ಸಿಯಾಚಿನ್‍ನಲ್ಲಿ ನಾಪತ್ತೆಯಾದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!

Update: 2022-08-15 02:42 GMT
(HT PHOTO)

ಡೆಹ್ರಾಡೂನ್: ವಿಶ್ವದ ಅತಿ ಎತ್ತರದ ಯುದ್ಧಾಂಗಣ ಎನಿಸಿದ ಸಿಯಾಚಿನ್‍ನಲ್ಲಿ 1984ರಲ್ಲಿ ನಾಪತ್ತೆಯಾಗಿದ್ದ ಉತ್ತರಾಖಂಡದ ಹಲ್ದ್ವಾನಿ ಮೂಲದ ಸೈನಿಕರೊಬ್ಬರ ಅವಶೇಷ 38 ವರ್ಷಗಳ ಬಳಿಕ ಪತ್ತೆಯಾಗಿದೆ ಎಂದು hindustantimes.com ವರದಿ ಮಾಡಿದೆ.

ಸೇನೆಯ 19 ಕುಮಾನ್ ರೆಜಿಮೆಂಟ್‍ನ ಅಧಿಕಾರಿಗಳು ಈ ಬಗ್ಗೆ ರವಿವಾರ ಮಾಹಿತಿ ನೀಡಿದ್ದಾಗಿ 63 ವರ್ಷ ವಯಸ್ಸಿನ ವಿಧವೆ ಪತ್ನಿ ಶಾಂತಿದೇವಿ ಹೇಳಿದ್ದಾರೆ. ಇವರ ಪತಿ ಚಂದ್ರಶೇಖರ್ ಹರ್ಬೋಲ್ ಅವರು ಲ್ಯಾನ್ಸ್ ನಾಯ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಸಿಯಾಚಿನ್‍ನಲ್ಲಿ ಹಳೆಯ ಬಂಕರ್ ಒಂದರಲ್ಲಿ ಚಂದ್ರಶೇಖರ್ ಹರ್ಬೋಲ್ ಅವರ ಶವದ ಅವಶೇಷಗಳು ಪತ್ತೆಯಾಗಿವೆ ಎಂದು ಅವರು ಹೇಳಿದ್ದಾರೆ. "ಇದೀಗ 38 ವರ್ಷಗಳೇ ಕಳೆದುಹೋಗಿವೆ. ನಿಧಾನವಾಗಿ ಎಲ್ಲ ಹಳೆಯ ಗಾಯಗಳು ಮತ್ತೆ ತೆರೆದುಕೊಳ್ಳುತ್ತಿವೆ.. ಅವರು ನಾಪತ್ತೆಯಾದಾಗ ನನಗೆ 25 ವರ್ಷ. 1975ರಲ್ಲಿ ನಮ್ಮ ವಿವಾಹವಾಗಿತ್ತು. ಒಂಬತ್ತು ವರ್ಷ ಬಳಿಕ ಅವರು ನಾಪತ್ತೆಯಾದಾಗ ನಾಲ್ಕು ಹಾಗೂ ಒಂದೂವರೆ ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು" ಎಂದು ದೇವಿ ವಿವರಿಸಿದರು. ದೇವಿ ಮತ್ತೆ ಮದುವೆಯಾಗಿಲ್ಲ.

ನಾಪತ್ತೆಯಾದ ಕೆಲ ಸಮಯದ ಬಳಿಕ ಅವರಿಗೆ ತರ್ಪಣ ನೀಡಿದ್ದೆವು. ಬಳಿಕ ನನ್ನ ಮಕ್ಕಳನ್ನು ಬೆಳೆಸಲು ಜೀವನ ಮುಡಿಪಾಗಿಟ್ಟೆ. ಹಲವು ಅಡೆ ತಡೆಗಳು ಮತ್ತು ಸವಾಲುಗಳ ಬಳಿಕ ಹೆಮ್ಮೆಯ ತಾಯಿಯಾಗಿ, ಹುತಾತ್ಮ ಯೋಧನ ಪತ್ನಿಯಾಗಿ ಮಕ್ಕಳನ್ನು ಬೆಳೆಸಿದೆ ಎಂದು ಅವರು ಹೇಳಿದರು.

ಹರ್ಬೋಲ್ ಅವರ ಅವಶೇಷಗಳು ಮಂಗಳವಾರ ಕುಟುಂಬದ ಕೈಸೇರುವ ನಿರೀಕ್ಷೆ ಇದೆ. "ಅಧಿಕಾರಿಗಳು, ನಮ್ಮ ಊರಿನ ಹಾಗೂ ಪಕ್ಕದ ಊರುಗಳ ಜನ ಬರುತ್ತಿದ್ದಾರೆ. ಹರ್ಬೋಲ್ ನಮ್ಮ ಹೀರೊ. ದೇಶ ನಮ್ಮ ಯೋಧನ ತ್ಯಾಗ, ಬಲಿದಾನಗಳನ್ನು ಸ್ಮರಿಸಿಕೊಳ್ಳುವ ವೇಳೆ ಅವರ ತ್ಯಾಗವನ್ನೂ ನೆನಪಿಸಿಕೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ಇಷ್ಟು ವರ್ಷದ ಬಳಿಕ ಅವರು ಮರಳಿ ಬರುತ್ತಾರೆ ಎಂಬ ನಿರೀಕ್ಷೆ ನಮಗೆ ಇರಲಿಲ್ಲ. ಯೋಧರ ಸಂಖ್ಯೆಯನ್ನು ಹೊಂದಿದ್ದ ಲೋಹದ ಬಿಲ್ಲೆಯ ಸಹಾಯದಿಂದ ಅವರ ಅವಶೇಷಗಳನ್ನು ಪತ್ತೆ ಮಾಡಲಾಗಿದೆ ಎಂದು ನಮಗೆ ಹೇಳಿದ್ದಾರೆ. ಇದೀಗ ಅವಶೇಷಗಳಾದರೂ ಸಿಗುತ್ತಿವೆ. ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುತ್ತೇವೆ. ತಂದೆ ಮನೆಗೆ ಮರಳುತ್ತಿದ್ದಾರೆ. ಆದರೆ ಈ ಸ್ವಾತಂತ್ರ್ಯ ಸಂಭ್ರಮದಲ್ಲಿ ಅವರು ನಮ್ಮ ಜತೆ ಇರಬೇಕಿತ್ತು" ಎಂದು 42 ವರ್ಷ ವಯಸ್ಸಿನ ಪುತ್ರಿ ಕವಿತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News