ನಾವು ಮರೆತ ಮಹನೀಯರು: ರೌಲಟ್ ಕಾಯ್ದೆ ವಿರುದ್ಧದ ಹೋರಾಟದ ಹೀರೋ ಡಾ. ಸೈಫುದ್ದೀನ್ ಕಿಚ್ಲಿ

Update: 2022-08-15 09:05 GMT
ಡಾ. ಸೈಫುದ್ದೀನ್ ಕಿಚ್ಲಿ (Photo: thebetterindia)

ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರ, ಹಿಂದೂ-ಮುಸ್ಲಿಂ ಏಕತೆಯ ಪ್ರತಿಪಾದಕ, ಶಿಕ್ಷಣ ತಜ್ಞ ಮತ್ತು ನ್ಯಾಯವಾದಿ ಡಾ ಸೈಫುದ್ದೀನ್ ಕಿಚ್ಲಿ ಸ್ವಾತಂತ್ರ್ಯಪೂರ್ವ ಭಾರತದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧದ ಪ್ರತಿಭಟನೆಯ ಮುಂದಾಳುವಾಗಿ ಹೆಸರಾಗಿದ್ದವರು. ಭಗತ್ ಸಿಂಗ್ ಸ್ಥಾಪಿಸಿದ ನೌ ಜವಾನ್ ಭಾರತ್ ಸಭಾದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಖಿಲಾಫತ್ ಆಂದೋಲನದಲ್ಲಿ ಅವರದು ಪ್ರಮುಖ ಪಾತ್ರ. ಯುವಜನರಲ್ಲಿ ರಾಷ್ಟ್ರೀಯತೆಯ ವಿಚಾರಗಳನ್ನು ಜನರಲ್ಲಿ ತುಂಬುವಲ್ಲಿ ಪ್ರಭಾವಶಾಲಿಯಾಗಿದ್ದರು. ಸ್ವಾತಂತ್ರ್ಯದ ನಂತರ ಸೋವಿಯತ್-ಭಾರತದ ಸಂಬಂಧ ವೃದ್ಧಿಗೆ ಕೆಲಸ ಮಾಡಿದರು.  

ಡಾ. ಸೈಫುದ್ದೀನ್ ಕಿಚ್ಲಿ 1888ರ ಜನವರಿ 15 ರಂದು ಅಮೃತಸರಕ್ಕೆ ಸ್ಥಳಾಂತರಗೊಂಡ ಕಾಶ್ಮೀರಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪಶ್ಮಿನಾ ಮತ್ತು ಕೇಸರಿ ವ್ಯಾಪಾರಿಯಾಗಿದ್ದರು ಮತ್ತು ಮೂಲತಃ ಬಾರಾಮುಲ್ಲಾದ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರು.

ಅವರ ಪೂರ್ವಜರಾದ ಪ್ರಕಾಶ್ ರಾಮ್ ಕಿಚ್ಲೆವ್ ಅವರು ಇಸ್ಲಾಂ ಧರ್ಮ ಸ್ವೀಕರಿಸಿದರು ಮತ್ತು ಅವರ ಅಜ್ಜ ಅಹ್ಮದ್ ಜೋ, 1871 ರ ಕಾಶ್ಮೀರ ಬರದ ನಂತರ 19 ನೇ ಶತಮಾನದ ಮಧ್ಯಭಾಗದಲ್ಲಿ ಕಾಶ್ಮೀರದಿಂದ ವಲಸೆ ಬಂದರು.

ಕಿಚ್ಲೆವ್ ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 1913 ರಲ್ಲಿ ಜರ್ಮನಿಯಿಂದ ಪಿಎಚ್‌ಡಿ ಪಡೆದರು. ವಿದೇಶದಿಂದ ಹಿಂದಿರುಗಿದ ಬಳಿಕ ಅಮೃತಸರದಲ್ಲಿ ವಕೀಲಿಕೆ ಪ್ರಾರಂಭಿಸಿದರು. 

ಅವರ ಕ್ರಾಂತಿಕಾರಿ ಆಕಾಂಕ್ಷೆಗಳು ಅವರ ಕೇಂಬ್ರಿಡ್ಜ್ ಓದಿನ ಹೊತ್ತಿನವಾಗಿದ್ದವು. ಭಾರತದ ವಸಾಹತುಶಾಹಿ ಸಂಕಟಗಳನ್ನೆಲ್ಲ ಅಲ್ಲಿ ಭಾರತೀಯ ವಿದ್ಯಾರ್ಥಿಗಳು ಚರ್ಚಿಸುತ್ತಿದ್ದರು. ಈ ಸಭೆಗಳಲ್ಲೇ ಅವರಿಗೆ ಭಾರತದ ಭವಿಷ್ಯದ ಪ್ರಧಾನಿ ಜವಾಹರಲಾಲ್ ನೆಹರು ಅವರ ಭೇಟಿಯೂ ಆಗಿತ್ತು.

