ಕುದ್ರೋಳಿ ಜಾಮಿಯಾ ಮಸ್ಜಿದ್ ಆವರಣದಲ್ಲಿ ‘ಸ್ವಾತಂತ್ರ್ಯ ಯೋಧರ ನೆನಪುಗಳ’ ಫಲಕ ಅನಾವರಣ

Update: 2022-08-12 15:36 GMT

ಮಂಗಳೂರು, ಆ.12: ದೇಶದ ಸ್ವಾತಂತ್ರ್ಯದ ಅಮೃತೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಕುದ್ರೋಳಿಯ ಜಾಮಿಯಾ ಮಸ್ಜಿದ್‌ನ ಆವರಣದಲ್ಲಿ ‘ಸ್ವಾತಂತ್ರ್ಯ ಯೋಧರ ನೆನಪುಗಳ’ ಫೋಟೊ ಮತ್ತು ಬರಹವುಳ್ಳ ಫಲಕವನ್ನು ಜಾಮಿಯಾ ಮಸ್ಜಿದ್‌ನ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಶುಕ್ರವಾರ ಅನಾವರಣಗೊಳಿಸಿದರು.

ಈ ಸಂದರ್ಭ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಖಲೀಲ್ ಅಹ್ಮದ್, ಕಾರ್ಯದರ್ಶಿ ಹಾಜಿ ಮಖ್‌ಬೂಲ್, ಕೋಶಾಧಿಕಾರಿ ತಝ್‌ಮುಲ್, ಹಾಜಿ ಅಮಾನುಲ್ಲಾ,  ಯಾಸೀನ್ ಮತ್ತಿತರರು ಉಪಸ್ಥಿತರಿದ್ದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಪ್ರಮುಖರ ಫೋಟೊ ಮತ್ತವರ ಪರಿಚಯವನ್ನು ಒಳಗೊಂಡ ಫಲಕವನ್ನು ಮಸೀದಿಯ ಆವರಣ ಗೋಡೆಯಲ್ಲಿ ಅಳವಡಿಸಲಾಗಿದೆ. 

ಡಾ. ಝಾಕಿರ್ ಹುಸೇನ್, ಡಾ. ಮಗ್ಫೂರ್ ಅಹ್ಮದ್ ಅಜಾಝಿ, ಮಾಲು ಹಜ್ಜುಮ್ಮ, ಮುಹಮ್ಮದ್ ಅಬ್ದುಲ್ ರಹ್ಮಾನ್ ಸಾಹಿಬ್, ಬೀಬಿ ಅಮ್ತುಸ್ ಸಲಾಂ, ಬೇಗಂ ಹಝರತ್ ಮಹಲ್, ಶಾಹಿದ್ ಅಝ್ಮಿ, ಕರ್ನಲ್ ಶೌಕತ್ ಅಲಿ ಮಲಿಕ್, ಮೌಲವಿ ಅಲಿ ಮುಸ್ಲಿಯಾರ್, ತಿರುಪ್ಪುರ್ ಕುಮಾರನ್, ಭಗತ್ ಸಿಂಗ್, ಶಿವರಾಮ ರಾಜಗುರು, ಸುಖದೇವ್ ಥಾಪ, ಆಬಾದಿ ಬಾನೊ ಬೇಗಂ, ಹಾಜಿರಾ ಬೀಬಿ ಇಸ್ಮಾಯೀಲ್, ಕರ್ನಲ್ ನಿಝಾಮುದ್ದೀನ್ ಶೇಖ್, ಶೌಕತ್ ಉಸ್ಮಾನಿ, ಮೌಲಾನಾ ಮುಹಮ್ಮದ್ ಜಾಫರ್ ಥಾನಸರಿ, ಮುಹಮ್ಮದ್ ಶೇಖ್ ಅಲಿ, ಹಫೀಝ್ ಮುಹಮ್ಮದ್ ಬರ್ಕತುಲ್ಲಾ ಬೋಪಾಲಿ, ಮೌಲವಿ ವಾಜಿದ್ ಅಲಿ ಪನ್ನಿ, ಮೌಲಾನಾ ಉಬೈದುಲ್ಲಾ ಸಿಂಧಿ, ಕುಲ್ಸುಂ ಸಯಾನಿ, ಮಿಯಾನ್ ಮುಹಮ್ಮದ್ ಜಾನ್ ಮೊಹಮ್ಮದ್ ಛೋಟಾನಿ, ಮುಹಮ್ಮದ್ ಬಖ್ತ್‌ಖಾನ್, ಪ್ರೊ.ಅಬುಲ್ ಬಾರಿ ಸಹಿತ ಹಲವರ ಬಗ್ಗೆ ಬರೆಯಲಾದ ಫಲಕವನ್ನು ಮಸೀದಿಯ ಆವರಣದಲ್ಲಿ ಅಳವಡಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂಭ್ರಮದಲ್ಲಿರುವುದು ನಮಗೆಲ್ಲರಿಗೂ ಅತ್ಯಂತ ಖುಷಿ ಮತ್ತು ಹೆಮ್ಮೆಯ ವಿಚಾರವಾಗಿದೆ. ನಾವೆಲ್ಲರೂ ಇಂದಿಲ್ಲಿ ಸ್ವತಂತ್ರವಾಗಿ ಬದುಕಲು ಲಕ್ಷಾಂತರ ಯೋಧರ ಹೋರಾಟ, ಪ್ರಾಣತ್ಯಾಗವೇ ಕಾರಣವಾಗಿದೆ. ಎಲ್ಲಾ ಧರ್ಮೀಯರೂ ಒಗ್ಗಟ್ಟಿನಿಂದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅಂದಿನ ಆ ಹೋರಾಟದಲ್ಲಿ ದೇಶದ ಸಾವಿರಾರು ಮಸೀದಿಗಳು, ಮದ್ರಸಗಳಲ್ಲದೆ ಉಲೇಮಾಗಳು ಮತ್ತು ಧಾರ್ಮಿಕ ಮುಖಂಡರ ಕೊಡುಗೆ ಅಪಾರವಾಗಿದೆ. ಅದೆಷ್ಟೋ ಉಲಮಾಗಳು ಹೋರಾಡಿ ಹುತಾತ್ಮರಾಗಿರುವುದನ್ನು ಮರೆಯಲು ಸಾಧ್ಯವಿಲ್ಲ. ಅಂತಹ ಮಹನೀಯರನ್ನು ಸ್ಮರಿಸುವುದು ಬಹಳ ಮುಖ್ಯವಾಗಿದೆ. ಆ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಪ್ರಯತ್ನದ ಭಾಗವಾಗಿ ನಾವು ಈ ಮಸೀದಿಯ ಆವರಣದಲ್ಲಿ ಫಲಕಗಳನ್ನು ಅನಾವರಣಗೊಳಿಸಿದ್ದೇವೆ ಎಂದು ಜಾಮಿಯಾ ಮಸ್ಜಿದ್‌ನ ಅಧ್ಯಕ್ಷ ಹಾಗೂ ದ.ಕ- ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News