ಬುಲೆಟ್ ರೈಲಿಗಾಗಿ ಭೂಮಿ ಕಳೆದುಕೊಳ್ಳುತ್ತಿರುವ ಮಹಾರಾಷ್ಟ್ರದ ಬಡಪಾಯಿ ಗ್ರಾಮಸ್ಥರು!

Update: 2022-08-11 12:34 GMT

ದಭೋಲೆ ಗ್ರಾಮವು ಹಚ್ಚಹಸಿರಿನಿಂದ ಕಂಗೊಳಿಸುವ ಮಹಾರಾಷ್ಟ್ರದ ಒಂದು ಪುಟ್ಟ ಗ್ರಾಮ. ಮೋದಿ ಸರಕಾರದ ಶೋಪೀಸ್ ಎನಿಸಿರುವ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಯನ್ನು  ವಿರೋಧಿಸಿದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಅನೇಕ ಹಳ್ಳಿಗಳ ಪೈಕಿ ಈ ಗ್ರಾಮವೂ ಒಂದಾಗಿದೆ.

ಆದಾಗ್ಯೂ, 2021ರ ನವೆಂಬರ್‌ನಲ್ಲಿ ದಭೋಲೆ ಗ್ರಾಮಪಂಚಾಯತ್ ಯೋಜನೆಯ ಪರವಾಗಿ  ಔಪಚಾರಿಕ ನಿರ್ಣಯವೊಂದನ್ನು  ಅಂಗೀಕರಿಸಿತು ಹಾಗೂ ಭೂಸ್ವಾಧೀನಕ್ಕೆ ಬೆಂಬಲ ವ್ಯಕ್ತಪಡಿಸಿ ಪತ್ರವೊಂದನ್ನು ಸಲ್ಲಿಸಿತು.

ಕಳೆದ ಎರಡು ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 1.1 ಲಕ್ಷ ಕೋಟಿ ರೂ. ಯೋಜನೆಯ ಬುಲೆಟ್ ರೈಲು ಯೋಜನೆಗಾಗಿ ಖಾಸಗಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯು ನಿಧಾನವಾಗಿಯಾದರೂ, ಸ್ಥಿರವಾಗಿ ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಶಿವಸೇನೆ ತೀವ್ರವಾಗಿ ವಿರೋಧಿಸುತ್ತಿದ್ದು, ಗುಜರಾತಿನ ಉದ್ಯಮಿಗಳಿಗೆ ಪ್ರಯೋಜನವಾಗುವುದಕ್ಕಾಗಿ ಈ ಅನಗತ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಟೀಕಿಸುತ್ತಾ ಬಂದಿದೆ. ಥಾಣೆ ಹಾಗೂ ಪಾಲ್ಘರ್ ಜಿಲ್ಲೆಯ ಬುಡಕಟ್ಟು ಜನರಿಂದಲೂ ಯೋಜನೆಗೆ ವಿರೋಧ ವ್ಯಕ್ತವಾಗಿದೆ.

508 ಕಿ.ಮೀ. ವಿಸ್ತೀರ್ಣದ ಈ ಯೋಜನೆಯನ್ನು ಅನುಷ್ಠಾಗೊಳಿಸುವ ಪ್ರಾಧಿಕಾರವಾದ ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್), ಗುಜರಾತ್‌ನಲ್ಲಿ ಅಗತ್ಯವಿರುವ ಶೇ.99ರಷ್ಟು ಜಮೀನನ್ನು ಖರೀದಿಸಿದೆ. ಕೇಂದ್ರಾಡಳಿತವಾದ ದಾದ್ರಾ ಹಾಗೂ ನಗರ ಹವೇಲಿ ಮತ್ತು ದಾಮನ್-ದಿಯುಗಳಲ್ಲಿ ಶೇ. 100, ಮಹಾರಾಷ್ಟ್ರದಲ್ಲಿ ಶೇ.71ರಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ನಿಗಮವು  ಬಿಡುಗಡೆಗೊಳಿಸಿರುವ ದತ್ತಾಂಶದಿಂದ ತಿಳಿದುಬರುತ್ತದೆ.