ಗಾಂಧಿ ಮತ್ತು ರಾಷ್ಟ್ರೀಯ ಚಳವಳಿಯಿಂದ ಸೈಫುದ್ದೀನ್ ಆಳವಾಗಿ ಪ್ರಭಾವಿತರಾಗಿದ್ದರು ಮತ್ತು ಅದರಲ್ಲಿ ಸಕ್ರಿಯರಾಗಲು ವಕೀಲಿಕೆ ತೊರೆದರು.

ಮಾರ್ಚ್ 1919 ರಲ್ಲಿ, ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ರೌಲಟ್ ಕಾಯಿದೆಯನ್ನು ಅಂಗೀಕರಿಸಿತು. ಇದು ಯುದ್ಧಕಾಲದ ತುರ್ತು ಕ್ರಮಗಳಿಗೆ ಸಾಂವಿಧಾನಿಕ ನ್ಯಾಯಸಮ್ಮತತೆಯನ್ನು ನೀಡುವ ಕಾನೂನಾಗಿತ್ತು. ಪತ್ರಿಕಾ ಸ್ವಾತಂತ್ರ್ಯ ಕಸಿಯಲು, ವಾರಂಟ್‌ಗಳಿಲ್ಲದೆ ಬಂಧಿಸಲು ಮತ್ತು ಸಾಕ್ಷ್ಯಾಧಾರಗಳಿಲ್ಲದೆ ರಾಜಕೀಯ ಶಂಕಿತರನ್ನು ಬಂಧಿಸಲು ಇದು ಸರ್ಕಾರಕ್ಕೆ ಅಧಿಕಾರ ನೀಡಿತ್ತು.

ಈ ಕರಾಳ ಕಾಯಿದೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಸೈಫುದ್ದೀನ್  ಹರತಾಳಕ್ಕೆ ಒತ್ತಾಯಿಸಿದರು, ವ್ಯಾಪಾರವನ್ನು ಸ್ಥಗಿತಗೊಳಿಸುವಂತೆ ಮತ್ತು ಬ್ರಿಟಿಷ್ ಸರ್ಕಾರದ ವಿರುದ್ಧ ಅಹಿಂಸಾತ್ಮಕ ಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಜನರನ್ನು ಒತ್ತಾಯಿಸಿದರು.

ಸೈಫುದ್ದೀನ್  ಅವರ ಮನವಿ  ಪಂಜಾಬ್‌ನ ಜನರಲ್ಲಿ ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿತು. 1919ರ ಮಾರ್ಚ್ 30ರಂದು ಅವರ ಸಾರ್ವಜನಿಕ ಸಭೆಯಲ್ಲಿ ಸುಮಾರು 30,000 ಜನರು ಭಾಗವಹಿಸಿದ್ದರು, ಅಲ್ಲಿ   ಅವರ ಮಾತು ಜನರನ್ನು ಪ್ರಭಾವಿಸಿತು. 1919ರ ಏಪ್ರಿಲ್ 9ರಂದು, ಸೈಫುದ್ದೀನ್  ಮತ್ತು ಡಾ ಸತ್ಯಪಾಲ್ ಅವರು ಅಮೃತಸರದ ಹೃದಯಭಾಗದ ಮೂಲಕ ಸಾಗಿದ ಸರ್ಕಾರ ವಿರೋಧಿ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಇಬ್ಬರನ್ನೂ ಬಂಧಿಸಲಾಯಿತು. 

ಕೆಲವೇ ದಿನಗಳ ನಂತರ ಅಂದರೆ 1919ರ ಏಪ್ರಿಲ್ 13ರಂದು ಬ್ರಿಗೇಡಿಯರ್-ಜನರಲ್ ಡೈಯರ್ ಮತ್ತು ಅವನ ಪಡೆಗಳು ಶಾಂತಿಯುತ ಗುಂಪಿನ ಮೇಲೆ 1,650 ಸುತ್ತು ಗುಂಡುಗಳನ್ನು ಹಾರಿಸಿ ಕನಿಷ್ಠ 500-600 ಜನರನ್ನು ಕೊಂದವು. ಅತಿ ದೊಡ್ಡ ಹತ್ಯಾಕಾಂಡವೊಂದು  ನಡೆದುಹೋಯಿತು. 1919ರ ಡಿಸೆಂಬರ್ನಲ್ಲಿ ಸರ್ಕಾರವು ಸೈಫುದ್ದೀನ್ ಅವರನ್ನು ಬಿಡುಗಡೆ ಮಾಡಿತು.

