ಸ್ವಾತಂತ್ರದ 75 ವರ್ಷಗಳು: ಆತ್ಮಾವಲೋಕನದ ಅಗತ್ಯ

Update: 2022-08-11 05:55 GMT

ಭಾಗ-1 

ಒಂದು ಸ್ವತಂತ್ರ ರಾಷ್ಟ್ರವಾಗಿ ನಾವು ಏನನ್ನೆಲ್ಲ ಸಾಧಿಸಿದ್ದೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾವು ಎಲ್ಲಿ ನಮ್ಮ ಗುರಿಯನ್ನು ಮುಟ್ಟುವಲ್ಲಿ ವಿಫಲರಾಗಿದ್ದೇವೆ ಅಥವಾ ನಿರೀಕ್ಷಿತ ಯಶಸ್ಸನ್ನು ಗಳಿಸಿಲ್ಲ ಎಂಬುದು. ಆದ ವೈಫಲ್ಯಗಳು, ಗಳಿಸಿದ ಯಶಸ್ಸನ್ನು ಅರ್ಥಹೀನಗೊಳಿಸಬಹುದೆಂಬ ಅರಿವು ಇದ್ದರೆ ಅನುಭವದಿಂದ ನಾವು ಪಾಠ ಕಲಿತಿದ್ದೇವೆ ಎಂದು ಹೇಳಬಹುದು.ಈ ಆತ್ಮಾವಲೋಕನಕ್ಕೆ, 1947ರಲ್ಲಿ ಸ್ವತಂತ್ರವಾಗಿ ರೂಪುಗೊಳ್ಳಲಿದ್ದ ರಾಷ್ಟ್ರದ ಗುರಿಗಳು ಏನಿದ್ದವು ಎಂಬುದನ್ನು ಮತ್ತೊಮ್ಮೆ ಪರಾಮರ್ಶಿಸಿ ಆ ಬಳಿಕದ ಸಾಧನೆ ಮತ್ತು ವೈಫಲ್ಯಗಳ ತುಲನೆ ಮಾಡಬೇಕಾಗುತ್ತದೆ.

ಸ್ವಾತಂತ್ರದ ಅಮೃತಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಂದರ್ಭದಲ್ಲಿ ಆತ್ಮಾವಲೋಕನದ ತುರ್ತು ಕೂಡಾ ಇಂದು ಚಿಂತನಶೀಲ ಸಮಾಜವಾದ ನಮ್ಮ ಮುಂದಿದೆ. ಒಂದು ಸ್ವತಂತ್ರ ರಾಷ್ಟ್ರವಾಗಿ ನಾವು ಏನನ್ನೆಲ್ಲ ಸಾಧಿಸಿದ್ದೇವೆ ಎಂಬುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾವು ಎಲ್ಲಿ ನಮ್ಮ ಗುರಿಯನ್ನು ಮುಟ್ಟುವಲ್ಲಿ ವಿಫಲರಾಗಿದ್ದೇವೆ ಅಥವಾ ನಿರೀಕ್ಷಿತ ಯಶಸ್ಸನ್ನು ಗಳಿಸಿಲ್ಲ ಎಂಬುದು. ಆದ ವೈಫಲ್ಯಗಳು, ಗಳಿಸಿದ ಯಶಸ್ಸನ್ನು ಅರ್ಥಹೀನಗೊಳಿಸಬಹುದೆಂಬ ಅರಿವು ಇದ್ದರೆ ಅನುಭವದಿಂದ ನಾವು ಪಾಠ ಕಲಿತಿದ್ದೇವೆ ಎಂದು ಹೇಳಬಹುದು.

ಈ ಆತ್ಮಾವಲೋಕನಕ್ಕೆ, 1947ರಲ್ಲಿ ಸ್ವತಂತ್ರವಾಗಿ ರೂಪುಗೊಳ್ಳಲಿದ್ದ ರಾಷ್ಟ್ರದ ಗುರಿಗಳು ಏನಿದ್ದವು ಎಂಬುದನ್ನು ಮತ್ತೊಮ್ಮೆ ಪರಾಮರ್ಶಿಸಿ ಆ ಬಳಿಕದ ಸಾಧನೆ ಮತ್ತು ವೈಫಲ್ಯಗಳ ತುಲನೆ ಮಾಡಬೇಕಾಗುತ್ತದೆ. ಆ ಗುರಿಗಳ ಬಗ್ಗೆ ಎರಡು ಪ್ರಮುಖ ದಾಖಲೆಗಳು ಬೆಳಕು ಚೆಲ್ಲುತ್ತವೆ. 

