ನಾವು ಮರೆತ ಮಹನೀಯರು: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರಕಲಿ ಮೌಲ್ವಿ ಲಿಯಾಖತ್ ಅಲಿ

Update: 2022-08-15 06:56 GMT
ಮೌಲ್ವಿ ಲಿಯಾಖತ್ ಅಲಿ ( Photo credit: thewire.in

ಬ್ರಿಟಿಷರ ವಿರುದ್ಧ ಭಾರತದ ಜನರು ಸಿಡಿದೆದ್ದ 1857ರ ದೇಶದ ಮೊದಲ ಏಕೀಕೃತ  ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕನಾಗಿದ್ದೂ ಮರೆತುಹೋಗಿರುವ ಮಹನೀಯರ ಸಾಲಿನಲ್ಲಿ ಮೌಲ್ವಿ ಲಿಯಾಖತ್ ಅಲಿ ಕೂಡ ಒಬ್ಬರು. 

ಅಲಹಾಬಾದ್ ನ ಮುಸ್ಲಿಂ ಧಾರ್ಮಿಕ ನಾಯಕನಾಗಿದ್ದರು ಅಲಿ. ಉತ್ತರ ಪ್ರದೇಶದ ಈಗಿನ ಪ್ರಯಾಗ್ ರಾಜ್ ಜಿಲ್ಲೆಯ ಮಹಾಗಾಂವ್ ಗ್ರಾಮದಲ್ಲಿ 1819ರಲ್ಲಿ ಅಲಿ ಜನಿಸಿದರು. ಧಾರ್ಮಿಕ ಶಿಕ್ಷಣ ಪಡೆದಿದ್ದ ಇವರು ಇಸ್ಲಾಮಿಕ್ ಪಂಡಿತನಾಗಿದ್ದರು. ಧರ್ಮನಿಷ್ಠ ಮತ್ತು ಮಹಾನ್ ಧೈರ್ಯವಂತ, ಪರಾಕ್ರಮಶಾಲಿ ವ್ಯಕ್ತಿಯಾಗಿದ್ದ ಅಲಿ ಅಷ್ಟೇ ವಿನಮ್ರ ಮತ್ತು ಸರಳ ವ್ಯಕ್ತಿಯೂ ಆಗಿದ್ದರು. ಆದರೆ ಯಾವಾಗ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರೋ ಆ ಘಳಿಗೆಯಿಂದ ಅಲಿ ಬ್ರಿಟಿಷರ ಪಾಲಿನ ಸಿಂಹಸ್ವಪ್ನವೂ ಆದರು.

ಅಲ್ಲಿನ ಜಮೀನ್ದಾರರು ಅಲಿಯ ಸಂಬಂಧಿಗಳೂ ಅನುಯಾಯಿಗಳೂ ಆಗಿದ್ದರು. ಅವರೆಲ್ಲರ ಬೆಂಬಲವೂ ಅಲಿಗೆ ಸಿಕ್ಕಿತು. ಅಲಹಾಬಾದ್ ನಗರವನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ಖುಸ್ರೋ ಬಾಗನ್ನು ಅಲಿ ವಶಪಡಿಸಿಕೊಂಡು ಸ್ವಾತಂತ್ರ್ಯ ಘೋಷಿಸಿಕೊಂಡಾಗ ಅದನ್ನು ಮರಳಿ ಪಡೆಯುವುದೇ ಕಷ್ಟವಾಗಿಬಿಟ್ಟಿತ್ತು ಬ್ರಿಟಿಷರಿಗೆ. ಸ್ವತಂತ್ರ ಅಲಹಾಬಾದ್ ನ  ಗವರ್ನರ್ ಆಗಿ ಲಿಯಾಖತ್ ಅಲಿ ಅಧಿಕಾರ ವಹಿಸಿಕೊಂಡ ಬಳಿಕ ಖುಸ್ರೋಬಾಗ್ ಅಲಿಯವರ ಸಿಪಾಯಿಗಳ ಪ್ರಧಾನ ನೆಲೆಯಾಯಿತು. ಅಲಿಯದ್ದೆಂಥ ಪಟ್ಟಾಗಿತ್ತೆಂದರೆ ಮರಳಿ ಅಲಹಾಬಾದನ್ನು  ವಶಪಡಿಸಿಕೊಳ್ಳಲು ಸತತ ಎರಡು ವಾರ ತಿಣುಕಾಡಬೇಕಾಯಿತು ಬ್ರಿಟಿಷರು. 

