ನಾವು ಮರೆತ ಮಹನೀಯರು: ನೇತಾಜಿಯ ಒಡನಾಡಿ ಕರ್ನಲ್‌ ನಿಝಾಮುದ್ದೀನ್‌

Update: 2022-08-14 11:21 GMT
 ಕರ್ನಲ್‌ ನಿಝಾಮುದ್ದೀನ್‌ (Photo Courtesy: Twitter/@IndiaHistorypic)

ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸರ ಒಂದು ಕಾಲದ ಒಡನಾಡಿ, ಅಂಗರಕ್ಷಕ, ಬ್ರಿಟಿಷರ ವಿರುದ್ಧ ನೇತಾಜಿ ಜೊತೆಗೂಡಿ ಹೋರಾಡಿದ ಕರ್ನಲ್‌ ನಿಝಾಮುದ್ದೀನ್‌ ಬಗ್ಗೆ ನಿಮಗೆಷ್ಟು ಗೊತ್ತಿದೆ. ಇತಿಹಾಸದ ಪುಟಗಳಲ್ಲಿ ಅತಿ ವಿರಳವಾಗಿ ಕಾಣಿಸಿಕೊಂಡ ಈ ಅಪ್ರತಿಮ ದೇಶಪ್ರೇಮಿಯ ಕಥೆಯೇ ರೋಚಕವಾಗಿದೆ. 

1901ರಲ್ಲಿ ಉತ್ತರ ಪ್ರದೇಶದ ಅಝಂಗಡ್ ನ ಮುಬಾರಕ್‌ ಪುರದ ಧಾಕ್ವಾ ಗ್ರಾಮದಲ್ಲಿ ನಿಝಾಮುದ್ದೀನ್‌ ಜನಿಸಿದರು. ತನ್ನ 20ನೆ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ ನಿಝಾಮುದ್ದೀನ್‌ ಬ್ರಿಟಿಷ್‌ ಸೇನೆಯನ್ನು ಸೇರಿದ್ದರು. ಆ ಸಂದರ್ಭ ಬ್ರಿಟಿಷ್‌ ಸೇನೆಯಲ್ಲಿರುವ ಭಾರತೀಯ ಸೈನಿಕರು ಸಾಯಲಿ ಎಂದು ಬ್ರಿಟಿಷ್‌ ಅಧಿಕಾರಿ ಹೇಳುವುದನ್ನು ಕೇಳಿಸಿಕೊಂಡಿದ್ದ ಅವರು ಆನಂತರ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಅಣಿಯಾದರು. ಬ್ರಿಟಿಷ್‌ ಸೇನೆಯ ಅನ್ಯಾಯಗಳಿಂದ ಕೋಪಗೊಂಡ ನಿಝಾಮುದ್ದೀನ್‌ ಬ್ರಿಟಿಷ್‌ ಅಧಿಕಾರಿಯೊಬ್ಬನಿಗೆ ಗುಂಡಿಕ್ಕಿ ಸಿಂಗಾಪೂರಕ್ಕೆ ಪಲಾಯನಗೈದರು. ಆನಂತರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಆಝಾದ್‌ ಹಿಂದ್‌ ಫೌಜ್ ಸೇರಿದರು ಎಂದು ದ ಬೆಟರ್‌ ಇಂಡಿಯಾದ ವರದಿ ಹೇಳುತ್ತದೆ.

ಆನಂತರದ ದಿನಗಳಲ್ಲಿ ನೇತಾಜಿಯವರಿಗೆ ಅತ್ಯಾಪ್ತರಾದ ನಿಝಾಮುದ್ದೀನ್‌ 1943ರಿಂದ 1944ರವರೆಗೆ ಬರ್ಮಾದಲ್ಲಿ ನೇತಾಜಿಯವರ ಸೇನೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದರು. ಬರ್ಮಾದಲ್ಲಿ ಬ್ರಿಟಿಷರ ವಿರುದ್ಧ ನೇತಾಜಿಯವರ ಸೇನೆ ಹೋರಾಡುತ್ತಿದ್ದಾಗ ಗುಂಡೇಟಿನಿಂದ ನೇತಾಜಿಯವರನ್ನು ರಕ್ಷಿಸಿದ ಹೆಗ್ಗಳಿಕಯೂ ಕರ್ನಲ್‌ ನಿಝಾಮುದ್ದೀನ್‌ ಅವರದ್ದು. 