ಭವಿತವ್ಯದೊಡನೆ ಅನುಸಂಧಾನ:

ಒಂದನೆಯದು, 1947 ಆಗಸ್ಟ್ 14-15ರ ನಡುರಾತ್ರಿ, ನವಭಾರತದ ಸಂವಿಧಾನ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಾಡಿದ ಚಾರಿತ್ರಿಕ ಭಾಷಣ, ‘ಭವಿತವ್ಯದೊಡನೆ ಅನುಸಂಧಾನ’ (A Tryst with Destiny). 

ವಿಶ್ವದಲ್ಲಿ ಅತಿ ಶ್ರೇಷ್ಠವಾದ ಭಾಷಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ನೆಹರೂ ಅವರ ಅಂದಿನ ಭಾಷಣವು ಹೊಸ ದೇಶದ ಆಶಯಗಳನ್ನು ಅತ್ಯಂತ ಚುಟುಕಾಗಿ ಆದರೆ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಪ್ರತಿಪಾದಿಸಿತ್ತು. ಅದರಲ್ಲಿ ಅಡಕವಾದ ಎರಡು ವಿಷಯಗಳು ಈ ಸಂದರ್ಭದಲ್ಲಿ ಉಲ್ಲೇಖನೀಯ. ಅವುಗಳಲ್ಲಿ ಒಂದು ಹೊಸ ದೇಶದ ಗುರಿಯನ್ನು ಪ್ರತಿಪಾದಿಸುತ್ತದೆ: ‘‘ಭಾರತದ ಸೇವೆ ಎಂದರೆ ಲಕ್ಷಾಂತರ ಮಂದಿ ಸಂಕಷ್ಟಗೊಳಗಾದವರ ಸೇವೆ. ಇದರ ಅರ್ಥ ದಾರಿದ್ರ್ಯ, ಅಜ್ಞಾನ, ರೋಗರುಜಿನಗಳು ಮತ್ತು ಅವಕಾಶಗಳ ಅಸಮಾನತೆಗಳನ್ನು ದೂರೀಕರಿಸುವುದು. ನಮ್ಮ ಪೀಳಿಗೆಯ ಶ್ರೇಷ್ಠ ಮಾನವನ (ಗಾಂಧೀಜಿಯವರ) ಮಹತ್ವಾಕಾಂಕ್ಷೆಯೆಂದರೆ ಪ್ರತಿಯೊಂದು ಕಣ್ಣಿನ ನೀರನ್ನು ಒರೆಸುವುದಾಗಿದೆ.’’ ಇನ್ನೊಂದು ಈ ಗುರಿಯನ್ನು ಸಾಧಿಸಲು ಅಗತ್ಯವಾದ ಮಾರ್ಗವನ್ನು ವಿಷದೀಕರಿಸುತ್ತದೆ.

‘‘ನಾವು ಸಮೃದ್ಧಿಹೊಂದಿದ, ಪ್ರಜಾಸತ್ತಾತ್ಮಕ, ಪ್ರಗತಿಪರ ರಾಷ್ಟ್ರವನ್ನು ರಚಿಸಬೇಕು ಹಾಗೂ ಪ್ರತಿಯೋರ್ವ ಸ್ತ್ರೀ ಮತ್ತು ಪುರುಷರಿಗೆ ನ್ಯಾಯವನ್ನು ದೊರಕಿಸುವ ಸಾಮರ್ಥ್ಯವನ್ನು ಹೊಂದಿದ ಮತ್ತು ಸಂಪೂರ್ಣವಾದ ಜೀವನ ನಡೆಸುವ ಪರಿಸ್ಥಿತಿಯನ್ನು ಬೆಳೆಸಲು ಶಕ್ತವಾಗುವ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಕಲ್ಪಿಸಬೇಕು.’’