ಅಲಹಾಬಾದ್ ಮರಳಿ ಬ್ರಿಟಿಷರ ವಶವಾದ ಮೇಲೆ ಅಲಿ ತನ್ನ ಕೆಲವು ಗೆಳೆಯರು ಮತ್ತು ಕ್ರಾಂತಿಕಾರಿ ಸಿಪಾಯಿಗಳೊಂದಿಗೆ ಪರಾರಿಯಾದರು. ಆದರೆ 14 ವರ್ಷಗಳ ಬಳಿಕ 1871ರಲ್ಲಿ ಮುಂಬೈನ ಬೈಕುಲ್ಲಾ ರೈಲು ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದರು. ರಂಗೂನ್ ನಲ್ಲಿ ಸೆರೆಯಲ್ಲಿದ್ದಾಗಲೇ 1892ರ ಮೇ 17ರಂದು ಸಾವನ್ನಪ್ಪಿದರು. 

ಅಲಿಯವರ ಚಿಕ್ಕಪ್ಪ ಕಂಪನಿ ಬಹದೂರ್ ಸೇನೆಯಲ್ಲಿ ಕೆಲಸದಲ್ಲಿದ್ದುದರಿಂದ ಅವರ ಜೊತೆ ಅಲಿ ಕೂಡ ಕೆಲ ಕಾಲ ಕೆಲಸ ಮಾಡಿದ್ದರು. ಆದರೆ ಸ್ಥಳೀಯ ಸೈನಿಕರನ್ನು ಬ್ರಿಟಿಷ್ ಅಧಿಕಾರಿಗಳು ಕೀಳಾಗಿ ನಡೆಸಿಕೊಳ್ಳುತ್ತಿದ್ದುದನ್ನು ವಿರೋಧಿಸಿದ್ದರಿಂದಾಗಿ ಅಲಿ ಕೆಲಸ ಕಳೆದುಕೊಳ್ಳಬೇಕಾಯಿತು.

ಸೇನೆಯ ಕೆಲಸ ಹೋದ ಮೇಲೆ ಹಳ್ಳಿಗೆ ಮರಳಿದ ಬಳಿಕ ದೆಹಲಿ, ಭೋಪಾಲ್ ಗೆ ಹೋಗುತ್ತಿದ್ದ ಅಲಿ ಸಯ್ಯಿದ್ ಅಹಮದ್ ಶಹೀದಿಯವರನ್ನು ಭೇಟಿಯಾದರು. ಅಹಮದ್ ಶಹೀದಿ ಅದಾಗಲೇ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧದಲ್ಲಿ ತೊಡಗಿಸಿಕೊಂಡವರಾಗಿದ್ದರು. ಈ ಭೇಟಿಯೇ ಬಹುಶಃ ಅಲಿಯನ್ನು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಪ್ರೇರೇಪಿಸಿರಬೇಕು. ಅಲಹಾಬಾದ್, ಮಿರ್ಜಾಪುರ್ ಮತ್ತು ಪ್ರತಾಪ್ ಘರ್ ನ ಜಮೀನ್ದಾರರು, ತಾಲೂಕ್ದಾರರು ಮತ್ತು ಜನಸಾಮಾನ್ಯರ ನಡುವೆ ಜನಪ್ರಿಯರಾಗಿದ್ದ ಅಲಿ ಬಹುಬೇಗನೆ ರೋಹಿಲ್ಖಂಡ್, ಅವಧ್ ಮತ್ತು ಕಾನ್ಪುರಗಳಲ್ಲಿ ಹೀರೋ ಆಗಿಬಿಟ್ಟರು. ಅವರ ಪ್ರಭಾವ ಬಹಳ ಬೇಗ ಅಲಹಾಬಾದ್ ನ ದಾರಾಗಂಜ್, ಕೈದ್ಗಂಜ್, ಬೇನಿಗಂಜ್ ನ ಪ್ರಗ್ವಾಲ್ ಬ್ರಾಹ್ಮಣರ ಮೇಲೆಯೂ, ಹಾಗೆಯೇ  ಮುಸ್ಲಿಮರೇ ಹೆಚ್ಚಿದ್ದ ಸೈದಾಬಾದ್, ರಾಣಿಮಂಡಿ, ದರಿಯಾಬಾದ್, ಸಮದಾಬಾದ್, ನವಾಡಾ ಮತ್ತಿತರ ಪ್ರದೇಶಗಳ ಮೇಲೆಯೂ ಆಯಿತು. ಅಲಿಯವರ ಈ ಪ್ರಯತ್ನದ ಫಲವಾಗಿ, ಯಾವಾಗ 1857ರ ಕ್ರಾಂತಿಯ ಕಹಳೆಯ ಸದ್ದಾಯಿತೊ ಆಗ ಅಲಹಾಬಾದ್ ನ ಜನ ದಂಗೆಯಲ್ಲಿ ಮುಂಚೂಣಿಯಲ್ಲಿದ್ದರು. 

