ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ ನಿತೀಶ್ ಕುಮಾರ್

Update: 2022-08-11 05:25 GMT

ಬಿಹಾರದಲ್ಲಿ ಬಿಜೆಪಿ ಈಗ ಒಂಟಿಯಾಗಿದೆ. ದೇಶದಲ್ಲಿ ಬಿಜೆಪಿ ಮತ್ತು ಅದರ ಇತ್ತೀಚಿನ ಕಟು ಹಿಂದುತ್ವವಾದಿ ರಾಜಕೀಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಪಕ್ಷಗಳಿಗೆ ಇಂತಹ ಪ್ರತ್ಯೇಕೀಕರಣ ಅಗತ್ಯವಿರುವುದರಿಂದ, ಬಿಹಾರದ ಈ ರಾಜಕೀಯ ಬೆಳವಣಿಗೆ ಅತ್ಯಂತ ಮಹತ್ವ ಪಡೆದಿದೆ.

ಬಹುಮತ ಇರುವ ಸರಕಾರಗಳನ್ನೇ ಉರುಳಿಸಿ ಅದರ ಶಾಸಕರನ್ನು ತನ್ನತ್ತ ಸೆಳೆದುಕೊಂಡು ತಮ್ಮ ಪಕ್ಷಕ್ಕೆ ಬಹುಮತವೇ ಇಲ್ಲದಿರುವಲ್ಲಿ ತಮ್ಮ ಪಕ್ಷದ ಸರಕಾರ ರಚಿಸುವ ಕಲೆ ಸಿದ್ಧಿಸಿರುವ ಬಿಜಿಪಿಗೆ ಬಿಹಾರದಲ್ಲಿ ಮತ್ತೆ ಶಾಕ್ ಆಗಿದೆ. ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಕಡಿದು ಕೊಂಡಿದ್ದಾರೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್, ಎಡಪಕ್ಷಗಳಿರುವ ಮಹಾಘಟಬಂಧನದ ಜೊತೆ ಮತ್ತೆ ಸೇರಿ ದಾಖಲೆ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಜೆಡಿಯು ನಾಯಕ ನಿತೀಶ್ ಕುಮಾರ್, ಬಿಹಾರದಲ್ಲಿ ಮಾತ್ರವಲ್ಲ, ಇಡೀ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲು ಶಕ್ತವಾದ ಪಲ್ಲಟವೊಂದನ್ನು ಸೃಷ್ಟಿಸಿದ್ದಾರೆ.

ಒಟ್ಟು 243 ಸದಸ್ಯ ಬಲ ಇರುವ ಬಿಹಾರದಲ್ಲಿ ಸರಳ ಬಹುಮತಕ್ಕೆ ಕನಿಷ್ಠ 122 ಸ್ಥಾನಗಳು ಬೇಕು. ಪ್ರಸ್ತುತ ವಿಧಾನ ಸಭೆಯಲ್ಲಿ ಆರ್‌ಜೆಡಿ 79 ಸ್ಥಾನಗಳೊಂದಿಗೆ ಅತೀ ದೊಡ್ಡ ಪಕ್ಷವಾಗಿದ್ದರೆ, 74 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ. ನಿತೀಶ್ ಕುಮಾರ್ ಅವರ ಜೆಡಿಯು ಬಳಿ ಇರುವುದು ಕೇವಲ 43 ಸ್ಥಾನಗಳು. ಉಳಿದಂತೆ ಕಾಂಗ್ರೆಸ್ 19, ಸಿಪಿಐ (ಎಂಎಲ್) 12, ಜೀತನ್ ರಾಂ ಮಾಂಝಿ ಅವರ ಪಕ್ಷ ನಾಲ್ಕು, ಸಿಪಿಐ ಮತ್ತು ಸಿಪಿಎಂ ತಲಾ ಎರಡು ಮತ್ತು ಅಸದುದ್ದೀನ್ ಉವೈಸಿಯವರ ಎಐಎಂಐಎಂಗೆ ಒಂದು ಸ್ಥಾನವಿದೆ. ಈಗ ಬಿಜೆಪಿ ಹೊರತು ಪಡಿಸಿ ಎಲ್ಲರೂ ನಿತೀಶ್ ಕುಮಾರ್ ಅವರ ಸರಕಾರ ಸೇರಿದ್ದಾರೆ; ಇಲ್ಲವೇ ಬಾಹ್ಯ ಬೆಂಬಲ ನೀಡುತ್ತಿದ್ದಾರೆ. ಬಿಹಾರದಲ್ಲಿ ಬಿಜೆಪಿ ಈಗ ಒಂಟಿಯಾಗಿದೆ. ದೇಶದಲ್ಲಿ ಬಿಜೆಪಿ ಮತ್ತು ಅದರ ಇತ್ತೀಚಿನ ಕಟು ಹಿಂದುತ್ವವಾದಿ ರಾಜಕೀಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಪಕ್ಷಗಳಿಗೆ ಇಂತಹ ಪ್ರತ್ಯೇಕೀಕರಣ ಅಗತ್ಯವಿರುವುದರಿಂದ, ಬಿಹಾರದ ಈ ರಾಜಕೀಯ ಬೆಳವಣಿಗೆ ಅತ್ಯಂತ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಆವರನ್ನೇ ಕೇಂದ್ರವಾಗಿಟ್ಟು ಬಿಹಾರದ ರಾಜಕೀಯವನ್ನು ಸ್ವಲ್ಪಗಮನಿಸೋಣ.

ಮೊದಲ ಬಾರಿಗೆ ಕೇಂದ್ರದಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಹಾರದ ರಾಜಕೀಯ ಅಂಗಣದಲ್ಲಿ ಪ್ರಭಾವಿ ರಾಜಕಾರಣಿಗಳಾಗಿ ಬೆಳೆದ ಐವರು ನಾಯಕರು ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಶರದ್ ಯಾದವ್, ಜಾರ್ಜ್ ಫೆರ್ನಾಂಡಿಸ್ ಮತ್ತು ರಾಮ್ ವಿಲಾಸ್ ಪಾಸ್ವಾನ್. ಸಮಾಜವಾದಿ ಹಿನ್ನೆಲೆಯಿಂದ ಬಂದು, ರಾಮ ಮನೋಹರ ಲೋಹಿಯಾ ಆವರ ಪ್ರಭಾವದಲ್ಲಿಯೇ ಬೆಳೆದವರು ನಿತೀಶ್. 1970ರ ದಶಕದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದವರು. ಇವರಲ್ಲಿ ಲಾಲು ಪ್ರಸಾದ್ ಯಾದವ್ ಅವರೊಬ್ಬರು ಮಾತ್ರವೇ ಏನೇ ಬಂದರೂ ಜಗ್ಗದೆ ಬಿಜೆಪಿಯನ್ನು ವಿರೋಧಿಸುತ್ತಾ ಬಂದಿದ್ದರೆ, ಫೆರ್ನಾಂಡಿಸ್, ಪಾಸ್ವಾನ್, ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಬಿಜೆಪಿಯ ಜೊತೆ ಸೇರಿ, ಯಾವುದೇ ಹಿಂಜರಿಕೆ ಇಲ್ಲದೆ ಅಧಿಕಾರ ಅನುಭವಿಸಿದವರು. ಇವರಲ್ಲಿ ಫೆರ್ನಾಂಡಿಸ್ ಮತ್ತು ಪಾಸ್ವಾನ್ ನಿಧನರಾಗಿದ್ದರೆ, ವೃದ್ಧ ಶರದ್ ಯಾದವ್ ಈಗ ಬಹುತೇಕ ನಿಷ್ಕ್ರಿಯರಾಗಿದ್ದಾರೆ. ನಿತೀಶ್ ಕುಮಾರ್ ಇದೀಗ ತನ್ನ ಒಂದು ಕಾಲದ ದೋಸ್ತಿ, ಮತ್ತು ವಿರೋಧಿ ಲಾಲು ಪ್ರಸಾದ್ ಯಾದವ್ ಅವರ ಪಕ್ಷದ ಜೊತೆ ಕೈಜೋಡಿಸಿ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬಂದು, ದಾಖಲೆ ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ವಿಶೇಷ.