ಹೊಸ ಸಂವಿಧಾನ:

ಎರಡನೆಯ ದಾಖಲೆ 1949 ನವೆಂಬರ್ 26ರಂದು ಅನುಮೋದಿಸಲ್ಪಟ್ಟ ಭಾರತದ ಸಂವಿಧಾನ.

1947ರಲ್ಲಿ ಭಾರತವು ವಿದೇಶಿ ಅರಸೊತ್ತಿಗೆಯಿಂದ ಮುಕ್ತವಾದರೂ ಶತಮಾನಗಳಿಂದ ಆಳವಾಗಿ ಬೇರೂರಿದ್ದ ರಾಜತ್ವದ ಆಳ್ವಿಕೆಯ ಮನೋಭಾವವನ್ನು ಬದಲಾಯಿಸುವುದು ದುಸ್ಸಾಧ್ಯವಾಗಿತ್ತು. ಹೊಸ ಮನ್ವಂತರವನ್ನು ಪ್ರವೇಶಿಸುವಾಗ ರಾಜತ್ವವನ್ನು ಕಿತ್ತೊಗೆದು ಪ್ರಜೆಗಳು ತಾವು ಆಯ್ದ ಪ್ರತಿನಿಧಿಗಳ ಮೂಲಕ ರಾಜ್ಯಭಾರ ನಡೆಸುವ ಸ್ವತಂತ್ರ ವ್ಯವಸ್ಥೆ ದೇಶಕ್ಕೆ ಅಗತ್ಯವಾಗಿತ್ತು. ಡಾ. ಬಿ.ಆರ್. ಅಂಬೇಡ್ಕರ್‌ರ ನೇತೃತ್ವದಲ್ಲಿ ಹೊಸತಾಗಿ ರಚಿತವಾದ ಸಂವಿಧಾನವು ಜನರ ಆಶೋತ್ತರಗಳನ್ನು ದಾಖಲಿಸುತ್ತಾ ಅವುಗಳನ್ನು ಸಾಕಾರಗೊಳಿಸುವ ದಾರಿಯನ್ನೂ ತೋರಿಸಿಕೊಟ್ಟಿತು. ಸಂವಿಧಾನದ ಪ್ರಸ್ತಾವನೆಯಲ್ಲಿ ಹೊಸ ವ್ಯವಸ್ಥೆಯ ಸ್ವರೂಪ ಮತ್ತು ಅದನ್ನು ಸಾಧಿಸುವ ದಾರಿ ಇವೆರಡೂ ಉಲ್ಲೇಖಿಸಲ್ಪಟ್ಟಿವೆ. ಪ್ರಸ್ತಾವನೆಯ ಪ್ರಕಾರ, ಭಾರತದಲ್ಲಿ ಸಾರ್ವಭೌಮ ಗಣರಾಜ್ಯ ಸ್ಥಾಪನೆಯಾಗಬೇಕು. ಅದನ್ನು ನಡೆಸುವವರು ಸಾಮಾನ್ಯ ಜನರೇ. ಎಲ್ಲ ಭಾರತೀಯರು ಸಹೋದರರು. ಆ ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಳ್ಳಬೇಕು. ನ್ಯಾಯ, ಸ್ವಾತಂತ್ರ, ಸಮಾನತೆ, ಧರ್ಮನಿರಪೇಕ್ಷತೆ, ಸಹೋದರತೆಗಳು ಹೊಸ ವ್ಯವಸ್ಥೆಯ ಆಧಾರ ಸ್ತಂಭಗಳಾಗಬೇಕು, ಅವು ಸರ್ವರಿಗೂ ಲಭ್ಯವಾಗಬೇಕು-ಇವುಗಳು ಪ್ರಸ್ತಾವನೆಯ ಸಾರ.

ಇವುಗಳನ್ನು ಅನುಷ್ಠಾನಗೊಳಿಸಲು ಬೇಕಾದ ವ್ಯವಸ್ಥೆಯನ್ನು ಹೊಸ ಸಂವಿಧಾನ ತನ್ನ 22 ಅಧ್ಯಾಯಗಳಲ್ಲಿ ವಿಸ್ತಾರವಾಗಿ ರೂಪಿಸಿತು.

ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟ ಆಶಯಗಳು ಮತ್ತು ಅವುಗಳನ್ನು ಸಾಧಿಸಲು ಹಾಕಿಕೊಟ್ಟ ವ್ಯವಸ್ಥೆಯನ್ನು ಪರಿಶೀಲಿಸಿದಾಗ ನಾಲ್ಕು ಪ್ರಮುಖ ನೀತಿಗಳು ಹೊರಹೊಮ್ಮುತ್ತವೆ: ರಾಜನೀತಿ, ಸಮಾಜನೀತಿ, ಅರ್ಥನೀತಿ ಮತ್ತು ಅಹಿಂಸಾನೀತಿ. ನಾಲ್ಕು ನೀತಿಗಳು ಏನನ್ನು ಪ್ರತಿಪಾದಿಸುತ್ತವೆ? 

1947ರಲ್ಲಿ ದೇಶಕ್ಕೆ ಸಿಕ್ಕಿದ ಸ್ವಾತಂತ್ರ ಕೇವಲ ರಾಜಕೀಯ ಸ್ವರೂಪದ್ದಾಗಿತ್ತು. ಆ ಮುಕ್ತಿ ಪ್ರಜೆಗಳ ಶ್ರೇಯೋಭಿವೃದ್ಧಿಗೆ ಒಂದು ದಾರಿ ಎಂಬುದನ್ನು ಸ್ವಾತಂತ್ರ ಹೋರಾಟದ ನಾಯಕರು ಬಹುತೇಕ ಅರಿತುಕೊಂಡಿದ್ದರು. ಹೊಸ ದೇಶಕ್ಕೆ ಒಂದು ಸ್ಥಿರವಾದ, ಸರ್ವರನ್ನೂ ಒಳಗೊಂಡ ವ್ಯವಸ್ಥೆಯನ್ನು ಸಂವಿಧಾನದಲ್ಲಿ ನಿರೂಪಿಸಿದರು. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಸರಕಾರವನ್ನು ಚುನಾಯಿಸಿಕೊಳ್ಳಬೇಕು ಮತ್ತು ಅವರ ಹಕ್ಕುಗಳ ರಕ್ಷಣೆಯಾಗಬೇಕು. ಇದಕ್ಕೆ ಅಗತ್ಯವಾದ ಪ್ರಮುಖ ಸಂಸ್ಥೆಗಳನ್ನು ಸಂವಿಧಾನ ಸೃಷ್ಟಿಸಿತು. ರಾಷ್ಟ್ರ ಮಟ್ಟದಲ್ಲಿ ಹಾಗೂ ಪ್ರಾಂತೀಯ ಮಟ್ಟದಲ್ಲಿ ಜನರಿಂದ ಚುನಾಯಿತವಾಗಿ ಅವರ ಆಶೋತ್ತರಗಳನ್ನು ಪ್ರತಿಪಾದಿಸುವ ಜವಾಬ್ದಾರಿ ಉಳ್ಳ ಶಾಸಕಾಂಗ, ದೈನಂದಿನ ಆಡಳಿತದ ಜವಾಬ್ದಾರಿ ಹೊಂದಿದ ಕಾರ್ಯಾಂಗ, ಜನರಿಗೆ ನ್ಯಾಯ ದೊರಕಿಸಿಕೊಡಲು ನ್ಯಾಯಾಂಗ -ಇವು ಹೊಸ ‘ರಾಜಧರ್ಮ’ಕ್ಕೆ ಸಾಂಸ್ಥಿಕ ಚೌಕಟ್ಟನ್ನು ಒದಗಿಸಿದವು. ಇವುಗಳಲ್ಲದೆ, ವಿಭಿನ್ನ ಆಡಳಿತಾತ್ಮಕ ಯಂತ್ರವನ್ನೂ ಸಂವಿಧಾನವು