ಸೈಫುದ್ದೀನ್ ಅಖಿಲ ಭಾರತ ಖಿಲಾಫತ್ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಾಗ, ಕೋಮು ಹಗೆತನದ ವಾತಾವರಣದ ವಿರುದ್ಧ ಏಕೀಕೃತ ರಾಷ್ಟ್ರೀಯತೆಯ ಉದ್ದೇಶಕ್ಕೆ ಬದ್ಧರಾದರು. ಭಾರತದ ಬಹುದೊಡ್ಡ ಶತ್ರು ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಒಗ್ಗಟ್ಟಿನ ಕ್ರಮದಿಂದ ಮಾತ್ರ ಅದನ್ನು ಸೋಲಿಸಲು ಸಾಧ್ಯ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಧಾರ್ಮಿಕ ನೆಲೆಯಲ್ಲಿ ವಿಭಜನೆಯ ಕಲ್ಪನೆಯನ್ನು ಅವರು ಬಲವಾಗಿ ವಿರೋಧಿಸಿದರು. 

ದೇಶ ವಿಭಜನೆ ಪ್ರಸ್ತಾವವನ್ನು ಅತ್ಯಂತ ಕಟುವಾಗಿ ಸೈಫುದ್ದೀನ್ ಅವರು ವಿರೋಧಿಸಿದರು. ಅದರ ವಿರುದ್ಧ ಮಾತನಾಡಿದರು. ಕೊನೆಗೂ ದೇಶ ವಿಭಜನೆ ಅನಿವಾರ್ಯವಾದಾಗ ಅದನ್ನು ಕೋಮುವಾದದ ಎದುರು ರಾಷ್ಟ್ರೀಯತೆಯ ಶರಣಾಗತಿ ಎಂದು ಬಣ್ಣಿಸಿದರು. ಸೈಫುದ್ದೀನ್ ಅವರು ಹಿಂದೂ ಮುಸ್ಲಿಮರ ನಡುವೆ ಸೃಷ್ಟಿಯಾಗಿದ್ದ ಉದ್ವಿಗ್ನತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1947ರ ಕೋಮು ಹಿಂಸಾಚಾರದ ಸಮಯದಲ್ಲಿ ಅಮೃತಸರದಲ್ಲಿರುವ ಅವರ ಮನೆಯೇ ಸುಟ್ಟು ಬೂದಿಯಾಯಿತು ಮತ್ತು ಅವರು ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲಿ ಆಶ್ರಯ ಪಡೆಯಬೇಕಾಯಿತು.

ನಂತರ ಅಮೃತಸರಕ್ಕೆ ಹಿಂದಿರುಗಿದ ಅವರ ಮಗ ತೌಫಿಕ್ ಕಿಚ್ಲಿ ತನ್ನ ಜನ್ಮಸ್ಥಳವನ್ನು ತೊರೆಯಬೇಕಾಯಿತು, ಏಕೆಂದರೆ ಯಾರೂ ಮುಸ್ಲಿಮರಿಗೆ ಆಶ್ರಯ ನೀಡಲು ಸಿದ್ಧರಿರಲಿಲ್ಲ.

ಸ್ವಾತಂತ್ರ್ಯದ ನಂತರ, ಸೈಫುದ್ದೀನ್  ಶಾಂತಿಯನ್ನು ಪುನಃಸ್ಥಾಪಿಸಲು ಮತ್ತು ಸೋವಿಯತ್ - ಭಾರತದ ಸಂಬಂಧಗಳನ್ನು ಪುನರ್ ವ್ಯಾಖ್ಯಾನಿಸಲು ಕೆಲಸ ಮಾಡುವುದನ್ನು ಮುಂದುವರೆಸಿದರು. ಅವರು 1952ರಲ್ಲಿ ಲೆನಿನ್ ಶಾಂತಿ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರಾದರು.

ಸೈಫುದ್ದೀನ್ ಅವರು ಹೃದಯಘಾತದಿಂದ 1963ರ ಅಕ್ಟೋಬರ್ 9ರಂದು ನಿಧನರಾದರು. ಅವರ ಮರಣದ ನಂತರ, ನೆಹರೂ ಹೇಳಿದ್ದು: “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಧೈರ್ಯಶಾಲಿ ಮತ್ತು ದೃಢ ನಾಯಕನಾಗಿದ್ದ ಆತ್ಮೀಯ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News