ಮಹಾರಾಷ್ಟ್ರ ರಾಜ್ಯದ ಮಟ್ಟಿಗೆ ಹೇಳುವುದಾದರೆ ಎನ್‌ಎಚ್‌ಎಸ್‌ಆರ್‌ಸಿಎಲ್‌ಗೆ ಪಾಲ್ಘಾರ್ ಜಿಲ್ಲೆಯಲ್ಲಿ ಗರಿಷ್ಠ ಜಮೀನಿನ ಅಗತ್ಯವಿದೆ. ಆ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.30ರಷ್ಟು ಮಂದಿ ಬುಡಕಟ್ಟು  ಸಮುದಾಯದವರು.

ಮಹಾರಾಷ್ಟ್ರದಲ್ಲಿ ಎನ್‌ಎಚ್‌ಎಸ್‌ಆರ್‌ಸಿಎಲ್‌ಗೆ 433.82 ಹೆಕ್ಟೇರ್ ಜಮೀನಿನ ಅಗತ್ಯವಿದ್ದು, ಆ ಪೈಕಿ 287.74 ಹೆಕ್ಟೇರ್ ಅಂದರೆ ಶೇ.66ರಷ್ಟು ಜಮೀನು ಪಾಲ್ಘಾರ್ ಜಿಲ್ಲೆಯಲ್ಲಿದೆ. ಆದಾಗ್ಯೂ ಎನ್‌ಎಚ್‌ಎಸ್‌ಆರ್‌ಸಿಎಲ್, 198.6 ಹೆಕ್ಟೇರ್ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ ಇದು ಜಿಲ್ಲೆಯಲ್ಲಿ ಅದಕ್ಕೆ ಅಗತ್ಯವಿರುವ ಒಟ್ಟು ಜಮೀನಿನ ಶೇ.70ರಷ್ಟಾಗಿದೆ.

ಜಿಲ್ಲಾಡಳಿತದ ಅಧಿಕಾರಿಗಳು ಜಮೀನು ಖರೀದಿಗಾಗಿ, ಒಬ್ಬೊಬ್ಬರೇ ಭೂಮಾಲಕರನ್ನು ಗುರಿಯಿರಿಸಿರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ವೇಗವನ್ನು ಪಡೆದುಕೊಂಡಿದೆಯೆಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ಇಡೀ ಗ್ರಾಮಸ್ಥರನ್ನು ಒಮ್ಮೆಗೆ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು  ಜಿಲ್ಲಾಡಳಿತವು ಜನರ ಸಣ್ಣ ಗುಂಪುಗಳನ್ನು ಹಣದ ಆಮಿಷವೊಡ್ಡಿ ಯೋಜನೆಯ ಪರವಾಗಿ ಪರಿವರ್ತನೆಗೊಳಿಸಲು ಯತ್ನಿಸುತ್ತಿದ್ದಾರೆ.

