ಸ್ವಾತಂತ್ರದ 75 ವರ್ಷಗಳು: ಆತ್ಮಾವಲೋಕನದ ಅಗತ್ಯ

Update: 2022-08-12 07:20 GMT

ಭಾಗ-2

ನೀತಿಗಳಲ್ಲಿ ಒಳಗೊಂಡ ಆಶಯಗಳನ್ನು ಅರ್ಥಪೂರ್ಣವಾಗಿ ಅನುಷ್ಠಾನ ಮಾಡುವ ಬದಲಿಗೆ ಕೋಟಿಗಟ್ಟಲೆ ವೆಚ್ಚಮಾಡಿ ಆಗಿಹೋದ ನಾಯಕರ, ಸಮಾಜಸುಧಾರಕರ ಮಾತ್ರವಲ್ಲ ಪುರಾಣ ಪುರುಷರ ಪ್ರತಿಮೆಗಳ ಸ್ಥಾಪನೆ, ಭವ್ಯವಾದ ಮಂದಿರ ಮತ್ತು ಭವನಗಳ ರಚನೆ, ಲಾಂಛನಗಳ ಪುನರ್ನಿರೂಪಣೆ ಮುಂತಾದ ಹೊಸ ಯೋಜನೆಗಳ ಘೋಷಣೆಗಳನ್ನೇ ಅನುಷ್ಠಾನವೆಂದು ಬಿಂಬಿಸಲಾಗುತ್ತದೆ. 

ವೈಫಲ್ಯಗಳು:

ಈ ಸಾಧನೆಗಳು ಹೊಸಯುಗದ ಆರಂಭದಲ್ಲಿ ಹುಟ್ಟಿ ಅಂದಿನ ವಸ್ತು ಸ್ಥಿತಿಯನ್ನು ಅನುಭವಿಸಿದ ನನ್ನಂತಹ ಹಿರಿಯ ನಾಗರಿಕರಿಗೆ ಸಂತೃಪ್ತಿ ತರುವ ವಿಷಯ. ಆದರೆ ಇವುಗಳ ಜೊತೆಗೆ ವೈಫಲ್ಯಗಳ ಹೊರೆಯೂ ದೇಶದ ಮುಂದೆ ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಾ ಇದೆ. ಹೆಚ್ಚಿನ ವೈಫಲ್ಯಗಳು ಮಾನವ ನಿರ್ಮಿತ ಎಂಬುದು ಅತ್ಯಂತ ವಿಷಾದಕರ ಬೆಳವಣಿಗೆ.

 ರಾಜನೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ಪ್ರಮುಖ ಬೆಳವಣಿಗೆಗಳನ್ನು ಗುರುತಿಸಬಹುದು. ಒಂದು ಮೌಲ್ಯಗಳ ಅಧಃಪತನ ಮತ್ತು ಎರಡು, ಚುನಾಯಿತ ಪ್ರತಿನಿಧಿಗಳಲ್ಲಿ ನಶಿಸಿ ಹೋಗಿರುವ ಉತ್ತರದಾಯಿತ್ವ. ಇತ್ತೀಚಿನ ವರ್ಷಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಶಾಸಕರ ಸಂಖ್ಯೆಯ ಹೆಚ್ಚಳ, ಅಡೆತಡೆಯಿಲ್ಲದೆ ಏರುವ ಅವರ ಸಂಪತ್ತು, ಸಾರಾ ಸಗಟಾಗಿ ನಡೆಯುತ್ತಿರುವ ಶಾಸಕರ ಪಕ್ಷಾಂತರಗಳು ಮತ್ತು ಶಾಸನ ಸಭೆಗಳ/ಸಂಸತ್ತಿನ ಒಳಗೂ ಹೊರಗೂ ಅವರ ವರ್ತನೆಗಳು ಈ ಅಧಃಪತನಕ್ಕೆ ಕನ್ನಡಿಯನ್ನು ಹಿಡಿಯುತ್ತವೆ. ಪ್ರಜಾಪ್ರತಿನಿಧಿಗಳಿಗೆ ಪ್ರಜಾಹಿತಕ್ಕಿಂತ ಸ್ವಂತ ಹಿತವೇ ಆದ್ಯತೆಯಾಗಿದೆ. ಈ ಬೆಳವಣಿಗೆ ಇಂದು ನಿನ್ನೆಯದಲ್ಲ, ಸುಮಾರಾಗಿ 1960ರ ಉತ್ತರಾರ್ಧದಲ್ಲಿಯೇ ಪ್ರಾರಂಭವಾಗಿತ್ತು; ಇದು ಒಂದು ಪಕ್ಷಕ್ಕೆ ಸೀಮಿತವೂ ಅಲ್ಲ. ಹೀಗಾಗಿ ಮತದಾರನ ಮುಂದಿರುವ ಆಯ್ಕೆಗಳು ಸೀಮಿತವಾಗಿವೆ. ಮೌಲ್ಯಗಳ ಅಧಃಪತನ ಮತ್ತು ಉತ್ತರದಾಯಿತ್ವದ ಅಭಾವ-ಇವೆರಡೂ ಪ್ರಜಾತಂತ್ರಕ್ಕೆ ಮಾರಕವಾದ ಬೆಳವಣಿಗೆಗಳು. ಇದರಿಂದಾಗಿ ಪ್ರಜೆಗಳ ಮೂಲಭೂತ ಹಕ್ಕುಗಳು ಕುಂಠಿಸುತ್ತಾ ಇವೆ. ಶಾಸಕಾಂಗ ಮತ್ತು ನ್ಯಾಯಾಂಗಗಳು ಬಹುಮಟ್ಟಿಗೆ ತಮ್ಮ ಸಾಂವಿಧಾನಿಕ ಜವಾಬ್ದಾರಿಗಳಿಂದ ವಿಮುಖವಾಗಿ ಕಾರ್ಯಾಂಗವನ್ನು ಓಲೈಸುವ ಪರಿಸ್ಥಿತಿಯನ್ನು ನಾವಿಂದು ಕಾಣಬಹುದು. ಶಾಸನಬದ್ಧ ಸಂಸ್ಥೆಗಳು ಕಾರ್ಯಾಂಗದ ಅಡಿಯಾಳುಗಳಂತೆ ವರ್ತಿಸುವುದು ನಮ್ಮ ಪ್ರಜಾಪ್ರಭುತ್ವದ ಬಹುದೊಡ್ಡ ಕಳಂಕ ಎನ್ನಬೇಕಾಗುತ್ತದೆ. ರಾಜ್ಯಗಳ ಚುನಾಯಿತ ಸರಕಾರಗಳೂ ಕೇಂದ್ರಸರಕಾರದ ಅಡಿಯಾಳುಗಳಂತೆ ವರ್ತಿಸುವುದು ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯುಂಟುಮಾಡುತ್ತದೆ. ಸಮಾಜನೀತಿಯಲ್ಲಿಯೂ ದೇಶವಿಂದು ಹಿಮ್ಮುಖವಾಗಿ ಧಾವಿಸುತ್ತಿದೆ ಎಂಬ ಭಾವನೆ ಬೆಳೆಯುತ್ತಿದೆ. ಧರ್ಮಾತೀತ ರಾಷ್ಟ್ರವಾಗಿಯೂ ಧರ್ಮಾಧಾರಿತ ಮತ್ತು ಜಾತಿ ಆಧಾರಿತ ನಿರ್ಧಾರಗಳನ್ನು ಸಂವಿಧಾನರೀತ್ಯ ಚುನಾಯಿತವಾದ ಸರಕಾರಗಳೇ ಕೈಗೊಳ್ಳುತ್ತಿವೆ. ಮಾತ್ರವಲ್ಲ ದೇಶದ ಜನರ ಬೌದ್ಧಿಕ ವಿಕಸನ ಮತ್ತು ದೇಶದ ಪ್ರಗತಿಗೆ ಆಧಾರಸ್ತಂಭವಾದ ವೈಜ್ಞಾನಿಕ ಮನೋಧರ್ಮ ಮತ್ತು ಪ್ರಶ್ನಿಸುವ ಮನೋವೃತ್ತಿಯ ಸ್ಥಾನವನ್ನು ಮೌಢ್ಯ ಮತ್ತು ಸಂಪ್ರದಾಯಶರಣತೆಯು ಆಕ್ರಮಿಸಿಕೊಳ್ಳುತ್ತಿವೆ. ಶ್ರೀಮಂತವಾದ ಭಾಷಾ ವೈವಿಧ್ಯವು ‘ಒಂದು ರಾಷ್ಟ್ರ-ಒಂದು ಭಾಷೆ’ ಎಂಬ ಅಘೋಷಿತ ನೀತಿಗೆ ಬಲಿಯಾಗುತ್ತಿದ್ದು ಪ್ರಾದೇಶಿಕ ಅಸ್ಮಿತೆಗಳಿಗೆ ಮಾರಕ ಹೊಡೆತ ಬೀಳುತ್ತಿದೆ.