ಅವಕಾಶವಾದಿ ರಾಜಕಾರಣಕ್ಕೆ ಇನ್ನೊಂದು ಹೆಸರೇ ನಿತೀಶ್ ಕುಮಾರ್. ಮೈತ್ರಿಕೂಟಗಳನ್ನು ರಚಿಸುವುದು ಮತ್ತು ಮುರಿಯುವುದು ನಿತೀಶ್ ಕುಮಾರ್ ಅವರಿಗೆ ಹೊಸದಲ್ಲ ಎಂಬುದು ಬಿಹಾರದಲ್ಲಿ ಅವರ ರಾಜಕೀಯ ಹೆಜ್ಜೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಬಿಹಾರ ವಿದ್ಯುತ್ ಮಂಡಳಿಯಲ್ಲಿ ಇಂಜಿನಿಯರ್ ಆಗಿದ್ದ ಅವರು, ಆ ಕೆಲಸ ಬಿಟ್ಟು ಸಕ್ರಿಯ ರಾಜಕಾರಣಕ್ಕೆ ಬಂದರು. 1985ರಲ್ಲಿ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದ ಅವರು, 1994ರಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರ ಜೊತೆ ಸೇರಿ ಸಮತಾ ಪಕ್ಷ ಸ್ಥಾಪಿಸಿದರು. 1994ರಲ್ಲಿ ಲೋಕಸಭೆಗೆ ಆಯ್ಕೆಯಾದ ಅವರು, ಎನ್‌ಡಿಎ ಸೇರಿ, ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ರೈಲ್ವೆ ಮಂತ್ರಿಯಾದರು. ಇತ್ತೀಚಿನ ವರ್ಷಗಳಲ್ಲಿ ಸುಶಾಸನ ಅಂದರೆ ಉತ್ತಮ ಆಡಳಿತ ಎಂಬ ಘೋಷಣೆಯಲ್ಲಿಯೇ ಬಿಹಾರದಲ್ಲಿ ಅಧಿಕಾರ ನಡೆಸುತ್ತಾ ಬಂದಿರುವ ನಿತೀಶ್ ಕುಮಾರ್, ತಾನು ದಕ್ಷ ಆಡಳಿತಗಾರ ಎಂದು ಆಗಲೇ ತೋರಿಸಿಕೊಟ್ಟಿದ್ದರು. ಕಂಪ್ಯೂಟರೀಕೃತ ಸೀಟು ಕಾದಿರಿಸುವುದು ಮುಂತಾದ ಕೆಲವು ರೈಲ್ವೆ ಸುಧಾರಣಾ ಕ್ರಮಗಳು ಆರಂಭವಾದುದು ಅವರ ಕಾಲದಲ್ಲೇ. 2000ದಲ್ಲಿ ಅವರು ಮುಖ್ಯಮಂತ್ರಿ ಆದರೂ, ಎನ್‌ಡಿಎಗೆ ಬಹುಮತ ಇಲ್ಲದ ಕಾರಣ ಆರ್‌ಜೆಡಿಗೆ ದಾರಿಮಾಡಿ ಕೊಡಬೇಕಾಯಿತು. 2003ರಲ್ಲಿ ಅವರ ಪಕ್ಷವು ಶರದ್ ಯಾದವ್ ಅವರ ಸಂಯುಕ್ತ ಜನತಾದಳದ ಜೊತೆಗೆ ವಿಲೀನವಾಗಿ ನಿತೀಶ್ ಕುಮಾರ್ ಅದರ ನಾಯಕರಾದರು.

2005ರಲ್ಲಿ ಎನ್‌ಡಿಎ ಬಿಹಾರ ವಿಧಾನಸಭೆಯಲ್ಲಿ ಬಹುಮತ ಪಡೆದು, ಬಿಜೆಪಿಯ ಜೊತೆ ಮೈತ್ರಿಯಿಂದ ಮುಖ್ಯಮಂತ್ರಿಯಾದರು. ಆ ಅವಧಿಯಲ್ಲಿ ಬಿಹಾರವನ್ನು ಸಾಕಷ್ಟು ಅಭಿವೃದ್ಧಿಪಡಿಸಿದ ಶ್ರೇಯವನ್ನು ಅವರಿಗೆ ನೀಡಲಾಗುತ್ತದೆ. 2010ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದು ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ, 2013ರ ಜೂನ್ ತಿಂಗಳಲ್ಲಿ ಬಿಜೆಪಿಯು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ ನಿತೀಶ್ ಮೈತ್ರಿಕೂಟದಿಂದ ಹೊರಬಂದು, ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಸೇರಿಕೊಂಡು ಮಹಾ ಘಟಬಂಧನ ರಚಿಸಿ ಮತ್ತೆ ಮುಖ್ಯಮಂತ್ರಿ ಆದರು. 2014ರ ಚುನಾವಣೆಯಲ್ಲಿ ಜೆಡಿಯು ಭಾರೀ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಅವರು ಮೇ ತಿಂಗಳಲ್ಲಿ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದರು. ಅವರ ಜಾಗಕ್ಕೆ ಜೀತನ್ ರಾಂ ಮಾಂಝಿ ಅವರು ಬಂದರು. 2015ರಲ್ಲಿ ಅವರು ಮತ್ತೆ ಮುಖ್ಯಮಂತ್ರಿ ಆಗುವ ಪ್ರಯತ್ನ ಮಾಡಿದ್ದು ದೊಡ್ಡ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಯಿತು. ಕೊನೆಗೂ ಮಾಂಝಿ ರಾಜೀನಾಮೆ ನೀಡಿ, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾದರು. ಆ ವರ್ಷದ ಕೊನೆಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾ ಘಟಬಂಧನವು ದೊಡ್ಡ ಬಹುಮತ ಪಡೆಯಿತು. ಆದರೆ, 2017ರಲ್ಲಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರ ಹೆಸರು ಹಗರಣವೊಂದರಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಘಟಬಂಧನದಿಂದ ಹೊರಬಂದು ಆರ್‌ಜೆಡಿಯೊಂದಿಗೆ ಸಂಬಂಧ ಮುರಿದರು. ಅದರೆ, ಮತ್ತೆ ಎನ್‌ಡಿಎ ಸೇರಿ, ಮುಖ್ಯಮಂತ್ರಿಯಾಗಿ ಮುಂದುವರಿದರು. 2020ರ ಚುನಾವಣೆಯಲ್ಲಿ ಆವರು ಬಿಜೆಪಿ ಜೊತೆ ಸೇರಿ, ಹಾಗೋ ಹೀಗೋ, ಆಲ್ಪಅಂತರದ ಬಹುಮತ ಪಡೆದು ಮುಖ್ಯಮಂತ್ರಿಯಾದರು. ಇದೀಗ ಮತ್ತೆ ಮಹಾ ಘಟಬಂಧನ ಸೇರಿ ದಾಖಲೆ ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿ ಆಗಿದ್ದಾರೆ.