‘‘ಬುಲೆಟ್ ರೈಲು ಯೋಜನೆಗಾಗಿನ ಭೂಸ್ವಾಧೀನ ಪ್ರಕ್ರಿಯೆಯು ಲಾಕ್‌ಡೌನ್ ಸಂದರ್ಭದಲ್ಲಿ ಚುರುಕುಗೊಂಡಿತು. ಆ ಸಮಯದಲ್ಲಿ ಜನರು ಅಸಹಾಯಕರಾಗಿದ್ದರು ಹಾಗೂ ತಮಗೆ ನೀಡಲಾದ ಹಣದ ಆಮಿಷಕ್ಕೆ ಮರುಳಾದರು. ವಿಶೇಷವಾಗಿ ಜಿಲ್ಲಾಡಳಿತವು ಇಲ್ಲಿ ವಾಸವಾಗಿರದ ಭೂಮಾಲಕರನ್ನು ಮೊದಲಿಗೆ ಗುರಿಯಿರಿಸಿತ್ತು ಹಾಗೂ ಭೂಸ್ವಾಧೀನಕ್ಕೆ ಅವರ ಒಪ್ಪಿಗೆಯನ್ನು ಪಡೆಯಿತು. ಹೀಗೆ ಸಮ್ಮತಿ ಪತ್ರಗಳ ರಾಶಿ ಏರುತ್ತಾಹೋದಂತೆ, ಯೋಜನೆಗೆ ವಿರೋಧದ ಅಲೆ ಕುಗ್ಗುತ್ತಾ ಬಂದಿತು.

ಬುಲೆಟ್ ರೈಲು ಯೋಜನೆಯಿಂದಾಗಿ ಇಡೀ ಗ್ರಾಮವೇ ನಿರ್ವಸಿತವಾಗುವ ಸಾಧ್ಯತೆಯ ಬಗ್ಗೆ ಜನತೆ ಕಳವಳವನ್ನು ಹೊಂದಿದ್ದಾರೆಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳುತ್ತಾರೆ. ಇನ್ನು ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ಕೆಲವು ಜಮೀನುಗಳ ಮಾಲಕರು  ಒಬ್ಬರಾದರೆ, ಅವುಗಳಲ್ಲಿ ವಾಸಿಸುವವರು ಇನ್ನೊಬ್ಬರಾಗಿರುತ್ತಾರೆ. ಬುಡಕಟ್ಟು ಪ್ರದೇಶಗಳಲ್ಲಿನ ಜಮೀನುಗಳಲ್ಲಿ ಇದು ಸಾಮಾನ್ಯವಾಗಿದೆ.

 ಬುಲೆಟ್ ರೈಲು ಒಂದು ರೇಖಾತ್ಮಕ ಯೋಜನೆಯಾಗಿದ್ದು, ಅದಕ್ಕೆ ಕೇವಲ 17.5 ಮೀಟರ್ ವಿಸ್ತೀರ್ಣವಷ್ಟೇ ಅಗತ್ಯವಿದೆ. ಹೀಗಾಗಿ ಇಡೀ ಗ್ರಾಮಗಳನ್ನು ನಿರ್ವಸಿತಗೊಳಿಸುವ ಪ್ರಶ್ನೆಯೇ ಉದ್ಭವವಾಗದು ಎಂದವರು ಹೇಳಿದ್ದಾರೆ.

 ‘‘ಭೂಮಾಲಕರು ಹಾಗೂ ಅವರ ಜಮೀನಿನಲ್ಲಿ ವಾಸವಾಗಿರುವವರ ನಡುವೆ ತಿಳುವಳಿಕಾ ಒಪ್ಪಂದವನ್ನು ನಾವು ಏರ್ಪಾಟು ಮಾಡುವ ಮೂಲಕ ಈ ಕಳವಳವನ್ನು ನಿವಾರಿಸಲು ಯತ್ನಿಸುತ್ತೇವೆ. ಉತ್ತಮ ನಂಬಿಕೆಯೊಂದಿಗೆ ಭೂಮಾಲಕನು ತನಗೆ ದೊರೆಯುವ ಪರಿಹಾರದ ಶೇ.30ರಷ್ಟನ್ನು  ಜಮೀನಿನಲ್ಲಿ ವಾಸವಾಗಿರುವವರಿಗೆ ನೀಡಬೇಕಾಗಿದೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.