"ನಾವು ಕಾಡಿನಲ್ಲಿದ್ದಾಗ ಗುಂಡೊಂದು ನೇತಾಜಿಯವರ ಕಡೆಗೆ ನುಗ್ಗಿ ಬಂದಿತ್ತು. ನಾನು ಕೂಡಲೇ ಅವರಿಗೆ ಅಡ್ಡವಾಗಿ ಹಾರಿದ್ದೆ. ಆನಂತರ ನಾನು ಪ್ರಜ್ಞಾಹೀನನಾಗಿದ್ದೆ. ನನಗೆ ಪ್ರಜ್ಞೆ ಬಂದಾಗ ನೇತಾಜಿ ನನ್ನ ಬಳಿ ಇದ್ದರು. ಕ್ಯಾಪ್ಟನ್‌ ಲಕ್ಷ್ಮೀ ಸೆಹಗಲ್‌ ನನ್ನ ದೇಹದಲ್ಲಿದ್ದ ಬುಲೆಟ್ ಗಳನ್ನು ತೆಗೆದಿದ್ದರು ಎಂದು 2016ರಲ್ಲಿ ನೀಡಿದ್ದ ಸಂದರ್ಶನದಲ್ಲಿ ನಿಝಾಮುದ್ದೀನ್‌ ಹೇಳಿದ್ದರು. ಈ ಘಟನೆಯ ನಂತರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ನಿಝಾಮುದ್ದೀನ್‌ ಅವರಿಗೆ ಕರ್ನಲ್‌ ಎನ್ನುವ ಬಿರುದು ನೀಡಿದರು. 

ನಿಝಾಮುದ್ದೀನ್‌ ಅವರ ಮೂಲ ಹೆಸರು ಸೈಫುದ್ದೀನ್‌ ಆಗಿತ್ತು. ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರ ಜೊತೆ ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಕಾರಣ ಅವರು ತಮ್ಮ ಹೆಸರನ್ನು ನಿಝಾಮುದ್ದೀನ್‌ ಎಂದು ಬದಲಿಸಿದ್ದರು. ನೇತಾಜಿಯವರ ಕಾರು ಚಾಲಕನಾಗಿ, ಅಂಗರಕ್ಷಕನಾಗಿ, ಆಝಾದ್‌ ಹಿಂದ್‌ ಫೌಜ್ ನಲ್ಲಿ ಸೈನಿಕನಾಗಿ 1943ರಿಂದ 45ರವರೆಗೆ ಸೇವೆ ಸಲ್ಲಿಸಿದರು. 

1945ರಲ್ಲಿ ಸುಭಾಷ್‌ ಚಂದ್ರ ಬೋಸ್‌ ವಿಮಾನ ಅಪಘಾತದಲ್ಲಿ ನಿಧನರಾದರು ಎನ್ನುವುದನ್ನು ನಿಝಾಮುದ್ದೀನ್‌ ನಿರಾಕರಿಸುತ್ತಲೇ ಬಂದಿದ್ದರು. 