ರಚಿಸಿತು. ಒಟ್ಟಿನಲ್ಲಿ ರಾಜತ್ವವನ್ನು ಕೈಬಿಟ್ಟು ಪ್ರಜೆಗಳೇ ಪ್ರಮುಖವಾಗಿರುವ ಹೊಸ ರಾಜನೀತಿಯನ್ನು ಹುಟ್ಟುಹಾಕಿತು. ರಾಜನೀತಿಯಷ್ಟೇ ಅಗತ್ಯವಿತ್ತು ಒಂದು ವಿಶಿಷ್ಟವಾದ ಸಮಾಜನೀತಿ. ಶತಮಾನಗಳ ಬಳುವಳಿಯಾಗಿ ಬಂದ ಜಾತಿ, ಧರ್ಮ, ಲಿಂಗ, ಆಧಾರಿತ ಗೋಡೆಗಳನ್ನು ಕೆಡವಿ, ಸರ್ವಜನಾಂಗದ ಸಮಾನತೆಯನ್ನು ಎತ್ತಿ ಹಿಡಿಯುವ ನೀತಿಯನ್ನು ಸಂವಿಧಾನ ಒತ್ತಿ ಹೇಳಿತು. ಮಾತ್ರವಲ್ಲ ಈ ಧ್ಯೇಯವನ್ನು ಪಾಲಿಸಲು ಅಗತ್ಯವಿದ್ದ ಕಾನೂನುಗಳನ್ನು ಜಾರಿಗೆ ತರಲು ಬೇಕಾದ ಅಧಿಕಾರವನ್ನು ಹೊಸ ಸರಕಾರಕ್ಕೆ ನೀಡಿತು. ಒಂದು ಕಾಲಕ್ಕೆ ಸಂಪದ್ಭರಿತ ದೇಶವೆನಿಸಿಕೊಂಡ ಭಾರತವು ಪರಕೀಯರ ಆಡಳಿತದ ಪರಿಣಾಮವಾಗಿ ಆರ್ಥಿಕವಾಗಿ ತೀರಾ ದುರ್ಬಲವಾಗಿತ್ತು. ಪರಾವಲಂಬಿಯೂ ಆಗಿತ್ತು. ದಾರಿದ್ರ್ಯ, ಹಸಿವು, ರೋಗರುಜಿನಗಳ ಬಾಧೆಯಿಂದ ಸೊರಗಿತ್ತು. ಅಸಮಾನತೆಗಳು ತೀವ್ರವಾಗಿದ್ದವು. ಈ ಬೇಗೆಗಳನ್ನು ಪರಿಹರಿಸುವುದು ಬಹುದೊಡ್ಡ ಸವಾಲೇ ಆಗಿತ್ತು. ದ್ರುತ ಗತಿಯ ಆರ್ಥಿಕ ಪ್ರಗತಿ ಅತ್ಯಂತ ಅಗತ್ಯವಾಗಿದ್ದ ಕಾಲಘಟ್ಟ ಅದು. ಆದರೆ, ದೇಶದ ಮುಂದಿನ ಹಿತದೃಷ್ಟಿಯನ್ನು ಗಮನಿಸಿ, ಸಾಧಿಸಬೇಕಾದ ಪ್ರಗತಿಯು ಆರ್ಥಿಕ ಅಸಮಾನತೆಗಳನ್ನು ಕಡಿಮೆಗೊಳಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಲೇ ಬೇಕಿತ್ತು. ಸಂವಿಧಾನವು ತನ್ನ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಮೂಲಕ, ದೇಶಕ್ಕೆ ಸೂಕ್ತವಾದ ಅರ್ಥನೀತಿಗೆ ಬುನಾದಿಯನ್ನು ಒದಗಿಸಿತು.

