಅವರು ಬೆಂಗಳೂರಿನವರೆಗೂ ಬಂದು ಕಾನೂನು ಪದವಿ ಮುಗಿಸಿ ಸರಕಾರಿ ಕೆಲಸ ಹಿಡಿಯುತ್ತಾರೆ. ಎಂತಹ ಸಂಕಷ್ಟದಲ್ಲಿ ರಾಚಯ್ಯ ರಾಗಿ ಹೊಲದಿಂದ ರಾಜಭವನಕ್ಕೆ ಪಾದ ಬೆಳೆಸಿದರು ಎಂಬುದು ರೋಚಕವಾದ ಕಥೆ.

ಸರಕಾರಿ ಕೆಲಸದಲ್ಲಿ ತೃಪ್ತರಾಗಿದ್ದ ರಾಚಯ್ಯನವರಿಗೆ ‘ಆದಿ ಕರ್ನಾಟಕ ಅಭಿವೃದ್ಧಿ ಸಂಘ’ದ ಸ್ಥಾಪನೆ ರಾಜಕೀಯಕ್ಕೆ ಒಂದು ಮೆಟ್ಟಿಲಾಯಿತು. ಪದವೀಧರರೇ ಅಪರೂಪವಾಗಿದ್ದ ಸಮುದಾಯದಿಂದ ಬಂದ ಅವರಿಗೆ ಹಿತೈಷಿಗಳಿಂದ ಬೇಡಿಕೆ ಹೆಚ್ಚಾಯಿತು. ಧೈರ್ಯಮಾಡಿ ದೊಡ್ಡ ಹೆಜ್ಜೆ ಇಟ್ಟೇಬಿಟ್ಟರು. 1962ರಲ್ಲಿ ಸಂತೆ ಮರಳ್ಳಿ ಮೀಸಲು ಈ ಕ್ಷೇತ್ರದಿಂದ ಮೂರನೇ ಬಾರಿ ಗೆದ್ದಾಗ ಎಸ್.ಆರ್. ಕಂಠಿಯವರ ಸಂಪುಟದಲ್ಲಿ ರಾಚಯ್ಯನವರು ಕೃಷಿ, ಅರಣ್ಯ ಮತ್ತು ಸಹಕಾರ ಈ ಮೂರು ಖಾತೆಗಳಿಗೂ ಮಂತ್ರಿಯಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಕಂದಾಯ, ಶಿಕ್ಷಣ, ಮೀನುಗಾರಿಕೆ, ರೇಷ್ಮೆ, ತೋಟಗಾರಿಕೆ ಕೊನೆಗೆ ಬಹು ಮುಖ್ಯವಾದ ಗೃಹಖಾತೆಯನ್ನು ನಿರ್ವಹಿಸುತ್ತಾರೆ. ಬಹುಶಃ ಶಕ್ತ ಜಾತಿರಾಜಕಾರಣದ ಪಿಡುಗಿಲ್ಲದಿದ್ದರೆ ಅವರು ಮುಖ್ಯಮಂತ್ರಿಯಾಗುತ್ತಿದ್ದರು. ಅದು ಸಾಧ್ಯವಾಗಲಿಲ್ಲ. ಆದರೂ ಅವರ ಸಾಧನೆಗಳು ಅಪಾರ. ಶಿಕ್ಷಣ ಸಚಿವರಾಗಿದ್ದಾಗ ರಾಜ್ಯದಾದ್ಯಂತ 400 ಪ್ರೌಢಶಾಲೆಗಳನ್ನು ತೆಗೆದರು. ಅಷ್ಟೇ ಪ್ರೌಢಶಾಲೆಗಳನ್ನು ಕಾಲೇಜು ಮಟ್ಟಕ್ಕೇರಿಸಿದರು. ಇದು ಮುಂದಿನ ಪೀಳಿಗೆಯ ಬಗ್ಗೆ ಅವರಿಗಿದ್ದ ಕಾಳಜಿ. ಗೃಹ ಸಚಿವರಾಗಿದ್ದಾಗ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ಎಂಬ ಅನಿಷ್ಟ ಪದ್ಧತಿಯನ್ನು ನಿಲ್ಲಿಸಿದರು. ಮೊದಲನೆಯದು ಕೆಳವರ್ಗದವರ ವಿದ್ಯೆಯನ್ನು ಪೋಷಿಸಿ ಎರಡನೆಯದು ಕೆಳಜಾತಿಯ ಹೆಣ್ಣುಮಕ್ಕಳ ಶೋಷಣೆಯನ್ನು ತಡೆಯುವುದಾಗಿತ್ತು. ಇವೆರಡು ಮಹತ್ತರ ಸಾಧನೆಗಳು. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರ್ಯಾಂಕ್ ಪಡೆದವರಿಗೆ ಸರಕಾರದ ಉನ್ನತ ಹುದ್ದೆ ನೇರ ನೇಮಕಾತಿ ಅವಕಾಶ ಕಲ್ಪಿಸುವುದರಲ್ಲಿ ಇವರು ಮುಖ್ಯಪಾತ್ರ ವಹಿಸಿದರು ಎಂಬುದು ಗಮನಾರ್ಹ.

