ಸ್ಮಾರ್ಟ್ ಸಿಟಿಗೆ ವಿರೂಪಗೊಳ್ಳದಿರಲಿ ಮಹಿಳಾ ಸಭಾ

Update: 2022-08-15 12:29 GMT

ರಸ್ತೆ ಅಭಿವೃದ್ಧಿಗಾಗಿ ಮಹಿಳಾ ಸಭಾದ ಜಮೀನು ಪಡೆಯ ಲಾಗಿದೆ. ಆದರೆ ಮುಖ್ಯ ಕಟ್ಟಡಕ್ಕೆ ಯಾವುದೇ ಹಾನಿಯಾಗು ವುದಿಲ್ಲ. ಮಹಿಳಾ ಸಭಾದ ಪ್ರತಿನಿಧಿಗಳ ಸಲಹೆ ಮೇರೆಗೆ ಕಟ್ಟಡದ ಸುತ್ತಮುತ್ತ ಸುಂದರೀಕರಣಕ್ಕೆ ಕ್ರಮ ವಹಿಸಲಾಗುವುದು.

 ಅರುಣ್ ಪ್ರಭಾ, ಜನರಲ್ ಮ್ಯಾನೇಜರ್ (ತಾಂತ್ರಿಕ), ಮಂಗಳೂರು ಸ್ಮಾರ್ಟ್ ಸಿಟಿ

ನಮ್ಮ ಮಹಿಳಾ ಸಭಾಕ್ಕೆ ಸ್ವಾತಂತ್ರ ಪೂರ್ವದ ಇತಿಹಾಸವಿದೆ. 1921ರಲ್ಲಿ, 900 ರೂ.ಗಳ ಸರಕಾರದ ಅನುದಾನದ ಸಹಾಯದಿಂದ ಸದಸ್ಯರಿಗಾಗಿ ಗ್ರಂಥಾಲಯವನ್ನು ಪ್ರಾರಂಭಿಸಲಾಯಿತು. ಆರಂಭದಲ್ಲಿ ಇಂಗ್ಲಿಷ್ ಮತ್ತು ಹಿಂದಿ ತರಗತಿಗಳು, ಹೊಲಿಗೆ, ಅಡುಗೆ, ಸಂಗೀತ ಸೇರಿದಂತೆ ಹಲವಾರು ಚಟುವಟಿಕೆಗಳನ್ನು ನಡೆಸಲಾಯಿತು. 1962ರಲ್ಲಿ ಚೀನಾದ ಆಕ್ರಮಣದಿಂದ ಭಾರತದ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಸದಸ್ಯರಿಂದ 225 ಗ್ರಾಂಗಿಂತ ಹೆಚ್ಚು ಚಿನ್ನವನ್ನು ಸಂಗ್ರಹಿಸಲಾಯಿತು ಮತ್ತು ಸದಸ್ಯರು ನಮ್ಮ ಸೈನಿಕರಿಗೆ ಹಲವಾರು ಬಟ್ಟೆಗಳನ್ನು ತಯಾರಿಸಿದ್ದರು. ಈ ಕಟ್ಟಡವನ್ನು ಸ್ಮಾರಕ ಮಾಡಬೇಕೆಂಬ ಇಚ್ಚೆಯಿದ್ದರೂ ಇಲ್ಲಿ ನಡೆಯುವ ಕಾರ್ಯ ಕಲಾಪಗಳಿಗೆ ಅಡ್ಡಿಯಾಗಬಹುದೆಂಬ ಆತಂಕವಿದೆ. ಮಹಿಳಾ ಸಭಾಕ್ಕೆ ಮೀಸಲಾಗಿದ್ದ ಸಾಕಷ್ಟು ಭೂಮಿ ರಸ್ತೆ ಅಗಲೀಕರಣದ ವೇಳೆ ನೀಡಲಾಗಿದೆ. ಸಮಾಜಕ್ಕಾಗಿ ರಸ್ತೆ ಅಗಲೀಕರಣಕ್ಕಾಗಿ ಭೂಮಿ ನೀಡುವುದು ಕರ್ತವ್ಯ. ಇದೀಗ ರಸ್ತೆ ಅಗಲಗೊಂಡು ನಮ್ಮ ಕಟ್ಟಡದ ಮೆಟ್ಟಿಲವರೆಗೂ ಬಂದು ಇಕ್ಕಟ್ಟಾಗಿದೆ. ಹೋದ ಜಾಗಕ್ಕೆ ಬದಲಾಗಿ ಸ್ಮಾರ್ಟ್ ಸಿಟಿಯಿಂದ ಒಳಗಡೆ ಬಯಲು ರಂಗ ಮಂದಿರ ರೀತಿಯಲ್ಲಿ ಅಭಿವೃದ್ಧಿಪಡಿಸುವ ವಾಗ್ದಾನ ಮಾಡಲಾಗಿದೆ. ಈ ಕಟ್ಟಡಕ್ಕೆ ಹಾನಿಯಾಗದಂತೆ ನಾವು ಇದನ್ನು ಉಳಿಸುತ್ತೇವೆ.