 ಈ ಮೂರೂ ನೀತಿಗಳನ್ನು ಕಾರ್ಯರೂಪಕ್ಕೆ ತರಲು ತನ್ನದೇ ಆದ ವಿಶಿಷ್ಟಮಾರ್ಗವನ್ನೂ ದೇಶವು ಆರಿಸಿಕೊಂಡಿತು. ಬುದ್ಧ ಮತ್ತು ಗಾಂಧೀಜಿಯವರು ತೋರಿಸಿದ ಸತ್ಯ ಮತ್ತು ಅಹಿಂಸೆಯ ದಾರಿಯೇ ನಮ್ಮ ದೇಶದ ಮುಂದಿನ ಪಯಣಕ್ಕೆ ಸೂಕ್ತವಾದ ಮಾರ್ಗವಾಗಬೇಕೆಂಬುದು ಅಂದಿನ ಸಂವಿಧಾನಕರ್ತೃಗಳ ಆಶಯವೂ ಆಗಿತ್ತು. ಹೊಸ ರಾಷ್ಟ್ರದ ಲಾಂಛನದ ಅಶೋಕಸ್ತಂಭ, ಧರ್ಮಚಕ್ರ ಮತ್ತು ಧ್ಯೇಯ ವಾಕ್ಯ -‘ಸತ್ಯಮೇವ ಜಯತೆ’ ಈ ದಾರಿಯನ್ನು ಬಿಂಬಿಸಿದ್ದುವು.

75 ವರ್ಷಗಳಲ್ಲಿ ಎಷ್ಟರ ಮಟ್ಟಿಗೆ ಇದನ್ನು ಸಾಧಿಸಿದ್ದೇವೆ?

ರಾಜಕೀಯವಾಗಿ ಭಾರತದ 75 ವರ್ಷಗಳ ಸಾಧನೆ ಅನನ್ಯ ಎಂಬುದರ ಬಗ್ಗೆ ಎರಡು ಮಾತು ಇಲ್ಲ. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಸತ್ತಾತ್ಮಕ ಗಣತಂತ್ರವಾಗಿ 20ನೇ ಶತಮಾನದ ಉತ್ತರಾರ್ಧದಲ್ಲಿ ಭಾರತ ಹೆಸರು ಗಳಿಸಿದೆ. ಮಾತ್ರವಲ್ಲ, ರಾಜಕೀಯ ಸ್ಥಿರತೆಯನ್ನೂ ಕಾಪಾಡಿಕೊಂಡಿದೆ. ನಮ್ಮ ಬಳಿಕ ಸ್ವತಂತ್ರವಾದ ಎಷ್ಟೋ ದೇಶಗಳಲ್ಲಿ ಅಸ್ಥಿರತೆ, ಅರಾಜಕತ್ವ ಇಲ್ಲವೇ ಸರ್ವಾಧಿಕಾರ ಹೊಂದಿದ ಆಧಿಪತ್ಯಗಳು ಮೇಲೆ ಬಂದಿವೆ. ನಮ್ಮ ಸ್ಥಿರತೆಗೆ ಕಾರಣ ಸಂವಿಧಾನ ರೀತ್ಯಾ ರಚಿಸಲ್ಪಟ್ಟ ವಿವಿಧ ಅಂಗಗಳು. 1975-77ರ ಇಂದಿರಾ ಗಾಂಧಿಯವರ ಆಡಳಿತಾವಧಿಯನ್ನು ಹೊರತುಪಡಿಸಿದರೆ ದೇಶವು ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬದ್ಧವಾಗಿತ್ತು. ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಅನೇಕ ಶಾಸನಾತ್ಮಕ ಬದಲಾವಣೆಗಳನ್ನು ರಾಜಕೀಯ ವ್ಯವಸ್ಥೆಯಲ್ಲಿ ತರಲಾಯಿತು.