ದೇಶದ ಅರ್ಥ ನೀತಿಯೂ ರಾಜನೀತಿಯ ಒತ್ತಡಕ್ಕೆ ಸಿಲುಕಿದೆ. ಅರ್ಥವ್ಯವಸ್ಥೆಯು ಸರಕಾರದ ಹಸ್ತಕ್ಷೇಪದಿಂದ ಹೊರಗುಳಿಯಬೇಕೆಂಬ ಹೊಸ ನೀತಿಯಿಂದಾಗಿ, ಹುಟ್ಟಿನಿಂದ ಅಥವಾ ಆರ್ಥಿಕ ದೌರ್ಬಲ್ಯದಿಂದ ಅವಕಾಶ ವಂಚಿತರಾದ ನಾಗರಿಕರು ಪ್ರಗತಿಯ ಮಾರ್ಗವನ್ನು ಪ್ರವೇಶಿಸುವಂತಿಲ್ಲ. ಇದರಿಂದಾಗಿ ಪ್ರಕೃತಿಯ ವಿಕೋಪದಿಂದ ಅಥವಾ ಮಹಾಮಾರಿಯಿಂದ ಉಂಟಾದ ನಷ್ಟಕಷ್ಟಗಳಿಗೆ ಪರಿಹಾರವೇ ಇಲ್ಲದೆ ಇದು ತಮ್ಮ ಪ್ರಾರಬ್ಧ ಎಂದುಕೊಂಡು ಜೀವನವನ್ನು ಹಲುಬಿಕೊಳ್ಳುವ ಸನ್ನಿವೇಶವನ್ನು ನಾವಿಂದು ಕಾಣಬಹುದು. ಇರುವ ಉದ್ಯೋಗ ನಷ್ಟವಾಗಿ, ಹೊಸ ಉದ್ಯೋಗಗಳ ಸೃಷ್ಟಿಯೂ ಆಗದೆ ಲಕ್ಷಾಂತರ ಮಂದಿಗೆ ಬದುಕುವ ದಾರಿ ದುಸ್ತರವಾಗಿದೆ. ಮಾನವ ಅಭ್ಯುದಯಕ್ಕೆ ಪೂರಕವಾದ ಪ್ರಾಥಮಿಕ ವಿದ್ಯಾಭ್ಯಾಸ, ಆರೋಗ್ಯದ ವ್ಯವಸ್ಥೆಗಳು, ಕುಡಿಯುವ ನೀರಿನ ಸೌಲಭ್ಯ, ಸಾರ್ವಜನಿಕ ಸಾರಿಗೆ ಮತ್ತು ಸಂಪರ್ಕಗಳು -ಮುಂತಾದುವುಗಳನ್ನೆಲ್ಲ ಈಗ ಖಾಸಗಿ ರಂಗಗಳಿಗೆ ವರ್ಗಾಯಿಸಿ ಆ ಮೂಲಕ ದೇಶದ ತಳಮಟ್ಟದಲ್ಲಿರುವ ನಾಗರಿಕರನ್ನು ಸಮಾಜದ ಅಂಚಿನಲ್ಲಿಯೇ ಮುಂದುವರಿಸುವ ಪ್ರವೃತ್ತಿಯನ್ನು ಕಾಣಬಹುದು. ನೀತಿಗಳಲ್ಲಿ ಒಳಗೊಂಡ ಆಶಯಗಳನ್ನು ಅರ್ಥಪೂರ್ಣವಾಗಿ ಅನುಷ್ಠಾನ ಮಾಡುವ ಬದಲಿಗೆ ಕೋಟಿಗಟ್ಟಲೆ ವೆಚ್ಚಮಾಡಿ ಆಗಿಹೋದ ನಾಯಕರ, ಸಮಾಜಸುಧಾರಕರ ಮಾತ್ರವಲ್ಲ ಪುರಾಣ ಪುರುಷರ ಪ್ರತಿಮೆಗಳ ಸ್ಥಾಪನೆ, ಭವ್ಯವಾದ ಮಂದಿರ ಮತ್ತು ಭವನಗಳ ರಚನೆ, ಲಾಂಛನಗಳ ಪುನರ್ನಿರೂಪಣೆ ಮುಂತಾದ ಹೊಸ ಯೋಜನೆಗಳ ಘೋಷಣೆಗಳನ್ನೇ ಅನುಷ್ಠಾನವೆಂದು ಬಿಂಬಿಸಲಾಗುತ್ತದೆ. ಇವೆಲ್ಲದರ ಜೊತೆಗೆ, ಅಭಿಪ್ರಾಯ, ಸ್ವತಂತ್ರ ಯೋಚನೆ, ಅಭಿವ್ಯಕ್ತಿಯ ಸ್ವಾತಂತ್ರಗಳನ್ನು ಬಲಾತ್ಕಾರವಾಗಿ ಹೊಸಕುವ ಯತ್ನಗಳು ಕಾಣಬರುತ್ತಿವೆ. ಆಳವಾಗಿ ಮತ್ತು ವಿಸ್ತಾರವಾಗಿ ಹಬ್ಬುತ್ತಿರುವ ಅಸಹಿಷ್ಣುತೆಯಿಂದಾಗಿ ನಾಗರಿಕರ ನಡುವೆ ದ್ವೇಷ ಹೆಚ್ಚಿ ಆಗಾಗ ಹಿಂಸಾಕೃತ್ಯಗಳು ಸಂಭವಿಸುತ್ತಿವೆ. ಸರಕಾರದ ಅಂಗಸಂಸ್ಥೆಗಳು ಕಾನೂನುಗಳನ್ನು ಕೈಗೆತ್ತಿಕೊಂಡು ಅಮಾಯಕರ ಮೇಲೆ ಹಿಂಸೆ ನಡೆಸುವ ಘಟನೆಗಳು ಸಂಭವಿಸುತ್ತಿವೆ. ಸ್ವತಂತ್ರ ಪ್ರಜಾಸತ್ತೆಯ ರಕ್ಷಣೆಯಲ್ಲಿ ಪ್ರಮುಖಪಾತ್ರವನ್ನು ವಹಿಸಬೇಕಾದ ಬಹುತೇಕ ಸಮೂಹ ಮಾಧ್ಯಮಗಳು ಇಂದು ರಾಜಕೀಯ ಪಕ್ಷಗಳ, ಧುರೀಣರ ತುತ್ತೂರಿಯನ್ನು ನಿರಂತರವಾಗಿ ಊದುತ್ತಿವೆ. ಇವುಗಳ ಜೊತೆಗೆ ಲಂಗುಲಗಾಮಿಲ್ಲದ ಸಾಮಾಜಿಕ ಮಾಧ್ಯಮಗಳು ಸಮಾಜವನ್ನು ಒಡೆಯಲು ಕಟಿಬದ್ಧವಾಗಿವೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಾವಿಂದು ಒಂದು ತರದ ಸಮೂಹ ಸನ್ನಿಗೆ ಒಳಗಾಗಿ ಹಿಂದೆಂದೂ ಕಾಣದ ಅನಿಶ್ಚಿತತೆ ಮತ್ತು ಆತಂಕ ಈಗ ದೇಶದ ಮುಂದಿದೆ. ಹೆಸರಾಂತ ಕವಿ ಸಿದ್ಧಲಿಂಗಯ್ಯನವರ ಕಳಕಳಿಯ ಕವನ ‘‘ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ’’, ಅವರು ಬರೆದ ಕಾಲಘಟ್ಟಕ್ಕಿಂತಲೂ ಹೆಚ್ಚಾಗಿ ಇಂದು ನಮ್ಮನ್ನು ಕಾಡುತ್ತದೆ. 

