ಮಂಗಳೂರು: ಧಕ್ಕೆಯಲ್ಲಿ ಬೋಟ್ ರ‍್ಯಾಲಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಚಾಲನೆ

Update: 2022-08-12 08:14 GMT

ಮಂಗಳೂರು, ಆ. 12: ಸ್ವಾತಂತ್ರ್ಯದ ಅಮೃತ ಮಹೋತ್ಸದ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಮಂಗಳೂರು ಧಕ್ಕೆಯಲ್ಲಿ ಇಂದು ಫಿಶಿಂಗ್ ಬೋಟ್‌ಗಳ ರ್ಯಾಲಿ ನಡೆಯಿತು. ಸ್ವಾತಂತ್ರದ ಅಮೃತ ಮಹೋತ್ಸವದ ನಿಮಿತ್ತ 75 ಬೋಟ್‌ಗಳು ರಾಷ್ಟ್ರಧ್ವಜಗಳೊಂದಿಗೆ ಧಕ್ಕೆಯ ತೀರದ ನೀರಲ್ಲಿ ತೇಲುತ್ತಾ ರ್ಯಾಲಿಯಲ್ಲಿ ಪಾಲ್ಗೊಂಡವು.

ಮಂಗಳೂರು ಮೀನುಗಾರಿಕಾ ಧಕ್ಕೆ ತೀರದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ರಾಷ್ಟ್ರ ಧ್ವಜವನ್ನು ಕೈಯ್ಯಲ್ಲಿ ಹಿಡಿದು ಬೋಟ್‌ಗಳ ರ್ಯಾಲಿಗೆ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಸುಮಾರು ಎರಡು ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೀನುಗಾರಿಕೆಯೂ ಆರಂಭಗೊಂಡಿದ್ದು, ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ ಮೀನುಗಾರರಿಗೆ ಇನ್ನಷ್ಟು ಹೆಚ್ಚಿನ ಹುರುಪನ್ನು ನೀಡಲಿ ಎಂದರು.

ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ ಹಾಗೂ ಇತರ ಅಧಿಕಾರಿ, ಸಂಘಗಳ ಪದಾಧಿಕಾರಿಗಳು, ಬೋಟ್ ಮಾಲಕರು ಹಾಗೂ ಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News