ರಾಜನೀತಿಗೆ ಪೂರಕವಾಗಿ ಅರ್ಥನೀತಿಯನ್ನೂ ಕಾಲಕಾಲಕ್ಕೆ ಪರಿಷ್ಕರಿಸಿ ಸಮಗ್ರ ಆರ್ಥಿಕ ಪ್ರಗತಿಗೆ ಬುನಾದಿಯನ್ನು ಹಾಕಲಾಯಿತು. ಬ್ಯಾಂಕುಗಳ, ಜೀವ ಮತ್ತು ಸಾಮಾನ್ಯ ವಿಮೆಯ ರಾಷ್ಟ್ರೀಕರಣ, ಪಂಚವಾರ್ಷಿಕ ಯೋಜನೆಗಳ ಮೂಲಕ ಸರ್ವತೋಮುಖ ಪ್ರಗತಿ, ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಗಳು, ಸಾರ್ವಜನಿಕ ರಂಗದಲ್ಲಿ ಬೃಹತ್ ಕೈಗಾರಿಕೋದ್ದಿಮೆಗಳ ಸ್ಥಾಪನೆ, ಸಾರಿಗೆ ಮತ್ತು ಸಂಪರ್ಕಗಳ ಅಭಿವೃದ್ಧಿ, ಹಸಿರು ಕ್ರಾಂತಿಯ ಮೂಲಕ ಆಹಾರ ಪೂರೈಕೆಯಲ್ಲಿ ಸ್ವಾವಲಂಬನೆ, ನಿರಂತರವಾದ ಉದ್ಯೋಗ ಸೃಷ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ದೂರದೃಷ್ಟಿಹೊಂದಿದ ಯೋಜನೆಗಳು ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಭಾರತ ಸಾಕಷ್ಟು ಮುಂದುವರಿಯಿತು. 1947ರಲ್ಲಿ ಅತೀ ಹಿಂದುಳಿದ ರಾಷ್ಟ್ರಗಳಲ್ಲಿ ಒಂದು ಎನ್ನಲಾದ ಭಾರತ ಈ ಸಹಸ್ರಮಾನದ ಆರಂಭದಲ್ಲಿ ಪ್ರಗತಿಶೀಲ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿತು. (ಇವುಗಳಿಗೆ ಪೂರಕವಾದ ಅಂಕಿ ಅಂಶಗಳನ್ನು ನಾನು ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ.)

 ಸಾಮಾಜಿಕವಾಗಿಯೂ ಅನೇಕ ಸುಧಾರಣೆಗಳಾದುವು. ಅಸ್ಪೃಶ್ಯತೆ, ಜಾತಿಭೇದ, ಲೈಂಗಿಕ ತಾರತಮ್ಯ ಮುಂತಾದ ಅನಿಷ್ಠಗಳ ವಿರುದ್ಧ ಕಠಿಣವಾದ ಶಾಸನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಯಿತು. ಸಾಮಾಜಿಕ ಪ್ರಗತಿಗೆ ಅಗತ್ಯವಾದ ಪರಿಸರವನ್ನು ಬೆಳೆಸುವಲ್ಲಿ ಸರ್ವರಿಗೂ ತಳಮಟ್ಟದ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಪ್ರಾಶಸ್ತ್ಯವನ್ನು ನೀಡಲಾಯಿತು. ಒಂದು ಕಾಲಕ್ಕೆ ಕ್ಷಾಮ ಮತ್ತು ಮಹಾಮಾರಿಗಳಿಗೆ ಬಲಿಯಾಗುತ್ತಿದ್ದ ಜನತೆಗೆ ಆಹಾರ ಭದ್ರತೆ ನೀಡಲು ವಿಶೇಷ ಕ್ರಮಗಳನ್ನು ಆರಂಭಿಸಲಾಯಿತು. ರೋಗನಿವಾರಕ ಮುಂಜಾಗರೂಕತಾ ವ್ಯವಸ್ಥೆಗಳಿಗೆ ಹಾಗೂ ಶಿಶುಗಳು ಮತ್ತು ತಾಯಂದಿರ ಕ್ಷೇಮಪಾಲನೆಗೆ ಆದ್ಯತೆ ನೀಡಲಾಯಿತು. ವೈಜ್ಞಾನಿಕ ಮನೋಧರ್ಮದ ಬೆಳವಣಿಗೆಗೆ ಒತ್ತು ಕೊಡಲಾಯಿತು. ಈ ಕ್ರಮಗಳಿಂದಾಗಿ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ನಿರಂತರ ಸುಧಾರಣೆಗಳು ಆದವು. ಈ ಎಲ್ಲಾ ಬದಲಾವಣೆಗಳನ್ನು ಪ್ರಜಾತಂತ್ರದ ಚೌಕಟ್ಟಿನೊಳಗೆ ಅಹಿಂಸಾ ಮಾರ್ಗದಲ್ಲಿಯೇ ತರಲು ಭಾರತ ಯತ್ನಿಸಿತು ಎಂಬುದೂ ಶ್ಲಾಘನೀಯ.

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News