ಅಲಹಾಬಾದ್ ಕಂಟೋನ್ಮೆಂಟ್ ಮೇಲೆ ಕ್ರಾಂತಿಕಾರಿಗಳ ಪಡೆ ದಾಳಿ ನಡೆಸಿದಾಗ ಬ್ರಿಟಿಷರ ಕಡೆಯ ಸೇನೆಯ ನೆರವೂ ಕೂಡ ಕ್ರಾಂತಿಕಾರಿಗಳಿಗೆ ಸಿಕ್ಕಿತು. ತಮ್ಮದೇ ಅಧಿಕಾರಿಗಳನ್ನು ಬ್ರಿಟಿಷ್ ಕಾಲಾಳು ಪಡೆ ಹತ್ತಿರದಿಂದಲೇ ಹೊಡೆದುಹಾಕಿತು. ನಿಯಂತ್ರಣ ಪೂರ್ತಿ ಅಲಿಯ ಕೈಗೆ ಸಿಕ್ಕಿತು. ಮತ್ತೆ ಬ್ರಿಟಿಷರ ವಶಕ್ಕೆ ಅಲಹಾಬಾದ್ ಹೊಗುವವರೆಗಿನ ಎರಡು ವಾರಗಳ ಅವಧಿಯಲ್ಲಿ ಅಲಿ ಮಾನವೀಯ ಆದೇಶಗಳನ್ನು ಮಾಡಿದರು. ನಿಯಂತ್ರಿಸಲಾರದಂಥ ಸ್ಥಿತಿಯಲ್ಲಿದ್ದ ತನ್ನ ಕ್ರಾಂತಿಕಾರಿ ಸೇನೆಯನ್ನು ಲಿಖಾಯತ್ ಅಲಿ ಯಾವುದೇ ದರೋಡೆ, ರಕ್ತಪಾತಕ್ಕೆ ಇಳಿಯದಂತೆ ತಡೆದಿದ್ದರು. ಆದರೆ ಅಲಹಾಬಾದ್ ಕೋಟೆಯನ್ನು ವಶ ಮಾಡಿಕೊಳ್ಳುವ ಅವರ ಉದ್ದೇಶ ಫಲಿಸಲಿಲ್ಲ. ಬ್ರಿಟಿಷರೊಂದಿಗಿನ ಮುಖಾಮುಖಿಯಲ್ಲಿ ಅಲಿ ಕಡೆಯ ಸೈನಿಕರು ದೊಡ್ಡ ಪ್ರಮಾಣದಲ್ಲಿ ಸಾವಿಗೀಡಾದರು. ಸಿಖ್ ರೆಜಿಮೆಂಟ್ ನ 400 ಸೈನಿಕರ ಬೆಂಬಲವೂ ಸಿಕ್ಕಿತೆಂಬ ನಿರೀಕ್ಷೆ ಅಲಿಗೆ ಇತ್ತು. ಆದರೆ ಅವರು ಮಾತ್ರ ಬ್ರಿಟಿಷರಿಗೇ ನಿಷ್ಠರಾಗಿ ಉಳಿದುಬಿಟ್ಟರು.

