ಬಂಟ ಸಮಾಜವನ್ನು ಪ್ರವರ್ಗ ‘2ಎ’ಯಲ್ಲಿ ಸೇರಿಸಲು ಸರಕಾರದ ಮೇಲೆ ಒತ್ತಡ: ಅಜಿತ್ ಕುಮಾರ್ ರೈ

Update: 2022-08-10 16:43 GMT

ಮಂಗಳೂರು, ಆ.10: ರಾಜ್ಯದ ಮೀಸಲಾತಿಯಲ್ಲಿ ಬಂಟ ಸಮಾಜವು ಪ್ರವರ್ಗ ‘2ಎ’ಯಲ್ಲಿ ಸೇರಿಸಲು ಅರ್ಹವಾಗಿದ್ದರೂ ಬಂಟ ಸಮಾಜವನ್ನು ‘3ಬಿ’ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ದೊರೆಯುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಲು ‘ಭಾಂದವ್ಯ’ ನಾಮಾಂಕಿತದೊಂದಿಗೆ ಜನಗಣತಿಯನ್ನು ಆರಂಭಿಸಲಾಗಿದೆ. ಅಲ್ಲದೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟ ಬಾಂಧವರ ಮಾಹಿತಿಯನ್ನು ಪಡೆದು ವಿಶ್ವಬಂಟರ ಮಾಹಿತಿ ಕೋಶವನ್ನು ರಚಿಸಲು ಸಿದ್ಧತೆ ಮಾಡಲಾಗುವುದು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದರು.

ನಗರದ ಗೀತಾ ಎಸ್.ಎಂ. ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಂಘದ 101ನೆ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಂಟ ಸಮಾಜವನ್ನು ಹಿಂದುಳಿದ ವರ್ಗದಲ್ಲಿ ಸೇರಿಸಬೇಕೆಂದು ಸರಕಾರಕ್ಕೆ ಮನವರಿಕೆ ಮಾಡಿಕೊಡುವಂತೆ ೧೯೬೦ರಲ್ಲೇ ಸಂಘದ ಮಹಾಸಭೆಯಲ್ಲಿ ನಿರ್ಣಯಿಸಲಾಗಿತ್ತು. ೨೦೦೪ರಲ್ಲಿ ಮಂಗಳೂರಿನಲ್ಲಿ ನಡೆದ ಹಿಂದುಳಿದ ಆಯೋಗದ ಸಭೆಯಲ್ಲಿ ಅಧ್ಯಕ್ಷರು ಸ್ವತಃ ಮಂಡನೆ ಮಾಡಿ ಸಮಾಜವನ್ನು ಪ್ರವರ್ಗ ‘೨ಎ’ಯಲ್ಲಿ ಸೇರಿಸುವಂತೆ ಮನವಿ ಮಾಡಲಾಗಿತ್ತು. ೨೦೧೩,  ೨೦೧೫, ೨೦೨೨ರಲ್ಲೂ ಕೂಡಾ ಅಗತ್ಯ ಮಾಹಿತಿಗಳನ್ನು ಒದಗಿಸಲಾಗಿತ್ತು. ಇದೀಗ ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಮಾಜವನ್ನು ಪ್ರವರ್ಗ ‘ಎ’ಯಲ್ಲಿ ಸೇರಿಸಲು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿ ಬಂಟರ ಮಾತೃ ಸಂಘದ ಶತಮಾನೋತ್ಸವ ಕಟ್ಟಡದ ನಿರ್ಮಾಣಕ್ಕಾಗಿ ಅಗತ್ಯ ಇರುವ ಎಲ್ಲಾ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯಲಾಗಿದೆ. ಇನ್ನು ಮಹಾನಗರ ಪಾಲಿಕೆಗೆ ನಿರ್ಮಾಣದ ಶುಲ್ಕವನ್ನು  ಪಾವತಿಸಿ ಶೀಘ್ರದಲ್ಲೇ  ನಿರ್ಮಾಣದ ಕೆಲಸ ಪ್ರಾರಂಭವಾಗಲಿದೆ. ಕಟ್ಟಡ ನಿರ್ಮಾಣದ ಬಳಿಕ ಬರುವ ಬಹುದೊಡ್ಡ ಮೊತ್ತದ ಆದಾಯವನ್ನು ಸಮಾಜದ ಶ್ರೇಯೋಭಿವೃದ್ದಿಗಾಗಿ ವಿನಿಯೋಗಿಸಲಾಗುವುದು ಎಂದರು.

ಈ ವರ್ಷ ಜರಗಲಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಸಂದರ್ಭ ಮಹಿಳೆಯರ ಸಶಕ್ತೀಕರಣಕ್ಕಾಗಿ ಮಹಿಳಾ ಸೌಹಾರ್ದ ಸಹಕಾರಿ ಸಂಘವನ್ನು ಆರಂಭಿಸುವ ಕಾರ್ಯವನ್ನು  ಕೈಗೆತ್ತಿಕೊಳ್ಳಲಾ ಗಿದೆ. ಮಹಿಳೆಯರ ಸಶಕ್ತೀಕರಣಕ್ಕಾಗಿ ಶಕ್ತಿನಗರದಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ ಜಾಗದಲ್ಲಿ ಕೈಗಾರಿಕೋದ್ಯಮವನ್ನು ಸ್ಥಾಪಿಸಲಾಗುವುದು ಎಂದು ಅಜಿತ್ ಕುಮಾರ್ ರೈ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ ಲೆಕ್ಕಪತ್ರ ಮಂಡಿಸಿದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸಂಚಾಲಕಿ ಶಾಲಿನಿ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿ ಭವನದ ಸಂಚಾಲಕ ಉಮೇಶ್ ರೈ ಪದವು ಮೇಗಿನಮನೆ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ಡಾ. ಸಂಜೀವ ರೈ, ಪುತ್ತೂರು ಶ್ರೀ ರಾಮಕೃಷ್ಣ   ಹೈಸ್ಕೂಲ್‌ನ ಸಂಚಾಲಕ  ಎ. ಹೇಮನಾಥ ಶೆಟ್ಟಿ ಕಾವು, ಕಾರ್ಕಳ ವಿದ್ಯಾರ್ಥಿ ಭವನದ ಸಂಚಾಲಕ ಚೇತನ್ ಶೆಟ್ಟಿ, ಕಾರ್ಕಳ ತಾಲೂಕು ಸಮಿತಿಯ ಸಂಚಾಲಕ ಮಣಿರಾಜ್ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ, ಕುಂದಾಪುರ ತಾಲೂಕು ಸಮಿತಿಯ ಸುಧಾಕರ ಶೆಟ್ಟಿ ಆವರ್ಸೆ, ಉಡುಪಿ ತಾಲೂಕು ಸಮಿತಿಯ ಜಯರಾಜ ಹೆಗ್ಡೆ, ಬಂಟ್ವಾಳ ತಾಲೂಕು ಸಮಿತಿಯ ರಾಮಣ್ಣ ರೈ, ಪುತ್ತೂರು ತಾಲೂಕು ಸಮಿತಿಯ ದಯಾನಂದ ರೈ ಮನವಳಿಕೆಗುತ್ತು, ಬೆಳ್ತಂಗಡಿ ತಾಲೂಕು ಸಮಿತಿಯ ರಘುರಾಮ ಶೆಟ್ಟಿ ವರದಿ ಮಂಡಿಸಿದರು.

ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೇಡಿ ವಂದಿಸಿದರು. ಸುಖೇಶ್ ಚೌಟ ಉಳ್ಳಾಲ ಗುತ್ತು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News