ಹಿಂದುಳಿದ ಕುರ್ಮಿ ಸಮುದಾಯಕ್ಕೆ ಸೇರಿದ ನಿತೀಶ್ ಕುಮಾರ್ ಹಿಂದುಳಿದ ವರ್ಗಗಳ ಮತ್ತು ದಲಿತರ ಪರವಾಗಿ ದುಡಿಯುವವರು ಎಂಬ ಇಮೇಜು ರಾಷ್ಟ್ರೀಯ ಮಟ್ಟದಲ್ಲಿ ಇದ್ದರೂ, ಅವರು ಯಾವುದೇ ಹಿಂಜರಿಕೆ ಇಲ್ಲದೇ ಬಿಜೆಪಿಯ ಜೊತೆಗೆ ಎರಡೆರಡು ಬಾರಿ ಕೈಜೋಡಿಸಿ ಅಧಿಕಾರ ಹಿಡಿದುದರಿಂದ ಮತ್ತು ಅದಕ್ಕಾಗಿ ಜಾತ್ಯತೀತರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದ್ದ ಮಹಾ ಘಟಬಂಧನಕ್ಕೇ ದ್ರೋಹ ಬಗೆದುದರಿಂದ ಅವರ ಬಗ್ಗೆ ಸಮಾಜವಾದಿ ಮತ್ತು ಜಾತ್ಯತೀತ ಶಕ್ತಿಗಳಿಗೆ ಆಸಮಾಧಾನ, ಸಿಟ್ಟು ಮತ್ತು ಅಪನಂಬಿಕೆ ಇದೆ. ಅಷ್ಟರ ಮಟ್ಟಿಗೆ ಅವರ ಪ್ರಭಾವ ಕುಂದಿದೆ. ಅವರ ಒಂದು ಹೆಗ್ಗಳಿಕೆ ಎಂದರೆ, ಅವರು ಎನ್‌ಡಿಎಯಲ್ಲಿ ಇದ್ದರೂ, ಬಿಜೆಪಿಯು ಯಾವತ್ತೂ ತನ್ನ ಮೇಲೆ ಸವಾರಿ ಮಾಡಲು ಬಿಡಲಿಲ್ಲ ಮತ್ತು ತೀವ್ರವಾದಿ ಕೋಮುಶಕ್ತಿಗಳಿಗೆ ಉತ್ತರಪ್ರದೇಶದಂತೆ ಬಿಹಾರದಲ್ಲಿ ಮಂಗಾಟವಾಡಲು ಹೆಚ್ಚು ಅವಕಾಶ ನೀಡಲಿಲ್ಲ.

 ನಿತೀಶ್ ಕುಮಾರ್ ಅವರು ಈಗ ಏಕಾಏಕಿಯಾಗಿ ಬಿಜೆಪಿ ಜೊತೆಗೆ ಸಂಬಂಧ ಕಡಿದುಕೊಂಡು ಮಹಾ ಘಟಬಂಧನ ಸೇರಲು ಕಾರಣವೇನು? ಬಿಜೆಪಿಯು ಜೆಡಿಯುವನ್ನು ದುರ್ಬಲಗೊಳಿಸಿದೆ ಎಂಬುದು ಅವರ ಆರೋಪ. ಬಿಜೆಪಿ ಇದನ್ನು ನಿರಾಕರಿಸಿದೆ. ಆದರೆ, ಈ ನಿರಾಕರಣೆ ಪೊಳ್ಳು ಎಂಬುದು ನಿತೀಶ್ ಕುಮಾರ್ ಅವರಂತಹ ಚಾಣಾಕ್ಷ ರಾಜಕಾರಣಿಗೆ ಗೊತ್ತಾಗದಿರುವ ವಿಷಯವಲ್ಲ. ಹಿಂದಿನ ವಿಧಾನಸಭೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿದ್ದ ಜೆಡಿಯು, ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದಿತ್ತು. 