 ವಿಜಯಲಕ್ಷ್ಮಿ ಭಟ್, ಕೋಶಾಧಿಕಾರಿ, ಮಹಿಳಾ ಸಭಾ

ಸದಾಶಿವ ರಾವ್ ಹಾಗೂ ಶಾಂತಾ ಬಾಯಿ ಅವರ ಸ್ಮಾರಕವಾಗಬೇಕಾಗಿದ್ದ ಮಹಿಳಾ ಸಭಾದ ಕಟ್ಟಡವು ಈಗ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವಿರೂಪಗೊಳ್ಳ ಹೊರಟಿದೆ. ಮಹಿಳಾ ಸಭಾದ ಮುಂದಿರುವ ಫಲಕದಲ್ಲಿ ಮದ್ರಾಸ್ ಸರಕಾರ 1917ರಲ್ಲಿ 1.2 ಎಕರೆ ಸ್ಥಳವನ್ನು ನೀಡಿರುವ ಬಗ್ಗೆ ಹೇಳಲಾಗಿದೆ. ಆದರೆ ಈಗ ಇದರ ಬಗ್ಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ.

 ಡಾ.ಶ್ರೀನಿವಾಸ ಕಕ್ಕಿಲಾಯ, ವೈದ್ಯರು, ಮಂಗಳೂರು

ಮಂಗಳೂರು, ಆ. 14: ಸ್ವಾತಂತ್ರ ಹೋರಾಟಕ್ಕೂ ದ.ಕ. ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಸ್ವಾತಂತ್ರ ಹೋರಾಟದ ಮೊದಲ ಕಿಡಿ ಹತ್ತಿಕೊಂಡಿದ್ದು ಕೂಡಾ ದ.ಕ. ಜಿಲ್ಲೆಯಿಂದ ಎಂಬ ಹೆಮ್ಮೆಯ ಜತೆಯಲ್ಲೇ ಸ್ವಾತಂತ್ರ ಹೋರಾಟಗಾರರ ಕುರುಹು ಆಗಿ ನಗರದ ಹೃದಯ ಭಾಗದಲ್ಲಿರುವ ‘ಮಹಿಳಾ ಸಭಾ’ ಕಟ್ಟಡಕ್ಕೆ ಕಾಯಕಲ್ಪ ನೀಡಿ ಸಂರಕ್ಷಿಸುವ ಕೆಲಸ ಸ್ವಾತಂತ್ರದ ಅಮೃತ ಮಹೋತ್ಸವದಲ್ಲಿ ಆಗಬೇಕಾಗಿದೆ.

 ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಮಹಿಳಾ ಸಭಾ ಕಟ್ಟಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿ ದ್ದರೂ ಈ ಮಹಿಳಾ ಸಭಾ ಹುಟ್ಟಿಕೊಂಡಿದ್ದು, ಇಲ್ಲಿ ಕಟ್ಟಡ ರಚನೆಯಾಗಿರುವ ಇತಿಹಾಸದ ಬಗ್ಗೆ ಹೆಚ್ಚಾಗಿ ಯಾರೂ ತಿಳಿದಂತಿಲ್ಲ. ಈ ಕಟ್ಟಡದಲ್ಲಿ ಆಗಾಗ್ಗೆ ಕೆಲವೊಂದು ಪ್ರದರ್ಶನ, ಕಾರ್ಯಕ್ರಮಗಳನ್ನು ಹೊರತುಪಡಿಸಿ ಹೆಚ್ಚಾಗಿ ಈ ಕಟ್ಟಡವನ್ನು ನೋಡಿರುವವರೂ ಅಪರೂಪ. ಶತಮಾನದಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಈ ಮಹಿಳಾ ಸಭಾ ಕಟ್ಟಡದ ಸುತ್ತಲಿನ ಜಾಗ ರಸ್ತೆ ಅಗಲೀಕರಣಕ್ಕಾಗಿ ನೀಡಲ್ಪಟ್ಟಿದೆ. ಇತ್ತೀಚೆಗೆ ಸಂತ ಅಲೋಶಿಸ್ ಕಾಲೇಜಿನಿಂದ ಡಾ.ಅಂಬೇಡ್ಕರ್ ವೃತ್ತಕ್ಕೆ ಸಾಗುವ ರಸ್ತೆಯು ಮತ್ತಷ್ಟು ಅಗಲೀಕರಣಗೊಂಡು ಈ ರಸ್ತೆಯ ತುದಿಯು ಮೂರು ಲೇನ್ ಆಗಿ ವಿಭಜನೆಗೊಂಡು ಮಹಿಳಾ ಸಭಾ ಕಟ್ಟಡದ ಮೆಟ್ಟಿಲವರೆಗೂ ಜಾಗವನ್ನು ಕಬಳಿಸಿಕೊಂಡಿದೆ.