ರಾಚಯ್ಯ ಒಬ್ಬ ಅಧಿಕಾರರೂಢ ಮಂತ್ರಿಯಾಗಿ, ಸರಕಾರವೇ ಆಗಿ ಅಸ್ಪೃಶ್ಯತೆಯ ಅನುಭವವಿದ್ದೂ ರೊಚ್ಚನ್ನು ಬೆಳೆಸಿಕೊಳ್ಳಲಿಲ್ಲ. ಹಳೆಯ ಕಟ್ಟುಪಾಡುಗಳಿಗೆ ವಿಧೇಯರಾಗಿದ್ದರು ಎಂಬಂತಹ ವಿಷಯಗಳಲ್ಲಿ ಅವರ ಬಗ್ಗೆ ಅಸಮಾಧಾನ ಕೆಲವರಲ್ಲಿದೆ. ಎಲ್ಲರೂ ಬಸವಲಿಂಗಪ್ಪನವರ ಹಾಗೆ ಘರ್ಜಿಸಲು ಸಾಧ್ಯವಿಲ್ಲ. ವೈಚಾರಿಕತೆ ತಾನಾಗಿಯೇ ಬರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕು. ರಾಚಯ್ಯನವರು ತಮ್ಮ ಮಿತಿಯ ಒಳಗೆ ಕೆಲಸ ಮಾಡುತ್ತಿದ್ದರು, ಎಲ್ಲ ವರ್ಗದವರಿಗೂ ಬೇಕಾದವರಾಗಿದ್ದರು.

ರಾಚಯ್ಯನವರನ್ನು ನೆನೆಯಬೇಕಾಗಿರುವುದು ಇನ್ನೊಂದು ಮುಖ್ಯ ಕಾರಣಕ್ಕೆ. ರಾಜಕೀಯವೆಂದರೆ ಭ್ರಷ್ಟಾಚಾರ ಎಂದು ಅರ್ಥೈಸಿಕೊಳ್ಳುವ ಇಂದಿನ ದಿನಮಾನಗಳಲ್ಲಿ ರಾಚಯ್ಯನವರ ಪ್ರಾಮಾಣಿಕತೆ ಯುವಕರಿಗೆ ಮಾದರಿಯಾಗುವಂತಿದೆ. ಅಷ್ಟು ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಹಣಕ್ಕೆ ಪ್ರಾಮುಖ್ಯತೆಯನ್ನೇ ನೀಡಲಿಲ್ಲ. ಮಕ್ಕಳನ್ನು ಪ್ರೀತಿಯಿಂದ ಸಾಕಿ ಬೆಳೆಸಿದರು. ತೃಪ್ತ ಕುಟುಂಬ ಜೀವನವನ್ನು ಅನುಭವಿಸಿದರು. ತಮ್ಮ ಕಿರಿಯ ಮಗಳ ಮದುವೆ ಮಾಡಿದಾಗ ಅವರು ರಾಜ್ಯಪಾಲರಾಗಿದ್ದರು. ಆದರೂ ಸಾಲ ಮಾಡಿ ಮದುವೆ ಮಾಡಿದರು. ಇಂದಿನವರಿಗೆ ಇದು ನಂಬಲಸಾಧ್ಯವಾದ ಮಾತು. ಇನ್ನೊಂದು ಘಟನೆಯನ್ನು ಇಲ್ಲಿ ನೆನೆಯಲೇಬೇಕು. ಅವರನ್ನು ಮೊದಲಬಾರಿಗೆ ರಾಜ್ಯಪಾಲರನ್ನಾಗಿ ಮಾಡಿ ಹಿಮಾಚಲ ಪ್ರದೇಶಕ್ಕೆ ಕಳುಹಿಸಲಾಯಿತು.

ಆಗ ರಾಚಯ್ಯನವರ ಆರೋಗ್ಯ ಬಹಳ ಹದಗೆಟ್ಟಿತ್ತು. ಚಳಿಗಾಲದ ಹವೆ, -12 ಡಿಗ್ರಿ ಹವಾಮಾನದಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಆ ಸಂದರ್ಭದಲ್ಲಿ ವೈದ್ಯರು ಅವರಿಗೆ ಅಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳಲು, ಸ್ವಲ್ಪ ಬೆಚ್ಚಗಾಗಲು ವಿಸ್ಕಿ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಅಂತಹ ಸ್ಥಿತಿಯಲ್ಲಿಯೂ ರಾಚಯ್ಯನವರು ‘‘ಜೀವಮಾನದಲ್ಲಿಯೇ ನಾನು ಮದ್ಯವನ್ನು ಮುಟ್ಟಿಲ್ಲ ಈಗ ಯಾಕೆ?’’ ಎಂದುಬಿಟ್ಟರಂತೆ. ಮರುದಿನವೇ ಅವರಿಗೆ ಕೇರಳದ ರಾಜ್ಯಪಾಲರಾಗಿ ವರ್ಗಾವಣೆಯಾಗುತ್ತದೆ. ಇಂತಹ ಪ್ರಾಮಾಣಿಕ, ಆದರ್ಶವಾದಿ ಮುತ್ಸದ್ಧಿ ರಾಜಕಾರಣಿಗಳು ಮತ್ತೆ ಮತ್ತೆ ಹುಟ್ಟಿ ಬರಲಿ ಎಂದು ಪ್ರಾರ್ಥಿಸೋಣ.

Writer - ಮೂಡ್ನಾಕೂಡು ಚಿನ್ನಸ್ವಾಮಿ

contributor

Editor - ಮೂಡ್ನಾಕೂಡು ಚಿನ್ನಸ್ವಾಮಿ

contributor

Similar News