‘‘ನಮ್ಮ ಮನೆಯನ್ನು ಬಿಟ್ಟುಕೊಡಲು ಬಯಸುವುದಿಲ್ಲ. ಆದರೆ ನಮಗೆ ಬೇರೆ ಆಯ್ಕೆ ಏನಿದೆ?’’ ಎಂದು ಪಾಡ್ಗೆ ಗ್ರಾಮದ ಮಹಿಳೆ ಪಿಂಕಿ ಲಾಡೆ,  ತನ್ನ ಆರು ವರ್ಷದ ಕಂದಮ್ಮನ್ನು ಕಂಕುಳಲ್ಲಿ ಹಿಡಿದುಕೊಂಡು ಪ್ರಶ್ನಿಸುತ್ತಾರೆ.

ದಶಕಗಳಿಂದ ನಾವಿಲ್ಲಿ ವಾಸವಾಗಿದ್ದೇವೆಯಾದರೂ, ಈ ಜಮೀನು ನಮ್ಮದೆಂಬುದನ್ನು ತೋರಿಸುವ ಯಾವುದೇ ಕಾಗದಪತ್ರಗಳು ನಮ್ಮಲ್ಲಿಲ್ಲ. ಒಂದು ವೇಳೆ ಅವರು ನಮಗೆ ಕೊಡುವುದೆಲ್ಲವನ್ನೂ ತೆಗೆದುಕೊಳ್ಳಲು ಒಪ್ಪದಿದ್ದಲ್ಲಿ, ಒಂದು ದಿನ ಅವರು ಸುಮ್ಮಗೆ ಬಂದು, ನಮ್ಮ ಮನೆಯನ್ನು  ಧ್ವಂಸಗೊಳಿಸುತ್ತಾರೆ. ಅವರು ಏನು ಕೊಡುತ್ತಾರೆಯೋ ಅದನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು’’ ಎಂದು ಆಕೆ ಹೇಳುತ್ತಾರೆ.

ಪಕ್ಕದ ಗ್ರಾಮವಾದ ಕಲ್ಲಾಳೆಯಲ್ಲಿ ಕೃಷಿಕ ಪ್ರಕಾಶ್ ರಾವೊಟೆ ಅವರು ತನ್ನ 1.5 ಎಕರೆ ಜಮೀನಿನ ಪೈಕಿ ಮೂರನೇ ಒಂದರಷ್ಟನ್ನು ಬುಲೆಟ್ ರೈಲು ಯೋಜನೆಗಾಗಿ  ಕಳೆದುಕೊಳ್ಳಲಿದ್ದಾರೆ. ಈ ಜಮೀನು ಅವರ  ಕುಟುಂಬದ 23 ಮಂದಿಯ ಜಂಟಿ ಒಡೆತನದಲ್ಲಿದೆ.  ಇಂತಹ ಅನೇಕ ಭೂಪ್ರಕರಣಗಳು ಈ ಗ್ರಾಮಗಳಲ್ಲಿವೆ.

‘‘ಭೂಸ್ವಾಧೀನ ಅಧಿಕಾರಿಗಳು ಮೊದಲಿಗೆ ಹಳ್ಳಿಯಲ್ಲಿ ವಾಸಿಸದ ಭೂಮಾಲಕರನ್ನು ಸಂಪರ್ಕಿಸುತ್ತಾರೆ. ಅವರಿಗೆ ಈ ಜಮೀನಿನಿಂದ ಆಗಬೇಕಾಗಿರುವುದು ಏನೂ ಇಲ್ಲ. ಹೀಗಾಗಿ ಅವರು ಸಂತಸದಿಂದಲೇ ಹಣ ಪಡೆದು  ತಮ್ಮ ಜಮೀನನ್ನು ಒಪ್ಪಿಸಿಬಿಡುತ್ತಾರೆ. ಅವರು ಸಮ್ಮತಿಸದೆ ಇದ್ದಲ್ಲಿ, ಇತರ ಜಂಟಿ   ಮಾಲಕರ ಮೇಲೆ ಒತ್ತಡ ಹೇರಿ, ಜಮೀನು ಒಪ್ಪಿಸುವಂತೆ ಮಾಡುತ್ತಾರೆ’’ ಎಂದು ಆತ ಹೇಳುತ್ತಾರೆ.