ಮುಂದಿನ ದಾರಿ:

ಮನುಕುಲದ ಇತಿಹಾಸದಲ್ಲಿ ಶೋಷಣೆ ಮತ್ತು ನಿರಂಕುಶ ಪ್ರಭುತ್ವದ ವಿರುದ್ಧ ಎಚ್ಚರಗೊಂಡ ನಾಗರಿಕರು ಸೆಟೆದು ನಿಂತ ಹಲವು ಉದಾಹರಣೆಗಳು ಇವೆ. ಹೋದ ಶತಮಾನದ ಮಧ್ಯಭಾಗದಲ್ಲಿ, ಅಮೆರಿಕದಲ್ಲಿ ಸುದೀರ್ಘಕಾಲದ ಕರಿಯರ ಶೋಷಣೆಯ ವಿರುದ್ಧ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದ ಚಳವಳಿ ಮತ್ತು ದಕ್ಷಿಣ ಆಫ್ರಿಕದ ವರ್ಣಭೇದ ನೀತಿಯ ವಿರುದ್ಧ ನೆಲ್ಸನ್ ಮಂಡೇಲಾರ ನಾಯಕತ್ವದಲ್ಲಿ ನಡೆದ ಹೋರಾಟ- ಎರಡು ಸತ್ವಪೂರ್ಣವಾದ ನಿದರ್ಶನಗಳು ನಮ್ಮ ಮುಂದಿವೆ. ಭಾರತದ ಸ್ವಾತಂತ್ರದ ಚಳವಳಿಯೂ ಅಧಿಕಾರಶಾಹಿಯ ವಿರುದ್ಧ ಸಾಮೂಹಿಕವಾಗಿ ಹೊರಹೊಮ್ಮಿದ ಪ್ರತಿಭಟನೆಯೇ ಆಗಿತ್ತು. ಸ್ವತಂತ್ರ ಭಾರತದಲ್ಲಿಯೂ ಈ ಪ್ರಯತ್ನಗಳು ನಡೆದಿವೆ. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಆಳುವ ಪಕ್ಷವನ್ನು ಪ್ರಬುದ್ಧ ಮತದಾರರು ಸೋಲಿಸಿದ್ದುದು ಒಂದು ಪಾಠ. 2021ರಲ್ಲಿ ಕೇಂದ್ರ ಸರಕಾರದ ಕೃಷಿನೀತಿಯ ವಿರುದ್ಧ ಸುದೀರ್ಘವಾದ ಶಾಂತಿಯುತ ಹೋರಾಟ ನಡೆಸಿದ ರೈತ ಚಳವಳಿಯೂ ನಮ್ಮೆದುರೇ ಸಂಭವಿಸಿದೆ ಎಂಬುದು ಗಮನಾರ್ಹ.

