ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಪ್ರಕರಣ: ಪುನೀತ್ ಕೆರೆಹಳ್ಳಿ ಸೇರಿ ನಾಲ್ವರ ಬಂಧನ

Update: 2022-08-14 10:24 GMT
ಪುನೀತ್ ಕೆರೆಹಳ್ಳಿ

ಬೆಂಗಳೂರು, ಆ.14: ಬೆಂಗಳೂರಿನ ಹಡ್ಸನ್ ಸರ್ಕಲ್ ಬಳಿ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿದಂತೆ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಮಂಜುನಾಥ್ ಎಂಬವರು ನೀಡಿದ ದೂರಿನ ಅನ್ವಯ ನಗರದ ಹೊರವಲಯದ ನೆಲಗೆದರನಹಳ್ಳಿ ಬಳಿ ಪುನೀತ್​ ಕೆರೆಹಳ್ಳಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದರು.

ಏನಿದು ಘಟನೆ?: ಬೆಂಗಳೂರಿನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್ ಗಳನ್ನು ದುಷ್ಕರ್ಮಿಗಳು ಹರಿದು ಪುಂಡಾಟ ನಡೆಸಿದ್ದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರಣ ಕಾಂಗ್ರೆಸ್‌ ಜಾಥಾ ಹಿನ್ನೆಲೆ ನಗರದ  ಕೆ.ಆರ್.ಸರ್ಕಲ್‌ ರಸ್ತೆ‌ಯ ಇಕ್ಕೆಲಗಳಲ್ಲಿ ಡಾ. ಅಂಬೇಡ್ಕರ್, ಇಂದಿರಾ ಗಾಂಧಿ, ನೆಹರು, ಟಿಪ್ಪು ಸುಲ್ತಾನ್ ಸೇರಿದಂತೆ ಹಲವಾರು ಹೋರಾಟಗಾರರ ಭಾವಚಿತ್ರ ಮುದ್ರಿಸಿ ಹಾಕಿದ್ದರು. ಆದರೆ, ತಡರಾತ್ರಿ ಪುನೀತ್ ಕೆರೆಹಳ್ಳಿ ಮತ್ತು ಇತರರು ಟಿಪ್ಪು ಸುಲ್ತಾನ್ ಬ್ಯಾನರ್ ಹರಿದು ಪುಂಡಾಟ ತೋರಿದ್ದಾರೆ ಎಂದು ದೂರಲಾಗಿತ್ತು. ಟಿಪ್ಪು ಭಾವಚಿತ್ರವಿರುವ ಕಡೆ ನುಗ್ಗಿ, ಬ್ಯಾನರ್ ಹರಿದು ತುಳಿದ ಹಾಕಿರುವುದನ್ನು ನೋಡಿದ ದಾರಿಹೋಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಹಿತಿ ನೀಡಿದ್ದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ,  ಎರಡು ಕಡೆ ಫ್ಲೆಕ್ಸ್ ಭಗ್ನ ಮಾಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿದ್ದು, ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News