"ನೇತಾಜಿ ಸ್ವಾತಂತ್ರ್ಯದ ಸಂದರ್ಭ ಜೀವಂತವಾಗಿಯೇ ಇದ್ದರು. ಅಪಘಾತ ಘಟನೆ ಬಳಿಕ ಅವರು ನನ್ನ ಜೊತೆಗೇ ಇದ್ದುದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಯಾರಾದರೂ ಹೇಗೆ ಹೇಳಲು ಸಾಧ್ಯ ಎಂದು ನಿಝಾಮುದ್ದೀನ್‌ ಪ್ರಶ್ನಿಸಿದ್ದರು. ವಿಮಾನ ಅಪಘಾತ ನಡೆದ ನಾಲ್ಕು ತಿಂಗಳ ಬಳಿಕ ತಾನು ನೇತಾಜಿಯವರನ್ನು ಬರ್ಮಾ- ಥಾಯ್‌ ಲ್ಯಾಂಡ್‌ ಗಡಿ ಸಮೀಪದ ಸಿತಾಂಗ್‌ ಪುರ ನದಿ ಸಮೀಪ ಬಿಟ್ಟು ಬಂದಿದ್ದೆ ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದರು. 1947ರ ಆಗಸ್ಟ್‌ 20ರಂದು ಕೊನೆಯ ಬಾರಿ ನಾನು ನೇತಾಜಿಯವರನ್ನು ನೋಡಿದ್ದೆ ಎಂದವರು ಹೇಳಿದ್ದರು. 

ಆನಂತರದ ದಿನಗಳಲ್ಲಿ ರಂಗೂನ್‌ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಿಝಾಮುದ್ದೀನ್‌ 1969ರಲ್ಲಿ ತನ್ನ ಸ್ವಗ್ರಾಮಕ್ಕೆ ಕುಟುಂಬದ ಜೊತೆಗೆ ವಾಪಸಾದರು. ಅಲ್ಲಿ ಅವರ ಮನೆಗೆ ಹಿಂದ್‌ ಭವನ್‌ ಎಂದು ಹೆಸರಿಟ್ಟು, ಮನೆಯ ಮುಂದೆ ಯಾವಾಗಲೂ ತ್ರಿವರ್ಣ ಧ್ವಜ ಹಾರಿಸುತ್ತಿದ್ದರು ಎಂದು ದ ಬೆಟರ್‌ ಇಂಡಿಯಾ ವರದಿ ಹೇಳುತ್ತದೆ. 2016ರಲ್ಲಿ ವಿಶ್ವದ ಅತಿ ಹಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿ ವಿಶ್ವಾದ್ಯಂತ ಸುದ್ದಿಯಾಗಿದ್ದರು. 

2014ರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಆಗಿನ ಎನ್‌ ಡಿಎ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಿಝಾಮುದ್ದೀನ್‌ ಅವರನ್ನು ಸನ್ಮಾನಿಸಿ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದರು. ಬದುಕಿರುವವರೆಗೂ ಎಲ್ಲೂ ಸುದ್ದಿಯಾಗದ ಕರ್ನಲ್‌ ನಿಝಾಮುದ್ದೀನ್‌ ತಮ್ಮ ದೇಶಪ್ರೇಮವನ್ನು ಪ್ರಚಾರಕ್ಕೆ ಬಳಸಲಿಲ್ಲ . 2017ರ ಫೆಬ್ರವರಿ 7ರಂದು ತಮ್ಮ 116ನೆ ವಯಸ್ಸಿನಲ್ಲಿ ಉತ್ತರ ಪ್ರದೇಶದ ಅಝಂಗಡ್ ಜಿಲ್ಲೆಯಲ್ಲಿ ಅವರು ನಿಧನರಾದರು. ಈ ಸಂದರ್ಭ ಟ್ವೀಟ್‌ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸುಭಾಷ್‌ ಚಂದ್ರ ಬೋಸ್‌ ಅವರ ಅತ್ಯಾಪ್ತ ಕರ್ನಲ್‌ ನಿಝಾಮುದ್ದೀನ್‌ ಅವರಿಗೆ ನನ್ನ ಸಂತಾಪಗಳು. ಅವರನ್ನು ಭೇಟಿಯಾದದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದಿದ್ದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬ್ರಿಟಿಷರ ಗುಂಡಿಗೆ ಎದೆ ಕೊಟ್ಟು ನಿಂತು ನೇತಾಜಿಯವರನ್ನು ರಕ್ಷಿಸಿದ ಕರ್ನಲ್‌ ನಿಝಾಮುದ್ದೀನ್‌ ಎನ್ನುವ ಮಹಾನ್‌ ದೇಶಪ್ರೇಮಿ ನಿಧನರಾಗಿ 5 ವರ್ಷಗಳೇ ಸಂದಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News