115 ಸ್ಥಾನಗಳಿಗೆ ಸ್ಪರ್ಧಿಸಿದ್ದ ಅದು, ಕೇವಲ 43 ಸ್ಥಾನಗಳನ್ನು ಗೆದ್ದರೆ, 110 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 74 ಸ್ಥಾನಗಳನ್ನು ಗೆದ್ದಿತ್ತು. ಇದಕ್ಕೆ ಕಾರಣ ಬಿಜೆಪಿಯು ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ಜೊತೆ ಮಾಡಿಕೊಂಡ ಒಪ್ಪಂದ. ಆ ಪಕ್ಷವು ಬಿಜೆಪಿ ಗೆಲ್ಲಬಹುದಾದ ಕಡೆ ಸ್ಪರ್ಧಿಸದೆ, ಜೆಡಿಯು ಗೆಲ್ಲಬಹುದಾದ ಕಡೆ ಮಾತ್ರ ಸ್ಪರ್ಧಿಸಿ, ದಲಿತ ಮತಗಳನ್ನು ಒಡೆದಿತ್ತು. ಇದೀಗ ಬಿಜೆಪಿ ಚಿರಾಗ್ ಪಕ್ಷವನ್ನೇ ಚಿಂದಿ ಮಾಡಿದೆ. ಅದು ಬೇರೆಯೇ ವಿಷಯ. ತಾನು ಆಶ್ರಯ ಪಡೆದ ಮನೆಯನ್ನೇ ಕಬಳಿಸುವ ಬಿಜೆಪಿಯ ಈ ಕುತಂತ್ರ ಹೊಸದೇನಲ್ಲ. ಗೋವಾದಲ್ಲಿ ಪ್ರಬಲವಾಗಿದ್ದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಪಂಜಾಬಿನ ಅಕಾಲಿ ದಳ, ಕರ್ನಾಟಕದಲ್ಲಿ ಜನತಾದಳದಿಂದ ಹಿಡಿದು, ಮಹಾರಾಷ್ಟ್ರದ ಶಿವಸೇನೆಯ ತನಕ, ಈಶಾನ್ಯ ರಾಜ್ಯಗಳೂ ಸೇರಿದಂತೆ ಬಿಜೆಪಿಯ ಸಖ್ಯ ಮಾಡಿದ ಎಲ್ಲ ಪ್ರಾದೇಶಿಕ ಪಕ್ಷಗಳಿಗೂ ಅದರ ಕುಟಿಲ ತಂತ್ರಗಳ ಅರಿವಾಗಿದೆ. ನಿತೀಶ್ ಇದನ್ನು ತಡವಾಗಿಯಾದರೂ ಮನಗಂಡಿದ್ದಾರೆ.

ಇನ್ನು ನಿತೀಶ್ ನಮಗೆ ಕೈ ಕೊಡಲಿದ್ದಾರೆ ಎಂಬ ಸುಳಿವು ಬಿಜೆಪಿ ವರಿಷ್ಠರಿಗೂ ಮೊದಲೇ ಇತ್ತು. ಆದರೆ ಅವರು ಮುಂದೆ ಬಿಹಾರದಲ್ಲಿ ಏಕಾಂಗಿಯಾಗಿಯೇ ಬೆಳೆಯಲು ನಿರ್ಧರಿಸುವುದರಿಂದ ಹೋಗುವುದಿದ್ದರೆ ಹೋಗಲಿ ಎಂದೇ ಬಿಟ್ಟು ಬಿಟ್ಟರು ಎಂದೂ ಹೇಳಲಾಗುತ್ತಿದೆ. ಬಿಹಾರದ ಬೆಳವಣಿಗೆಗಳಿಂದ ರಾಷ್ಟ್ರ ರಾಜಕಾರಣದ ಮೇಲೆ ಯಾವ ಪರಿಣಾಮ ಆಗಬಹುದು? ಮೊದಲನೆಯದಾಗಿ ಬಿಜೆಪಿಯನ್ನು ಒಬ್ಬಂಟಿಯನ್ನಾಗಿ ಮಾಡುವುದು ಬಿಹಾರದಲ್ಲಿ ಇದೀಗ ಸಾಧ್ಯವಾಗಿದೆ. ಇನ್ನೊಂದು, ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಮತ್ತು ಮೈತ್ರಿ ರಾಜಕೀಯ ಸರಕಾರಗಳಿಗೆ ಚಾಲನೆ. ಇಂದು ದಿಲ್ಲಿ, ಪಂಜಾಬ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಒಡಿಶಾ, ಈಶಾನ್ಯ ರಾಜ್ಯಗಳು, ಹಾಗೆ ನೋಡಿದರೆ ಕೇರಳದಲ್ಲಿಯೂ ಪ್ರಾದೇಶಿಕ ಪಕ್ಷಗಳೇ ಆಡಳಿತ ನಡೆಸುತ್ತಿವೆ. ಬಹುತೇಕ ರಾಜ್ಯಗಳಲ್ಲಿ ಸಮ್ಮಿಶ್ರ ಮೈತ್ರಿ ಸರಕಾರಗಳೇ ಇವೆ. ಒಕ್ಕೂಟ ರಾಜಕೀಯಕ್ಕೆ ಪೂರಕವಾಗಿರುವ ಈ ಬೆಳವಣಿಗೆ, ಬಿಜೆಪಿಯ ಕೇಂದ್ರೀಕೃತ ಆಡಳಿತದ ದುರುದ್ದೇಶಗಳಿಗೆ ವಿರುದ್ಧವಾಗಿದೆ. ಬಿಹಾರದಲ್ಲೀಗ ಅತ್ಯಂತ ದೊಡ್ಡ ಪಕ್ಷವಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಹೇಳಿರುವ ಮಾತನ್ನು ಗಮನಿಸಬೇಕು. ಕೇವಲ 43 ಸ್ಥಾನಗಳಿರುವ ಜೆಡಿಯುಗೆ 79 ಸ್ಥಾನಗಳನ್ನು ಪಡೆದ ಆರ್‌ಜೆಡಿ ಅಧಿಕಾರ ಬಿಟ್ಟು ಕೊಡುವ ಬಗ್ಗೆ ಅವರ ಮಾತುಗಳು ಇವು: ‘‘ನಿತೀಶ್ ಬಿಜೆಪಿ ಸಖ್ಯ ಬಿಟ್ಟು ಹೊರಬರುತ್ತಾರೆ ಎಂದರೆ, ಅವರನ್ನು ಬೆಂಬಲಿಸದೆ ನಮಗೆ ಬೇರೆ ದಾರಿಯೇನಿದೆ?’’ ಬಿಜೆಪಿಯೇ ಮೊದಲ ಶತ್ರು. ಉಳಿದೆಲ್ಲವೂ ಗೌಣ ಎಂಬುದು ಅವರ ಇಂಗಿತ. ಇಂತಹ ನಿಲುವು ಮತ್ತು ಉದಾರತೆಯನ್ನು ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳು ತೋರಿಸುವುದಿಲ್ಲ ಎಂಬುದು ಬೇರೆ ಮಾತು. ಇನ್ನು ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಹಾಗೂ ನಿತೀಶ್ ಮೈತ್ರಿ ಮುಂದಿನ ಮೂರು ವರ್ಷ ಬರಲಿರುವ ಅಥವಾ ಬಿಜೆಪಿ ತಂದೊಡ್ಡುವ ಸವಾಲುಗಳನ್ನು ಗಟ್ಟಿಯಾಗಿ ಎದುರಿಸಿ ಉಳಿಯುವುದೇ ಎಂಬ ಪ್ರಶ್ನೆಯೂ ಇದ್ದೇ ಇದೆ. 2024 ರ ಲೋಕಸಭಾ ಚುನಾವಣೆಗೆ ಹೊಸ ಸಾಧ್ಯತೆಯೊಂದನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ತೋರಿಸಿಕೊಟ್ಟಿದ್ದಾರೆ. ಅದನ್ನು ವಿಪಕ್ಷಗಳು ಎಷ್ಟು ಬಳಸಿಕೊಳ್ಳುತ್ತವೆ ಎಂಬುದನ್ನು ಕಾಲವೇ ಹೇಳಬೇಕು.

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News