ಬುಲೆಟ್ ರೈಲು ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುವವರ ವಿರುದ್ಧ ಸರಕಾರದ  ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆಂಬ ಆರೋಪ ಹೊರಿಸಿ  ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

ಮುಂಬೈ-ವಡೋದರಾ ಎಕ್ಸ್‌ಪ್ರೆಸ್‌ವೇಗಾಗಿಯೂ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.

‘‘ಮುಂಬೈ-ವಡೋದರಾ ಎಕ್ಸ್‌ಪ್ರೆಸ್‌ವೇಗೂ ಕೂಡಾ ಇಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದನ್ನು ನೋಡಿದಾಗ, ಇಲ್ಲಿ ಬುಡಕಟ್ಟು ಜನರಿಗೆ ಸೇರಿದ ಯಾವುದೇ ಜಮೀನು ಉಳಿಯುವುದಿಲ್ಲವೆಂದು ನಾನು ಹೆದರುತ್ತೇನೆ. ಬುಲೆಟ್ ರೈಲು ಹಾದುಹೋಗಲಿರುವ ಈ ಗ್ರಾಮಗಳು ಈಗ ಪ್ರಶಾಂತವಾಗಿವೆ. ಆದರೆ ಒಮ್ಮೆ  ಕಾರ್ಯಾಚರಣೆಗಳು ಆರಂಭಗೊಂಡ ಆನಂತರ ನಮಗೆ ನಿದ್ರಿಸಲೂ ಸಾಧ್ಯವಾಗದು’’ ಎಂದು ಬುಡಕಟ್ಟು ಹೋರಾಟಗಾರ ದುಮಾದಾ ಹೇಳುತ್ತಾರೆ.

ಪಾಲ್ಗಾರ್ ಜಿಲ್ಲಾಧಿಕಾರಿ ಕಚೇರಿಯಿಂದ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ ಜಿಲ್ಲೆಯಲ್ಲಿ 71 ಗ್ರಾಮಗಳಿದ್ದು, ಬುಲೆಟ್ ರೈಲು ಯೋಜನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ 44 ಗ್ರಾಮಗಳು 1996ರ ಪಂಚಾಯತ್ ಕಾಯ್ದೆ (ಅಧಿಸೂಚಿತ ಪ್ರದೇಶಗಳ ವಿಸ್ತರಣೆ)ಯ ವ್ಯಾಪ್ತಿಗೆ ಒಳಪಡುತ್ತವೆ.

 ಈ ಕಾಯ್ದೆಯು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ಮಾನ್ಯ ಮಾಡುತ್ತದೆ ಹಾಗೂ ಗ್ರಾಮ ಸಭಾಗಳ ಮೂಲಕ ಸ್ವಯಮಾಡಳಿತಕ್ಕೆ ಅನುಮತಿ ನೀಡುತ್ತದೆ. ಈ ಮಸೂದೆಯ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸ್ವಾಧೀನಪಡಿಸಿಕೊಳ್ಳಲು  ಇಲಾಖೆಗಳು ಸಂಬಂಧ ಪಟ್ಟ ಗ್ರಾಮಪಂಚಾಯತ್ ಇಲಾಖೆಗಳಿಂದ ಅನಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ಈವರೆಗೆ ಬುಲೆಟ್ ರೈಲು ಯೋಜನೆಯು ಇಂತಹ 42 ಗ್ರಾಮಪಂಚಾಯತ್‌ಗಳಲ್ಲಿ ನಿರ್ಣಯಗಳನ್ನು ಅಂಗೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ.

 ಕೃಪೆ: theprint.in

Writer - ಮಾನಸಿ ಫಾಡ್ಕೆ

contributor

Editor - ಮಾನಸಿ ಫಾಡ್ಕೆ

contributor

Similar News