ರಾಜಕೀಯ ವ್ಯವಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಇನ್ನೂ ದೇಶದ ಒಳಿತಿನ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಕಾಣಬಹುದು. ಹಾಗೆಯೇ ತಳಮಟ್ಟದ ನಾಗರಿಕರ ಹಕ್ಕುಗಳಿಗಾಗಿ ಶ್ರಮಿಸುವ ಸ್ವಯಂ ಸೇವಾ ಸಂಸ್ಥೆಗಳು ಇನ್ನೂ ಇವೆ. ತಮ್ಮ ವೈಯಕ್ತಿಕ ಹಿತಗಳನ್ನು ಬದಿಗೊತ್ತಿ ಸರ್ವರ ಹಿತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನುಭಾವರು ಮತ್ತು ಮಹಿಳೆಯರು ನಮ್ಮ ಮುಂದಿದ್ದಾರೆ.

ದೇಶದ ಅತಂತ್ರತೆಯಿಂದ ಹೆಚ್ಚು ಬಾಧೆಗೆ ಒಳಗಾಗುವವರು ಯುವ ಜನಾಂಗದವರು. ತಮ್ಮ ಉತ್ತಮ ಭವಿಷ್ಯಕ್ಕಾಗಿ ವರ್ತಮಾನದಲ್ಲಿ ಅವರು ಎಚ್ಚೆತ್ತುಕೊಳ್ಳಬೇಕಾಗುವ ತುರ್ತು ನಮ್ಮ ಮುಂದಿದೆ. ಇದನ್ನು ಅರ್ಥಮಾಡಿಕೊಳ್ಳಲು ಯುವಜನರು ಸ್ವತಂತ್ರವಾಗಿ ಯೋಚಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು; ರಾಜಕೀಯ, ಜಾತಿ ಮತ್ತು ಧರ್ಮದ ಆಮಿಷಗಳನ್ನು ಮೆಟ್ಟಿ ನಿಂತು ಸಮಗ್ರರ ಹಿತವನ್ನೇ ಧ್ಯೇಯವನ್ನಾಗಿಸಬೇಕು. ಅವರು ರೈತ ಚಳವಳಿಯ ಮಾದರಿಯಲ್ಲಿ ಅವಕಾಶವಂಚಿತರ, ಸಮಾಜದ ತಳಮಟ್ಟದಲ್ಲಿರುವ ಕೋಟ್ಯಂತರ ನಾಗರಿಕರ ಧ್ವನಿಯಾಗಬೇಕು. ದೇಶದ ಒಳಿತಿಗೆ ಮತ್ತು ಜನಸಾಮಾನ್ಯರ ಕಣ್ಣೀರು ಒರೆಸಲು ಯಾವುದು ಅತೀ ಅಗತ್ಯ ಎಂಬುದನ್ನು ಗುರುತುಹಿಡಿಯಬೇಕು. ಅಸಮಾನತೆಗಳನ್ನು ಹೋಗಲಾಡಿಸುವ ದೃಢ ನಿರ್ಧಾರವನ್ನು ಹೊಂದಿರಬೇಕು. ಸ್ವಾತಂತ್ರದ ಅಮೃತ ಮಹೋತ್ಸವವು ಈ ಒಂದು ಹೊಸ ಚಿಂತನೆ ಮತ್ತು ಪ್ರಕ್ರಿಯೆಗೆ ನಾಂದಿ ಹಾಕಿದರೆ, ಆಚರಣೆಯು ಅರ್ಥಪೂರ್ಣವಾದೀತು. ಅದು ನಮ್ಮ ಮುಂದಿನ ಪೀಳಿಗೆಗಳ ಶ್ರೇಯೋಭಿವೃದ್ಧಿಗೆ ದಾರಿಯಾದೀತು.

Writer - ಟಿ.ಆರ್. ಭಟ್

contributor

Editor - ಟಿ.ಆರ್. ಭಟ್

contributor

Similar News