ಮಹಿಳಾ ಸಭಾ ಮತ್ತು ಕಟ್ಟಡವು ಸ್ವಾತಂತ್ರ ಪೂರ್ವದ ಇತಿಹಾಸವನ್ನು ಹೊಂದಿರುವುದು ಮಾತ್ರವಲ್ಲ ಸುಮಾರು 111 ವರ್ಷಗಳ ಅಮೋಘ ವರ್ಷಗಳನ್ನು ಸಾಗಿ ಬಂದ ಹಿನ್ನೆಲೆಯನ್ನು ಹೊಂದಿದೆ. ದ.ಕ. ಜಿಲ್ಲೆಯ ಹೆಮ್ಮೆಯ ಸ್ವಾತಂತ್ರ ಹೋರಾಟಗಾರ, ಮಹಾತ್ಮ ಗಾಂಧೀಜಿಯವರ ಸತ್ಯಾಗ್ರಹಕ್ಕೆ ದ.ಕ.ದಿಂದ ಪ್ರಥಮ ವಾಗಿ ಸಾಥ್ ನೀಡಿದ ಕಾರ್ನಾಡ್  ಸದಾಶಿವರಾವ್ ಮತ್ತು ಪತ್ನಿ ಶಾಂತಾ ಬಾಯಿ ಯಿಂದ ಈ ಮಹಿಳಾ ಸಭಾ ಮಂಗಳೂರಿ ನಲ್ಲಿ 1911ರಲ್ಲಿ ಆರಂಭ ಗೊಂಡಿತ್ತು. ವಿಧವೆಯರಿಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಈ ಮಹಿಳಾ ಸಭಾ ಆರಂಭಗೊಂಡಿರುವುದಾಗಿ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಸ್ವಾತಂತ್ರ ಹೋರಾಟಗಾರ ಕಾರ್ನಾಡ್ ಸದಾಶಿವ ರಾವ್ ಹಾಗೂ ಶಾಂತಾ ಬಾಯಿ ಅವರ ಮುತುವರ್ಜಿಯಿಂದ ಹುಟ್ಟಿಕೊಂಡಿದ್ದ ಮಹಿಳಾ ಸಭಾಕ್ಕೆ ಅಂದಿನ ಮದ್ರಾಸ್ ಸರಕಾರವು 1917ರಲ್ಲಿ 1.2 ಎಕರೆ ಸ್ಥಳವನ್ನು ನೀಡಿರುವ ಬಗ್ಗೆ ಮಹಿಳಾ ಸಭಾದಲ್ಲಿರುವ ಫಲಕದಲ್ಲಿಯೇ ಉಲ್ಲೇಖವಿದೆ.

 ಕಾರ್ನಾಡ್ ಸದಾಶಿವ ರಾವ್, ಬೆನೆಗಲ್ ಸಂಜೀವ ರಾವ್, ತೊಂಬಟ್ ಕೋಶವ ರಾವ್, ಗಿರಿಜಾ ಬಾಯ್(ಶ್ರೀಮತಿ ಕಲಾದೇವಿ ಚಟ್ಟೋಪಾಧ್ಯಾಯ ಅವರ ತಾಯಿ) ಹಾಗೂ ಶಾಂತಾ ಬಾಯಿ ಎಸ್. ಕಾರ್ನಾಡ್ ಈ ಮಹಿಳಾ ಸಭಾದ ಸ್ಥಾಪಕ ಸದಸ್ಯರು ಎಂಬ ಮಾಹಿತಿಯೂ ಫಲಕದಲ್ಲಿ ಉಲ್ಲೇಖವಾಗಿದೆ. ಮಹಿಳಾ ಸಭಾಕ್ಕಾಗಿ ಮೀಸಲಾಗಿದ್ದ 1.20 ಎಕರೆ ಭೂಮಿಯಲ್ಲಿ ರಸ್ತೆಗಾಗಿ ನೀಡಿ ಇದೀಗ ಸಭಾದ ಒಡೆತನದಲ್ಲಿರುವ ನಿಖರ ಭೂಮಿ ಬಗ್ಗೆ ಮಾಹಿತಿ ಇಲ್ಲ.

 ಸ್ವಾತಂತ್ರ ಮಹೋತ್ಸವದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಾವು, ಸರಕಾರ ಈ ಸಂಭ್ರಮಾಚರಣೆಯ ಕಾರ್ಯಕ್ರಮಗಳಿಗೆ ಸಾಕಷ್ಟು ವೆಚ್ಚ ಮಾಡುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ ಹೋರಾಟಗಾರರ ಈ ಮಹಿಳಾ ಸಭಾದಂತಹ ಕುರುಹುಗಳನ್ನು ಉಳಿಸಿ, ಸಂರಕ್ಷಿಸಬೇಕಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News