ಮತ್ತೆ ಅಲಹಾಬಾದ್ ವಶವಾದ ಮೇಲೆ ಬ್ರಿಟಿಷರು ಮಾಡಿದ್ದು ಮಾತ್ರ ಮಾರಣಹೋಮ. ಹಳ್ಳಿಹಳ್ಳಿಗಳನ್ನೇ ಸುಟ್ಟುಹಾಕಿದರು. ತಪ್ಪಿಸಿಕೊಳ್ಳಲೆತ್ನಿಸಿದವರನ್ನು ಗುಂಡು ಹಾರಿಸಿ ಕೊಂದರು. ಹೀಗೆ ದಂಗೆಯಲ್ಲಿ ಅಲಹಾಬಾದ್ ನಗರದ 6 ಸಾವಿರ ಮಂದಿ ಕೊಲ್ಲಲ್ಪಟ್ಟರು. 600ರಿಂದ 800 ಜನರನ್ನು ಗಲ್ಲಿಗೇರಿಸಲಾಯಿತು. ಇದೆಲ್ಲದರ ನಡುವೆಯೂ ಅಲಿ ಮತ್ತವರ ಸೈನಿಕರ ಹೋರಾಟ ನಿಂತಿರಲಿಲ್ಲ. 1858ರವರೆಗೂ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸಿದ್ದ ಲಿಖಾಯತ್ ಅಲಿ ಬ್ರಿಟಿಷರೊಂದಿಗಿನ ಅಂತಿಮ ಮುಖಾಮುಖಿಯಲ್ಲೂ ಅವರದೇ ಕೈಮೇಲಾದಾಗ ಪರಾರಿಯಾಗಿ ಗುಜರಾತ್ ನ ಸೂರತ್ ನಲ್ಲಿ  ಭೂಗತನಾದರು. ಬಳಿಕ ಮುಂಬೈಗೆ ಹೋದರು . ಅಲ್ಲಿ ಮಸೀದಿಗಳಲ್ಲಿ ಧರ್ಮೋಪದೇಶ ನೀಡುತ್ತಿದ್ದಾಗ ಪ್ರೇಕ್ಷಕರ ಸಾಲಿನಲ್ಲಿದ್ದ ಇಬ್ಬರು ಅಲಿಯವರನ್ನು ಗುರುತಿಸಿ ಬ್ರಿಟಿಷರಿಗೆ ಮಾಹಿತಿ ನೀಡಿದರು.

1871ರ ಜುಲೈ 7ರಂದು ಬ್ರಿಟಿಷರು ಅಲಿಯವರನ್ನು ಬಂಧಿಸಿದರು. ಇದು ನ್ಯೂಯಾರ್ಕ್ ಟೈಮ್ಸ್, ಟೈಮ್ಸ್ ಲಂಡನ್ ಮತ್ತು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಗಳಲ್ಲಿ ವರದಿಯಾಯಿತು. ಒಂದು ವರ್ಷ ಜೈಲಿನಲ್ಲಿಟ್ಟು ಬಳಿಕ ವಿಚಾರಣೆಗಾಗಿ ಅಲಹಾಬಾದ್ ಗೆ ಕರೆತರಲಾಯಿತು. ಆಗ ಕೋರ್ಟ್ ಎದುರು ಅಲಿಯ ಸಹಸ್ರಾರು ಅಭಿಮಾನಿಗಳು ಸೇರಿದ್ದರು. ಕಾನ್ಪುರ ದಂಗೆಯಲ್ಲಿ ಬದುಕುಳಿದಿದ್ದ ಏಕೈಕ ಬ್ರಿಟಿಷ್ ಮಹಿಳೆ, ಆಗ 17 ವರ್ಷದವಳಾಗಿದ್ದ ಅಮಿ ಹರ್ನೇ ಬಂದು ಸಾಕ್ಷಿ ನುಡಿದಳು. ತನ್ನನ್ನು ರಕ್ಷಿಸಿದ್ದು ಮತ್ತು ತನ್ನನ್ನು ಕುಟುಂಬದೊಂದಿಗೆ ಸೇರಿಸಿದ್ದು ಅಲಿ ಎಂದು ಆಕೆ ಹೇಳಿದ ಬಳಿಕ ಮರಣದಂಡನೆ ಶಿಕ್ಷೆಯನ್ನು ನ್ಯಾಯಾಧೀಶರು ಕಾಲಾಪಾನಿ ಶಿಕ್ಷೆಗೆ ಇಳಿಸಿದ್ದರು. 

ಸ್ವಾತಂತ್ರ್ಯಾನಂತರ ಅಲಿ ವಂಶಸ್ಥರನ್ನು 1957ರಲ್ಲಿ ನೆಹರೂ ಭೇಟಿಯಾಗಿದ್ದರು. ಅವರ ಖಡ್ಗ ಮತ್ತು ಹರಿದ ಕುರ್ತಾ ಪೈಜಾಮವನ್ನು ಅಲಹಾಭಾದ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿತ್ತು. ಇಂದು ದಿನಕ್ಕೊಂದು ಹೆಸರು ಬದಲಿಸುವ ರಾಜ್ಯದಲ್ಲಿ ಈ ಮರೆತ ಮಹನೀಯನ ನೆನಪು ಸರ್ಕಾರಕ್ಕೆ ಇಲ್ಲವಾದರೂ, ಜನಮಾನಸದಲ್ಲಿ ಲಿಖಾಯತ್ ಅಲಿ ಚಿರಸ್ಥಾಯಿ. ಅದಕ್ಕೆ, ಆ ಭಾಗದ ಜನಪದರ ಹಾಡುಗಳಲ್ಲಿ ಅವರ  ಗುಣಗಾನವಿರುವುದೇ ಸಾಕ್ಷಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News