ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ

Update: 2022-08-11 14:41 GMT

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯೊಂದಿಗೆ ಬಿಸಿಲ ವಾತಾವರಣವಿತ್ತು. ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆಯಾಗಿದ್ದು, ಬಳಿಕ ಮೋಡದ ವಾತಾವರಣ ಸಹಿತ ಬಿಸಿಲು ಇತ್ತು. ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿತ್ತು.

ಹವಾಮಾನ ಇಲಾಖೆಯು ಈ ಹಿಂದೆ ಘೋಷಿಸಿದ್ದ ಯೆಲ್ಲೋ ಅಲರ್ಟ್ ಶುಕ್ರವಾರ ಆರೆಂಜ್‌ಗೆ ಬದಲಾಗಿದೆ. ಸಮುದ್ರದಲ್ಲಿ ಗಾಳಿ ಬಲವಾಗಿ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನೀಡಲಾಗಿರುವ ಎಚ್ಚರಿಕೆಯನ್ನು ಮುಂದುವರಿಸಲಾಗಿದೆ.

ಬೆಳ್ತಂಗಡಿ 49.3 ಮಿ.ಮೀ., ಬಂಟ್ವಾಳ 8.8, ಮಂಗಳೂರು 6.3, ಪುತ್ತೂರು 12.5, ಸುಳ್ಯ 12.3, ಮೂಡುಬಿದಿರೆ 24.3, ಕಡಬ  16.5 ಮಿ.ಮೀ. ಸಹಿತ ಜಿಲ್ಲೆಯ ಸರಾಸರಿ 23 ಮಿ.ಮೀ ಮಳೆಯಾಗಿದೆ.

ಬಟ್ಟಪ್ಪಾಡಿ-ಮುಕ್ಕದಲ್ಲಿ ಕಡಲ್ಕೊರೆತ

ಗುರುವಾರ ಮಳೆ ಕಡಿಮೆಯಾಗಿದ್ದರೂ ಬಲವಾಗಿ ಬೀಸುವ ಗಾಳಿಯಿಂದಾಗಿ ಸಮುದ್ರದ ಪ್ರಕ್ಷುಬ್ಧತೆ ಮುಂದುವರಿಸಿದೆ. ಅಲ್ಲದೆ ಉಳ್ಳಾಲದ ಬಟ್ಟಪ್ಪಾಡಿ ಮತ್ತು ಮುಕ್ಕದಲ್ಲಿ ಕಡಲ್ಕೊರೆತ ಮುಂದುವರಿದಿದೆ.

ಸುರತ್ಕಲ್ ಸಮೀಪದ ಮುಕ್ಕ ಭಾಗದಲ್ಲಿ ಕಡಲು ಕೊರತೆಯಿಂದಾಗಿ ಮೀನುಗಾರಿಕಾ ರಸ್ತೆ ಅಪಾಯದ ಅಂಚಿನಲ್ಲಿದೆ.  ಕೊರೆತ ತಡೆಗಾಗಿ ತೀರದಲ್ಲಿ ಹಾಕಿರುವ ಕಲ್ಲುಗಳು ಸಮುದ್ರ ಪಾಲಾಗಿದ್ದು, ಬೃಹತ್ ಅಲೆಗಳು ರಸ್ತೆಗೆ ಅಪ್ಪಳಿಸುತ್ತಿವೆ. ರಸ್ತೆಯು ಸಮುದ್ರ ಪಾಲಾದರೆ ಪಕ್ಕದ ಮನೆಗಳಿಗೂ ಅಪಾಯವಾಗುವ ಸಾಧ್ಯತೆಯಿದೆ. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಪೋರೇಟರ್ ಶೋಭಾ ರಾಜೇಶ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News